ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಬೇಡಿಕೆ ಈಡೇರದಿದ್ದರೆ ಪದ್ಮಶ್ರೀ ಪ್ರಶಸ್ತಿ ಹಿಂತಿರುಗಿಸಲು ಹಾಲಕ್ಕಿ ಜನಾಂಗದ ಸುಕ್ರಿ ಬೊಮ್ಮುಗೌಡ ನಿರ್ಧಾರ !
ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಹೆಚ್ಚಾಗಿರುವ ಬುಡಕಟ್ಟು ಸಮುದಾಯದ ಹಾಲಕ್ಕಿ ಒಕ್ಕಲಿಗರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂಬ ಹೋರಾಟ ಇದೀಗ ತೀವ್ರಗೊಂಡಿದೆ. ಈ ಬಗ್ಗೆ ಸರ್ಕಾರ ನಿರ್ಲಕ್ಷ್ಯ ತೋರುತ್ತಿರುವ ಹಿನ್ನಲೆಯಲ್ಲಿ ಜಾನಪದ ಕಲಾವಿದೆ, ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮುಗೌಡ ಅವರು ಇದೀಗ ತಮ್ಮ ಪದ್ಮಶ್ರೀ ಪ್ರಶಸ್ತಿಯನ್ನು ವಾಪಸ್ಸು ಮಾಡಲು ಮುಂದಾಗಿದ್ದಾರೆ.ಹೋರಾಟಕ್ಕೆ ಇಳಿದ ಸುಕ್ರಿ ಬೊಮ್ಮುಗೌಡ!ಹಾಲಕ್ಕಿ ಒಕ್ಕಲಿಗರು ಉತ್ತರ ಕನ್ನಡದಲ್ಲಿ ನೆಲೆಸಿರುವ ವಿಶಿಷ್ಟ ಬುಡಕಟ್ಟು ಜನಾಂಗವಾಗಿದ್ದು, ಕರಾವಳಿ ತಾಲೂಕುಗಳಾದ ಅಂಕೋಲಾ, ಕಾರವಾರ, ಕುಮಟಾ ಹಾಗೂ ಹೊನ್ನಾವರದಲ್ಲಿ ಹೆಚ್ಚಾಗಿ ಕಂಡುಬರುತ್ತಾರೆ. ತಮ್ಮ ವೇಷಭೂಷಣದಲ್ಲಿಯೇ, ಅದರಲ್ಲೂ ಮಗ್ಗದ ಚೌಕುಳಿ ಸೀರೆಯನ್ನು ಮೊಣಕಾಲಿನವರೆಗೆ ನೆರಿಗೆ ಮಾಡಿ ಇಳಿಬಿಟ್ಟು ಎಡ ಬಾಜುವಿಗೆ ಸೆರಗನ್ನು ತಂದು ಗಂಟು ಕಟ್ಟಿ ಉಡುವ, ಕುಪ್ಪಸವಿಲ್ಲದ ಭುಜಗಳ ತುಂಬ ಕರಿಮಣಿ ಸರಗಳನ್ನು ಧರಿಸುವ ಮಹಿಳೆಯರನ್ನು ನೋಡಿಯೇ ಹೇಳಬಹುದು ಇವರು ಬುಡಕಟ್ಟು ಜನಾಂಗಕ್ಕೆ ಸೇರಿದವರು ಎಂದು. ಆದರೆ ಈ ಜನಾಂಗ ಹಲವಾರು ವರ್ಷಗಳಿಂದ ಸರ್ಕಾರಗಳ ನಿರ್ಲಕ್ಷಕ್ಕೆ ತುತ್ತಾಗಿದ್ದು, ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದರೂ ಇಂದಿಗೂ ನ್ಯಾಯ ಸಿಕ್ಕಿಲ್ಲ. ಈ ನಿಟ್ಟಿನಲ್ಲಿ ಇದೇ ಸಮುದಾಯಕ್ಕೆ ಸೇರಿದ ಅಂಕೋಲಾ ತಾಲೂಕಿನ ಬಡಗೇರಿಯ, ಜಾನಪದ ಕೋಗಿಲೆ ಖ್ಯಾತಿಯ, ನಾಡೋಜ, ಪದ್ಮಶ್ರೀ ಸುಕ್ರಿ ಬೊಮ್ಮುಗೌಡ ಇದೀಗ ಹೋರಾಟಕ್ಕೆ ಕೈಜೋಡಿಸಿದ್ದಾರೆ. ಹಾಲಕ್ಕಿ ಸಮುದಾಯದ ಕಡೆಗಣನೆ !