
ಅಮೆರಿಕದ ಸುಂಕ ನೀತಿಗೆ ಭಾರತದ ಶ್ರಮಸಮಾಜದ ದುಡಿಯುವ ವರ್ಗಗಳು ತತ್ತರಿಸುತ್ತಿವೆ
ನಾ ದಿವಾಕರ
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಗತ್ತಿನ ವಿರುದ್ಧ ಸಾರಿರುವ ಸುಂಕದ ಸಮರ, ವಿವಿಧ ದೇಶಗಳ ಆರ್ಥಿಕತೆಗೆ ಹಲವು ಸವಾಲುಗಳನ್ನು ಒಡ್ಡಿರುವುದು ವಾಸ್ತವ. ಈ ಸವಾಲನ್ನು ಮೆಟ್ಟಿ ನಿಲ್ಲಲು ಎಲ್ಲ ದೇಶಗಳೂ ಸಹ ತಮ್ಮ ಆರ್ಥಿಕತೆಯ ಮೂಲ ಸ್ವರೂಪದಲ್ಲೇ ಬದಲಾವಣೆಗಳನ್ನು ಮಾಡುವ ಅನಿವಾರ್ಯ ಪರಿಸ್ಥಿತಿ ಎದುರಿಸುತ್ತಿವೆ. ಕೆಲವು ಸರಕುಗಳನ್ನು ಅಮೆರಿಕದಿಂದ ಆಮದು ಮಾಡಿಕೊಳ್ಳುತ್ತಿದ್ದ ಭಾರತದ ಉದ್ದಿಮೆಗಳು ಹಾಗೂ ವಿದೇಶಿ ವ್ಯಾಮೋಹದಿಂದ ಈ ವಸ್ತುಗಳನ್ನೇ ಪ್ರಧಾನವಾಗಿ ಬಳಸುತ್ತಿದ್ದ ಭಾರತದ ಮಧ್ಯಮ ವರ್ಗಗಳಿಗೆ ಈಗ Vocal for Local ಘೋಷಣೆ ಅಪ್ಯಾಯಮಾನವಾಗತೊಡಗಿದೆ. ಅದೇ ರೀತಿ ಅಮೆರಿಕದ ಮಾರುಕಟ್ಟೆಯನ್ನೇ ಅವಲಂಬಿಸಿ ರಫ್ತು ಮಾಡುವ ಸರಕುಗಳನ್ನೇ ತಯಾರಿಸುವ ಉದ್ದಿಮೆಗಳೂ ಸಂಕಷ್ಟಕ್ಕೀಡಾಗಿವೆ. ಆರ್ಥಿಕ ನೀತಿಗಳಲ್ಲಿ ಸ್ವದೇಶಿ ಪರಿಕಲ್ಪನೆ 1998ರ ವಾಜಪೇಯಿ ಸರ್ಕಾರದ ಆಳ್ವಿಕೆಯಲ್ಲಿ ಜನಪ್ರಿಯವಾದರೂ, 2014ರಲ್ಲಿ ಭಾರತ ಡಿಜಿಟಲ್ ಬಂಡವಾಳಶಾಹಿ ಮಾರುಕಟ್ಟೆಗೆ ತೆರೆದುಕೊಂಡ ನಂತರದಲ್ಲಿ ಈ ಕಲ್ಪನೆಯನ್ನೇ ಕೈಬಿಡಲಾಗಿತ್ತು.
ಈಗ ಮತ್ತೊಮ್ಮೆ ಕೇಂದ್ರ ಸರ್ಕಾರ ಸ್ವದೇಶಿ ಕಲ್ಪನೆಗೆ ಮರಳಿದ್ದರೂ, ಇದು ಸ್ಥಳೀಯವಾಗಿ ಉತ್ಪಾದನೆಯಾಗುವ ಸರಕುಗಳನ್ನು ಖರೀದಿಸುವುದಕ್ಕೆ ಸೀಮಿತವಾಗಿದೆಯೇ ಹೊರತು, ಸ್ವಾವಲಂಬನೆಯನ್ನು ಸೃಷ್ಟಿಸುವ ಸ್ಥಳೀಯ ಉತ್ಪಾದನೆಯತ್ತ ಗಮನಹರಿಸುವುದಿಲ್ಲ. 2014ರ ನಂತರದಲ್ಲಿ ಭಾರತದಲ್ಲಿ ಬೇಡಿಕೆ ಆಧಾರಿತ ಆರ್ಥಿಕತೆಯನ್ನು (Demand Economy) ಕೈಬಿಟ್ಟು ಸರಬರಾಜು ಆಧಾರಿತ ಆರ್ಥಿಕತೆಯಾಗಿ (Supply Economy)ಪರಿವರ್ತಿಸಿರುವುದು ಈಗ ಸಮಸ್ಯೆಗಳನ್ನು ಸೃಷ್ಟಿಸಿದೆ. ತಯಾರಿಕಾ ವಲಯವನ್ನು ಉತ್ತೇಜಿಸದೆ, ಡಿಜಿಟಲ್ ತಂತ್ರಜ್ಞಾನವನ್ನೂ ಒಳಗೊಂಡಂತೆ, ಜನಸಾಮಾನ್ಯರ ವಸ್ತುಗಳ ಸ್ಥಳೀಯ ಉತ್ಪಾದನೆ ಸಂಪೂರ್ಣ ಕುಸಿದಿದೆ. ತಮ್ಮ ಸರಕುಗಳನ್ನು ಸ್ಥಳೀಯ ಮಾರುಕಟ್ಟೆಗಿಂತಲೂ ವಿದೇಶಿ ಮಾರುಕಟ್ಟೆಗಾಗಿಯೇ ತಯಾರಿಸುವ ಔದ್ಯಮಿಕ ಬೆಳವಣಿಗೆಯ ಪರಿಣಾಮವನ್ನು ದೇಶ ಈಗ ಎದುರಿಸುತ್ತಿದೆ. ಈಗಲೂ ಸಹ Vocal for Local ಅಥವಾ ಸ್ವದೇಶಿ ವಸ್ತು ಬಳಕೆಯ ಘೋಷಣೆಗಳು, ಸ್ಥಳೀಯ ಉತ್ಪಾದನೆಯನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿಲ್ಲದಿರುವುದು ವಾಸ್ತವ.

