ಸಿದ್ದರಾಮಯ್ಯನವರು ಸಿಎಂ ಅಭ್ಯರ್ಥಿ ಆಗಬಾರದು, ವಿಪಕ್ಷ ನಾಯಕನಾಗಿರಬಾರದು ಅಂತ ಮಲ್ಲಿಕಾರ್ಜುನ ಖರ್ಗೆ ಹೇಳಿದರೆ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದಲ್ಲಿ ಒಂದು ನಿಮಿಷ ಕೂಡ ಇರುವುದಿಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಧಿಕಾರ ಸಿಗೋದಿಲ್ಲ ಅಂದ್ರೆ ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಒಂದು ಕ್ಷಣ ಕೂಡ ಇರೋದಿಲ್ಲ. ಅಧಿಕಾರದ ಹಪಾಪಿತನಕ್ಕೆ ಪರಿತಪಿಸುವ ಸಿದ್ದರಾಮಯ್ಯ, ಕಾಂಗ್ರೆಸ್ ಸತ್ತು ಹೋಗುತ್ತಿರುವ ಪಕ್ಷ ಎಂದು ವಾಗ್ದಾಳಿ ನಡೆಸಿದರು.
ಡಿಕೆ ಶಿವಕುಮಾರ್ ಮನೆ ಮೇಲೆ ರೇಡ್ ಆಗುವವರೆಗೆ ನಮಗೂ ಅವರ ಭ್ರಷ್ಟಾಚಾರದ ಬಗ್ಗೆ ಅರಿವು ಇರಲಿಲ್ಲ. ಡಿಕೆ ಮನೆಯ ಎಲ್ಲಾ ಬೀರುಗಳನ್ನು ತೆಗೆದರೆ ನೂರಾರು ಕೋಟಿ ರೂಪಾಯಿ ಸಿಗ್ತು ಅದನ್ನು ಜನ ನೋಡಿದ್ರು. ದೆಹಲಿ ಮನೆಯಲ್ಲಿ ಸಿಕ್ಕ ಹಣ ಅಕ್ರಮ ಎಂದು ಡಿಕೆ ಜೈಲಿಗೆ ಹೋದರು. ಇದನ್ನ ಈಗ ಯಾಕೆ ಮರೆತ್ರು..? ಭ್ರಷ್ಟಾಚಾರದ ಬಗ್ಗೆ ಮಾತನಾಡಲು ನಿಮಗೆ ಏನು ನೈತಿಕತೆ ಇದೆ..? ಎಂದು ಈಶ್ವರಪ್ಪ ಪ್ರಶ್ನಿಸಿದರು.
ಸಿದ್ದರಾಮಯ್ಯನವರು 800 ಎಕರೆ ಅರ್ಕಾವತಿ ಲೇ ಔಟ್ ಹಗರಣ ಸುಮಾರು 8000 ಕೋಟಿ ಮೌಲ್ಯದ್ದು, ಲೂಟಿ ಮಾಡಿರುವ ಕುರಿತು ನಿವೃತ್ತ ನ್ಯಾಯಮೂರ್ತಿ ಕೆಂಪಣ್ಣ ಅವರ ರಿಪೋರ್ಟ್ ಹೇಳಿದೆ. ಹಾಗಾಗಿ ಇಬ್ಬರೂ ಕಾಂಗ್ರೆಸ್ ನಾಯಕರೂ ಸಹ ಭ್ರಷ್ಟರು. ಒಬ್ಬ ಕಳ್ಳ, ಇನ್ನೊಬ್ಬರನ್ನ ಕಳ್ಳ ಎಂದು ಕೂಗಿ ಕರೆದಂತೆ ಕಾಂಗ್ರೆಸ್ಸಿನ ಸ್ಥಿತಿಯಿದೆ. ನೇರವಾಗಿ ತಮ್ಮ ಭ್ರಷ್ಟಾಚಾರ ಇಲ್ಲ ಎಂದು ಜನರ ಮುಂದೆ ಹೇಳಲು ಕಾಂಗ್ರೆಸ್ ಮುಖಂಡರಿಗೆ ಸಾಧ್ಯವಾಗಿಲ್ಲ. ಡಿಕೆ ಶಿವಕುಮಾರ್ ಕುಟುಂಬದ ಸುದ್ದಿಗೆ ನಾನು ಹೋಗುವುದಿಲ್ಲ. ಆದರೆ ಡಿಕೆ ಶಿವಕುಮಾರ್ ಮಗಳ ಆಸ್ತಿ 150 ಕೋಟಿ ರೂಪಾಯಿ ಹೇಗೆ ಆಯಿತು..? ಏನು ಕೆಲಸ ಮಾಡಿದ್ರು..? ಕಾಂಗ್ರೆಸ್ ಹೇಳುವುದು ಎಲ್ಲಾ ಸುಳ್ಳು. ಇವೆಲ್ಲ ಮರೆತು ಬಿಜೆಪಿ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡುತ್ತಾರೆ. 40% ಕಮಿಷನ್ ಎಂದು ಹೇಳುತ್ತಾರೆ. ಈತನಕ ಒಂದೇ ಒಂದು ದಾಖಲೆ ನೀಡಿಲ್ಲ
ಭ್ರಷ್ಟಾಚಾರದ ವಿರುದ್ಧ ಭ್ರಷ್ಟಾಚಾರಿಗಳೇ ಆರೋಪ ಮಾಡುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಭ್ರಷ್ಟಾಚಾರಿಗಳು ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಪುನಃ ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಾರೆ ಬಿಜೆಪಿಯಿಂದ ಕಾಂಗ್ರೆಸ್ಸಿಗೆ ಹಲವು ನಾಯಕರು ಬರುತ್ತಾರೆ ಎಂದು ಹೇಳುತ್ತಾರೆ. ಒಬ್ಬ ಶಾಸಕ ಕೂಡ ಇತರ ಕಾಂಗ್ರೆಸ್ ಸೇರುತ್ತೇನೆ ಎಂದು ಹೇಳಿಲ್ಲ. ಇದು ಕೂಡ ಸುಳ್ಳೇ..! ಯಾರೂ ಕೂಡ ಇಚ್ಛೆ ವ್ಯಕ್ತಪಡಿಸಿಲ್ಲ. ಕೆಸಿ ನಾರಾಯಣಗೌಡ, ವಿ ಸೋಮಣ್ಣ ಕಾಂಗ್ರೆಸ್ ಹೋಗ್ತಾರೆ ಅಂತ ಹೇಳಿಕೊಂಡು ಓಡಾಡುತ್ತಿದ್ದಾರೆ. ಮೊನ್ನೆ ವಿಜಯ ಸಂಕಲ್ಪ ಯಾತ್ರೆಯಲ್ಲಿ ಇಬ್ಬರೂ ನಾಯಕರು ಇದ್ದರು. ಕಾಂಗ್ರೆಸ್ ಸತ್ತು ಹೋಗುತ್ತಿರುವ ಪಕ್ಷ. ಅದಕ್ಕೆ ಯಾರಾದರೂ ಸೇರಿಕೊಳ್ತಾರಾ..? ಈಶಾನ್ಯ ಭಾಗದ ಮೂರು ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಕುರುಹುಗಳೇ ಇಲ್ಲ ಎಂದು ಈಶ್ವರಪ್ಪ ಹರಿಹಾಯ್ದರು.