ಸಿಎಂ ಆಗಿ 15 ದಿನ ಕಳೆದರೂ ಸಿಎಂ ಬೊಮ್ಮಾಯಿಗಿಲ್ಲ ಅಧಿಕೃತ ಸರ್ಕಾರಿ ಬಂಗಲೆ!
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆರ್ ಟಿ ನಗರದಲ್ಲಿರುವ ತಮ್ಮ ಸ್ವಂತ ಮನೆಯಿಂದಲೇ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಇದಕ್ಕೆ ಕಾರಣ ಅವರಿಗೆ ಇನ್ನೂ ಕೂಡ ಬೆಂಗಳೂರಿನಲ್ಲಿ ಅಧಿಕೃತ ನಿವಾಸವನ್ನು ನೀಡಲಾಗಿಲ್ಲ. ಬಿ ಎಸ್ ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಗೃಹ ಕಚೇರಿಯಾಗಿ ಬಳಸುತ್ತಿದ್ದ ಕೃಷ್ಣಾ ಬಂಗಲೆಯಲ್ಲೇ ಈಗಲೂ ವಾಸ್ತವ್ಯ ಮುಂದುವರಿಸಿದ್ದಾರೆ. ಅಲ್ಲೇ ಇರುವುದಾಗಿಯೂ ಬಿಎಸ್ವೈ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ, ತಮ್ಮ ಖಾಸಗಿ ಮನೆಯಿಂದಲೇ ಕೆಲಸ ಮಾಡುತ್ತಿರುವ ಬೊಮ್ಮಾಯಿ ಅವರು ಬೆಳಗಿನ ಹೊತ್ತು ಗಾಲ್ಫ್ ಕೋರ್ಸ್ ಎದುರಿಗಿರುವ ಸರ್ಕಾರಿ ಗೆಸ್ಟ್ ಹೌಸ್ ಕುಮಾರಕೃಪಾದಲ್ಲಿ ಸಭೆಗಳನ್ನ ನಡೆಸುತ್ತಿದ್ದಾರೆ.ವಿಧಾನಸೌಧದ ಸಮೀಪದಲ್ಲಿ ಬ್ರಿಟಿಷರ ಕಾಲದಲ್ಲಿ ಹಲವು ಬಂಗಲೆಗಳನ್ನ ಜನಪ್ರತಿನಿಧಿಗಳಾಗಿ ನಿರ್ಮಿಸಲಾಗಿದೆ. ಇದರಲ್ಲಿ ಮುಖ್ಯಮಂತ್ರಿಗಳ ಕಾರ್ಯನಿರ್ವಹಣೆಗೆ ಪೂರಕವಾಗಿರುವ ವಿಶಾಲವಾದ ಬಂಗಲೆಗಳೆಂದರೆ ಅದು ಕಾವೇರಿ ಮತ್ತು ಅನುಗ್ರಹ. ಇನ್ನುಳಿದವು ಸ್ವಲ್ಪ ಚಿಕ್ಕ ಬಂಗಲೆಗಳಾಗಿವೆ. ಸದ್ಯ ಕಾವೇರಿ ನಿವಾಸದಲ್ಲಿ ಯಡಿಯೂರಪ್ಪ ಅವರು ವಾಸವಾಗಿದ್ದರೆ. ಅದರ ಪಕದಲ್ಲೇ ಇರುವ ಅನುಗ್ರಹದಲ್ಲಿ ಲೋಕಾಯುಕ್ತ ನ್ಯಾ.ವಿಶ್ವನಾಥ್ ಶೆಟ್ಟಿ ಅವರಿದ್ದಾರೆ. ಹಿಂದೆ ಇದೇ ಅನುಗ್ರಹ ನಿವಾಸದಲ್ಲಿ ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರು ವಾಸವಿದ್ದರು. ಸಿದ್ದರಾಮಯ್ಯ ಅವರು ಕೃಷ್ಣಾ ಬಂಗಲೆಯನ್ನ ತಮ್ಮ ಗೃಹ ಕಚೇರಿಯಾಗಿ ಮಾಡಿಕೊಂಡಿದ್ದರು. ಬಳಿಕ ಯಡಿಯೂರಪ್ಪ ಅವರು ಇದೇ ಬಂಗಲೆಯಲ್ಲಿ ವಾಸವಿದ್ದಾರೆ. ಈಗ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ರಾಜಕೀಯ ಗುರು ಯಡಿಯೂರಪ್ಪ ಅವರನ್ನ ಬಂಗಲೆ ಖಾಲಿ ಮಾಡುವಂತೆ ಹೇಳುವ ಸ್ಥಿತಿಯಲ್ಲಂತೂ ಇಲ್ಲ. ಹೀಗಾಗಿ, ಸೂಕ್ತ ಸರ್ಕಾರಿ ಬಂಗಲೆ ಇಲ್ಲದ ಕಾರಣ ಆರ್ ಟಿ ನಗರದಲ್ಲಿರುವ ತಮ್ಮ ಸ್ವಂತ ಮನೆಯಿಂದಲೇ ಅವರು ಕರ್ತವ್ಯ ನಿಭಾಯಿಸುತ್ತಿದ್ದಾರೆ. ಸಿಎಂ ಕಚೇರಿಯ ಉನ್ನತ ಮೂಲಗಳ ಪ್ರಕಾರ ರೇಸ್ ಕೋರ್ಸ್ ರಸ್ತೆಯ ತಾಜ್ ವೆಸ್ಟ್ ಎಂಡ್ ಹೋಟೆಲ್ ಪಕ್ಕದಲ್ಲಿರುವ ರೇಸ್ ವ್ಯೂ ಕಾಟೇಜ್ ಹೆಸರಿನ ಬಂಗಲೆಗೆ ಸಿಎಂ ಬೊಮ್ಮಾಯಿ ವರ್ಗವಾಗುವ ಸಾಧ್ಯತೆ ಇದೆ. ಆದರೆ, ಕಾವೇರಿ ಬಂಗಲೆಗೆ ಹೋಲಿಸಿದರೆ ರೇಸ್ ವ್ಯೂ ಕಾಟೇಜ್ ಬಂಗಲೆ ಬಹಳ ಚಿಕ್ಕದು. ಇಲ್ಲಿ ಮುಖ್ಯಮಂತ್ರಿಗಳ ಗೃಹ ಕಚೇರಿಯಾಗಿ ಕರ್ತವ್ಯ ನಿಭಾಯಿಸುವುದು ಕಷ್ಟಕರವಾಗಬಹುದು ಎಂಬ ಅಭಿಪ್ರಾಯವಿದೆ. ಒಟ್ಟಾರೆ ಈ ರೀತಿಯ ಪರಿಸ್ಥಿತಿಗೆ ಕೆಲ ಕಾರಣಗಳೂ ಇವೆ. ಬಹುತೇಕ ಎಲ್ಲಾ ಮುಖ್ಯಮಂತ್ರಿಗಳು ವಾಸ್ತುವನ್ನು ಬಹಳ ನಂಬುತ್ತಾರೆ. ನಂಬಿದ್ದಾರೆ ಕೂಡ. ಹಾಗೆಯೇ ಬೊಮ್ಮಾಯಿ ಕೂಡ ವಾಸ್ತುಗಳ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡವರಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.“ಮುಖ್ಯಮಂತ್ರಿಗಳು ಹಾಗೂ ಅವರ ಕುಟುಂಬದವರು ವಾಸ್ತು, ಜ್ಯೋತಿಷ್ಯವನ್ನು ನಂಬುವುದೇ ಈಗಿನ ಪರಿಸ್ಥಿತಿಗೆ ಕಾರಣ. ಸರ್ಕಾರಿ ಅಧಿಕಾರಿಗಳು ಕೆಲ ದೊಡ್ಡ ಬಂಗಲೆಗಳನ್ನ ಮನಬಂದಂತೆ ಆಫೀಸ್ ಹಾಗೂ ಗೆಸ್ಟ್ ಹೌಸ್ ಆಗಿ ಮಾಡಿದ್ದಾರೆ. ಈಗಲಾದರೂ ಕಾವೇರಿ ಬಂಗಲೆಯನ್ನ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಎಂದು ಘೋಷಿಸಬೇಕು” ಎಂದು ಸಿಎಂ ಕಚೇರಿಯಲ್ಲಿರುವ ಅಧಿಕಾರಿಯೊಬ್ಬರು ʻಪ್ರತಿಧ್ವನಿʼ ಪ್ರತಿನಿಧಿಯೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. 