ಸುಮಾರು 1.5 ಲಕ್ಷ ಜನಸಂಖ್ಯೆ ಇರುವ ಹಾಲಕ್ಕಿ ಒಕ್ಕಲಿಗ ಜನಾಂಗವನ್ನ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆನ್ನುವುದು ಜಿಲ್ಲೆಯ ಜನಾಂಗದವರ ಬಹುದೊಡ್ಡ ಬೇಡಿಕೆ. ಈ ನಿಟ್ಟಿನಲ್ಲಿ ಕಳೆದ 2000ನೇ ಇಸವಿಯಿಂದಲೂ ಹೋರಾಟ ನಡೆಸುತ್ತಲೇ ಬಂದಿದ್ದು ಇಂದಿಗೂ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಮಾತ್ರ ಸೇರಿಸಿಲ್ಲ. ಈ ನಿಟ್ಟಿನಲ್ಲಿ ತಮ್ಮ ಸಮುದಾಯದ ಒಳಿತಿಗಾಗಿ ಮುಂದಾಗಿರುವ ಜಾನಪದ ಕೋಗಿಲೆ ಸುಕ್ರಿ ಬೊಮ್ಮುಗೌಡ ತಮ್ಮ ಜನಾಂಗವನ್ನು ಪರಿಶಿಷ್ಠ ಪಂಗಡಕ್ಕೆ ಸೇರಿಸುವಂತೆ ಸರ್ಕಾರವನ್ನ ಒತ್ತಾಯಿಸಿದ್ದಾರೆ. ಸರ್ಕಾರದ ಸೌಲಭ್ಯದಿಂದ ಜನಾಂಗ ವಂಚಿತವಾಗಿದ್ದು ಪರಿಶಿಷ್ಟ ಪಂಗಡಕ್ಕೆ ಸೇರಿಸಿದರೆ ಒಂದಿಷ್ಟು ಸಹಾಯವಾಗಲಿದೆ. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಎಚ್ಚರಿಕೆ ನೀಡಿರುವ ಸುಕ್ರಜ್ಜಿ, ತಮ್ಮ ಸಮುದಾಯವನ್ನ ಪರಿಶಿಷ್ಟ ಪಂಗಡಕ್ಕೆ ಸೇರಿಸದಿದ್ದರೆ ತನ್ನ ಕಲೆಯನ್ನ ಗುರುತಿಸಿ ಕೇಂದ್ರ ಸರ್ಕಾರ ನೀಡಿರುವ ಪದ್ಮಶ್ರೀ ಪ್ರಶಸ್ತಿಯನ್ನ ವಾಪಸ್ ಮಾಡುವುದಾಗಿ ತಿಳಿಸಿದ್ದಾರೆ.ಬೇಡಿಕೆ ಈಡೇರದಿದ್ದರೆ ತೀವ್ರ ಹೋರಾಟದ ಎಚ್ಚರಿಕೆ !ಹಾಲಕ್ಕಿ ಜನಾಂಗವನ್ನ ಈ ಹಿಂದೆ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ದೊಡ್ಡ ಹೋರಾಟ ನಡೆದ ಪರಿಣಾಮ ರಾಜ್ಯ ಸರ್ಕಾರ ಜನಾಂಗವನ್ನ ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು. ಈ ಬಗ್ಗೆ ಹಲವಾರು ಮುಖಂಡರು ದೆಹಲಿಗೆ ಸಹ ತೆರಳಿ ಐದಾರು ವರ್ಷದಿಂದ ಒತ್ತಡ ಹೇರಿದ್ದರೂ ಇಂದಿಗೂ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಯಾಗಿಲ್ಲ. ಕಳೆದ 