ರಾಷ್ಟ್ರೀಯ ಶಿಕ್ಷಣ ನೀತಿ (NEP) ಯ ಅನುಷ್ಠಾನಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ, ನೀತಿಯ ಯಶಸ್ವಿ ಅನುಷ್ಠಾನಕ್ಕಾಗಿ ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ಉನ್ನತ ಶಿಕ್ಷಣ ಇಲಾಖೆಗೆ ಸೂಚಿಸಿದ್ದಾರೆ.
ಮಂಗಳವಾರ ಉನ್ನತ ಶಿಕ್ಷಣ ಇಲಾಖೆಯ ಪರಿಶೀಲನಾ ಸಭೆಯಲ್ಲಿ,ಬೊಮ್ಮಾಯಿ ಅಧಿಕಾರಿಗಳಿಗೆ ಕೆಲವು ಉನ್ನತ ಶಿಕ್ಷಣ ಸಂಸ್ಥೆಗಳನ್ನು ಆಯ್ಕೆ ಮಾಡಿ ಹೊಸ ನೀತಿಯನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸುವಂತೆ ಸೂಚಿಸಿದರು. ಎನ್ಇಪಿ ಅನುಷ್ಠಾನದ ಕುರಿತು ಖಾಸಗಿ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸುವಂತೆ ಸಿಎಂ ಇಲಾಖೆಯ ಅಧಿಕಾರಿಗಳಿಗೆ ಈ ವೇಳೆ ಸಲಹೆಯನ್ನು ನೀಡಿದ್ದಾರೆ.
ಪ್ರಸ್ತುತ ಒಟ್ಟು ದಾಖಲಾತಿಯು ಶೇಕಡಾ 32ರಷ್ಟಿದೆ ಮತ್ತು ಇದನ್ನು ಮುಂದಿನ ದಿನಗಳಲ್ಲಿ NEP ಅನುಷ್ಠಾನದೊಂದಿಗೆ ಶೇಕಡಾ 50 ಕ್ಕೆ ಸುಧಾರಿಸಲು ಸಿಎಂ ನಮಗೆ ಸಲಹೆ ನೀಡಿದ್ದಾರೆ, ಪರಿಶೀಲನಾ ಸಭೆಯಲ್ಲಿ ಉಪಸ್ಥಿತರಿದ್ದ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಭೆಯಲ್ಲಿ ಎನ್ಇಪಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಮತ್ತು ರಾಜ್ಯದಲ್ಲಿ ಬಿಎಡ್ ಮತ್ತು ಡಿಇಡಿ ಪಠ್ಯಕ್ರಮದ ಪರಿಷ್ಕರಣೆ ಕುರಿತು ಚರ್ಚಿಸಲಾಯಿತು. ಯುವಕರಿಗೆ ಹೆಚ್ಚು ಉದ್ಯೋಗಾವಕಾಶ ಕಲ್ಪಿಸಲು ಪ್ರತಿ ಜಿಲ್ಲೆಯಲ್ಲಿ ತಾಂತ್ರಿಕ ಶಿಕ್ಷಣ ಶಾಲೆ/ಕಾಲೇಜುಗಳನ್ನು ಸ್ಥಾಪಿಸುವ ಕುರಿತು ಆಯ್ಕೆಗಳನ್ನು ನೋಡಲು ನಮಗೆ ಸೂಚಿಸಲಾಗಿದೆ,ಎಂದು ಅಧಿಕಾರಿಗಳು ತಿಳಿಸಿದ್ದಾರೆ.