ಕಾಂಗ್ರೆಸ್ ಜೊತೆ ಕೈ ಜೋಡಿಸುವ ಬಗೆಗಿನ ಮಾತುಕತೆಗಳು ವಿಫಲವಾಗಿದೆ ಎಂದು ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
ಕಾಂಗ್ರೆಸ್ ಜೊತೆ ಸೇರಿ ಕೆಲಸ ಮಾಡುವ ಬಗ್ಗೆ ಪಶ್ಚಿಮ ಬಂಗಾಳದ ಚುನಾವಣೆಯ ನಂತರದ ಸುಮಾರು ಐದು ತಿಂಗಳ ಸುದೀರ್ಘ ಚರ್ಚೆಯು ಫಲಪ್ರದವಾಗಿಲ್ಲ. ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿಯನ್ನು ಮಣಿಸಲು ಕಾಂಗ್ರೆಸ್ ನಿರ್ಣಾಯಕವಾಗಿರಲಿದೆ. ಆದರೆ, ಅದರ ನಾಯಕತ್ವ ಅಲ್ಲ ಎಂದು ಕಿಶೋರ್ ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಚುನಾವಣೆಯ ನಂತರ ಕಾಂಗ್ರೆಸ್ ಜೊತೆಗೆ ಹಲವು ಗಂಟೆಗಳ ಕಾಲ ಚರ್ಚಿಸಿದ್ದೇನೆ. ಮೇ ಹಾಗೂ ಸೆಪ್ಟೆಂಬರ್ ತಿಂಗಳ ನಡುವಿನ ಬಹುತೇಕ ಐದು ತಿಂಗಳ ಸಮಯವನ್ನು ನಾನು ಕಾಂಗ್ರೆಸ್‌ಗಾಗಿ ಮೀಸಲಿಟ್ಟಿದ್ದೆ ಎಂದು ಎನ್‌ಡಿಟಿವಿ ಜೊತೆಗಿನ ಸಂದರ್ಶನದಲ್ಲಿ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
ಪ್ರಶಾಂತ್ ಕಿಶೋರ್ ಹಾಗೂ ಕಾಂಗ್ರೆಸ್ ಜೊತೆಗೂಡಿ ಕೆಲಸ ಮಾಡುವುದು ಸ್ವಾಭಾವಿಕ ಎಂದು ಹೊರಗಿನವರಿಗೆ ಅನಿಸಬಹುದು. ಆದರೆ, ಎರಡೂ ಕಡೆಯಿಂದ ನಂಬಿಕೆಯಿಂದ ಧುಮುಕಬೇಕಾದ ಅನಿವಾರ್ಯತೆ ಇದೆ. ಅದು ಕಾಂಗ್ರೆಸ್‌ನೊಂದಿಗೆ ನನಗೆ ಸಾಧ್ಯವಾಗಿಲ್ಲ ಎಂದು ಕಿಶೋರ್ ಹೇಳಿದ್ದಾರೆ.
ಒಟ್ಟಾಗಿ ಸಾಗಲು ಎರಡೂ ಕಡೆಯಿಂದ ವಿಶ್ವಾಸಗಳಿಂದ ಮುಂದುವರೆಯಬೇಕಿತ್ತು, ಆದರೆ ನಮ್ಮಿಂದ ಅದು ಸಾಧ್ಯವಾಗಿಲ್ಲ. ಉದಾಹರಣೆಗೆ, 2017 ರ ಉತ್ತರಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಕೆಲಸ ಮಾಡಿದ ಕೆಟ್ಟ ಅನುಭವ ನನ್ನಲ್ಲಿದೆ. ನಾನು ತೀರಾ ಸಂಶಯಾಸ್ಪದನಾಗಿದ್ದೆ. ನನಗೆ ನನ್ನ ಕೈಗಳನ್ನು ಕಟ್ಟಿ ಹಾಕಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
“ನಾನು 100% ಕಾಂಗ್ರೆಸ್‌ಗೆ ನಿಷ್ಟಾವಂತನಾಗಿದ್ದರೂ, ಕಾಂಗ್ರೆಸ್ ನಾಯಕತ್ವ ನನ್ನ ಹಿನ್ನೆಲೆಯ ಆಧಾರದ ಮೇಲೆ ನನ್ನನ್ನು ಸಂಶಯಿಸುವುದು ಸರಿಯಾಗಿಯೇ ಇತ್ತು ಎಂದು ಹೇಳಿದ ಕಿಶೋರ್ ತಾನು ಕಾಂಗ್ರೆಸ್‌ಗೆ ಸೇರಲಿಚ್ಚಿಸಿದ್ದರ ಕುರಿತೂ ಹೇಳಿಕೊಂಡಿದ್ದಾರೆ.
ನಾನು ಪಕ್ಷವನ್ನು ಸೇರಿಕೊಳ್ಳಬೇಕಂದಿದ್ದೆ. ಯಾವುದೇ ಒಂದು ನಿರ್ದಿಷ್ಟ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡಲ್ಲ, 2024 ರ ಚುನಾವಣೆಯ ಹಿನ್ನೆಲೆಯಲ್ಲೂ ಅಲ್ಲ, ಕಾಂಗ್ರೆಸ್ ಅನ್ನು ಮರು ಕಟ್ಟಬೇಕೆಂಬ ಉದ್ದೇಶದಿಂದ ನಾನು ಪಕ್ಷ ಸೇರಿಕೊಳ್ಳಬಯಸಿದ್ದೆ ಎಂದು ಕಿಶೋರ್ ಹೇಳಿದ್ದಾರೆ.

ನಾನು ಅದನ್ನು (ಕಾಂಗ್ರೆಸ್) ಒಂದು ಸಂಸ್ಥೆಯಾಗಿ ಮೆಚ್ಚುತ್ತೇನೆ. ಅದು ಒಂದು ಸ್ಥಳ ಹಾಗೂ ಪರಿಕಲ್ಪನೆ ಇಲ್ಲದೆ ಪರಿಣಾಮಕಾರಿ ವಿರೋಧವನ್ನು ಕಟ್ಟುವುದು ಸಾಧ್ಯವಿಲ್ಲ. ಹಾಗಂತ ಪ್ರಸ್ತುತ ನಾಯಕತ್ವಕ್ಕೆ ಇವತ್ತಿನ ಕಾಂಗ್ರೆಸ್ ಪರ್ಯಾಯ ಎಂದಲ್ಲ. ಬಿಜೆಪಿಯನ್ನು ಮಣಿಸಲು ಕಾಂಗ್ರೆಸ್ ಪುನರುಜ್ಜೀವಗೊಳ್ಳಬೇಕಿದೆ ಎಂದು ಅವರು ಹೇಳಿದ್ದಾರೆ;.
ತೃಣಮೂಲ ಕಾಂಗ್ರೆಸ್‌ಗೆ ಸಹಾಯ ಮಾಡುವ ತಮ್ಮ ಪ್ರಯತ್ನಗಳನ್ನು ಸಮರ್ಥಿಸಿಕೊಂಡ ಅವರು, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಟಿಎಂಸಿ ಪಕ್ಷವನ್ನು ಸೇರಿಕೊಂಡಿರುವುದು ಕಾಂಗ್ರೆಸ್ ಅನ್ನು ಎದುರಿಸಿದ ಕ್ರಮ ಎಂದು ಹಲವರು ನೋಡುತ್ತಾರೆ. ಆದರೆ ಇದು ಕಾಂಗ್ರೆಸ್ ವಿರುದ್ಧದ ಸೇಡು ಅಲ್ಲ ಎಂದು ಹೇಳಿದ್ದಾರೆ.
ಅಷ್ಟು ದೊಡ್ಡ ಪಕ್ಷದ ಮೇಲೆ ಸೇಡು ತೀರಿಸಿಕೊಳ್ಳಲು ನಾನು ತುಂಬಾ ಚಿಕ್ಕ ವ್ಯಕ್ತಿ. ನಮ್ಮ ದೇಶದಲ್ಲಿ ನಮಗೆ ಬಲವಾದ ವಿರೋಧಪಕ್ಷ ಬೇಕು ಎಂದು ನಾನು ಭಾವಿಸುತ್ತೇನೆ. ಕಾಂಗ್ರೆಸ್ ಸಿದ್ದಾಂತಗಳನ್ನು ದುರ್ಬಲಗೊಳಿಸಲು ಅವಕಾಶ ನೀಡಬಾರದು. ಇದು ಪ್ರಜಾಪ್ರಭುತ್ವದ ಹಿತಾಸಕ್ತಿ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
ಪಶ್ಚಿಮ ಬಂಗಾಳ ಚುನಾವಣೆ ಬಳಿಕ ಟಿಎಮ್‌ಸಿ ಹಾಗೂ I-PAC (ಪ್ರಶಾಂತ್ ಅವರ ರಾಜಕೀಯ ಸಲಹಾ ಸಂಸ್ಥೆ) ಟಿಎಂಸಿ ದೇಶದ ವಿವಿದೆಡೆ ವಿಸ್ತರಿಸಲು ಹಲವು ಕ್ರಮಗಳನ್ನು ಕೈಗೊಂಡಿದೆ. ಅವರಿಗೆ ಬೇಕಾದಾಗ ನಾನು ಅವರ ಸಹಾಯಕ್ಕೆ ನಿಲ್ಲುತ್ತಿದ್ದೇನೆ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.