1956ರಲ್ಲಿ ಕರ್ನಾಟಕ ರಾಜ್ಯದ ರಚನೆಯಾದಾಗ ಮೊದಲಿಗೆ ಸಿಎಂ ಆಗಿದ್ದ ಎಸ್ ನಿಜಲಿಂಗಪ್ಪ ಅವರು ಪ್ಯಾಲೇಸ್ ರಸ್ತೆಯಲ್ಲಿರುವ ಕಾರ್ಲಟನ್ ಹೌಸ್ ಬಂಗಲೆಯಲ್ಲಿ ಉಳಿದುಕೊಂಡಿದ್ದರು. ಎರಡು ವರ್ಷಗಳ ನಂತರ ಸಿಎಂ ಆದ ಬಿ ಡಿ ಜತ್ತಿ ಅವರು ಸ್ಯಾಂಕಿ ಟ್ಯಾಂಕಿ ರಸ್ತೆಯಲ್ಲಿರುವ ಬಾಲಬ್ರೂಯಿ ಬಂಗಲೆ ಸೇರಿಕೊಂಡರು. ನಂತರ ಸಿಎಂ ಆಗಿ ಬಂದ ಎಸ್ ಆರ್ ಕಾಂತಿ ಅವರು ಕ್ರೆಸೆಂಟ್ ರಸ್ತೆಯಲ್ಲಿರುವ ಕ್ರೆಸೆಂಟ್ ಬಂಗಲೆಯಲ್ಲಿದ್ದರು. ಕ್ರೆಸೆಂಟ್ ಹೌಸ್ ಇದೀಗ ಕರ್ನಾಟಕ ಜುಡಿಷಿಯಲ್ ಅಕಾಡೆಮಿಯಾಗಿ ಬದಲಾಗಿದೆ.ಎಸ್ ನಿಜಲಿಂಗಪ್ಪ ಅವರು ಕಾರ್ಲಟನ್ ಹೌಸ್ ಜೊತೆಗೆ ಈಗ ಕೆಪಿಎಸ್ಸಿ ಮುಖ್ಯ ಕಚೇರಿಯಾಗಿ ಮಾರ್ಪಟ್ಟಿರುವ ಪಾರ್ಕ್ ಹೌಸ್ ಬಂಗಲೆಯಲ್ಲೂ ವಾಸವಿದ್ದರು. ಕಾರ್ಲಟನ್ ಹೌಸ್ ಇದೀಗ ಸಿಐಡಿಯ ಮುಖ್ಯಕಚೇರಿಯಾಗಿದೆ. ಇನ್ನು, ದೇವರಾಜ್ ಅರಸ್ ಅವರು ಜತ್ತಿ ವಾಸವಿದ್ದ ಬಾಲಬ್ರೂಯಿಯನ್ನು ತಮ್ಮ ನಿವಾಸವಾಗಿ ಮಾಡಿಕೊಂಡರು.ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾದಾಗ ತಮ್ಮ ಸ್ವಂತ ಮನೆಯಾದ ಕೃತಿಕಾದಲ್ಲೇ ಕರ್ತವ್ಯ ನಿಭಾಯಿಸಿದ್ದರು. ಹೆಚ್ ಡಿ ದೇವೇಗೌಡ ಅವರು ಅನುಗ್ರಹ ಬಂಗಲೆಯಲ್ಲಿದ್ದರೆ, ಜೆ ಎಚ್ ಪಟೇಲ್ ಅವರು ಕಾವೇರಿ ಬಂಗಲೆಯಲ್ಲಿ ವಾಸವಿದ್ದರು. ಎಸ್ ಎಂ ಕೃಷ್ಣ ಅವರು ವಾಸ್ತು ಕಾರಣಕ್ಕೆ ಕಾವೇರಿ ಬದಲು ಅನುಗ್ರಹ ಬಂಗಲೆ ಆಯ್ದುಕೊಂಡರು. ಮೈತ್ರಿ ಸರ್ಕಾರದ ವೇಳೆ ಕುಮಾರಸ್ವಾಮಿ ಸಿಎಂ ಆದಾಗ ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿರುವ ಕಾಟೇಜ್ವೊಂದರಿಂದಲೇ ಕೆಲಸ ಮಾಡಿದ್ದರು.
Read moreDetails