ಬೆಂಗಳೂರು : ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಮತ್ತೊಮ್ಮೆ ಹೆಚ್ಚಿಸಲು ಅಬಕಾರಿ ಇಲಾಖೆ ಮುಂದಾಗಿದೆ ಎಂದು ಹೇಳಲಾಗಿದೆ.
ಕರ್ನಾಟಕ ಅಬಕಾರಿ (ಅಬಕಾರಿ ಸುಂಕ ಮತ್ತು ಶುಲ್ಕಗಳು) ನಿಯಮಗಳು, 1968ಕ್ಕೆ ತಿದ್ದುಪಡಿ ಮಾಡಲು ಕರಡು ಅಧಿಸೂಚನೆ ರೂಪಿಸಲಾಗಿದ್ದು, ಇದರಲ್ಲಿ ದರ ಹೆಚ್ಚಳವನ್ನು ಪ್ರಸ್ತಾಪಿಸಲಾಗಿದೆ.
650 ಮಿ.ಲೀ. ಅಳತೆಯ ಪ್ರತಿ ಬಾಟಲಿ ಬಿಯರ್‌ನ ದರದಲ್ಲಿ ₹ 8ರಿಂದ ₹ 10ರವರೆಗೆ ಹೆಚ್ಚಳವಾಗಲಿದೆ.
ಇದಕ್ಕಾಗಿ ಕರ್ನಾಟಕ ಅಬಕಾರಿ (ಅಬಕಾರಿ ಸುಂಕಗಳು ಮತ್ತು ಶುಲ್ಕಗಳು) (ತಿದ್ದುಪಡಿ) ನಿಯಮಗಳು–2024ರ ಕರಡನ್ನು ಶನಿವಾರ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ.2023ರ ಜುಲೈ ತಿಂಗಳಲ್ಲಿ ಭಾರತೀಯ ಮದ್ಯದ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆಯನ್ನು ಶೇ.20ರಷ್ಟು ಮತ್ತು ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆಯನ್ನು ಶೇ.10ರಷ್ಟು ಹೆಚ್ಚಳ ಮಾಡಲಾಗಿತ್ತು.
ಆರು ತಿಂಗಳಲ್ಲೇ ಮತ್ತೊಮ್ಮೆ ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆ ಏರಿಕೆಗೆ ಪ್ರಕ್ರಿಯೆ ಆರಂಭಿಸಲಾಗಿದೆ. ಹೆಚ್ಚುವರಿ ಅಬಕಾರಿ ತೆರಿಗೆ ಏರಿಕೆಗೆ ಅವಕಾಶ ಕಲ್ಪಿಸುವ ಕರಡು ನಿಯಮಗಳಿಗೆ ಆಕ್ಷೇಪಣೆ ಸಲ್ಲಿಸಲು ಏಳು ದಿನಗಳ ಕಾಲಾವಕಾಶ ನೀಡಲಾಗಿದೆ.
ದರ ಹೆಚ್ಚಳಕ್ಕೆ ಅವಕಾಶ ನೀಡುವ ಹೊಸ ನಿಯಮಗಳು ಈ ತಿಂಗಳ ಕೊನೆಯಲ್ಲಿ ಅಥವಾ ಫೆಬ್ರವರಿ ಆರಂಭದಲ್ಲಿ ಅಂತಿಮಗೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.