ಪಶ್ಚಿಮಕ್ಕೆ ಹರಿಯುವ ಹತ್ತು ನದಿಗಳನ್ನು ‘ನದಿ ತಿರುಗಿಸುವ’ ಯೋಜನೆ ಮೂಲಕ 500 ಟಿಎಂಸಿ ನೀರಿನ ಸಂರಕ್ಷಣೆ ಮಾಡಬೇಕೆಂದು 2020-21ನೇ ಸಾಲಿನ ಕರ್ನಾಟಕ ಆರ್ಥಿಕ ಸಮೀಕ್ಷೆ ಪ್ರಸ್ತಾಪಿಸಿದೆ.
ಅರೆಬ್ಬಿ ಸಮುದ್ರಕ್ಕೆ ಹರಿದು ಹೋಗುತ್ತಿರುವ 500 ಟಿಎಂಸಿ ನೀರನ್ನು ಸಂರಕ್ಷಿಸಲು, ನೀರು ಕೊಯ್ಲು ನಿರ್ಮಿತಿಗಳನ್ನು ಸೃಜಿಸುವ, ಏತ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ತ್ಯಾಜ್ಯ ನೀರಿನ ಮರುಬಳಕೆಯೊಂದಿಗೆ ಕೆರೆ ಭರ್ತಿ ಮಾಡುವ ಮೂಲಕ, ರಾಷ್ಟ್ರೀಯ ಮೂಲಸೌಕರ್ಯ ಕೊಳವೆಮಾರ್ಗ ಯೋಜನೆ ಅಡಿಯಲ್ಲಿ ನದಿ ಜೋಡಣೆ ಮೂಲಕ ಪಶ್ಚಿಮ ವಾಹಿನಿ ನದಿಗಳ ಪಾತ್ರ ಬದಲಾಯಿಸುವುದನ್ನು ಪ್ರಸ್ತಾಪಿಸಲಾಗಿದೆ.
ನೀರಾವರಿಗೂ ಸೌರಶಕ್ತಿಯ ವಿಸ್ತರಣೆ ಮಾಡುವುದು, ರಾಜ್ಯದ ಹಸಿರು ಹೊದಿಕೆಯನ್ನು ಶೇ.23.7ರಿಂದ ಶೇ.33ಕ್ಕೆ ಹೆಚ್ಚಿಸಬೇಕೆಂದು ಪ್ರಸ್ತಾಪಿಸಿದೆ. ಇದಲ್ಲದೇ ಘನತ್ಯಾಜ್ಯ ಮತ್ತು ಇತ್ಯಾಜ್ಯಗಳ ಸದ್ಭಳಕೆಗೂ ಕಾರ್ಯಸೂಚಿ ರೂಪಿಸಿದೆ. ಘನತ್ಯಾಜ್ಯಗಳ ಮರುಬಳಕೆಯಿಂದ ಜೈವಿಕ ಕೇಂದ್ರಗಳು, ಮಿಶ್ರಗೊಬ್ಬರ ಘಟಕಗಳು ಮತ್ತು ಆಧುನಿಕ ಮಾರುಕಟ್ಟೆಗಳನ್ನು ರೂಪಿಸುವುದೆಂದು ತಿಳಿಸಿದೆ.
ನಿರ್ಮಲ ಮತ್ತು ಹಸಿರು ಕರ್ನಾಟಕದ ಮುಂದಿನ ಹಾದಿಯ ರೂಪುರೇಷೆಗಳನ್ನು ಆರ್ಥಿಕ ಸಮೀಕ್ಷೆ ಪ್ರಸ್ತಾಪಿಸಿದೆ. ಇ ತ್ಯಾಜ್ಯ ನಿರ್ವಹಣೆಯನ್ನು ನಗದೀಕರಿಸುವ ಬಗ್ಗೆ ಪ್ರಸ್ತಾಪಿಸಿದೆ. ಪ್ರಸ್ತುತ 2.92.ಲಕ್ಷ ಮೆಟ್ರಿಕ್ ಟನ್ ಉತ್ಪಾದನೆಯಾಗುತ್ತಿದ್ದು, ಅದರ ಮರುಬಳಕೆಯ ಮೌಲ್ಯವು 2886 ಕೋಟಿ ರೂಪಾಯಿಗಳಷ್ಟಿದೆ. ಪ್ರಸ್ತುತ ಕೇವಲ 317 ಕೋಟಿ ರೂಪಾಯಿಗಳಷ್ಟು ಮರುಬಳಕೆ ಆಗುತ್ತಿದ್ದು, 2569 ಕೋಟಿ ನಷ್ಟವಾಗುತ್ತಿದೆ ಎಂದೂ ಪ್ರಸ್ತಾಪಿಸಿದೆ.
