ಮೈಸೂರು: ಮೇ.01: ಸೋಲಿನ ಹತಾಶೆಯಿಂದ ಕಾಂಗ್ರೆಸ್ ಕೀಳು ಮಟ್ಟದ ಮಾತುಗಳನ್ನು ಆಡುತ್ತಿದೆ. ನರೇಂದ್ರ ಮೋದಿಯವರಿಗೆ ಪ್ರಿಯಾಂಕಾ ಖರ್ಗೆ ಅವರು ನಾಲಾಯಕ್ ಎಂದಿದ್ದಾರೆ. ಅವರನ್ನು ನೀವು ಕ್ಷಮಿಸುತ್ತಿರಾ? ಅವರಿಗೆ ತಕ್ಕ ಪಾಠವನ್ನು ಕಲಿಸಲು ಬಿಜೆಪಿಗೆ ಮತ ನೀಡಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಇಂದು ಮೈಸೂರಿನ ಕೃಷ್ಣರಾಜ ಕ್ಷೇತ್ರದ ಅಭ್ಯರ್ಥಿ ಶ್ರೀವತ್ಸ ಪರ ಪ್ರಚಾರ ನಡೆಸಿ ಮಾತನಾಡಿದ ಅವರು, ಮೈಸೂರು ಐತಿಹಾಸಿಕ, ಪಾರಂಪರಿಕ, ಜಗತ್ಪ್ರಸಿದ್ಧ ನಗರ. ಈ ನಗರದಲ್ಲಿ ಕಳೆದ ಮೂರು ದಶಕಗಳಿಂದ ಬಿಜೆಪಿಯ ಪ್ರಾಬಲ್ಯವಿದೆ. ಇಲ್ಲಿಂದ ಶಾಸಕರು, ಸಂಸದರ ಆಯ್ಕೆ ಮಾಡಿದ್ದೀರಿ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ನೀವು ಸೇರಿರುವುದನ್ನು ನೋಡಿದರೆ, ಇಲ್ಲಿ ಶ್ರೀವತ್ಸ ಅವರು ಅತ್ಯಧಿಕ ಮತದಿಂದ ಆಯ್ಕೆ ಆಗುತ್ತಾರೆ ಎಂದು ನನಗೆ ಅನಿಸುತ್ತದೆ.
ನಾವು ನಮ್ಮ ಡಬಲ್ ಇಂಜಿನ್ ಸರ್ಕಾರದ ಕಾರ್ಯಕ್ರಮಗಳ ಮೂಲಕ ಸಕಾರಾತ್ಮಕ ಮತಗಳ ಪಡೆಯುವ ಪ್ರಯತ್ನ ಮಾಡುತ್ತಿದ್ದೇವೆ. ಆದರೆ, ವಿರೋಧ ಪಕ್ಷ ತಳಮಟ್ಟದ ಮಾತುಗಳನ್ನಾಡಿ, ಹತಾಶರಾಗಿ ನಕಾರಾತ್ಮಕ ಚುನಾವಣೆ ಮಾಡುತ್ತಿದ್ದಾರೆ. ಯಾರು ಕೆಲಸ ಮಾಡಿದ್ದಾರೆ ಅವರಿಗೆ ಜನರು ಬೆಂಬಲ ಕೊಡುತ್ತಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಹಲವಾರು ಯೋಜನೆಗಳನ್ನು ಮಾಡಿದ್ದೇವೆ. ರೈತರಿಗಾಗಿ ಕಿಸಾನ್ ಸಮ್ಮಾನ್ ಯೋಜನೆ, ಸಾರ್ವಜನಿಕರ ಆರೋಗ್ಯಕ್ಕಾಗಿ ಆಯುಷ್ಮಾನ್ ಭಾರತ ಯೋಜನೆ, ನಗರ ಮತ್ತು ಗ್ರಾಮೀಣ ಭಾಗದಲ್ಲಿ ಮನೆ ಕಟ್ಟಲು ಪ್ರಧಾನಮಂತ್ರಿ ಆವಾಸ್ ಯೋಜನೆ ಮಾಡಿದ್ದೇವೆ. ರೈತರು ಮತ್ತು ಕೂಲಿಕಾರರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ತಂದಿದ್ದೇವೆ. ಸ್ಮಾರ್ಟ್ ಸಿಟಿ ಯೋಜನೆಯ ಮೂಲಕ ಮೈಸೂರು ನಗರ ಅಭಿವೃದ್ಧಿ ಮಾಡಿದ್ದೇವೆ. ನರೇಂದ್ರ ಮೋದಿಯವರಿಗೆ ಮತ್ತು ಮೈಸೂರಿಗೆ ಬಹಳ ಒಲವು ಇದೆ. ಇಡೀ ಭಾರತದಲ್ಲಿ ಅವರು ಯೋಗ ದಿನಾಚರಣೆಗೆ ಆಯ್ಕೆ ಮಾಡಿದ್ದು ಮೈಸೂರು. ನರೇಂದ್ರ ಮೋದಿಯವರ ಮೈಸೂರಿನ ಮೇಲಿನ ಪ್ರೀತಿಗೆ ಶ್ರೀವತ್ಸವಗೆ ಮತ ನೀಡಬೇಕು ಎಂದರು.
