ಬೆಂಗಳೂರು: ಭಾರತವು ತಂಡವು ನಾಗ್ಪುರದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 48 ರನ್‌ಗಳಿಂದ ಸೋಲಿಸಿ, 5 ಪಂದ್ಯಗಳ ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿದೆ. ಗ್ಲೆನ್ ಫಿಲಿಪ್ಸ್ 78 ರನ್ ಗಳಿಸಿದರೂ ಕೂಡ ತಂಡದ ಕೈ ಹಿಡಿಯಲಿಲ್ಲ, ಹೀಗಾಗಿ ಕಿವೀಸ್ ತಂಡ ಗೆಲುವಿನ ಗುರಿ ತಲುಪಲು ಸಾಧ್ಯವಾಗಲಿಲ್ಲ.
ಭಾರತ ತಂಡದ ಪರವಾಗಿ ಆಟಗಾರರಾದ ವರುಣ್ ಚಕ್ರವರ್ತಿ ಮತ್ತು ಶಿವಮ್ ದುಬೆ ತಲಾ 2 ವಿಕೆಟ್ ಪಡೆದರು. ಅಭಿಷೇಕ್ ಶರ್ಮಾ ಅವರ 84 ರನ್ ಮತ್ತು ರಿಂಕು ಸಿಂಗ್ ಅವರ ಕೊನೆಯ ಹಂತದ ಆಕ್ರಮಣಕಾರಿ ಬ್ಯಾಟಿಂಗ್ ನೆರವಿನಿಂದ ಭಾರತವು ನ್ಯೂಜಿಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ 238/7 ರನ್ ಗಳಿಸುವಲ್ಲಿ ಯಶಸ್ವಿಯಾಯಿತು.
ಪ್ರಮುಖವಾಗಿ ಇದು ಟಿ20ಯಲ್ಲಿ ಕಿವೀಸ್ ವಿರುದ್ಧ ಭಾರತದ ಅತ್ಯಧಿಕ ಸ್ಕೋರ್ ಆಗಿದೆ. ನ್ಯೂಜಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದರು. ಟಿ20 ವಿಶ್ವಕಪ್ ಕಿರೀಟವನ್ನು ರಕ್ಷಿಸಬೇಕಾದ ಭಾರತಕ್ಕೆ ಇದು ಕೊನೆಯ ಸರಣಿಯಾಗಿದೆ. ಫಾರ್ಮ್ ದೃಷ್ಟಿಯಿಂದ ಭಾರತಕ್ಕೆ ಅನುಕೂಲವೂ ಇದ್ದು, ಟಿ20ಯಲ್ಲಿ ಅವರು ಆಡಿದ ಎಲ್ಲಾ ಸರಣಿಗಳನ್ನು ಗೆದ್ದಿದ್ದಾರೆ.
ಈ ಅವಧಿಯಲ್ಲಿ 28 ಪಂದ್ಯಗಳನ್ನು ಗೆದ್ದು ಕೇವಲ 5ರಲ್ಲಿ ಸೋಲು ಕಂಡಿದ್ದಾರೆ. ಆದರೆ ಭಾರತ ತಂಡದಲ್ಲಿ ಮುಖ್ಯವಾದ ಕೆಲವು ಆಸಕ್ತಿಕರ ವಿಷಯಗಳಿವೆ, ವಿಶೇಷವಾಗಿ ನಾಯಕ ಸೂರ್ಯಕುಮಾರ್ ಯಾದವ್ ಅವರ ಫಾರ್ಮ್ ಮತ್ತು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಜಾರ್ಖಂಡ್ ಗಾಗಿ ಅದ್ಭುತ ಪ್ರದರ್ಶನ ನೀಡಿದ ಇಶಾನ್ ಕಿಶನ್ ಅವರ ಸೇರ್ಪಡೆಯೂ ಗಮನಾರ್ಹ. ಮೊದಲ ಪಂದ್ಯದಲ್ಲಿ ಇಶಾನ್ ಕಿಶನ್ 3ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುವುದಾಗಿ ನಾಯಕ ಸೂರ್ಯಕುಮಾರ್ ಯಾದವ್ ಈಗಾಗಲೇ ದೃಢಪಡಿಸಿದ್ದಾರೆ.