ಕೋವಿಡೋತ್ತರ ಪರಿಸ್ಥಿತಿಯಲ್ಲಿ ಎಲ್ಲಾ ರಾಷ್ಟ್ರಗಳು ಆರ್ಥಿಕತೆಯನ್ನು ಮರುರೂಪಿಸುವ ಕಡೆಗೆ ಮುನ್ನಡೆಯುತ್ತಿರುವುದರಿಂದ, ಸ್ವಚ್ಚ, ಹಸಿರು, ಆರೋಗ್ಯಕರ, ಸುರಕ್ಷಿತ ಮತ್ತು ಹೆಚ್ಚು ಸ್ಥಿತಿಸ್ಥಾಪಕತೆಯನ್ನು ಹೊಂದಿರುವಂಥ ನಿಟ್ಟಿನಲ್ಲಿ 21ನೇ ಶತಮಾನದ ಆರ್ಥಿಕತೆಯನ್ನು ರೂಪುಗೊಳಿಸಬಹುದಾಗಿದೆ ಎಂದೂ ಆರ್ಥಿಕ ಸಮೀಕ್ಷೆ ಹೇಳಿದೆ.
ಪ್ರಸ್ತುತ ಬಿಕ್ಕಟ್ಟು, ಜನತೆ ಮತ್ತು ಭೂಮಿ ಎರಡರ ಉದ್ದೇಶಕ್ಕೆ ಸಾಧಕವಾಗುವಂಥ ಹೆಚ್ಚು ಸುಸ್ಥಿರ ಆರ್ಥಿಕತೆಗೆ ಗಾಢ, ವ್ಯವಸ್ಥಿತ ಬದಲಾವಣೆಗೆ ಅವಕಾಶ ಮಾಡಿಕೊಟ್ಟಿದೆ. ವಿಶ್ವಸಂಸ್ಥೆಯ ಮಹಾ-ಕಾರ್ಯದರ್ಶಿಗಳು, ಸರ್ಕಾರಗಳಿಗೆ ಆರು ಹವಾಮಾನ-ಸಕಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲು ಪ್ರಸ್ತಾಪಿಸಿದ್ದು, ಒಮ್ಮೆ ಅವುಗಳನ್ನು ಪ್ರಾರಂಭಿಸಿದರೆ, ತಮ್ಮ ಆರ್ಥಿಕತೆಗಳನ್ನು ಮತ್ತು ಸಮಾಜಗಳನ್ನು ಪುನಃ ನಿರ್ಮಿಸಿಕೊಳ್ಳಬಹುದು.
ಹಸಿರು ಪರಿವರ್ತನೆ, ಹಸಿರು ಆರ್ಥಿಕತೆ, ಸುಸ್ಥಿರ ಪರಿಹಾರಗಳಲ್ಲಿ ಹೂಡಿಕೆ, ಹವಾಮಾನ ಅಪಾಯ ಎದುರಿಸುವುದು ಮತ್ತು ಸಹಕಾರ ನೀಡುವುದು ಪ್ರಮುಖ ಅಂಶಗಳಾಗಿವೆ.
ಹವಮಾನ ಬದಲಾವಣೆ ಹಿನ್ನೆಲೆಯಲ್ಲಿ ಪ್ರಸ್ತಾಪಿಸಿರುವ ಪ್ರಮುಖ ಅಂಶಗಳು.
- ಜಲಾಶಯಗಳ ಸಂರಕ್ಷಣೆಗೆ ಜೀರ್ಣೋದ್ಧಾರ/ಒಡ್ಡು ದುರಸ್ಥಿ ಮಾಡುವುದು ಮತ್ತು ವನನಿರ್ಮಾಣ ಮಾಡುವುದು ಹಾಗೂ ಪ್ರವಾಹಗಳನ್ನು ತಪ್ಪಿಸುವುದರ ಜೊತೆಗೆ ಕೆರೆಗಳ ಹೂಳು ತೆಗೆಯುವುದು ಮತ್ತು ಕೆರೆಗಳನ್ನು ಆಳಗೊಳಿಸುವುದು.
