-ಮಿನೂ, ಹುಬ್ಬಳ್ಳಿ
ಒಂದು ವಾರದಿಂದ ಗದಗ ಜಿಲ್ಲೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷದ ನಾಯಕರ ಮದ್ಯೆ ಟಾಕ್ ವಾರ್ ಜೋರಾಗಿದೆ. ವೆಂಟಿಲೇಟರ್ ವಿಚಾರವಾಗಿ ಸಚಿವ ಸಿ.ಸಿ.ಪಾಟೀಲ್ ಹಾಗೂ ಶಾಸಕ ಎಚ್.ಕೆ.ಪಾಟೀಲ್ ಅವರ ಮದ್ಯೆ ಮಾತಿನ ಜಟಾಪಟಿಗೆ ಕಾರಣವಾಗಿದೆ.
ಜಿಲ್ಲೆಯ ರಾಜಕಾರಣದಲ್ಲಿ ಬಿಜೆಪಿ ಹಾಗು ಕಾಂಗ್ರೆಸ್ ಪಕ್ಷದಲ್ಲಿ ಬಹುತೇಕರು ಈ ಬಗ್ಗೆ ಚರ್ಚಿಸುತ್ತಿದ್ದರು. ಆದರೆ ಎರಡು ಪಕ್ಷದ ಕಾರ್ಯಕರ್ತರ ಪಾಲಿಗೆ ಈ ಟಾಕ್ ವಾರ್ ಕುತೂಹಲ ಕೆರಳಿಸಿದೆ.
ಜಿಲ್ಲೆಗೆ ಡಬ್ಬಾ ವೆಂಟಿಲೇರ್ ಆರೋಪ
ವೆಂಟಿಲೇಟರ್ ವಿಚಾರವಾಗಿ ಆರಂಭದಲ್ಲಿ ಶಾಸಕ ಎಚ್.ಕೆ.ಪಾಟೀಲ್ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಜಿಲ್ಲೆಗೆ ಡಬ್ಬಾ ವೆಂಟಿಲೇಟರ್ ಬಂದಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇನ್ನು ಕೊರೊನಾ ಸಾವಿನ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.
ಹುಲಕೋಟಿ ಆಸ್ಪತ್ರೆಯಲ್ಲಿ ಯಾರು ಸತ್ತಿಲ್ವಾ?
ಇದಾದ ಬೆನ್ನಲ್ಲೆ ಸಚಿವ ಸಿ.ಸಿ.ಪಾಟೀಲ್ ಕೂಡ ಜನರ ಬಗ್ಗೆ ನಮಗೂ ಕಾಳಜಿ ಇದೆ. ನಮ್ಮ ರಾಜಕಾರಣದ ಈ ಜಂಜಾಟ ಕೋವಿಡ್ ಸೋಂಕಿತರಿಗೆ ಗೊತ್ತಾದರೆ ಅವರು ಇನ್ನಷ್ಟು ಅಧೈರ್ಯರಾಗುತ್ತಾರೆ ಎನ್ನುವ ಕಾರಣಕ್ಕೆ ನಾವು ಮೌನವಾಗಿದ್ದೇವೆ. ಕೋವಿಡ್ ಸೋಂಕಿತರು ಕೇವಲ ಜಿಮ್ಸ್ ನಲ್ಲಿ ಮಾತ್ರ ಸಾವನ್ನಪ್ಪುತ್ತಿದ್ದಾರೆಯೇ? ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸಾವನ್ನಪ್ಪುತ್ತಿಲ್ಲವೇ? ಎಚ್.ಕೆ.ಪಾಟೀಲರ ಹುಲಕೋಟಿಯಲ್ಲಿರುವ ಆಸ್ಪತ್ರೆಯಲ್ಲಿ ಸಾವನ್ನಪ್ಪಿಲ್ಲವೇ? ಕೊರೊನಾ ವಿಚಾರವಾಗಿ ರಾಜಕಾರಣ ಮಾಡಬಾರದು. ಸಹಕಾರ ನೀಡಬೇಕು ಎಂದು ಎದಿರೇಟು ನೀಡಿದ್ದರು. ಈ ಮೂಲಕ ವೆಂಟಿಲೇಟರ್ ಟಾಕ್ ವಾರ್ ಮೆಲ್ಲಗೆ ಶುರುವಾಯಿತು. ಆದ್ರೆ ಇದು ಇಷ್ಟಕ್ಕೆ ನಿಲ್ಲಲಿಲ್ಲ
ಸಿಎಂಗೆ ಜಿಲ್ಲಾ ಉಸ್ತುವಾರಿ ಸಚಿವರ ಮೇಲೆ ವಿಶ್ವಾಸ ಇಲ್ವಂತೆ..!