ಸುಂಕ ಸಮರದ ವ್ಯಾಪಕ ಪರಿಣಾಮ
ಆದರೆ ಈ ಸುಂಕ ಸಮರದ ಪರಿಣಾಮವನ್ನು ಕೇವಲ ಮಾರುಕಟ್ಟೆ ಅಥವಾ ನಗರೀಕರಣಗೊಂಡ ಹಿತವಲಯದ ಮಧ್ಯಮ ವರ್ಗದ ದೃಷ್ಟಿಯಿಂದ ನೋಡಿದರೆ ನಮಗೆ ಕಾಣುವುದು ಅರ್ಧಸತ್ಯ ಮಾತ್ರ. ಈ ಗೋಡೆಗಳನ್ನು ದಾಟಿ, ಅಮೆರಿಕದ ಮಾರುಕಟ್ಟೆಯನ್ನೇ ಅವಲಂಬಿಸಿರುವ ಉತ್ಪಾದನಾ ವಲಯದ (Manufacturing Sector) ಮತ್ತು ಸಂಸ್ಕರಣ ಉದ್ದಿಮೆಗಳ (Processing Units) ದೃಷ್ಟಿಯಿಂದ ನೋಡಿದಾಗ, ಅಲ್ಲಿ ಕಾಣುವ ಕರಾಳ ದೃಶ್ಯಗಳು ಪ್ರಜ್ಞೆಯನ್ನು ಕಾಡದಿರದು. ಅಮೆರಿಕದ ಈ ಕ್ರಮವು ಭಾರತದ ಕೃಷಿ, ಮೀನುಗಾರಿಕೆ, ಮಧ್ಯಮ, ಸಣ್ಣ ಮತ್ತು ಅತಿ ಸಣ್ಣ ಉದ್ಯಮಗಳು ಮತ್ತು ವಿಶೇಷವಾಗಿ ಜವಳಿ ಉದ್ಯಮದ ಮೇಲೆ ತೀವ್ರ ಪರಿಣಾಮ ಬೀರಲಿದೆ. ಔದ್ಯಮಿಕ ನೆಲೆಯಲ್ಲಿ ಬಂಡವಾಳ ಹೂಡಿರುವವರು ತಮ್ಮ ಮೂಲ ನಿಧಿಯನ್ನು ಕಾಪಾಡಿಕೊಳ್ಳುವ ಹಲವು ವಿಧಾನಗಳನ್ನು ಹೊಂದಿರುತ್ತಾರೆ. ಉದ್ದಿಮೆಗಳನ್ನು ಮುಚ್ಚುವುದಾಗಲೀ, ಕಾರ್ಮಿಕರ ಸಂಖ್ಯೆಯನ್ನು ಕಡಿಮೆ ಮಾಡುವುದಾಗಲೀ, ಹೆಚ್ಚಿನ ಯಾಂತ್ರಿಕತೆ ಮತ್ತು ತಂತ್ರಜ್ಞಾನವನ್ನು ಬಳಸುವುದಾಗಲೀ ಬಂಡವಾಳಿಗರನ್ನು ಅವರ ಹಿತಾಸಕ್ತಿಗಳನ್ನು ಮಾತ್ರ ರಕ್ಷಿಸುತ್ತದೆ. ಸರ್ಕಾರಗಳೂ ಇವರಿಗೆ ಒತ್ತಾಸೆಯಾಗಿ ನಿಲ್ಲುತ್ತವೆ.