20 ವರ್ಷದಿಂದ ಹೋರಾಟ ಮಾಡುತ್ತಿದ್ದರೂ ಇಂದಿಗೂ ಪರಿಶಿಷ್ಟ ಪಂಗಡಕ್ಕೆ ಸೇರಿಸದೇ ನಿರ್ಲಕ್ಷ ಮಾಡಲಾಗುತ್ತಿದೆ ಅಂತಾ ಸುಕ್ರಜ್ಜಿ ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಇಂದಿಗೂ ಬಹುತೇಕ ಹಾಲಕ್ಕಿಗರು ಕೂಲಿ ಕೆಲಸ, ಪುಟ್ಟ ಜಮೀನಿನಲ್ಲಿ ಕೃಷಿ ಕೆಲಸವನ್ನ ಮಾಡಿಕೊಂಡೇ ಜೀವನ ಸಾಗಿಸುತ್ತಿದ್ದು, ಶಿಕ್ಷಿತರ ಸಂಖ್ಯೆ ಸಹ ಬಹಳ ಕಡಿಮೆ ಇದೆ. ಈ ನಿಟ್ಟಿನಲ್ಲಿ ಹಿಂದುಳಿದಿರುವ ಬುಡಕಟ್ಟು ಸಮುದಾಯವನ್ನ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎನ್ನುವುದು ನ್ಯಾಯಯುತ ಬೇಡಿಕೆಯಾಗಿದ್ದು ಸರ್ಕಾರ ಇದನ್ನ ಈಡೇರಿಸದಿದ್ದಲ್ಲಿ ಮುಂದಿನ ದಿನದಲ್ಲಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಲು ಸಹ ಸಿದ್ಧರಾಗಿದ್ದೇವೆ ಎನ್ನುತ್ತಾರೆ ಹಾಲಕ್ಕಿ ಜನಾಂಗದ ನಾಟಿ ವೈದ್ಯ ಹನುಮಂತ ಗೌಡ.ಎಷ್ಟೇ ಮನವಿ ನೀಡಿದ್ರು ಸ್ಪಂದಿಸಿದ ವ್ಯವಸ್ಥೆ !ಈ ಬಗ್ಗೆ ಜಿಲ್ಲಾಧಿಕಾರಿಗೆ ಮನವಿಯನ್ನೂ ಸಲ್ಲಿಸಿರುವ ಉತ್ತರ ಕನ್ನಡ ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘ, ಹಾಲಕ್ಕಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವುದಕ್ಕಾಗಿ ಹಳ್ಳಿಯಿಂದ ದಿಲ್ಲಿಯವರೆಗೆ ಹೋರಾಟ ಮಾಡುತ್ತಲೇ ಬಂದಿದ್ದಾರೆ. ಆಯಾ ಸಂದರ್ಭದಲ್ಲಿ ಅಧಿಕಾರದಲ್ಲಿರುವ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸುತ್ತಲೇ ಬಂದಿದ್ದೇವೆ. ರಾಜ್ಯದಿಂದ ಕೇಂದ್ರಕ್ಕೆ ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಶಿಫಾರಸ್ಸು ಮಾಡಲಾಗಿತ್ತು. ಆದರೆ ಇದುವರೆಗೂ ಸೇರಿಸದೆ ಇರುವುದು ದುರದೃಷ್ಟಕರ ಎಂದು ಅಳಲು ತೋಡಿಕೊಂಡಿದ್ದಾರೆ.
Read moreDetails