ಮುಂದುವರೆದು ಮತ್ತೆ ,ಶಾಸಕ ಎಚ್.ಕೆ.ಪಾಟೀಲರು ಈ ವಿಚಾರವನ್ನು ಪ್ರಾಸ್ತಾಪಿಸಿ, ಸಿಎಂ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವರ ಮೇಲೆ ವಿಶ್ವಾಸ ಇಲ್ಲಾ. ಹೀಗಾಗಿ ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಿದ್ದಾರೆ.
ಕೋವಿಡ್ ಕುರಿತು ನಿರ್ಧಾರ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವರು ವಿಫಲರಾಗಿದ್ದಾರೆ. ಇದು ಚುನಾಯಿತ ಪ್ರತಿನಿಧಿಗಳ ಮೇಲೆ ಸಿಎಂ ವಿಶ್ವಾಸ ಕಳೆದುಕೊಂಡಿದ್ದಾರೆ ಎನ್ನುವ ಸೂಚನೆಯಾಗಿದೆ.
ಯಾವುದೇ ನಿರ್ಣಯ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ರಾಜ್ಯದ ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯವೈಖರಿ ಬಗ್ಗೆ ಪ್ರತಿಕ್ರಿಯಿಸಿದ್ದರು. ಇದೇ ವೇಳೆ ಪಿಎಂ ಕೇರ್ ಸೆಂಟರ್ ನಿಂದ ವೆಂಟಿಲೇಟರ್ ಬಂದಿವೆ.
ಕೆಲವು ಕಂಪನಿ ನೀಡಿರೋ ವೆಂಟಿಲೇಟರ್ ಸರಿಯಾಗಿಲ್ಲಾ. ಮಹಾರಾಷ್ಟ್ರ ರಾಜ್ಯದಲ್ಲಿ ಕೂಡಾ ಪಿಎಂ ಕೇರ್ ನಲ್ಲಿ ಬಂದಿದ್ದ ವೆಂಟಿಲೇಟರ್ ಡಬ್ಬಾ ಆಗಿವೆ. ಈ ಕುರಿತು ಪ್ರಧಾನಿ ವೆಂಟಿಲೇಟರ್ ಗಳ ಬಗ್ಗೆ ಆಡಿಟ್ ಮಾಡಬೇಕು ಎಂದು ಆಗ್ರಹಿಸಿದರು.
ವೆಂಟಿಲೇಟರ್ ಜನರನ್ನು ಕೊಲ್ಲುವ ಡಬ್ಬಿ!
ವೆಂಟಿಲೇಟರ್ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ. ವೆಂಟಿಲೇಟರ್ ನಿಂದ ಜೀವ ಉಳಿವ ಕಾರ್ಯವಾಗಬೇಕಾಗಿತ್ತು. ಆಆದರೆ ವೆಂಟಿಲೇಟರ್ ಡಬ್ಬಿಗಳು ಜನರನ್ನು ಕೊಲ್ಲುವ ಡಬ್ಬಿಯಾಗಿವೆ.
ಈ ಬಗ್ಗೆ ಸುಪ್ರೀಂಕೋರ್ಟ್ ಮೇಲ್ವಿಚಾರಣೆಯಲ್ಲಿ ಸಿಬಿಐ ಮುಖಾಂತರ ತನಿಖೆ ಮಾಡಿಸಬೇಕು ಎಂದು ಒತ್ತಾಯಿಸಿದರು.
ಶಾಸಕ ಎಚ್.ಕೆ.ಪಾಟೀಲ್ ಸುಟ್ಟ ಮನೆಯಲ್ಲಿ ಗಳ ಎಣಿಸುವವರು
ಇದರ ಬೆನ್ನಲ್ಲೆ ಗುರುವಾರ ಮತ್ತೆ ಸಚಿವ ಸಿ.ಸಿ.ಪಾಟೀಲ್ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ, ಟೂಲ್ ಕಿಟ್ ನ ಪ್ರಮುಖ ರೂವಾರಿಯೇ ಎಚ್.ಕೆ. ಪಾಟೀಲ್. ಕರೊನಾ ವಿರುದ್ಧದ ಹೋರಾಟದ ಸಂದರ್ಭದಲ್ಲಿ ಮೋದಿ ಹೆಸರು ಕೆಡಿಸಲಾಗುತ್ತಿದೆ. ರಾಜ್ಯ ಮತ್ತು ರಾಷ್ಟ್ರದಲ್ಲಿ ಬಿಜೆಪಿ ಹೆಸರು ಕೆಡಿಸುವಲ್ಲಿ ಕಾಂಗ್ರೆಸ್ ನವರು ನಿರತರಾಗಿದ್ದಾರೆ.
ಉಸ್ತುವಾರಿ ಸಚಿವರಾದವರು ಶಾಸಕ ಎಚ್.ಕೆ.ಪಾಟೀಲರ ಮನೆ ಮುಂದೆ ಕುಳಿತುಕೊಳ್ಳಬೇಕಾ?
ಎಚ್.ಕೆ.ಪಾಟೀಲರು ಹೇಳುವುದೆಲ್ಲ ವೇದ ವ್ಯಾಖ್ಯಾವೇ. ಅವರು ಸಚಿವರಾಗಿದ್ದಾಗ ಕೊವಿಡ್ ಬಂದಿದ್ದರೆ, ಹೆಣಗಳು ರಸ್ತೆಯಲ್ಲಿ ಬೀಳುತ್ತಿದ್ದವು.ಆಗ ಅವರು ಹುಲಕೋಟಿಯಲ್ಲಿರುವ ಕೆವಿಕೆಯಲ್ಲಿ ಕದ ಹಾಕಿಕೊಂಡು ಕೂರುತ್ತಿದ್ದರು. ಸಿಎಂಗೆ ನನ್ನ ಮೇಲೆ ವಿಶ್ವಾಸ ಇಲ್ಲವೆಂದರೇ ಎಚ್.ಕೆ.ಪಾಟೀಲರನ್ನ ಮಂತ್ರಿಮಾಡಬೇಕಿತ್ತಾ?ಎಂದು ಏಕ ವಚನದಲ್ಲಿಯೇ ವಾಗ್ದಾಳಿ ನಡೆಸಿದರು. ಪಿಎಮ್ಸ್ ಕೇರ್ ನಿಂದ ಬಂದ ವೆಂಟಿಲೇಟರ್ ಗಳು ಡಬ್ಬಾ ಅನ್ನೋದು ಮಾಜಿ ಸಚಿವ ಮಾತನಾಡುವ ಮಾತಾ..?
ಇವರು ಹೇಳಿದವರಿಗೆ ಟೆಂಡರ್ ಕೊಡಬೇಕು. ಕೆಲಸ ಕೊಡಬೇಕು ಅಂದರೆ ಮಾತ್ರ ಇವರ ದೃಷ್ಟಿಯಲ್ಲಿ ಉಸ್ತುವಾರಿ ಸಚಿವರು ಬಹಳ ಚೆನ್ನಾಗಿ ಕಾಣ್ತಾರೆ. ಶಾಸಕ ಎಚ್.ಕೆ.ಪಾಟೀಲ್ ಸುಟ್ಟ ಮನೆಯಲ್ಲಿ ಗಳ ಎಣಿಸುವವರು ಎಂದು ಹರಿಹಾಯ್ದರು.