ಮುಚ್ಚಲ್ಪಟ್ಟ ಉದ್ದಿಮೆಗಳ ಕಾರ್ಮಿಕರು, ಉಚ್ಛಾಟಿಸಲ್ಪಟ್ಟ ದುಡಿಮೆಗಾರರು ಹಾಗೂ ತಂತ್ರಜ್ಞಾನ-ಕೃತಕ ಬುದ್ಧಿಮತ್ತೆಯ ಬಳಕೆಯಿಂದ ತಮ್ಮ ಉದ್ಯೋಗ ಕಳೆದುಕೊಳ್ಳುವ ಲಕ್ಷಾಂತರ ಶ್ರಮಜೀವಿಗಳು ಮತ್ತೊಮ್ಮೆ ಮಾರುಕಟ್ಟೆಯ ಹಂಗಿಗೆ ಒಳಪಡುತ್ತಾರೆ. ಭಾರತದಲ್ಲಿ ವಿಶೇಷವಾಗಿ ಬಾಧಿತವಾಗುವುದು ಗಾರ್ಮೆಂಟ್ ಉದ್ಯಮಗಳು. ಏಕೆಂದರೆ ಇಲ್ಲಿ ಸಂಸ್ಕರಿಸಿ, ತಯಾರಿಸಲಾಗುವ ಸಿದ್ಧ ಉಡುಪುಗಳಿಗೆ ಅತಿ ಹೆಚ್ಚಿನ ಮಾರುಕಟ್ಟೆ ಅಮೆರಿಕೆಯಲ್ಲಿದೆ. ಈ ಉದ್ದಿಮೆದಾರರು ಈಗ ಕಡಿಮೆ ಆಮದು ಸುಂಕ ವಿಧಿಸುವ ಅನ್ಯ ದೇಶಗಳತ್ತ ಹೊರಳುತ್ತಿದ್ದಾರೆ, ಸ್ಥಳೀಯವಾಗಿ ಬಂಡವಾಳಿಗರು ತಮ್ಮ ಆರ್ಥಿಕ ಹೊರೆಯಿಂದ ಪಾರಾಗಲು ಅನುಸರಿಸುವ ಸುಲಭೋಪಾಯ ಎಂದರೆ ಗುತ್ತಿಗೆ ಆಧಾರದ ಮೇಲೆ ದುಡಿಯುವ ಕಾರ್ಮಿಕರನ್ನು ವಜಾ ಮಾಡುವುದು. ಇವರಲ್ಲಿ ಬಹುಪಾಲು ಕಾರ್ಮಿಕರು ವಲಸೆ ಬಂದಿರುವರಾಗಿರುತ್ತಾರೆ. ಇದರ ಒಂದು ಕರುಳುಹಿಂಡುವ ದೃಶ್ಯಗಳನ್ನು ತಮಿಳುನಾಡಿನ ತಿರುಪ್ಪೂರು ಮತ್ತಿತರ ಔದ್ಯಮಿಕ ನಗರಗಳಲ್ಲಿ ಈಗ ಕಾಣಬಹುದಾಗಿದೆ.
ಜವಳಿ ನಗರಿಯ ಶ್ರಮಜೀವಿಗಳ ಬವಣೆ
ಒಂದು ಹಂತದಲ್ಲಿ ಡಾಲರ್ ನಗರಿ ಎಂದು ಕರೆಯಲ್ಪಡುತ್ತಿದ್ದ ತಿರುಪ್ಪೂರು ಈಗ ರಪ್ತು ವ್ಯಾಪಾರದ ಕುಸಿತದಿಂದ ಭಿನ್ನ ಹಾದಿಯಲ್ಲಿ ಕ್ರಮಿಸುತ್ತಿದೆ. ತಿರುಪ್ಪೂರಿನ ಜವಳಿ ಉದ್ದಿಮೆಗಳು ಭಾರತದ ಜವಳಿ ರಫ್ತು ವಹಿವಾಟಿನ ಮೂರನೆ ಒಂದರಷ್ಟು ಪಾಲನ್ನು ಹೊಂದಿವೆ. ಸುಂಕದ ಹೆಚ್ಚಳವಾದ ನಂತರದಲ್ಲಿ ತಿರುಪ್ಪೂರಿನಲ್ಲಿದ್ದ 2,500 ಸಿದ್ಧುಉಡುಪು (Knitwear) ಕೈಗಾರಿಕೆಗಳ ಪೈಕಿ ಐನೂರಕ್ಕೂ ಹೆಚ್ಚು ಉದ್ದಿಮೆಗಳನ್ನು ಮುಚ್ಚಲಾಗಿದೆ. ಸಾವಿರಕ್ಕೂ ಹೆಚ್ಚು ಉದ್ದಿಮೆಗಳಲ್ಲಿ ತಯಾರಿಕೆಯ ಪ್ರಮಾಣವನ್ನು ಕಡಿಮೆ ಮಾಡಲಾಗಿದೆ. ತಿರುಪ್ಪೂರಿನ ಅತಿ ದೊಡ್ಡ ರಫ್ತು ಮಾರುಕಟ್ಟೆ ಎಂದರೆ ಅಮೆರಿಕ. ಭಾರತದಿಂದ ರಫ್ತು ಮಾಡಲಾಗುವ ಸಿದ್ದ ಉಡುಪುಗಳ ಪೈಕಿ ಶೇಕಡಾ 90ರಷ್ಟು , ಉಳಿದಂತೆ ಜವಳಿ ಉತ್ಪನ್ನಗಳ ಶೇಕಡಾ 55ರಷ್ಟು ತಿರುಪ್ಪೂರಿನಲ್ಲಿ ತಯಾರಾಗುತ್ತದೆ. 2024-25ರಲ್ಲಿ ತಿರುಪ್ಪೂರಿನಿಂದ ರಫ್ತು ಮಾಡಲಾದ ಉತ್ಪನ್ನಗಳ ಮೊತ್ತ 39,618 ಕೋಟಿ ರೂಗಳಾಗಿತ್ತು. ಇದರ ಪೈಕಿ ಶೇಕಡಾ 35ರಷ್ಟು ಅಮೆರಿಕಾದ ಮಾರುಕಟ್ಟೆಗೆ ರಫ್ತು ಮಾಡಲಾಗಿತ್ತು.
