ಬೆಂಗಳೂರು : ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಬೆಂಗಳೂರು ಬಂದ್‌ಗೆ ಕರೆ ನೀಡಲಾಗಿದೆ. ಇದರಿಂದ ತಮಿಳುನಾಡಿನಿಂದ ಕರ್ನಾಟಕಕ್ಕೆ ಬರುವ ಬಸ್‌ಗಳ ಸೇವೆಯಲ್ಲಿ ಅಸ್ತವ್ಯಸ್ತ ಉಂಟಾಗಿದೆ. ತಮಿಳುನಾಡಿನ ಬಸ್‌ಗಳು ಗಡಿಯಲ್ಲಿಯೇ ನಿಂತಿದ್ದು, ಬೆಂಗಳೂರಿಗೆ ಬರುವ ಪ್ರಯಾಣಿಕರು ಪರದಾಡುತ್ತಿದ್ದಾರೆ. ಬೆಂಗಳೂರಿನಿಂದ ಕೂಡ ತಮಿಳುನಾಡಿಗೆ ಯಾವುದೇ ಬಸ್‌ಗಳು ತೆರಳುತ್ತಿಲ್ಲ.
ತಮಿಳುನಾಡಿನ ಬಸ್‌ಗಳು ಕೇವಲ ಕೃಷ್ಣಗಿರಿ ಜಿಲ್ಲೆಯ ಝುಜುವುಡಿಯವರೆಗೂ ಮಾತ್ರ ಬರುತ್ತಿದ್ದು, ಅಲ್ಲಿಯೇ ನಿಲ್ಲುತ್ತಿವೆ. ಇದರಿಂದ ಬೆಂಗಳೂರಿಗೆ ಬರುವ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ತಮಿಳುನಾಡಿನ ಪ್ರಯಾಣಿಕರು, ಕರ್ನಾಟಕದಲ್ಲಿ ನಡೆಯುತ್ತಿರುವ ಪ್ರತಿಭಟನೆಯಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಹಳಷ್ಟು ಐಟಿ ಸಂಸ್ಥೆಗಳು ಬೆಂಗಳೂರಿನಲ್ಲಿವೆ. ಅಲ್ಲಿಗೆ ಬಹಳಷ್ಟು ಜನರು ಹೋಗಬೇಕಿದ್ದು, ಬಸ್ ವ್ಯವಸ್ಥೆ ಇಲ್ಲದೇ ಜನರು ಪರದಾಡುತ್ತಿದ್ದಾರೆ ಎಂದು ಹೇಳಿದ್ದಾರೆ.