ಶಾರುಖ್ ಖಾನ್ ಪುತ್ರನ ಬಂಧನವಾಗಿರುವ ಡ್ರಗ್ಸ್ ಪ್ರಕರಣದ ವಿಚಾರಣೆ ನಡೆಸುತ್ತಿರುವ ಎನ್ ಸಿ ಬಿ ಅಧಿಕಾರಿಗಳ ವಿರುದ್ದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯ ನಾಯಕ ನವಾಬ್ ಮಲಿಕ್ ಗಂಭೀರವಾದ ಆರೋಪ ಮಾಡಿದ್ದಾರೆ. ಹಡಗಿನಲ್ಲಿ ಪಾರ್ಟಿ ಮಾಡಿಕೊಂಡಿದ್ದವರಲ್ಲಿ ಕೆಲವರನ್ನು NCB ಅಧಿಕಾರಿಗಳು ಬಿಡುಗಡೆಗೊಳಿಸಿದ್ದಾರೆ, ಇವರಲ್ಲಿ ಬಿಜೆಪಿ ನಾಯಕರ ಸಂಬಂಧಿಕನೂ ಸೇರಿದ್ದಾನೆ ಎಂದು ಆರೋಪಿಸಿದ್ದಾರೆ. “ದೇಶದ ಡ್ರಗ್ಸ್-ವಿರೋಧಿ ಏಜೆನ್ಸಿಗಳು ಕಳೆದ ಒಂದು ವರ್ಷದಿಂದ ಕೇವಲ ಜನರ ಮುಂದೆ ತಮ್ಮ ಸಾಮರ್ಥ್ಯ ಪ್ರದರ್ಶಿಸುವ ಸಲುವಾಗಿ ತಮ್ಮದೇ ಆದ ವ್ಯವಸ್ಥಿತ ಜಾಲವನ್ನು ಸೃಷ್ಟಿಸಿಕೊಂಡಿವೆ. ಸಮೀರ್ ವಾಂಖೆಡೆ (ಆರ್ಯನ್ ಖಾನ್ ಪ್ರಕರಣದ ತನಿಖಾಧಿಕಾರಿ) ಹೇಳಿದ ಪ್ರಕಾರ ಅಂದು 8-10 ಜನರನ್ನು ಬಂಧಿಸಲಾಗಿತ್ತು. ನ್ಯಾಯಾಲಯದಲ್ಲಿ ಆರೋಪಿಗಳನ್ನು ಹಾಜರುಪಡಿಸುವಾಗ ಮೊದಲು ಮೂರು ಜನ ನಂತರ ಐದು ಜನರನ್ನು ಹಾಜರುಪಡಿಸಲಾಗಿತ್ತು. ಒಬ್ಬ ತನಿಖಾಧಿಕಾರಿಯಾಗಿ ಬೇಜವಾಬ್ದಾರಿಯುತ ಹೇಳಿಕೆಯನ್ನು ಸಮೀರ್ ನೀಡಿದ್ದಾರೆ. ಬಂಧಿತರು ಎಂಟು ಜನರೋ ಅಥವಾ ಹತ್ತು ಜನರೋ ಎಂಬುದನ್ನು ಸ್ಪಷ್ಟಪಡಿಸುವ ಸೌಜನ್ಯತೆಯನ್ನೂ ಅವರು ತೋರಿಲ್ಲ.” ಎಂದು ಮಲಿಕ್ ಆರೋಪಿಸಿದ್ದಾರೆ. https://youtu.be/5Q9zs3z9mLc ನನಗಿರುವ ಮಾಹಿತಿಯ ಪ್ರಕಾರ ಅಲ್ಲಿ ಹತ್ತು ಜನರನ್ನು ಬಂಧಿಸಲಾಗಿತ್ತು. ಒಬ್ಬ ವ್ಯಕ್ತಿ NCB ಅಧಿಕಾರಿಗಳಿಗೆ ಮಾಹಿತಿ ನೀಡಿ. ಹಡಗಿಗೆ ಕರೆಸಿಕೊಂಡವನು. ಮತ್ತೊಬ್ಬ ಬಿಜೆಪಿ ನಾಯಕನ ಸಂಬಂಧಿಕ. ಇವರಿಬ್ಬರನ್ನೂ ಆ ನಂತರ ಬಿಡುಗಡೆ ಮಾಡಲಾಗಿದೆ. ಇದರ ಬಗ್ಗೆ ನನ್ನಲ್ಲಿ ಸ್ಪಷ್ಟವಾದ ಸಾಕ್ಷ್ಯಾಧಾರಗಳಿವೆ. ಇವನ್ನು ಜನರ ಮುಂದೆ ಇಡುತ್ತೇನೆ, ಎಂದು ಮಲಿಕ್ ಅವರು NDTVಗೆ ಹೇಳಿಕೆ ನೀಡಿದ್ದಾರೆ. NCBಯು ರಾಜ್ಯವನ್ನು ದೇಶದೆದುರು ಅಪಮಾನಿಸಲು ಪ್ರಯತ್ನಿಸುತ್ತಿದೆ. ಇಲ್ಲಿ NCP, ಶಿವಸೇನೆ ಹಾಗೂ ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸಲು NCB ಪ್ರಯತ್ನಿಸುತ್ತಿದೆ. ರಿಯಾ ಚಕ್ರವರ್ತಿ, ದೀಪಿಕಾ ಪಡುಕೋಣೆಯಿಂದ ಹಿಡಿದು ಆರ್ಯನ್ ಖಾನ್ ವರೆಗೆ, ಎಲ್ಲಿ ಪ್ರಚಾರ ಸಿಗುತ್ತದೆಯೋ ಅಂತಹ ಕಡೆ ಮಾತ್ರ NCBಯ ವಿಚಾರಣೆ ನಡೆಯುತ್ತಿದೆ. ಇವುಗಳಲ್ಲಿ ಬಹಳಷ್ಟು ಪ್ರಕರಣಗಳು ನಕಲಿ. ಹಲವು ಕಡೆ ಡ್ರಗ್ಸ್ ಪತ್ತೆಯೇ ಆಗಿಲ್ಲ, ಎಂದು ನೇರ ಆರೋಪ ಮಾಡಿದ್ದಾರೆ. NCB ಹಡಗಿನಲ್ಲಿ ಡ್ರಗ್ಸ್’ಗಾಗಿ ದಾಳಿ ಮಾಡಿದಾಗ ಅವರೊಂದಿಗಿದ್ದ ಇಬ್ಬರು ಅನ್ಯವ್ಯಕ್ತಿಗಳ ಕುರಿತಾಗಿಯೂ ಮಲಿಕ್ ಅವರು ಸಂಶಯ ವ್ಯಕ್ತಪಡಿಸಿದ್ದಾರೆ. ಆ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬ ಬಿಜೆಪಿ ಕಾರ್ಯಕರ್ತ ಮನೀಷ್ ಭಾನುಶಾಲಿ ಪ್ರಕರಣದ ಸಾಕ್ಷಿಯಾಗಿದ್ದಾರೆ ಎಂದು NCB ಹೇಳಿದೆ. “ಸುಶಾಂತ್ ಸಿಂಗ್ ರಾಜಪೂತ್ ಆತ್ಮಹತ್ಯೆ ಪ್ರಕರಣದ ಬಳಿಕ ಮುಂಬೈ NCBಯ ನಿರ್ದೇಶಕರನ್ನು ಬದಲಾಯಿಸಲಾಗಿತ್ತು. ಕಳೆದ 35 ವರ್ಷಗಳಲ್ಲಿ ಎಂದಿಗೂ ಪ್ರಚಾರಕ್ಕಾಗಿ ಕೆಲಸ ಮಾಡಿಲ್ಲ. ಆದರೆ, ಕಳೆದ ಒಂದು ವರ್ಷದಿಂದ ಈ ಪ್ರಚಾರದ ಹುಚ್ಚು ಆರಂಭವಾಗಿದೆ. ಅವರು ಸರ್ಕಾರ ಮತ್ತು ಬಾಲಿವುಡ್ ಅನ್ನು ಮುಜುಗರಕ್ಕೆ ಸಿಲುಕಿಸುವ ಷಡ್ಯಂತ್ರ ನಡೆಸುತ್ತಿದ್ದಾರೆ. ಮಾಧ್ಯಮಗಳ ದಾರಿ ತಪ್ಪಿಸುವುದು ಕೂಡಾ ಈ ಷಡ್ಯಂತ್ರದ ಭಾಗ,” ಎಂದು ಮಲಿಕ್ ಹೇಳಿದ್ದಾರೆ.
Read moreDetails