
ಕನ್ನಡ ಚಿತ್ರರಂಗದ ಸಮಯ ಸರಿಯಿಲ್ಲ ಎಂದು ದರ್ಶನ್ ಅರೆಸ್ಟ್ ಆದ ವೇಳೆ ಎಲ್ಲರೂ ಮಾತನಾಡಿಕೊಳ್ತಿದ್ರು. ಸ್ಯಾಂಡಲ್‌ವುಡ್‌ನ ಬಾಕ್ಸ್‌ಆಫೀಸ್ ಸುಲ್ತಾನ ದರ್ಶನ್, ಜೈಲುಪಾಲಾದರೆ ಕನ್ನಡ ಚಿತ್ರರಂಗವನ್ನೇ ನಂಬಿರುವ ಸಾವಿರಾರು ಕುಟುಂಬಗಳ ಗತಿ ಏನು ಅನ್ನೋ ಪ್ರಶ್ನೆಯನ್ನು ಸಾಕಷ್ಟು ಜನರು ಕೇಳಿದ್ದೂ ಉಂಟು. ಇದೀಗ ತೆಲುಗು ಚಿತ್ರರಂಗ ಅರ್ಥಾತ್ ಕಾಲಿವುಡ್‌ಗೂ ಅದೇ ಪರಿಸ್ಥಿತಿ ಎದುರಾಗಿದ್ಯಾ..? ಅನ್ನೋ ರೀತಿ ಆಗಿದೆ.
ಇತ್ತೀಚಿಗೆ ಕಳೆದ ತಿಂಗಳು ಪುಷ್ಪಾ 2 ಸಿನಿಮಾದ ಪ್ರೀಮಿಯರ್ ಶೋ ವೇಳೆ ನಡೆದಿದ್ದ ಕಾಲ್ತುಳಿತ ಪ್ರಕರಣದಲ್ಲಿ ಅಲ್ಲು ಅರ್ಜುನ್ ಅರೆಸ್ಟ್ ಆಗಿ ಜೈಲು ಸೇರಿದ್ದರು. ಆ ಬಳಿಕ ಜಾಮೀನು ಪಡೆದು ಜೈಲಿನಿಂದ ರಿಲೀಸ್ ಕೂಡ ಆಗಿದ್ದರು. ಆ ನಂತರ ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಅಲೆದಾಡುವ ಪರಿಸ್ಥಿತಿಗೆ ಅಲ್ಲು ಅರ್ಜುನ್ ಬಂದಿದ್ದಾರೆ. ಇದ್ರ ಬೆನ್ನಲ್ಲೇ ದಗ್ಗುಬಾಟಿ ವಿಕ್ಟರಿ ವೆಂಕಟೇಶ್, ರಾಣಾ ದಗ್ಗುಬಾಟಿಗೆ ಸಂಕಷ್ಟ ಬಂದೊದಗಿದೆ.
ತೆಲುಗು ನಟ ವಿಕ್ಟರಿ ವೆಂಕಟೇಶ್, ರಾಣಾ ದಗ್ಗುಬಾಟಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಹೈದರಾಬಾದ್‌ನ ಫಿಲ್ಮ್‌ನಗರದಲ್ಲಿ ಹೋಟೆಲ್ ಒಂದನ್ನು ನಾಶ ಮಾಡಿದ ಆರೋಪದಲ್ಲಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. 2023ರ ಜನವರಿಯಲ್ಲಿ ನಡೆದಿದ್ದ ಘಟನೆಯಲ್ಲಿ ಡೆಕ್ಕನ್ ಕಿಚನ್ ಅನ್ನೋ ಹೋಟೆಲ್ ನಾಶ ಮಾಡಿರುವ ಆರೋಪ ಎದುರಾಗಿತ್ತು. ಲೀಸ್‌ಗೆ ಪಡೆದಿದ್ದ ಆಸ್ತಿಯಲ್ಲಿದ್ದ ಹೋಟೆಲ್ ಅನ್ನು ಅಕ್ರಮವಾಗಿ ನಾಶಗೊಳಿಸಿದ ಆರೋಪ ಎದುರಾಗಿತ್ತು. ಅಂದು ಘಟನೆ ಬಗ್ಗೆ ಪೊಲೀಸ್ರು ಪ್ರಕರಣ ದಾಖಲಿಸಿರಲಿಲ್ಲ. ಭಾನುವಾರ ಕೋರ್ಟ್ ಸೂಚನೆ ಮೇರೆಗೆ ದೂರು ದಾಖಲಾಗಿದೆ.

ಕೆ. ನಂದಕುಮಾರ್ ಎಂಬುವರು ಜಾಗವನ್ನು ಲೀಸ್‌ಗೆ ಪಡೆದು ಹೋಟೆಲ್ ಮಾಡಿದ್ದರು. ಬರೋಬ್ಬರಿ 20 ಕೋಟಿ ಹಣವನ್ನು ಖರ್ಚು ಮಾಡಿ ಹೋಟೆಲ್ ಮರು ವಿನ್ಯಾಸ ಕೂಡ ಮಾಡಲಾಗಿತ್ತು. ಆದರೆ ಏಕಾಏಕಿ ರೌಡಿಗಳನ್ನ ಬಳಸಿಕೊಂಡು ಆಸ್ತಿ ನಾಶ ಮಾಡಿದ್ದರು ಎಂದು ಆರೋಪ ಮಾಡಲಾಗಿತ್ತು. ನಾಂಪಲ್ಲಿ ಕೋರ್ಟ್‌ಗೆ ದೂರು ಸಲ್ಲಿಕೆ ಆಗಿತ್ತು. ಕೋರ್ಟ್ ಪೊಲೀಸ್ ತನಿಖೆಗೆ ನಿರ್ದೇಶನ ಮಾಡಿತ್ತು. ಶನಿವಾರ FIR ದಾಖಲು ಮಾಡಿಕೊಂಡು ತನಿಖೆ ನಡೆಸುವಂತೆ ಸೂಚಿಸಿದ ಬೆನ್ನಲ್ಲೇ ಭಾನುವಾರ FIR ಮಾಡಿಕೊಳ್ಳಲಾಗಿದ್ದು, ಖ್ಯಾತ ನಟರಿಗೆ ಸಂಕಷ್ಟ ಬಂದೊದಗಿದೆ. ಆಸ್ತಿ ನಾಶಪಡಿಸಿದ ಆರೋಪದ ಜೊತೆಗೆ ನಂದಕುಮಾರ್ ಕುಟುಂಬಕ್ಕೆ ಬೆದರಿಕೆ ಹಾಕಿರುವ ಆರೋಪವೂ ಕೇಳಿ ಬಂದಿದೆ.