ಶಾಲಾ ಸಮವಸ್ತ್ರದಲ್ಲೇ ಮಲ ವಿಸರ್ಜನೆ ಮಾಡಿಕೊಂಡಿದ್ದಕ್ಕೆ 2ನೇ ತರಗತಿ ವಿದ್ಯಾರ್ಥಿ ಮೇಲೆ ಶಿಕ್ಷಕನೊಬ್ಬ ಬಿಸಿನೀರು ಎರಚಿ ವಿಕೃತವಾಗಿ ನಡೆದುಕೊಂಡ ಆಘಾತಕಾರಿ ಘಟನೆ ರಾಯಚೂರಿನ ಮಸ್ಕಿ ತಾಲೂಕಿನಲ್ಲಿ ನಡೆದಿದೆ.
ಮಸ್ಕಿಯ ಸಂತೆಕೆಲ್ಲೂರು ಗ್ರಾಮದಲ್ಲಿ 8 ವರ್ಷದ ಬಾಲಕ ಅಖಿತ್ ದೇಹದ ಶೇ.೪೦ರಷ್ಟು ಭಾಗ ಬೆಂದು ಹೋಗಿದ್ದು, ಗಂಭೀರ ಸ್ಥಿತಿಯಲ್ಲಿರುವ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿಕ್ಷಕನ ವರ್ತನೆ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
![](https://pratidhvani.com/wp-content/uploads/2022/09/New-Project.jpg)
ಮಿಟ್ಟಿಕೆಲ್ಲೂರು ಗ್ರಾಮದ ವಿದ್ಯಾರ್ಥಿ ಅಖಿತ್ ಶಾಲೆಗೆ ಹೋದಾಗ ಶಾಲಾ ಸಮವಸ್ತ್ರದಲ್ಲೇ ಮಲ ವಿಸರ್ಜನೆ ಮಾಡಿಕೊಂಡಿದ್ದಾನೆ. ಇದರಿಂದ ಸಿಟ್ಟಿಗೆದ್ದ ಶಿಕ್ಷಕ ವಿದ್ಯಾರ್ಥಿ ಮೇಲೆ ಬಿಸಿ ನೀರು ಎರಚಿದ್ದಾನೆ. ಮಗುವನ್ನು ಲಿಂಗಸುಗೂರು ತಾಲೂಕು ಅಸ್ಪತ್ರೆಗೆ ದಾಖಲಿಸಲಾಗಿದೆ.
ಸೆಪ್ಟಂಬರ್ 2ರಂದು ಈ ಘಟನೆ ನಡೆದಿದೆ. ಘಟನೆ ನಡೆದು ಒಂದು ತಿಂಗಳಾದರೂ ದೂರು ದಾಖಲಿಸಿಕೊಳ್ಳಲು ಮಸ್ಕಿ ಪೊಲೀಸರು (Police) ಹಿಂದೇಟು ಹಾಕುತ್ತಿದ್ದಾರೆ. ಮಗುವಿಗೆ ಅನ್ಯಾಯ ಆಗಿದ್ದರೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೂಡಲೇ ಶಿಕ್ಷಕನ ವಿರುದ್ದ ಕಠಿಣ ಕ್ರಮಕ್ಕೆ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಾರೆ.