ಟಿ20 ವಿಶ್ವಕಪ್ ನ ಮೊದಲ ಪಂದ್ಯದಲ್ಲಿ ಯುಎಸ್ ಎ (ಅಮೆರಿಕ) ತಂಡ ಐತಿಹಾಸಿಕ ಜಯ ಸಾಧಿಸಿದೆ.
ಕೆನಡಾ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಯುಎಸ್ಎ ಮೊದಲು ಬೌಲಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟ್ ಮಾಡಿದ ಕೆನಡಾ ತಂಡವು ಉತ್ತಮ ಬ್ಯಾಟಿಂಗ್ ತೋರ್ಪಡಿಸಿತು. ಆರಂಭಿಕರಾಗಿ ಕಣಕ್ಕಿಳಿದ ಆರೋನ್ ಜಾನ್ಸನ್ ಮತ್ತು ನವನೀತ್ ಧಲಿವಾಲ್ ಮೊದಲ ವಿಕೆಟ್ ಗೆ 43 ರನ್ ಗಳ ಜೊತೆಯಾಟವಾಡಿದರು. ನವನೀತ್ ಮತ್ತು ನಿಕೋಲಸ್ ಕೀರ್ಟನ್ ಅರ್ಧಶತಕದ ಜೊತೆಯಾಟವಾಡಿದರು. ನವನೀತ್ ಧಲಿವಾಲ್ 44 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 6 ಬೌಂಡರಿಗಳೊಂದಿಗೆ 61 ರನ್ ಗಳಿಸಿದರು. ನಿಕೋಲಸ್ ಕೀರ್ಟನ್ 31 ಎಸೆತಗಳಲ್ಲಿ 51 ರನ್ ಗಳಿಸಿದರು.
ಶ್ರೇಯಸ್ ಮೊವ್ವ 16 ಎಸೆತಗಳಲ್ಲಿ ಅಜೇಯ 32 ರನ್ ಗಳಿಸಿದರು. ಈ ಮೂಲಕ ಕೆನಡಾ ತಂಡವು 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 194 ರನ್ ಗಳಿಸಿತು. ಕಠಿಣ ಗುರಿ ಬೆನ್ನಟ್ಟಿದ ಯುಎಸ್ ಎ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಆಟಗಾರ ಸ್ಟೀವನ್ ಟೇಲರ್ (0) ಶೂನ್ಯಕ್ಕೆ ಔಟಾದರೆ, ನಾಯಕ ಮೊನಾಕ್ ಪಟೇಲ್ 16 ರನ್ ಗಳಿಸಿದರು. ಉತ್ತಮ ಆಟ ಪ್ರದರ್ಶಿಸಿದ ಆಂಡ್ರೀಸ್ ಗೌಸ್ ಮತ್ತು ಆರೋನ್ ಜೋನ್ಸ್ 131 ರನ್ ಗಳ ಶತಕದ ಜೊತೆಯಾಟ ನೀಡಿದರು. 46 ಎಸೆತಗಳಲ್ಲಿ 65 ರನ್ ಬಾರಿಸಿದ ಆಂಡ್ರೀಸ್ ಗೌಸ್ ವಿಕೆಟ್ ಒಪ್ಪಿಸಿದರು.
ಸ್ಪೋಟಕ ಬ್ಯಾಟಿಂಗ್ ಮುಂದುವರೆಸಿದ ಆರೋನ್ ಜೋನ್ಸ್ 40 ಎಸೆತಗಳಲ್ಲಿ ಅಜೇಯ 94 ರನ್ ಗಳಿಸಿದರು. ಈ ಮೂಲಕ ಯುಎಸ್ ಎ 7 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು.
ಈ ಭರ್ಜರಿ ಗೆಲುವಿನೊಂದಿಗೆ ಯುಎಸ್ ಎ ತಂಡವು ಗರಿಷ್ಠ ಸ್ಕೋರ್ ಚೇಸ್ ಮಾಡಿದ ದಾಖಲೆ ಬರೆದಿದೆ. ಇದಕ್ಕೂ ಹಿಂದೆ ಅಮೆರಿಕ ತಂಡವು 168 ರನ್ ಗಳ ಚೇಸ್ ಮಾಡಿದ ಸಾಧನೆ ಮಾಡಿತ್ತು.