ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಹಾಗೂ ತಮಿಳುನಾಡು ಬಿಜೆಪಿಉ ಅಧ್ಯಕ್ಷ ಕೆ ಅಣ್ಣಾಮಲೈ ಅವರು ಮಾಡಿದ ಯಡವಟ್ಟು ರಾಷ್ಟ್ರ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ಈ ಇಬ್ಬರು ಬಿಜೆಪಿ ಯುವ ನಾಯಕರು ಡಿಸೆಂಬರ್ 10, 2022 ರಂದು ಚೆನ್ನೈ ವಿಮಾನ ನಿಲ್ದಾಣದಲ್ಲಿ ಚೆನ್ನೈ-ತಿರುಚ್ಚಿ ಇಂಡಿಗೋ ವಿಮಾನವೊಂದರ ತುರ್ತು ನಿರ್ಗಮನ ದ್ವಾರವನ್ನು ತೆರೆದಿದ್ದರೆಂದು ಆರೋಪಿಸಲಾಗಿದೆ. ಅದಾಗ್ಯೂ ಈ ಕುರಿತು ಇಂಡಿಗೋ ಯಾವುದೇ ಹೇಳಿಕೆ ಬಿಡುಗಡೆಗೊಳಿಸಲು ನಿರಾಕರಿಸಿದೆ.
ವಿಮಾನದ ಎಮೆರ್ಜೆನ್ಸಿ ಎಕ್ಸಿಟ್ ಬಾಗಿಲನ್ನು ತೆರೆದಿರುವ ಅಂಶವನ್ನು ಚೆನ್ನೈ ವಿಮಾನ ನಿಲ್ದಾಣದ ಅಧಿಕಾರಿಗಳು ಹಾಗೂ ಡಿಜಿಸಿಎ ಅಧಿಕಾರಿಗಳು ದೃಢೀಕರಿಸಿದ್ದರೂ ಅದು ಅಣ್ಣಾಮಲೈಯೇ ಅಥವಾ ತೇಜಸ್ವಿ ಸೂರ್ಯ ಅವರೇ ಎನ್ನುವುದು ದೃಢೀಕರಿಸಲು ನಿರಾಕರಿಸಿದ್ದಾರೆ. ಆದರೆ ಘಟನೆಯ ಪ್ರತ್ಯಕ್ಷದರ್ಶಿಯೊಬ್ಬರ ಪ್ರಕಾರ ಆ ಪ್ರಯಾಣಿಕ ತೇಜಸ್ವಿ ಸೂರ್ಯ ಅವರೇ ಆಗಿದ್ದರು ಹಾಗೂ ಅವರ ಕೃತ್ಯಕ್ಕೆ ಕ್ಷಮೆಕೋರುವಂತೆ ಮಾಡಲಾಯಿತು ಎಂದು ಹೇಳಿರುವುದಾಗಿ ವರದಿಯಾಗಿದೆ.
“ವಿಮಾನದ ಸಿಬ್ಬಂದಿ ಪ್ರಯಾಣಿಕರಿಗೆ ಸುರಕ್ಷತೆಗೆ ಸಂಬಂಧಿಸಿದ ಶಿಷ್ಟಾಚಾರ ಕುರಿತು ಮಾಹಿತಿ ನೀಡುತ್ತಿರುವಾಗ ಈ ಘಟನೆ ಸಂಭವಿಸಿದೆ. ತುರ್ತು ನಿರ್ಗಮನ ದ್ವಾರವೊಂದರ ಸಮೀಪ ಕುಳಿತಿದ್ದ ತೇಜಸ್ವಿ ಸೂರ್ಯ ಸಿಬ್ಬಂದಿ ಹೇಳುವುದನ್ನು ಕೇಳಿದ ಬಳಿಕ ಎಮೆರ್ಜೆನ್ಸಿ ಎಕ್ಸಿಟ್ ಲಿವರ್ ಎಳೆದ ಕಾರಣ ತುರ್ತು ನಿರ್ಗಮನ ದ್ವಾರ ತೆರೆಯಿತು. ತಕ್ಷಣ ಪ್ರಯಾಣಿಕರನ್ನೆಲಾ ಕೆಳಗಿಳಿಸಿ ಬಸ್ ಒಂದರಲ್ಲಿ ಕೂರಿಸಲಾಯಿತು,” ಎಂದು ಪ್ರಯಾಣಿಕರೊಬ್ಬರು ತಿಳಿಸಿದ್ದಾರೆ.
