ಆಸ್ಟ್ರೇಲಿಯಾದಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಭಗ್ನ; ಬೇಸರ ವ್ಯಕ್ತಪಡಿಸಿದ ಪ್ರಧಾನಿ ಸ್ಕಾಟ್ ಮಾರಿಸನ್
ಭಾರತವು ಸ್ವಾತಂತ್ರ್ಯದ ಅಮೃತಮಹೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಭಾರತ ಸರ್ಕಾರವು ಆಸ್ಟ್ರೇಲಿಯಾ ಸರ್ಕಾರಕ್ಕೆ ಮಹಾತ್ಮ ಗಾಂಧಿಯ ಕಂಚಿನ ಪ್ರತಿಮೆಯನ್ನು ಕೊಡುಗೆಯಾಗಿ ನೀಡಿತ್ತು. ಪ್ರತಿಮೆ ಉದ್ಘಾಟನೆಗೊಂಡ ಕೆಲವೇ ಗಂಟೆಗಳ ಬಳಿಕ ಕಿಡಿಗೇಡಿಗಳು ಪ್ರತಿಮೆಯನ್ನು ಭಗ್ನಗೊಳಿಸಿ ವಿಕೃತಿ ಮೆರೆದಿದ್ದಾರೆ. ಆಸ್ಟ್ರೇಲಿಯಾದ ವಿಕ್ಟೋರಿಯಾದಲ್ಲಿರುವ Australian Indian Community Centre, Rowvilleನಲ್ಲಿ ಶುಕ್ರವಾರದಂದು ಪ್ರಧಾನಿ ಸ್ಕಾಟ್ ಮಾರಿಸನ್ ಹಾಗೂ ಸಿಜಿಐ (Consul General of India) ರಾಜ್ ಕುಮಾರ್ ಅವರು ಕಂಚಿನ ಪ್ರತಿಮೆಯನ್ನು ಉದ್ಘಾಟಿಸಿದ್ದರು. ಇದಾದ ಕೆಲವೇ ಗಂಟೆಗಳ ಬಳಿಕ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದೆ. ಆಸ್ಟ್ರೇಲಿಯಾದ ಪ್ರಧಾನಿಯೇ ಉದ್ಘಾಟಿಸಿದ್ದ ಪ್ರತಿಮೆ ಭಗ್ನಗೊಳಿಸಿರುವುದು ಸರ್ಕಾರಕ್ಕೆ ಭಾರಿ ಮುಜುಗರ ಉಂಟುಮಾಡಿದೆ. “ಈ ಮಟ್ಟದ ಅಗೌರವ ತೋರಿಸಿರುವುದು ಅವಮಾನಕರ ಹಾಗೂ ಬೇಸರ ಮೂಡಿಸುವಂತಹ ವಿಚಾರ. ದೇಶದಲ್ಲಿರುವ ಸಾಂಸ್ಕೃತಿಕ ಸ್ಮಾರಕಗಳನ್ನು ಧ್ವಂಸಗೊಳಿಸುವುದನ್ನು ಸಹಿಸಲಾಗುವುದಿಲ್ಲ. ಆಸ್ಟ್ರೇಲಿಯಾದಲ್ಲಿ ವಿವಿಧ ಸಂಸ್ಕೃತಿಯ ಹಾಗೂ ದೇಶಗಳ ಜನರು ಅನ್ಯೋನ್ಯತೆಯಿಂದ ಬದುಕುತ್ತಿದ್ದಾರೆ. ಇದನ್ನು ಯಾರೇ ಮಾಡಿದ್ದರೂ, ಅವರು ಆಸ್ಟ್ರೇಲಿಯಾದಲ್ಲಿರುವ ಭಾರತೀಯ ಸಮುದಾಯಕ್ಕೆ ಅಗೌರವ ತೋರಿದ್ದಾರೆ,” ಎಂದು ಪ್ರಧಾನಿ ಸ್ಕಾಟ್ ಮಾರಿಸನ್ ಹೇಳಿದ್ದಾರೆ. ಘಟನೆಯ ಕುರಿತು ಮಾಹಿತಿ ನೀಡಿರುವ ವಿಕ್ಟೋರಿಯಾ ಪೊಲೀಸ್, ಅತ್ಯಂತ ಬಲಶಾಲಿಯಾದ ಯಂತ್ರೋಪಕರಣಗಳನ್ನು ಬಳಸಿ ಗಾಂಧಿ ಪ್ರತಿಮೆಯನ್ನು ಧ್ವಂಸಗೊಳಿಸಲು ಯತ್ನಿಸಲಾಗಿದೆ. ಶುಕ್ರವಾರ ಸಂಜೆ 5.30ರಿಂದ ಶನಿವಾರ ಸಂಜೆ 5.30ರ ಒಳಗಾಗಿ ಈ ಘಟನೆ ನಡೆದಿದೆ. ನೋಕ್ಸ್ ಅಪರಾಧ ತನಿಖಾ ದಳವು ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದು, ಯಾರಾದರೂ ಸಾಕ್ಷಿಗಳಿದ್ದಲ್ಲಿ ಸ್ವಯಂಪ್ರೇರಿತರಾಗಿ ಮುಂದೆ ಬರಬೇಕು, ಎಂದು ವಿನಂತಿಸಿಕೊಂಡಿದ್ದಾರೆ. ಗಾಂಧಿ ಪ್ರತಿಮೆ ಭಗ್ನಗೊಳಿಸಿರುವ ಕುರಿತು ತೀವ್ರವಾದ ಬೇಸರ ವ್ಯಕ್ತಪಡಿಸಿರುವ ಆಸ್ಟ್ರೇಲಿಯಾದ ಭಾರತೀಯ ಸಮುದಾಯ, ಇದೊಂದು ಕೀಳು ಮಟ್ಟದ ಕೃತ್ಯ ಎಂದು ಜರೆದಿದೆ. “ಸಂಪೂರ್ಣ ಸಮುದಾಯಕ್ಕೆ ಆಘಾತ ಹಾಗೂ ಬೇಸರವಾಗಿದೆ. ಪ್ರತಿಮೆಯನ್ನು ಧ್ವಂಸಗೊಳಿಸುವಂತಹ ಕೀಳುಮಟ್ಟದ ಕೃತ್ಯವನ್ನು ಏಕೆ ಮಾಡುತ್ತಾರೆ ಎಂಬುದು ಅರ್ಥವಾಗುತ್ತಿಲ್ಲ,” ಎಂದು ಫೆಡರೇಶನ್ ಆಫ್ ಇಂಡಿಯನ್ ಅಸೋಸಿಯೇಷನ್ ಆಫ್ ವಿಕ್ಟೋರಿಯಾದ ಅಧ್ಯಕ್ಷ ಸೂರ್ಯ ಪ್ರಕಾಶ್ ಸೋನಿ ಅವರು ಹೇಳಿದ್ದಾರೆ. ಆಸ್ಟ್ರೇಲಿಯಾದಲ್ಲಿ 3,00,000ಕ್ಕೂ ಅಧಿಕ ಭಾರತೀಯರು ನೆಲೆಸಿದ್ದು ವಿಕ್ಟೋರಿಯಾದಲ್ಲಿ ಇಂತಹ ಘಟನೆ ನಡೆಯಬಹುದೆಂದು ಊಹಿಸಿಯೂ ಇರಲಿಲ್ಲ. ಪ್ರತಿಮೆಯ ತಲೆಯನ್ನು ಒಡೆದು ಹಾಕಲಾಗಿದೆ, ಎಂದು ವಾಸನ್ ಶ್ರೀನಿವಾಸನ್ ಎಂಬವರು ಹೇಳಿದ್ದಾರೆ.
Read moreDetails