ನಾನು ಮುಖ್ಯಮಂತ್ರಿಯಾದ ಬಳಿಕ 250 ಕೋಟಿಗೂ ಅಧಿಕ ಅನುದಾನ ಕೊಟ್ಟಿದ್ದೇನೆ. ಮೈಸೂರು ದಸರಾಗೆ ವಿಶೇಷ ಅನುದಾನ 5 ಕೋಟಿ ಕೊಡುವ ವೇಳೆಯಲ್ಲಿ 25 ಕೋಟಿ ನೀಡಿ ಈ ಬಾರಿಯ ದಸರಾ ಆಚರಣೆ ಮಾಡಿದ್ದೇವೆ. ಮೈಸೂರು ಅಂತರಾಷ್ಟ್ರೀಯ ಯಾತ್ರಾ ಕೇಂದ್ರವಾಗಿದೆ. ಮೈಸೂರು ಸರ್ಕಿಟ್ ಮಾಡಿ ಇಲ್ಲಿ ವಿಶೇಷವಾದ ಪ್ರವಾಸೋದ್ಯಮ ಮಾಡಲು ಮುಂದಾಗಿದ್ದೇವೆ. ಈಗಾಗಲೇ ಆ ಯೋಜನೆ ಕಾರ್ಯಗತಿಯಲ್ಲಿದ್ದು, ಮುಂದಿಬ ವರ್ಷ ಮೈಸೂರಿಗೆ ಬರುವ ಯಾತ್ರಾರ್ಥಿಗಳ ಸಂಖ್ಯೆ ದ್ವಿಗುಣ ಆಗಲಿದೆ ಎಂದರು.
ಮೈಸೂರಿನ ಆಸ್ಪತ್ರೆ ಪುನರ್ ನಿರ್ಮಾಣ ಮಾಡಲು 80 ಕೋಟಿ ಕೊಟ್ಟಿದ್ದೇವೆ. ನಮ್ಮ ಬಜೆಟ್ ನಲ್ಲಿ ಮಹಿಳೆಯರಿಗೆ ಹೆಚ್ಚಿನ ಒತ್ತು ಕೊಟ್ಟಿದ್ದೇವೆ. ಎಲ್ಲ ವಿದ್ಯಾರ್ಥಿಗಳಿಗೆ, ದುಡಿಯುವ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡುತ್ತಿದ್ದೇವೆ. ವಿದ್ಯಾರ್ಥಿಗಳಿಗೆ ಡಿಗ್ರಿವರೆಗೂ ಉಚಿತ ಶಿಕ್ಷಣ ನೀಡುತ್ತಿದ್ದೇವೆ. ಇಲ್ಲಿನ 50 ಸಾವಿರ ಕುಟುಂಬಕ್ಕೆ ಸರ್ಕಾರದ ಯೋಜನೆಗಳ ಲಾಭ ಸಿಕ್ಕಿದೆ. ಅವರೆಲ್ಲರೂ ಬಿಜೆಪಿ ಮತ ನೀಡಲು ತೀರ್ಮಾನ ಮಾಡಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷ ಹತಾಶೆಗೊಂಡು ಹತ್ತು ಕೆ.ಜಿ ಅಕ್ಕಿ ಕೊಡುವ ಗ್ಯಾರೆಂಟಿ ಕೊಡುತ್ತಿದ್ದಾರೆ. 2013 ರಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಿದ್ದಾಗ 10 ಕೆ.ಜಿ ಅಕ್ಕಿ ಕೊಡುತ್ತಿದ್ದೇವು. ಇವರು ಅಧಿಕಾರಕ್ಕೆ ಬಂದ ಮೇಲೆ 5 ಕೆ.ಜಿ ಗೆ ಇಳಿಸಿದರು. ಕಾಂಗ್ರೆಸ್ ಚುನಾವಣೆಗಾಗಿ ಜನರನ್ನು ಯಾಮಾರಿಸುವ ಕೆಲಸ ಮಾಡುತ್ತಿದ್ದಾರೆ. ಇವತ್ತು ನಮ್ಮ ಪ್ರಣಾಳಿಕೆ ಬಿಡುಗಡೆ ಮಾಡಿದ್ದೇವೆ. ಆಯುಷ್ಮಾನ್ ಯೋಜನೆಯ ವಿಮೆ ಹಣ 5 ಲಕ್ಷ ರೂ ಇರುವುದನ್ನು 10 ಲಕ್ಷ ರೂ ಹೆಚ್ಚಳ ಮಾಡಿದ್ದೇವೆ. ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಮನೆ ಕಟ್ಟಲು ನೀಡಲಾಗುತ್ತಿದ್ದ 2 ಲಕ್ಷ ರೂ. ವನ್ನು 5 ಲಕ್ಷಕ್ಕೆ ಹೆಚ್ಚಿಸುತ್ತಿದ್ದೇವೆ. ಕಾಂಗ್ರೆಸ್ ನವರು ಸುಳ್ಳು ಹೇಳಿ, ರಾಜ್ಯವನ್ನು ದಿವಾಳಿ ಮಾಡುತ್ತಾರೆ. ಅವರು ಅಧಿಕಾರಕ್ಕೆ ಬರುವುದಿಲ್ಲ ಎಂದರು.
ಸೋಲಿನ ಹತಾಶೆಯಿಂದ ಕೀಳು ಮಟ್ಟದ ಮಾತುಗಳನ್ನು ಕಾಂಗ್ರೆಸ್ ಆಡುತ್ತಿದೆ. ನರೇಂದ್ರ ಮೋದಿಯವರಿಗೆ ಪ್ರಿಯಾಂಕಾ ಖರ್ಗೆ ಅವರು ನಾಲಾಯಕ್ ಎಂದಿದ್ದಾರೆ. ಅವರನ್ನು ನೀವು ಕ್ಷಮಿಸುತ್ತಿರಾ? ಅವರಿಗೆ ತಕ್ಕ ಪಾಠವನ್ನು ಕಲಿಸಲು ಶ್ರೀವತ್ಸ ಅವರಿಗೆ 25 ಸಾವಿರ ಮತ ಕೊಟ್ಟು ಗೆಲ್ಲಿಸಿಕೊಡಿ ಎಂದರು.