ಭಾರತದ ಆರ್ಥಿಕತೆ ವಿಚಾರವಾಗಿ ಸಂಸದ ತೇಜಸ್ವಿ ಸೂರ್ಯ ಹಾಗು ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯಭರಿತ ಮಾತುಗಳಲ್ಲಿ ಟೀಕಾಪ್ರಹಾರ ನಡೆಸಿದ್ದಾರೆ. ಈ ಹಿಂದಿನ ಯುಪಿಎ ಸರ್ಕಾರದಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ಏನಾಗಿತ್ತು, ಯಾವ ಮಟ್ಟದಲ್ಲಿತ್ತು..? ಅದಕ್ಕಿಂತಲೂ ಈಗ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಭಾರತದ ರೂಪಾಯಿ ಮೌಲ್ಯ ಉತ್ತಮವಾಗಿದೆ ಎಂದು ಸಂಸದ ತೇಜಸ್ವಿ ಸೂರ್ಯ ಎಕ್ಸ್ (Twitter) ನಲ್ಲಿ ಪೋಸ್ಟ್ ಮಾಡಿದ್ದರು. ಇಷ್ಟನ್ನೇ ಮಾಡಿದ್ದರೆ ಗೌರವಯುತ ಚರ್ಚೆ ಆಗುತ್ತಿತ್ತು. ಆದರೆ ಮಿಸ್ಟರ್ ಟ್ರೋಲ್ ಮಿನಿಸ್ಟರ್ ಎನ್ನುವ ಮೂಲಕ ಚರ್ಚೆಯ ಕಾವು ಏರುವಂತೆ ಮಾಡಿದ್ದು, ಪ್ರಿಯಾಂಕ್ ಖರ್ಗೆ ಅವರನ್ನು ಕೆರಳಿಸಿದೆ.
ಅಸಲಿಗೆ ತೇಜಸ್ವಿ ಸೂರ್ಯ ಆರೋಪ ಏನು..?
ಯುಪಿಎ ಅವಧಿಯಲ್ಲಿ ವಿಫಲ ಹಣಕಾಸು ನೀತಿಗಳು ಡಾಲರ್ ವಿರುದ್ಧ ರೂಪಾಯಿ ಮೌಲ್ಯ ಶೇ. 50.67 ರಷ್ಟು ಕುಸಿದಿದೆ ಎಂದು ಅಂಕಿ ಅಂಶಗಳು ಹೇಳುತ್ತಿವೆ. ಸೆಪ್ಟೆಂಬರ್ 2013ರಲ್ಲಿ ನರೇಂದ್ರ ಮೋದಿ ಅವರ ಎನ್ಡಿಎ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದ ತಕ್ಷಣ, ರೂಪಾಯಿ ಮೌಲ್ಯ ಚೇತರಿಕೆ ಕಾಣುವುದಕ್ಕೆ ಶುರುವಾಯ್ತು. ಸದ್ಯ ಜಾಗತಿಕವಾಗಿ ಕೋವಿಡ್-19 ಮತ್ತು ಯುದ್ಧಗಳ ಪರಿಣಾಮದ ನಡುವೆಯೂ ಮಾರ್ಚ್ 2020 ರಿಂದ ಫೆಬ್ರವರಿ 2022ರ ನಡುವೆ ಡಾಲರ್ ವಿರುದ್ಧ ಭಾರತೀಯ ರೂಪಾಯಿ ಶೇ. 2.48 ರಷ್ಟು ಬೆಳೆದಿದೆ. ನಿಮ್ಮ ಸರ್ಕಾರ ಎಂದಿಗೂ ಇದನ್ನು ಸಾಧಿಸಲು ಆಗಿಲ್ಲ ಅಲ್ಲವೇ ಎಂದು ಕುಟುಕಿದ್ದರು.
ಸಚಿವ ಪ್ರಿಯಾಂಕ್ ಖರ್ಗೆ ಕೊಟ್ಟ ಕೌಂಟರ್ ಏನು..?
