ತಮಿಳುನಾಡು ವಿಧಾನಸಭೆ ಅಂಗೀಕರಿಸಿದ ವಿಧೇಯಕಗಳಿಗೆ ಅಂಕಿತ ಹಾಕಲು ವಿಳಂಬ ನೀತಿ ಅನುಸರಿಸುತ್ತಿರುವ ಹಿನ್ನಲೆ ತಮಿಳುನಾಡು ಸರಕಾರ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ರಾಜ್ಯಪಾಲ ಆರ್.ಎನ್. ರವಿ ಅವರ ವಿರುದ್ಧ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ತಮಿಳುನಾಡು ಸರಕಾರ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ನ್ಯಾಯಪೀಠ, ‘2020ರ ಜನವರಿಯಿಂದಲೂ ವಿಧೇಯಕಗಳನ್ನು ಪರಿಶೀಲಿದೆ ರಾಜ್ಯಪಾಲರು ಏನು ಮಾಡುತ್ತಿದ್ದರು?. ರಾಜ್ಯಪಾಲರು 3 ವರ್ಷಗಳಿಂದ ವಿಧೇಯಕಗಳನ್ನು ರಾಷ್ಟ್ರಪತಿಗೂ ಕಳುಹಿಸದೇ, ಸದನಕ್ಕೂ ವಾಪಸ್ ಕಳುಹಿಸದೇ ತಮ್ಮ ಬಳಿಯೇ ಇಟ್ಟುಕೊಂಡಿದ್ದೇಕೆ? ಮೂರು ವರ್ಷ ಏನು ಮಾಡುತ್ತಿದ್ದರು? ಎಂದು ಕಿಡಿಕಾರಿದೆ.
ರಾಜ್ಯಪಾಲರು ವಿಧೇಯಕಗಳಿಗೆ ಅಂಕಿತ ನೀಡಬಹುದು ಇಲ್ಲವೇ ರಾಷ್ಟ್ರಪತಿಗಳ ಪರಿಗಣನೆಗೆ ವಿಧೇಯಕವನ್ನು ಕಾಯ್ದಿರಿಸಬಹುದು ಅಥವಾ ಮರುಪರಿಶೀಲನೆಗಾಗಿ ವಿಧಾನಸಭೆಗೆ ವಾಪಸ್ ಕಳುಹಿಸಬಹುದು. ಆದರೆ ತಮ್ಮಲ್ಲಿಯೇ ಇರಿಸಿಕೊಳ್ಳಲು ಕಾರಣವೇನು? ಎಂದು ಪ್ರಶ್ನಿಸಿದೆ.
ರಾಜ್ಯದ ವಿದ್ಯಾರ್ಥಿಗಳಿಗೆ ನೀಟ್ ಪರೀಕ್ಷೆಯಲ್ಲಿ ವಿನಾಯಿತಿ, ಆನ್‌ಲೈನ್ ಗೇಮ್ ನಿಷೇಧ ಸೇರಿದಂತೆ ಕಾನೂನು, ಕೃಷಿಗೆ ಸೇರಿದ ಒಟ್ಟು 10 ವಿಧೇಯಕಗಳನ್ನು ತಮಿಳುನಾಡು ವಿಧಾನಸಭೆ ಅಂಗೀಕರಿಸಿ ಅವುಗಳನ್ನು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿಕೊಟ್ಟಿತ್ತು. ಮೂರು ವರ್ಷ ಕಳೆದರೂ ಇದಕ್ಕೆ ಅಂಕಿತ ಹಾಕದೇ ತಮ್ಮಲ್ಲಿಯೇ ಇರಿಸಿಕೊಂಡಿದ್ದರು. ಈಗ ಸುಪ್ರೀಂ ಕೋರ್ಟ್ ತರಾಟೆ ತೆಗೆದುಕೊಂಡು, ಅರ್ಜಿಯ ವಿಚಾರಣೆಯನ್ನು ಡಿ. 1ಕ್ಕೆ ಮುಂದೂಡಿದೆ.