ದೇಶದ ಹೆಸರಾಂತ ಸಾಂಪ್ರದಾಯಿಕ ವಸ್ತ್ರ ಬ್ರ್ಯಾಂಡ್ “ಫ್ಯಾಬ್ ಇಂಡಿಯಾ” ದೀಪಾವಳಿ ಪ್ರಯುಕ್ತ ಉಡುಗೆ ಸಂಗ್ರಹವನ್ನು ‘ಜಶ್ನ್ ಇ ರಿವಾಜ್’ (celebration of tradition) ಎಂಬ ಹೆಸರಿನಡಿ ಜಾಹಿರಾತನ್ನು ಪ್ರಕಟಿಸಿತ್ತು. ಈ ಒಂದು ಜಾಹಿರಾತನ್ನೇ ಗುರಿಯಾಗಿಸಿಕೊಂಡ ಸಂಸದ ತೇಜಸ್ವಿ ಸೂರ್ಯ ಧಾರ್ಮಿಕ ಬಣ್ಣದ ಲೇಪನ ಬಳಿದು ಫ್ಯಾಬ್ ಇಂಡಿಯಾ ತನ್ನ ಜಾಹಿರಾತನ್ನೇ ಹಿಂತೆಗೆದುಕೊಳ್ಳುವಂತೆ ಮಾಡಿದ್ದಾರೆ.
ಹೌದು, ಬೆಂಗಳೂರು ದಕ್ಷಿಣ ಸಂಸದ, ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ದೀಪಾವಳಿ ಹಬ್ಬವನ್ನು ‘ಜಶ್ನ್ ಇ ರಿವಾಜ್’ ಎಂದು ಕರೆಯುವ ಮೂಲಕ ಸಂಸ್ಥೆ ಹಿಂದೂಯೇತರ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತಿರುವುದಾಗಿ ಫ್ಯಾಬ್ ಇಂಡಿಯಾ ಸಂಸ್ಥೆಯನ್ನು ಟ್ವಿಟರ್ ನಲ್ಲಿ ತರಾಟೆಗೆ ತೆಗೆದುಕೊಂಡಿದ್ದರು.
ಈ ಕುರಿತು ಟ್ವೀಟ್ ಮಾಡಿರುವ ತೇಜಸ್ವಿ ಸೂರ್ಯ, “ದೀಪಾವಳಿ ಅಂದರೆ ಜಶ್-ಇ-ರಿವಾಜ್ ಅಲ್ಲ. ಉದ್ದೇಶಪೂರ್ವಕ ಹಿಂದೂ ಹಬ್ಬಗಳ ಅಬ್ರಹಾಮೈಸೇಶನ್ ಮಾಡಲಾಗಿದೆ, ಸಾಂಪ್ರದಾಯಿಕ ಹಿಂದೂ ಉಡುಗೆಗಳಿಲ್ಲದ ಮಾದರಿಗಳನ್ನು ಹಾಕಿದ್ದಾರೆ ಮತ್ತು @FabindiaNews ನಂತಹ ಬ್ರ್ಯಾಂಡ್‌ಗಳು ಇಂತಹ ಉದ್ದೇಶಪೂರ್ವಕ ದುಷ್ಕೃತ್ಯಗಳಿಗಾಗಿ ಆರ್ಥಿಕ ವೆಚ್ಚವನ್ನು ಎದುರಿಸಬೇಕಾಗುತ್ತದೆ “ಎಂದು ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದಾರೆ. ಇದನ್ನು ಬೆಂಬಲಿಸಿದ ಅನೇಕರು ಫ್ಯಾಬ್ ಇಂಡಿಯಾ ವಿರುದ್ಧ ಕಿಡಿಕಾರಿದ್ದರು. ಇಷ್ಟೇಲ್ಲ ಬೆಳವಣಿಗೆಯ ನಂತರ ಫ್ಯಾಬ್ ಇಂಡಿಯಾ ತನ್ನ ಜಾಹಿರಾತನ್ನು ಹಿಂತೆಗೆದುಕೊಂಡಿದ್ದಾರೆ.
ಫ್ಯಾಬ್ ಇಂಡಿಯಾ ಸಂಸ್ಥೆ ಅಕ್ಟೋಬರ್ 9ರಂದು ದೀಪಾವಳಿ ಪ್ರಯುಕ್ತದ ಉಡುಗೆ ಸಂಗ್ರಹವನ್ನು ಜಶ್ನ್ ಇ ರಿವಾಜ್ ಹೆಸರಿನಡಿ ಪ್ರಕಟಿಸಿತ್ತು. ಜಶ್ನ್ ಇ ರಿವಾಜ್ ಜಾಹೀರಾತಿನಲ್ಲಿ ರೂಪದರ್ಶಿಗಳು ದೀಪಾವಳಿ ಆಚರಣೆಯನ್ನು ಪ್ರತಿಬಿಂಬಿಸದೇ ಇರುವುದನ್ನು ತೇಜಸ್ವಿ ಪ್ರಶ್ನಿಸಿದ್ದರು.