ಭಾರತ ಅಮೆರಿಕಾದ ಮಾರುಕಟ್ಟೆಗೆ ವರ್ಷಕ್ಕೆ 11 ಶತಕೋಟಿ ಡಾಲರ್ ಮೌಲ್ಯದ ಜವಳಿ ಮತ್ತು ಸಿದ್ಧುಉಡುಪುಗಳನ್ನು ರಫ್ತು ಮಾಡುತ್ತಿದೆ. ಇದರಲ್ಲಿ 4 ಬಿಲಿಯನ್ ಡಾಲರ್ ಮೌಲ್ಯದ ಸರಕುಗಳನ್ನು ತಮಿಳುನಾಡು ಒದಗಿಸುತ್ತದೆ. ತಿರುಪ್ಪೂರಿನಲ್ಲಿರುವ ಉದ್ದಿಮೆಗಳಲ್ಲಿ ಮೂರು ವಲಯಗಳಿವೆ. ಅಮೆರಿಕದ ಮಾರುಕಟ್ಟೆಗಾಗಿಯೇ ತಯಾರಿಸಿ ರಫ್ತು ಮಾಡುವವರು, ಅಮೆರಿಕ ಹೊರತುಪಡಿಸಿ ಇತರ ದೇಶಗಳಿಗೆ ರಫ್ತು ಮಾಡುವವರು ಮತ್ತು ಯೂರೋಪ್ ದೇಶಗಳಿಗೆ ರಫ್ತು ಮಾಡುವವರು. ಸುಂಕ ಸಮರ ಆರಂಭವಾಗುವ ಮುನ್ನ ಶೇಕಡಾ 4 ರಿಂದ 16ರಷ್ಟು ಸುಂಕ ಪಾವತಿ ಮಾಡುತ್ತಿದ್ದ ಅಮೆರಿಕದ ರೀಟೇಲ್ ಉದ್ದಿಮೆಗಳು ಈಗ ಶೇಕಡಾ 50ರಷ್ಟು ಆಮದು ಸುಂಕ ತೆರಬೇಕಿದೆ. ಸಹಜವಾಗಿಯೇ ಈ ಉದ್ದಿಮೆಗಳು ಕಡಿಮೆ ಸುಂಕ ಇರುವ ದೇಶಗಳಿಂದ ಆಮದು ಮಾಡಿಕೊಳ್ಳುತ್ತವೆ. ಇದರ ಪರಿಣಾಮವಾಗಿ ತಿರುಪ್ಪೂರಿನ ಉದ್ದಿಮೆಗಳಿಗೆ 3 ರಿಂದ 5 ಸಾವಿರ ಕೋಟಿ ರೂಗಳಷ್ಟು ವಹಿವಾಟು ನಷ್ಟವಾಗುತ್ತಿದೆ.

ತಮಿಳುನಾಡಿನ ಈ ಜವಳಿ ಉದ್ದಿಮೆಗಳಲ್ಲಿ ಕೆಳಹಂತದ ತಯಾರಿಕೆ, ಸಂಸ್ಕರಣೆ ಮತ್ತಿತರ ಕೆಲಸಗಳನ್ನು ಮಾಡುವವರ ಪೈಕಿ ಅತಿ ಹೆಚ್ಚಿನ ಸಂಖ್ಯೆಯ ವಲಸೆ ಕಾರ್ಮಿಕರಿದ್ದಾರೆ. ಸರ್ಕಾರದ ಅಧಿಕೃತ ಮಾಹಿತಿಯ ಅನುಸಾರ ತಿರುಪ್ಪೂರಿನಲ್ಲಿ 2.1 ಲಕ್ಷ, ಕಂಚೀಪುರಂನಲ್ಲಿ 1.61 ಲಕ್ಷ, ಕೊಯಮತ್ತೂರಿನಲ್ಲಿ 1.32 ಲಕ್ಷ, ಚೆನ್ನೈ ನಗರದಲ್ಲಿ 1.29 ಲಕ್ಷ ವಲಸೆ ಕಾರ್ಮಿಕರು ದುಡಿಯುತ್ತಿದ್ದಾರೆ. ಈ ಬಹುತೇಕ ವಲಸೆ ಕಾರ್ಮಿಕರು ಉತ್ತರ ಭಾರತದಿಂದ ಬಂದವರಾಗಿದ್ದು, ಒಡಿಷಾ 2.89 ಲಕ್ಷ, ಬಿಹಾರ 2.51 ಲಕ್ಷ, ಜಾರ್ಖಂಡ್ 1.9 ಲಕ್ಷ, ಪಶ್ಚಿಮ ಬಂಗಾಲ 1.90 ಲಕ್ಷ, ಉತ್ತರ ಪ್ರದೇಶ 91 ಸಾವಿರ, ಅಸ್ಸಾಂ 93 ಸಾವಿರ ವಲಸೆ ಕಾರ್ಮಿಕರನ್ನು ಪೂರೈಸುತ್ತಿವೆ. ತಿರುಪ್ಪೂರು ಸಿದ್ಧ ಉಡುಪು, ಒಳ ಉಡುಪು ಹಾಗೂ ಗಾರ್ಮೆಂಟ್ ತಯಾರಿಕೆಯನ್ನು ಮುಂಚೂಣಿಯಲ್ಲಿದ್ದು ಜವಳಿ ನಗರ ಎಂದೇ ಖ್ಯಾತಿ ಪಡೆದಿದೆ. ತಿರುಪ್ಪೂರಿನಲ್ಲಿರುವ ಐದು ಲಕ್ಷ ಕಾರ್ಮಿಕರ ಪೈಕಿ ಅರ್ಧಕ್ಕಿಂತಲೂ ಹೆಚ್ಚು ಜನರು ಈ ಮೇಲಿನ ರಾಜ್ಯಗಳಿಂದ ವಲಸೆ ಬಂದವರಾಗಿದ್ದಾರೆ. ಒಮ್ಮೆ ಸರಕುಗಳಿಗೆ ಬೇಡಿಕೆ ಕುಸಿದರೆ, ಈ ಕಾರ್ಮಿಕರ ನೌಕರಿಗೆ ಚ್ಯುತಿ ಉಂಟಾಗುತ್ತದೆ.
ಅಧಿಕೃತ ದತ್ತಾಂಶಗಳ ಅನುಸಾರ ತಿರುಪ್ಪೂರಿನಲ್ಲಿ 2,500 ಸಿದ್ಧ ಉಡುಪುಗಳ, 2,500 ರಫ್ತು ಮಾಡುವ ಸಲುವಾಗಿಯೆ ತಯಾರಿಸುವ ಉಡುಪುಗಳ, 1,700 ಸ್ಥಳೀಯ ಮಾರುಕಟ್ಟೆಯ ಉಡುಪುಗಳ ಉದ್ದಿಮೆಗಳಿದ್ದು 600 ಎಂಬ್ರಾಯ್ಡರಿ ಮಾಡುವ, 400 ಮುದ್ರಣ ಮಾಡುವ, 360 ಬಟ್ಟೆಗಳಿಗೆ ಬಣ್ಣ ಹಾಕುವ ಮತ್ತು 11 ಸಾವಿರ ಇತರ ಸಣ್ಣ ಪೂರಕ ಉದ್ದಿಮೆಗಳು ಸ್ಥಾಪನೆಯಾಗಿವೆ. ಸುಂಕ ಹೆಚ್ಚಳದ ಪರಿಣಾಮವಾಗಿ ಈ ಉದ್ದಿಮೆಗಳಲ್ಲಿ ಬೇಡಿಕೆ ಮತ್ತು ತಯಾರಿಕೆಯ ಪ್ರಮಾಣವೂ ಕುಸಿದಿದ್ದು, ಸಣ್ಣ ಮಟ್ಟದ ಬೇಡಿಕೆಗಳನ್ನು, ಯಂತ್ರಗಳನ್ನು ಚಾಲ್ತಿಯಲ್ಲಿಡುವ ಸಲುವಾಗಿ ಒಪ್ಪಿಕೊಳ್ಳಲಾಗುತ್ತಿದೆ. ಆದರೆ ತಯಾರಿಸಲಾಗಿರುವ ಪ್ರತಿಯೊಂದು ಉಡುಪು ಉದ್ದಿಮೆಗೆ ಹೊರೆಯಾಗಿ ಪರಿಣಮಿಸುತ್ತದೆ. ಬಾಂಗ್ಲಾದೇಶ ಮತ್ತು ವಿಯಟ್ನಾಂ ದೇಶಗಳ ಉದ್ದಿಮೆಗಳು ಕಡಿಮೆ ಸುಂಕದ ಕಾರಣದಿಂದ ಹೆಚ್ಚಿನ ಬೇಡಿಕೆ ಗಳಿಸುತ್ತಿವೆ. ಇದು ತಿರುಪ್ಪೂರಿನ ಮೇಲೆ ಭೀಕರ ಪರಿಣಾಮಗಳನ್ನು ಬೀರುತ್ತಿದೆ.