ಎತ್ತ ಸಾಗುತ್ತಿದೆ ಚರ್ಚೆಯ ದಿಕ್ಕು
ಸಹಜವಾಗಿ ಆಡಳಿತ ವ್ಯವಸ್ಥೆ ಸುಧಾರಣೆಗೆ ಪರ-ವಿರೋಧ ಹೇಳಿಕೆಗಳು ಸಾಮಾನ್ಯ. ಇದನ್ನು ಸಮಾನವಾಗಿಯೇ ಸ್ವೀಕರಿಸಬೇಕು. ಆದರೆ ಉತ್ತರ ಕರ್ನಾಟಕ ಭಾಗದಲ್ಲಿ ಈಗಾಗಲೇ ದಶಕದಿಂದಲೇ ಎಚ್.ಕೆ.ಪಾಟೀಲ್ ಹಾಗೂ ಸಿ.ಸಿ.ಪಾಟೀಲ್ ಟೀಂ ಹೊಂದಾಣಿಕೆ ರಾಜಕಾರಣ ಮಾಡಿಕೊಂಡಿದೆ. ಈ ಕಾರಣದಿಂದ ಎಚ್.ಕೆ.ಪಾಟೀಲ್ ಅವರು ಸಚಿವರಾಗಿದ್ದಾಗ, ಸಿ.ಸಿ.ಪಾಟೀಲ್ ಮತ್ತು ಟೀಂ ಜಿಲ್ಲೆಯ ಅಭಿವೃದ್ಧಿ ವಿಚಾರವಾಗಿ ಯಾವುದೇ ಗಂಭೀರ ಆರೋಪವನ್ನು ಮಾಡಿರಲಿಲ್ಲ. ಇನ್ನು ಸಚಿವ ಸಿ.ಸಿ.ಪಾಟೀಲ್ ಆಡಳಿತಾವಧಿಯಲ್ಲೂ ಇವರ ಬಗೆಗೆ ಶಾಸಕ ಎಚ್.ಕೆ.ಪಾಟೀಲ್ ಮತ್ತು ಟೀಂ ಯಾವುದೇ ಗಂಭೀರ ಆರೋಪಗಳು ಮಾಡಿರಲಿಲ್ಲ. ಈ ಬಗ್ಗೆ ಸಹಜವಾಗಿಯೇ ಎರಡು ಪಕ್ಷದ ಪ್ರಾಮಾಣಿಕ ಕಾರ್ಯಕರ್ತರಲ್ಲಿ ಅಸಮಾಧಾನವಿತ್ತು. ಇದರಿಂದಾಗಿ ಸಾಕಷ್ಟು ಚರ್ಚೆಗಳು ನಡೆದಿದ್ದವು. ಆದರೆ ಇದೀಗ ಏಕಾಏಕಿ ಎಚ್ಕೆಪಿ ಮತ್ತು ಸಿಸಿಪಿ ಮದ್ಯೆ ಶುರುವಾದ ಈ ಟಾಕ್ ವಾರ್ ಸಹಜವಾಗಿಯೇ ಕುತೂಹಲ ಕೆರಳಿಸಿದೆ. ಇನ್ನು ಸ್ವತ: ಸಚಿವ ಸಿ.ಸಿ.ಪಾಟೀಲರೇ ಶಾಸಕ ಎಚ್.ಕೆ.ಪಾಟೀಲರು ಹೇಳಿದವರಿಗೆ ಟೆಂಡರ್ ಕೊಡದಿದ್ರೆ, ಹಾಗೂ ಕೊಟ್ಟ ಸಲಹೆ ಪಾಲಿಸದಿದ್ರೆ ನಾವು ಕೆಟ್ಟವರ ಥರಾ ಕಾಣುತ್ತೇವೆ ಎನ್ನುವ ಹೇಳಿಕೆ ಯಾವುದೋ ವಿಚಾರದಲ್ಲಿ ಇವರ ಸಂಬಂಧ ಹಳಿಸಿದೆಯಾ? ಈ ಕಾರಣದಿಂದಾಗಿಯೇ ಕೊರೊನಾ ನೆಪದಲ್ಲಿ ಇದೀಗ ಟಾಕ್ ವಾರ್ ಶುರುವಾಗಿದೆಯಾ? ಎನ್ನುವ ಮಾತುಗಳು ಕೂಡ ಜಿಲ್ಲೆಯಲ್ಲಿ ಬಹಳಷ್ಟು ಚರ್ಚಿತವಾಗಿವೆ.
ಏನೇ ಆಗಲಿ ಒಂದೆಡೆ ಕೊರೊನಾ ಆತಂಕದ ನಡುವೆ ಹಾಲಿ ಮತ್ತು ಮಾಜಿ ಸಚಿವರ ಈ ಮಾತಿನ ಯುದ್ಧ ಎರಡೂ ಪಕ್ಷದವರ ಕುತೂಹಲಕ್ಕೆ ಕಾರಣವಾಗಿದ್ದು, ಯಾವ ಸ್ವರೂಪ ಪಡೆದುಕೊಳ್ಳಲಿದೆ ಎನ್ನುವುದು ಕಾದುನೋಡಬೇಕಿದೆ.