2011 ಮತ್ತು 2021 ರ ನಡುವೆ ಪತ್ರಕರ್ತರು, ಮಾಧ್ಯಮ ಸಿಬ್ಬಂದಿ ಮತ್ತು ಪ್ರತಿಭಟನಾಕಾರರ ವಿರುದ್ಧ ದಾಖಲಾಗಿರುವ 5,570 ಪ್ರಕರಣಗಳನ್ನು ಹಿಂಪಡೆಯುವಂತೆ ತಮಿಳುನಾಡು ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಈ ವರ್ಷ ಜೂನ್ 24 ರಂದು ರಾಜ್ಯ ವಿಧಾನಸಭೆಯಲ್ಲಿ ಭಾಷಣ ಮಾಡುತ್ತಾ ಈ ಪ್ರಕರಣಗಳನ್ನು ಹಿಂಪಡೆಯುವುದಾಗಿ ಘೋಷಿಸಿದ್ದರು.
ಸರ್ಕಾರಿ ಆದೇಶ (ಜಿಒ) 368 ರ ಮೂಲಕ ಹಿಂತೆಗೆದುಕೊಂಡ 5,570 ಪ್ರಕರಣಗಳಲ್ಲಿ ಹಿಂದಿನ ಎಐಎಡಿಎಂಕೆ ಸರ್ಕಾರವು ಮಾಧ್ಯಮ ಸಿಬ್ಬಂದಿಗಳ ವಿರುದ್ಧ ದಾಖಲಿಸಿದ ಹಲವಾರು ಪ್ರಕರಣಗಳು ಒಳಗೊಂಡಿದೆ. ಉಳಿದಂತೆ 2020 ರ ಕೃಷಿ ಕಾನೂನುಗಳು, ರಾಷ್ಟ್ರೀಯ ನಾಗರಿಕರ ನೋಂದಣಿ (NRC) ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ (CAA), ಎಂಟು ಪಥಗಳ ಚೆನ್ನೈ-ಸೇಲಂ ಎಕ್ಸ್‌ಪ್ರೆಸ್‌ವೇ, ಮೀಥೇನ್ ಯೋಜನೆ, ನ್ಯೂಟ್ರಿನೊ ವೀಕ್ಷಣಾಲಯ ಯೋಜನೆ ಮತ್ತು ಕೂಡಂಕುಳಂ ಅಣು ವಿದ್ಯುತ್ ಸ್ಥಾವರ ಯೋಜನೆ ವಿರುದ್ಧ ಪ್ರತಿಭಟಿಸಿದ್ದವರಿಗೆ ಸಂಬಂಧಪಟ್ಟ ಪ್ರಕರಣಗಳಾಗಿವೆ.
ಕೃಷಿ ಮಸೂದೆಗಳ ಪ್ರತಿಭಟನೆಗೆ ಸಂಬಂಧಿಸಿದಂತೆ 2,831 ಪ್ರಕರಣಗಳನ್ನು ಹಿಂದೆಗೆಯಲು ಆದೇಶಿಸಲಾಗಿದೆ. ಸಿಎಎ ಪ್ರತಿಭಟನೆಯ 2,282, ಮೀಥೇನ್, ನ್ಯೂಟ್ರಿನೊ, ಮತ್ತು ಎಕ್ಸ್‌ಪ್ರೆಸ್‌ವೇ ಯೋಜನೆಗಳ ಪ್ರತಿಭಟನೆಯ 405, ಕೂಡಂಕುಳಂ ಅಣು ವಿದ್ಯುತ್ ಸ್ಥಾವರ ಪ್ರತಿಭಟನೆಯ 26 ಮತ್ತು ಮಾಧ್ಯಮ ಸಿಬ್ಬಂದಿಗಳ ಮೇಲಿನ 26 ಪ್ರಕರಣಗಳನ್ನು ಹಿಂದೆಗೆಯುವಂತೆ ಆದೇಶಿಸಲಾಗಿದ್ದು ತಮಿಳುನಾಡು ಸರ್ಕಾರದ ಗೃಹ ಕಾರ್ಯದರ್ಶಿ ಎಸ್.ಕೆ.ಪ್ರಭಾಕರ್ ಅವರು ಈ ಸರ್ಕಾರಿ ಆದೇಶಕ್ಕೆ ಸಹಿ ಹಾಕಿದ್ದಾರೆ. ಆದೇಶ ಹೊರಡಿಸುವಾಗ ಮದ್ರಾಸ್ ಹೈಕೋರ್ಟ್‌ನ ಪಬ್ಲಿಕ್ ಪ್ರಾಸಿಕ್ಯೂಟರ್ ಅಭಿಪ್ರಾಯವನ್ನು ಪರಿಗಣಿಸಲಾಗಿದೆ. ತನಿಖೆ ನಡೆಯುತ್ತಿರುವ ಅಥವಾ ಆರೋಪಪಟ್ಟಿ ಸಲ್ಲಿಸದ ಪ್ರಕರಣಗಳನ್ನು ಪೊಲೀಸರು ಕೈಬಿಡಲಿದ್ದಾರೆ.
ವಿಚಾರಣೆಗೆ ಬಾಕಿಯಿರುವ ಪ್ರಕರಣಗಳಿಗಾಗಿ, ಆಯಾ ಪ್ರಕರಣಗಳನ್ನು ವ್ಯವಹರಿಸುವ ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ಕ್ರಿಮಿನಲ್ ಪ್ರೊಸೀಜರ್ ಕೋಡ್ (ಸಿಆರ್‌ಪಿಸಿ) ಸೆಕ್ಷನ್ 321ರ ಅಡಿಯಲ್ಲಿ ಅರ್ಜಿ ಸಲ್ಲಿಸಲು ನಿರ್ದೇಶಿಸಲಾಗಿದೆ.
ಸರ್ಕಾರ ಹಿಂಪಡೆಯಲು ಉದ್ದೇಶಿಸಿರುವ ಒಟ್ಟು 5,570 ಪ್ರಕರಣಗಳಲ್ಲಿ 4,460 ಪ್ರಕರಣಗಳು ತನಿಖೆಯಲ್ಲಿದೆ ಮತ್ತು 1,110 ವಿಚಾರಣೆಗೆ ಕಾಯುತ್ತಿವೆ.
ಆಗಸ್ಟ್ 10, 2021 ರಂದು ಹೊರಡಿಸಿದ ಸುಪ್ರೀಂ ಕೋರ್ಟ್‌ನ ಮಧ್ಯಂತರ ಆದೇಶದ ಬಗ್ಗೆಯೂ ಜಿಒ ಉಲ್ಲೇಖಿಸಿದೆ. ಹಾಲಿ ಅಥವಾ ಮಾಜಿ ಸಂಸದ ಅಥವಾ ಶಾಸಕರ ವಿರುದ್ಧದ ಯಾವುದೇ ಪ್ರಕರಣವನ್ನು ಹೈಕೋರ್ಟಿನ ಗಮನಕ್ಕೆ ತಾರದೆ ಹಿಂಪಡೆಯಬಾರದು ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಹೀಗಾಗಿ, ಹಾಲಿ ಮತ್ತು ಮಾಜಿ ಸಂಸದರು ಮತ್ತು ಶಾಸಕರ ವಿರುದ್ಧದ ಪ್ರಕರಣಗಳ ವಿವರಗಳನ್ನು ಸಂಗ್ರಹಿಸಿ ಸರ್ಕಾರಕ್ಕೆ ಕಳುಹಿಸುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶನ ನೀಡಲಾಗಿದೆ.