ತಯಾರಿಕೆಯ ಉದ್ದಿಮೆಗಳು ಕುಸಿಯುತ್ತಿರುವಂತೆಯೇ ಇದಕ್ಕೆ ಪೂರಕವಾಗಿ ಕಾರ್ಯನಿರ್ವಹಿಸುವ ಬಟ್ಟೆಗಳಿಗೆ ಬಣ್ಣ ಹಾಕುವ ಸಣ್ಣ ಕೈಗಾರಿಕೆಗಳು, ಹೊಲಿಗೆ ಕೇಂದ್ರಗಳು, ಸಾರಿಗೆ ವ್ಯವಸ್ಥೆ ಮತ್ತು ಸ್ಥಳೀಯ ವ್ಯಾಪಾರಿಗಳು ಎಲ್ಲರೂ ಸಹ ತೀವ್ರ ಸಂಕಷ್ಟಕ್ಕೊಳಗಾಗುತ್ತಾರೆ. ಇದೇ ಪರಿಸ್ಥಿತಿ ಮುಂದುವರೆದರೆ ಶೇಕಡಾ 20ರಷ್ಟು ಉದ್ಯೋಗಗಳೇ ಇಲ್ಲವಾಗುತ್ತವೆ ಮತ್ತು ವರ್ಷಕ್ಕೆ 14 ಸಾವಿರ ಕೋಟಿ ರೂಗಳ ನಷ್ಟವಾಗುತ್ತದೆ ಎಂದು ಮಾರುಕಟ್ಟೆ ತಜ್ಞರು ಆತಂಕ ವ್ಯಕ್ತಪಡಿಸುತ್ತಾರೆ. ಈಗಾಗಲೇ ಹಲವು ರಫ್ತು ಉದ್ದಿಮೆಗಳು ಬಾಗಿಲು ಮುಚ್ಚಿದ್ದು ಕಳೆದ ಏಳು ವರ್ಷಗಳಿಂದಲೂ ಹೊಲಿಗೆ ಘಟಕಗಳನ್ನು ನಿರ್ವಹಿಸುತ್ತಿದ್ದ ಜಾರ್ಖಂಡ್ ರಾಜ್ಯದ ಸಾವಿರಾರು ದರ್ಜಿಗಳು ತಮ್ಮ ನೌಕರಿ ಕಳೆದುಕೊಳ್ಳಲಿದ್ದಾರೆ. ಸುಂಕ ನೀತಿ ಜಾರಿಗೊಂಡ ನಂತರದಲ್ಲಿ ಒಟ್ಟು ವ್ಯಾಪಾರದಲ್ಲಿ ಶೇಕಡಾ 40ರಷ್ಟು ಕುಸಿತ ಉಂಟಾಗಿದೆ.
ಔದ್ಯಮಿಕ ಬಿಕ್ಕಟ್ಟು-ಶ್ರಮಿಕರ ಸಂಕಟ
ತಿರುಪ್ಪೂರಿನಲ್ಲಿರುವ ಆರ್ಆರ್‌ಕೆ ಕಾಟನ್ಸ್ ಎಂಬ ಕಂಪನಿ ಟಿ ಷರ್ಟ್ಸ್ ಮತ್ತು ಒಳಚಡ್ಡಿಗಳನ್ನು ತಯಾರಿಸುವ ಘಟಕಗಳನ್ನು ಕಳೆದ ಹತ್ತು ವರ್ಷಗಳಿಂದ ನಡೆಸುತ್ತಿದ್ದು, ಅಮೆರಿಕದ ಅತಿದೊಡ್ಡ ರೀಟೇಲ್ ವ್ಯಾಪಾರಿಗಳು ಈ ಉದ್ದಿಮೆಯ ಗ್ರಾಹಕರಾಗಿದ್ದಾರೆ. ಈಗ ಈ ಕಂಪನಿಯಲ್ಲಿ 480 ಹೊಲಿಗೆ ಯಂತ್ರಗಳ ಪೈಕಿ ನೂರು ಮಾತ್ರ ಕಾರ್ಯನಿರ್ವಹಿಸುತ್ತಿದ್ದು 65 ಕೋಟಿ ರೂಗಳಿಗೂ ಹೆಚ್ಚು ಮೌಲ್ಯದ ಸರಕುಗಳು ಗೋದಾಮುಗಳಲ್ಲಿ ಶೇಖರಣೆಯಾಗಿವೆ. 2000 ಸಿಬ್ಬಂದಿಗಳಿದ್ದ ಈ ಕಂಪನಿಯಲ್ಲಿ ಈಗ ಅರ್ಧದಷ್ಟು ನೌಕರರನ್ನು ವಜಾ ಮಾಡಲಾಗಿದೆ. ಅಂದರೆ 1000 ಕಾರ್ಮಿಕರು ನಿರುದ್ಯೋಗಿಗಳಾಗಿದ್ದಾರೆ. ಅವರಲ್ಲಿ ಅನೇಕರು ವಲಸೆ ಕಾರ್ಮಿಕರಾಗಿದ್ದು, ಸ್ಥಳೀಯ ಉದ್ಯೋಗ ದೊರೆಯದೆ ಇದ್ದಲ್ಲಿ ತಮ್ಮ ರಾಜ್ಯಗಳಿಗೆ ಹಿಂತಿರುಗಬೇಕಾಗುತ್ತದೆ.