ನಂತರ ಅಧಿಕಾರಿಗಳು ಹಾಗೂ ಸಿಐಎಸ್‌ಎಫ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಸುಮಾರು ಎರಡು ಗಂಟೆಗಳ ಕಾಲ ವಿಮಾನಯಾನ ವಿಳಂಬಗೊಂಡಿದೆ. ಇದು ಉಲ್ಲಂಘನೆಯಾಗಿದ್ದರಿಂದ ಸಂಸದರಿಗೆ ಕ್ಷಮೆಕೋರಲು ಹೇಳಲಾಯಿತು ಹಾಗೂ ಅವರು ಲಿಖಿತ ಪತ್ರ ನೀಡಿದರು ಎಂದು ಇಂಡಿಗೋ ಮೂಲಗಳು ತಿಳಿಸಿವೆ.
“ನಂತರ ಅವರನ್ನು ಅದೇ ವಿಮಾನದಲ್ಲಿ ಪ್ರಯಾಣಿಸಲು ಅನುಮತಿಸಲಾಗಿದ್ದರೂ ಅವರ ಸೀಟ್ ಬದಲಾಯಿಸಲಾಯಿತು,” ಎಂದು ಪ್ರಯಾಣಿಕರೊಬ್ಬರು ತಿಳಿಸಿದ್ದಾರೆ.
ಇದೇ ವಿಮಾನದಲ್ಲಿ ಇದ್ದ ಡಿಎಂಕೆ ವಕ್ತಾರ ಬಿ ಟಿ ಅರಸಕುಮಾರ್ ಘಟನೆಯನ್ನು ದೃಢೀಕರಿಸಿದ್ದಾರೆ.
ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋಗೆ ದೂರು
ಈ ನಡುವೆ, ವಿಮಾನದ ತುರ್ತು ನಿರ್ಗಮನ ದ್ವಾರವನ್ನು ತೆರೆದಿರುವ ಕುರಿತು ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋಗೆ ಸಾಮಾಜಿಕ ಕಾರ್ಯಕರ್ತ ಪಿಯುಷ್ ಮಾನುಷ್ ದೂರು ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
ಈ ಕುರಿತು ತಮ್ಮ ಫೇಸ್‌ಬುಕ್ ನಲ್ಲಿ ಪೋಸ್ಟ್ ಮಾಡಿರುವ ಮಾನುಷ್,” ರಫೇಲ್ ವಾಚ್‌ಗಳನ್ನು ಧರಿಸಿದ್ದ ಈ ಇಬ್ಬರು ಫೆಲೋಗಳು ಏರ್‌ಕ್ರಾಫ್ಟ್‌ನೊಂದಿಗೆ ಆಟವಾಡಿ ಭಯ ಹುಟ್ಟಿಸಿ ಎರಡು ಗಂಟೆಗಳ ಕಾಲ ಹಾರಾಟ ವಿಳಂಬಗೊಳಿಸಿದ್ದಾರೆ. ತುರ್ತು ಬಾಗಿಲನ್ನು ತೆರೆದ ಕಾರಣ ಅವರನ್ನು ಇಳಿಲಾಗಿದ್ದರೂ ತಮ್ಮ ಪ್ರಭಾವವನ್ನು ಬಳಸಿಕೊಂಡು ಅವರನ್ನು ಪ್ರಯಾಣವನ್ನು ಮುಂದುವರಿಸಲು ಅನುಮತಿಸಲಾಯಿತು. ಅವರಿಬ್ಬರೂ ವಿಕೃತ ಪಕ್ಷದಲ್ಲಿಲ್ಲದಿದ್ದರೆ ಇಬ್ಬರೂ ಕಂಬಿ ಹಿಂದೆ ಬೀಳುತ್ತಿದ್ದರು. ಜನವರಿ 5 ರಂದು RTI ಅರ್ಜಿಯೊಂದಿಗೆ ನಾನು ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋಗೆ ದೂರನ್ನು ದಾಖಲಿಸಿದೆ. ನೂರಾರು ಜೀವಗಳಿಗೆ ಅಪಾಯ ತಂದೊಡ್ಡಿರುವ ಈ ಘಟನೆಯ ಕುರಿತು ಡಿಜಿಸಿಎ ತನಿಖೆಗೆ ಆದೇಶಿಸಿದೆ.” ಎಂದು ತಿಳಿಸಿದ್ದಾರೆ.