- ಬೆಂಗಳೂರನ್ನು ಇ-ತ್ಯಾಜ್ಯ ನಿರ್ವಹಣಾ ತಾಣವನ್ನಾಗಿ (e-waste management hub) ಅಭಿವೃದ್ಧಿಪಡಿಸಿ, ತಾಮ್ರ, ಚಿನ್ನದಂಥ ಪ್ರಶಸ್ತ ಲೋಹಗಳನ್ನು ಪಡೆಯುವ ಮೂಲಕ ಆದಾಯ ಸೃಜಿಸುವುದು.
- ಸಿಒ2 ಹೊರಸೂಸುವಿಕೆಯನ್ನು ತಗ್ಗಿಸಲು ಎಲ್ಇಡಿ ಬಲ್ಬ್ಗಳ ಬಳಕೆಯನ್ನು ಪ್ರತಿ 1000 ಜನಸಂಖ್ಯೆಗೆ 37.54ರಿಂದ 120.07ಕ್ಕೆ ಹೆಚ್ಚಿಸುವುದು.
- ಸುಸ್ಥಿರ ಆಧಾರದ ಮೇಲೆ, ಸರಬರಾಜು ಮತ್ತು ಬೇಡಿಕೆ ಅಂತರಗಳನ್ನು ಸರಿದೂಗಿಸಲು, ನಗರ ಮತ್ತು ಗ್ರಾಮೀಣ ಪ್ರದೇಶಗಳೆರಡಕ್ಕೂ ಸಮಗ್ರ ಜಲ ಸಂಪನ್ಮೂಲ ನೀತಿಯನ್ನು ಸಿದ್ಧಪಡಿಸುವುದು.
- ಅಟಲ್ ಭೂ ಜಲ ಯೋಜನೆ ಅಡಿಯಲ್ಲಿ, 1199 ಗ್ರಾಮ ಪಂಚಾಯಿತಿಗಳನ್ನು ಒಳಗೊಂಡಂತೆ, 41 ಅತ್ಯಂತ ಹೆಚ್ಚು ಅಂತರ್ಜಲ ದುರ್ಬಳಕೆಯಾಗಿರುವ ತಾಲೂಕುಗಳಲ್ಲಿ ನೀರು ಸುರಕ್ಷತೆ ಯೋಜನೆಗಳನ್ನು ಅಭಿವೃದ್ಧಿಪಡಿಸುವುದು.
- ಕಿರು ನೀರಾವಾರಿ ಯೋಜನೆಗಳ ಹಾಗೂ ಮೇಲ್ವಿಚಾರಣಾ ನಿಯಂತ್ರಣ ಮತ್ತು ಕೊಳಾಯಿ ಅಳವಡಿಸಿದ ನೀರು ರವಾನೆ ವ್ಯವಸ್ಥೆಯ ಮೂಲಕ ನೀರು ಬಳಕೆ ದಕ್ಷತೆಗೆ ಉತ್ತೇಜನ ನೀಡುವುದು.
- ನೀರಾವರಿ ಆಧುನೀಕರಣ ಕಾರ್ಯಕ್ರಮದ ಬೆಂಬಲದ ಅಡಿಯಲ್ಲಿ, ಹಳೆಯ ಕಾಲುವೆ ವ್ಯವಸ್ಥೆಗಳನ್ನು ಆಧುನೀಕರಿಸುವುದು.
- ಮಾಹಿತಿ, ಶಿಕ್ಷಣ ಮತ್ತು ಸಂವಹನ ಕಾರ್ಯಚಟುವಟಿಕೆಗಳ ಮೂಲಕ ಹವಾಮಾನ ಬದಲಾವಣೆ ಅಳವಡಿಕೆ ತಂತ್ರಗಳು ಮತ್ತು ಉಪಶಮನ ಉಪಕ್ರಮಗಳು ಮತ್ತು ಸಂಪನ್ಮೂಲ ನಿರ್ವಹಣೆಗಳಿಗೆ ಉತ್ತೇಜನ ನೀಡುವುದು.
- ಸಾರ್ವಜನಿಕ-ಖಾಸಗಿ ಪಾಲುದಾರಿಕೆಯ ಮೂಲಕ ಮೂಲಸೌಕರ್ಯ ಮತ್ತು ಆರ್&ಡಿ (ಮರು-ಮಾರ್ಪಾಟುಗೊಳಿಸಿದ ಪೆಟ್ರೋಲ್ ಮತ್ತು ಡೀಸೇಲ್ ವಾಹನಗಳು) ಉತ್ತೇಜಕಗಳು ಮತ್ತು ಸೃಜನೆಯ ಮೂಲಕ ಇ-ಮೊಬಿಲಿಟಿಗೆ ಉತ್ತೇಜನ ನೀಡುವುದು.