ಬಹುಪಾಲು ವಲಸೆ ಕಾರ್ಮಿಕರು ಚೆನ್ನೈ ಮತ್ತಿತರ ನಗರಗಳಲ್ಲಿ ಕಟ್ಟಡ ಕಾರ್ಮಿಕರಾಗಿ ದುಡಿಯಲು ವಲಸೆ ಹೋಗಲಾರಂಭಿಸಿದ್ದಾರೆ. 40 ವರ್ಷಕ್ಕೂ ಮೇಲ್ಪಟ್ಟವರು ತಮ್ಮ ಸ್ವಂತ ಊರುಗಳಿಗೆ ತೆರಳಿದರೂ, 20-30ರ ವಯೋಮಾನದ ಕಾರ್ಮಿಕರು ಇತರ ನೌಕರಿಗಳಿಗಾಗಿ ಪರದಾಡುತ್ತಿರುವುದು ಸಾಮಾನ್ಯ ದೃಶ್ಯವಾಗಿದೆ. ಏಕೆಂದರೆ ಸ್ಥಳೀಯವಾಗಿ ಈ ಕಾರ್ಮಿಕರಿಗೆ ನೌಕರಿ ದೊರೆಯುವುದು ದುಸ್ತರವಾಗಿದೆ. ಬೇರೆ ನಗರಗಳಿಗೆ ಹೋದರೂ ಸಹ ಮನೆ ಬಾಡಿಗೆ, ಊಟದ ಖರ್ಚುಗಳನ್ನು ನಿಭಾಯಿಸುವುದೇ ದುಸ್ತರವಾಗುತ್ತಿದೆ. ಈ ಮರು ವಲಸೆಯ ಪರಿಣಾಮವನ್ನು ಚೆನ್ನೈ ನಗರದ ರೈಲ್ವೆ ನಿಲ್ದಾಣದಲ್ಲಿ ನಿತ್ಯ ತಮ್ಮ ಊರುಗಳಿಗೆ ಹಿಂದಿರುಗುತ್ತಿರುವ ಸಾವಿರಾರು ಕಾರ್ಮಿಕರ ನಡುವೆ ಕಾಣಬಹುದು. ತನ್ನ ಮಗಳನ್ನು ತಿರುಪ್ಪೂರಿನ ಆಂಗ್ಲ ಶಾಲೆಯಲ್ಲಿ ಓದಿಸುತ್ತಿದ್ದ ಬಿಹಾರದ ದಿಲೀಪ್ ಕುಮಾರ್, ಈಗ ಊರಿಗೆ ಮರಳಿ ಮಗಳನ್ನು ಅಲ್ಲಿನ ಸರ್ಕಾರಿ ಶಾಲೆಯಲ್ಲಿ ಸೇರಿಸಬೇಕಿದೆ. ಇಂತಹ ಉದಾಹರಣೆಗಳು ನೂರಾರು ಕಂಡುಬರುತ್ತಿವೆ.
ಇನ್ನು ಕೆಲವು ಕಾರ್ಮಿಕರು ವಾಹನ ಖರೀದಿಸಲು ಸಾಲ ಪಡೆದಿದ್ದು ತಮ್ಮ ದುಡಿಮೆಯಿಂದಲೇ ಸಾಲ ತೀರಿಸುವುದೇ ಅಲ್ಲದೆ, ತಮ್ಮನ್ನೇ ಅವಲಂಬಿಸಿರುವ ಕುಟುಂಬಕ್ಕೂ ಪ್ರತಿ ತಿಂಗಳೂ ಹಣ ಕಳಿಸುವುದು ಸಾಮಾನ್ಯ ಸಂಗತಿಯಾಗಿದೆ. ತಿರುಪ್ಪೂರು ತಮಗೆ ಸುಸ್ಥಿರ ಜೀವನ ಮತ್ತು ಭದ್ರತೆ ನೀಡುತ್ತದೆ ಎಂಬ ಭರವಸೆಯೊಂದಿಗೆ ಹೊರ ರಾಜ್ಯಗಳಿಂದ ಬಂದು ನೆಲೆಸಿರುವ ಕಾರ್ಮಿಕರು ಈಗ ಎರಡು ಹೊತ್ತಿನ ಊಟಕ್ಕಾಗಿ ಪರದಾಡುವಂತಹ ಸ್ಥಿತಿ ಒದಗಿದೆ ಎಂದು ಕಾರ್ಮಿಕ ಸಂಘಟನೆಗಳ ನಾಯಕರು ಹೇಳುತ್ತಾರೆ. ಹಾಗಾಗಿ ತಿರುಪ್ಪೂರಿನ ಬಿಕ್ಕಟ್ಟುಗಳನ್ನು ಕೇವಲ ಔದ್ಯಮಿಕ ದೃಷ್ಟಿಯಿಂದ ನೋಡಲಾಗುವುದಿಲ್ಲ. ಲಕ್ಷಾಂತರ ಕಾರ್ಮಿಕರ ಬದುಕು ಪಲ್ಲಟವಾಗುತ್ತದೆ. ತಮ್ಮ ರಾಜ್ಯಗಳಿಗೆ ಶಾಶ್ವತವಾಗಿ ಮರಳುವ ಕಾರ್ಮಿಕರು ಮತ್ತು ಅವರ ಕುಟುಂಬಗಳು ಮತ್ತೊಮ್ಮೆ ತಮ್ಮ ಜೀವನವನ್ನು ಕಟ್ಟಿಕೊಳ್ಳುವ ಅಸಹಾಯಕ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಸ್ಥಳೀಯವಾಗಿ ಬೇರೆ ನೌಕರಿಗಳು ದೊರೆತರೂ ಕೂಲಿಯ ಪ್ರಮಾಣ ಕಡಿಮೆಯಾಗುವುದರಿಂದ ಈ ಶ್ರಮಜೀವಿಗಳ ಬದುಕು ದುಸ್ತರವಾಗುತ್ತದೆ.
