ಸಿಂಗಾಪುರದ ಅಧ್ಯಕ್ಷೀಯ ಚುನಾವಣೆಯಲ್ಲಿ ತಮಿಳುನಾಡು ಮೂಲದ ಅರ್ಥಶಾಸ್ತ್ರಜ್ಞ ಥರ್ಮನ್ ಷಣ್ಮುಗರತ್ನಂ ಅವರು ತಮ್ಮ ಅಬ್ಬರದ ಗೆಲುವು ಸಾಧಿಸಿದ್ದಾರೆ.
ನನ್ನ ಗೆಲುವ ʼನಗರ-ರಾಜ್ಯʼಕ್ಕೆ ಭವಿಷ್ಯದ ಮೇಲೆ ಇಟ್ಟಿರುವ ವಿಶ್ವಾಸದ ಮತವಾಗಿದ್ದು, ರಾಜ್ಯಕ್ಕೆ ತಾನು ‘ಆಶಾವಾದದ ಭವಿಷ್ಯ’ ನಿರ್ಮಿಸುವುದಾಗಿ ಅವರು ಪ್ರತಿಜ್ಞೆ ಮಾಡಿದ್ದಾರೆ.
ಶುಕ್ರವಾರ ಸಿಂಗಾಪುರದ ಒಂಬತ್ತನೇ ಅಧ್ಯಕ್ಷರನ್ನು ಆಯ್ಕೆ ಮಾಡಲು ನಡೆದ ಚುನಾವಣೆಯಲ್ಲಿ ಥರ್ಮನ್ ಅವರು ಶೇಕಡಾ 70.4 ರಷ್ಟು ಮತಗಳನ್ನು ಪಡೆದಿದ್ದಾರೆ.
“ನಾನು ಪ್ರತಿಜ್ಞೆ ಮಾಡುತ್ತೇನೆ. ಸಿಂಗಾಪುರದ ಜನತೆಯ ಈ ಆಶಾವಾದ ಮತ್ತು ಒಗ್ಗಟ್ಟಿನ ಭವಿಷ್ಯವನ್ನು ಮುನ್ನಡೆಸಲು ಅಧ್ಯಕ್ಷನ ಪಾತ್ರ ಹಾಗೂ ಜವಾಬ್ದಾರಿಗಳನ್ನು ಬಳಸುವುದು ನನ್ನ ಕರ್ತವ್ಯವಾಗಿದೆ. ಅದು ನನ್ನ ಪ್ರತಿಜ್ಞೆ” ಎಂದು ಥರ್ಮನ್ ಹೇಳಿದ್ದಾರೆ.
ನಾನು ನಿಜವಾಗಿಯೂ ಕೃತಜ್ಞನಾಗಿದ್ದೇನೆ. ಸಿಂಗಾಪುರದ ಜನತೆ ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ನಾನು ಗೌರವಿಸುತ್ತೇನೆ. ನನಗೆ ಮತ ಹಾಕದವರೂ ಸೇರಿದಂತೆ ಅವರು ವ್ಯಕ್ತಪಡಿಸಿದ ಅಭಿಪ್ರಾಯಗಳಿಗೆ ಎಲ್ಲಾ ಸಿಂಗಾಪುರದವರನ್ನು ಗೌರವಿಸುತ್ತೇನೆ ಎಂದು ಥರ್ಮನ್ ಹೇಳಿದರು.
ಥರ್ಮನ್ ಅವರ ಪ್ರತಿಸ್ಪರ್ಧಿಗಳಾದ ಎನ್‌ಜಿ ಕೊಕ್ ಸಾಂಗ್ ಮತ್ತು ತಾನ್ ಕಿನ್ ಲಿಯಾನ್ ಅವರು ಕ್ರಮವಾಗಿ 15.72 ಮತ್ತು 13.88 ರಷ್ಟು ಮತಗಳನ್ನು ಪಡೆದರು.
‘ನಿರ್ಣಾಯಕ ಅಂತರ’ದಿಂದ ಗೆದ್ದಿದ್ದಕ್ಕಾಗಿ ಥರ್ಮನ್ ಅವರನ್ನು ಅಭಿನಂದಿಸಿದ ಪ್ರಧಾನಿ ಲೀ ಸೀನ್ ಲೂಂಗ್, “ಮಾಜಿ ಹಿರಿಯ ಸಚಿವರಾಗಿರುವ ಥರ್ಮನ್, ಸಾರ್ವಜನಿಕ ಸೇವೆಯಲ್ಲಿ ಸುದೀರ್ಘ ಮತ್ತು ವಿಶಿಷ್ಟ ದಾಖಲೆಯನ್ನು ಹೊಂದಿದ್ದು, ಅಧ್ಯಕ್ಷರಾಗಿ ತಮ್ಮ ಕರ್ತವ್ಯಗಳನ್ನು ವಿಭಿನ್ನವಾಗಿ ನಿರ್ವಹಿಸಲಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಸಿಂಗಾಪುರದ ಪ್ರತಿನಿಧಿಯಾಗಿ ದೇಶದ ಧ್ವಜವನ್ನು ಎತ್ತರಕ್ಕೆ ಹಾರಿಸಬೇಕು” ಎಂದು ಹೇಳಿದರು.
ಥರ್ಮನ್‌ಗಿಂತ ಮೊದಲು, ಸಿಂಗಾಪುರದಲ್ಲಿ ಇಬ್ಬರು ತಮಿಳು ಮೂಲದ ನಾಯಕರು ಅಧ್ಯಕ್ಷ ಪದವಿಗೇರಿದ್ದರು. 2009 ರಲ್ಲಿ ಸೆಲ್ಲಾಪನ್ ರಾಮನಾಥನ್ ಮತ್ತು 1981 ರಿಂದ 1985 ರವರೆಗೆ ಚೆಂಗಾರಾ ವೀಟಿಲ್ ದೇವನ್ ನಾಯರ್ ಸಿಂಗಾಪುರದ ಅಧ್ಯಕ್ಷ ಹುದ್ದೆಗೇರಿದ್ದರು.
2001 ರಲ್ಲಿ ರಾಜಕೀಯಕ್ಕೆ ಸೇರಿದ ಥರ್ಮನ್ ಅವರು ಎರಡು ದಶಕಗಳಿಂದ ಸಿಂಗಾಪುರದ ಆಡಳಿತಾರೂಢ ಪೀಪಲ್ಸ್ ಆಕ್ಷನ್ ಪಾರ್ಟಿ (ಪಿಎಪಿ) ಯೊಂದಿಗೆ ಸಾರ್ವಜನಿಕ ವಲಯ ಮತ್ತು ಮಂತ್ರಿ ಸ್ಥಾನಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ದೇಶದ ಎಂಟನೇ ಮತ್ತು ಮೊದಲ ಮಹಿಳಾ ಅಧ್ಯಕ್ಷರಾಗಿರುವ ಹಾಲಿ ಅಧ್ಯಕ್ಷೆ ಹಲೀಮಾ ಯಾಕೋಬ್ ಅವರ ಅವಧಿ ಸೆಪ್ಟೆಂಬರ್ 13 ರಂದು ಕೊನೆಗೊಳ್ಳಲಿದೆ.