‘ಮಿಸ್ಟರ್ ಟ್ರೋಲ್ ಮಿನಿಸ್ಟರ್’ ಎನ್ನುವ ವ್ಯಂಗ್ಯಕ್ಕೆ ನೇರವಾಗಿಯೇ ಚಾಟಿ ಬೀಸಿರುವ ಸಚಿವ ಪ್ರಿಯಾಂಕ್ ಖರ್ಗೆ, ಹೋಲ್ಡ್ ಆನ್.. ತಪ್ಪಿಸಿಕೊಳ್ಳಲು ತುರ್ತು ಬಾಗಿಲು ತೆರೆಯಬೇಡಿ ಎನ್ನುವ ಮೂಲಕ ವಿಮಾನದಲ್ಲಿ ತುರ್ತು ಬಾಗಿಲು ತೆರೆಯಲು ಯತ್ನಿಸಿದ್ದ ಘಟನೆಯನ್ನು ನೆನಪಿಸಿ ವ್ಯಂಗ್ಯ ಮಾಡಿದ್ದಾರೆ. ಆ ಬಳಿಕ ನಾನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಮಾತಿನಿಂದಲೇ ಪ್ರಾರಂಭ ಮಾಡ್ತಾರೆ. ನಿರ್ಮಲಾ ಮೇಡಂ ಹೇಳಿದ್ದರು, ಭಾರತದ ರೂಪಾಯಿ ಮೌಲ್ಯ ಕುಸಿಯುತ್ತಿಲ್ಲ ಬದಲಿಗೆ ಡಾಲರ್ ಮೌಲ್ಯ ವೃದ್ಧಿಯಾಗುತ್ತಿದೆ. ನೀವು ಕೊಟ್ಟಿರುವ ದಾಖಲೆಗಳೇ ಹೇಳುತ್ತಿವೆ. ಯುಪಿಎ ಸರ್ಕಾರದಲ್ಲಿ ಶೇ.29.11ರಷ್ಟು ಕುಸಿತ ಕಂಡಿದ್ದ ರುಪಾಯಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಶೇ. 42.12ರಷ್ಟು ಕುಸಿತ ಕಂಡಿದೆ ಎಂದಿದೆ ಎಂದಿದ್ದಾರೆ.
ಮೋದಿ ಪ್ರಧಾನಿ ಅಭ್ಯರ್ಥಿ ಎಂದಾಗ ರೂಪಾಯಿ ಚೇತರಿಕೆ..!?
2013ರಲ್ಲಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡಿದ ಕೂಡಲೇ ರೂಪಾಯಿ ಮೌಲ್ಯ ಚೇತರಿಕೆ ಕಂಡಿತು ಎನ್ನುವ ನಿಮ್ಮ ವಾದ ಮೂರ್ಖತನದಿಂದ ಕೂಡಿದೆ ಎಂದಿರುವ ಪ್ರಿಯಾಂಕ್ ಖರ್ಗೆ, ಪ್ರಧಾನ ಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ ಕೂಡಲೇ ರೂಪಾಯಿ ಮೌಲ್ಯ ಜಿಗಿತ ಕಂಡಿತು ಎನ್ನುವ ಮಾತು ನಗೆಪಾಟಲಿಗೆ ಈಡಾಗುತ್ತದೆ. ಇದು ನಿಮ್ಮ ವಾಟ್ಸಾಪ್ ಯೂನಿವರ್ಸಿಟಿಯಿಂದ ಹೊರಬಂದ ವಿಶ್ಲೇಷಣೆ ಎನ್ನುವುದಕ್ಕೆ ಸೂಕ್ತ ಉದಾಹರಣೆ ಎಂದಿದ್ದಾರೆ. ಅಂದು ಹಣಕಾಸು ಸ್ಥಿತಿ ಸುಧಾರಿಸಲು ಕಾರಣವಾಗಿದ್ದು, ಅಂದಿನ ಹಣಕಾಸು ಸಚಿವರಾಗಿದ್ದ ಪಿ. ಚಿದಂಬರಂ ಅವರು ತೆಗೆದುಕೊಂಡ ನಿಲುವಾಗಿತ್ತು. ರಘುರಾಮ್ ರಾಜನ್ ಅವರನ್ನು RBI ಗೌವರ್ನರ್ ಮಾಡಿದ್ದೂ ಒಂದು ಕಾರಣ. ಆದರೆ ನೀವು ಯಾವುದೇ ಕಾರಣ ಇಲ್ಲದೆ ರಘುರಾಮ್ ರಾಜನ್ ಅವರನ್ನು ತೆಗೆದುಬಿಟ್ರಿ ಎಂದು ತಿರುಗೇಟು ನೀಡಿದ್ದಾರೆ. ಸಾಧ್ಯವಾದರೆ ಎರಡು ಮಾಧ್ಯಮ ವರದಿಗಳನ್ನು ಓದಿ ಎಂದು ಆನ್ಲೈನ್ ತಾಣದ ಲಿಂಕ್ ಹಾಕಿದ್ದಾರೆ.