ಅನಿಶ್ಚಿತತೆಯ ವಾತಾವರಣದಲ್ಲಿ

ಸಾವಿರಾರು ಸಣ್ಣ-ಅತಿಸಣ್ಣ ಉದ್ದಿಮೆಗಳಿಂದ ಕೂಡಿದ ತಿರುಪ್ಪೂರಿನಲ್ಲಿ ಇಂದು ನೀರವ ಮೌನ, ಹತಾಶೆ, ಆತಂಕ ಮತ್ತು ಭವಿಷ್ಯದ ಭೀತಿ ಎಲ್ಲವೂ ಒಮ್ಮೆಲೆ ಆವರಿಸಿದಂತೆ ಕಾಣುತ್ತಿದೆ ಎನ್ನುತ್ತಾರೆ ಸ್ಥಳೀಯ ಕಾರ್ಮಿಕ ನಾಯಕರು. ಕೇಂದ್ರ ಸರ್ಕಾರ ಈ ಉದ್ದಿಮೆದಾರರನ್ನು ರಕ್ಷಿಸಲು ಪ್ಯಾಕೇಜ್ ಒದಗಿಸುವುದಾಗಿ ಹೇಳಿದ್ದು, ಮತ್ತೊಂದೆಡೆ ಅಮೆರಿಕ ಸರ್ಕಾರದೊಡನೆ ಮಾತುಕತೆ ನಡೆಸಿರುವುದು ಇಲ್ಲಿನ ಉದ್ದಿಮೆದಾರರಿಗೆ ಕೊಂಚ ಭರವಸೆ ನೀಡಿದೆ. ಬಂಡವಾಳಿಗರ ಹಿತರಕ್ಷಣೆ ಆರ್ಥಿಕತೆಯ ದೃಷ್ಟಿಯಿಂದ ಸ್ವಾಗತಾರ್ಹ. ಈ ನಿಟ್ಟಿನಲ್ಲಿ ಸರ್ಕಾರಗಳು ಒಂದು ಹೆಜ್ಜೆ ಮುಂದಿರುತ್ತವೆ. ಕೇಂದ್ರ ಸರ್ಕಾರ ಘೋಷಿಸಲಿರುವ ಪ್ಯಾಕೇಜ್‌ಗಳು ಈ ಉದ್ದಿಮೆದಾರರನ್ನು ಮಾರುಕಟ್ಟೆ ಸಂಕಟಗಳಿಂದ ದೂರ ಮಾಡುತ್ತದೆ. ಸ್ಥಳೀಯ ಮಾರುಕಟ್ಟೆಯನ್ನು ವಿಸ್ತರಿಸುವ ಮೂಲಕ ಈ ಉದ್ದಿಮೆಗಳ ಸರಕುಗಳಿಗೆ ಕಾಯಕಲ್ಪ ಒದಗಿಸುವುದು ಸರ್ಕಾರಗಳ-ಮಾರುಕಟ್ಟೆಯ ಆದ್ಯತೆಯೂ ಆಗುತ್ತದೆ.
ಆದರೆ ಇಲ್ಲಿ ಜೀವನ ಮತ್ತು ಜೀವನೋಪಾಯವನ್ನು ಕಳೆದುಕೊಂಡು ನಿರುದ್ಯೋಗಿಗಳಾಗುವ ವಲಸೆ ಕಾರ್ಮಿಕರು ಅತಿ ಹೆಚ್ಚು ಸಂಕಷ್ಟಗಳಿಗೆ ಈಡಾಗುತ್ತಾರೆ. ತಮ್ಮ ಸ್ವಂತ ರಾಜ್ಯಗಳಲ್ಲಿ ಉದ್ಯೋಗಾವಕಾಶಗಳು ಇಲ್ಲದಿರುವುದರಿಂದಲೇ ಈ ಲಕ್ಷಾಂತರ ಕಾರ್ಮಿಕರು, ಸಂಸಾರವನ್ನು ಅಲ್ಲಿಯೇ ಬಿಟ್ಟು, ಕೆಲವೊಮ್ಮೆ ಸಂಸಾರ ಸಮೇತರಾಗಿ ದಕ್ಷಿಣ ಭಾರತಕ್ಕೆ ವಲಸೆ ಬರುವುದು ವಾಸ್ತವ. ಈಗ ಈ ಕಾರ್ಮಿಕರು ಮತ್ತೊಮ್ಮೆ ತಮ್ಮ ಸ್ಥಳಗಳಲ್ಲಿ ಸಿಕ್ಕ ಉದ್ಯೋಗಗಳನ್ನೇ ಆಶ್ರಯಿಸಬೇಕಾಗುತ್ತದೆ. ಈ ಪರಾವಲಂಬನೆಯಿಂದ ವಲಸೆ ಕಾರ್ಮಿಕರನ್ನು ರಕ್ಷಿಸುವ ನಿಟ್ಟಿನಲ್ಲಿ ಸರ್ಕಾರಗಳು ಯಾವುದೇ ಪ್ಯಾಕೇಜ್ ಘೋಷಿಸುವುದಿಲ್ಲ. ತಿರುಪ್ಪೂರಿನ ಜವಳಿ ಉದ್ಯಮಗಳಲ್ಲಿ ತಮ್ಮ ಭವಿಷ್ಯವನ್ನು ಕಾಣುತ್ತಿದ್ದ ಕಾರ್ಮಿಕರು ತಮ್ಮ ಜೀವನವನ್ನು ಮತ್ತೊಮ್ಮೆ ಕಟ್ಟಿಕೊಳ್ಳುವ ಅನಿವಾರ್ಯ ಸನ್ನಿವೇಶವನ್ನು ಎದುರಿಸುತ್ತಾರೆ.
