ಪ್ರಧಾನಿ ನರೇಂದ್ರ ಮೋದಿ ಅವರ ಶೈಕ್ಷಣಿಕ ಪದವಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜಿವಾಲ್ ವಿರುದ್ಧ ಗುಜರಾತ್ ವಿಶ್ವವಿದ್ಯಾಲಯ ದಾಖಲಿಸಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದ ವಿಚಾರಣೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ಶುಕ್ರವಾರ (ಆಗಸ್ಟ್ 25) ನಿರಾಕರಿಸಿದೆ.
ಕೇಜಿವಾಲ್ ಅವರು ಮನವಿ ಮಾಡಿರುವ ಅರ್ಜಿ ವಿಚಾರಣೆ ಗುಜರಾತ್ ಹೈಕೋರ್ಟ್ನಲ್ಲಿ ಬಾಕಿ ಉಳಿದಿದೆ. ವಿಚಾರಣೆಗೆ ತಡೆ ನೀಡುವ ವಿಚಾರಕ್ಕೆ ಸಂಬಂಧಿಸಿ ಆಗಸ್ಟ್ 29ರಂದು ಕೋರ್ಟ್ ನಿರ್ಧರಿಸುತ್ತದೆ ಎಂಬ ಭರವಸೆಯನ್ನು ಸುಪ್ರೀಂ ಕೋರ್ಟ್ ವ್ಯಕ್ತಪಡಿಸುತ್ತದೆ.
ಆಗಸ್ಟ್ 11ರಂದು ಇದೇ ಪ್ರಕರಣಕ್ಕೆ ಸಂಬಂಧಿಸಿ ಅರವಿಂದ್ ಕೇಜ್ರಿವಾಲ್ ವಿಚಾರಣೆಗೆ ತಡೆ ನೀಡಲು ಗುಜರಾತ್ ಹೈಕೋರ್ಟ್ ನಿರಾಕರಿಸಿತ್ತು.
ಪ್ರಕರಣ ಏನು?
‘ಗುಜರಾತ್ ವಿಶ್ವವಿದ್ಯಾಲಯ ಮೋದಿಗೆ ನಿಜವಾಗಿಯೂ ಪದವಿ ನೀಡಿದ್ದರೆ, ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಪ್ರಶ್ನೆಗೆ ಉತ್ತರವಾಗಿ ಅದನ್ನು ಯಾಕೆ ನೀಡುತ್ತಿಲ್ಲ? ಯಾಕೆಂದರೆ ಅದು ನಕಲಿ, ದೆಹಲಿ ಮತ್ತು ಗುಜರಾತ್ ವಿಶ್ವವಿದ್ಯಾಲಯಗಳಲ್ಲಿ ಪ್ರಧಾನಿ ವ್ಯಾಸಂಗ ಮಾಡಿದ್ದಲ್ಲಿ, ನಮ್ಮ ಹಳೆಯ ವಿದ್ಯಾರ್ಥಿಯೊಬ್ಬ ದೇಶದ ಪ್ರಧಾನಿಯಾಗಿದ್ದಾರೆ ಎಂದು ವಿಶ್ವವಿದ್ಯಾಲಯಗಳು ಹೇಳಿಕೊಂಡು ಸಂಭ್ರಮಿಸುತ್ತಿದ್ದವು…’ ಎಂಬುದು ಸೇರಿದಂತೆ ವ್ಯಂಗ್ಯಭರಿತವಾಗಿ ಕೇಜಿವಾಲ್ ಹಾಗೂ ಸಂಜಯ್ ಸಿಂಗ್ ಪತ್ರಿಕಾಗೋಷ್ಠಿ ಹಾಗೂ ತಮ್ಮಟ್ವಿಟರ್ ಖಾತೆಯಲ್ಲಿ ಇಂತಹ ಹಲವು ಹೇಳಿಕೆ ಉಲ್ಲೇಖಿಸಿದ್ದರು.
ಇವರಿಬ್ಬರ ಹೇಳಿಕೆಗಳು ಗುಜರಾತ್ ವಿಶ್ವವಿದ್ಯಾಲಯದ ಹೆಸರು ಕೆಡಿಸುವ ಉದ್ದೇಶ ಹೊಂದಿವೆ. ಇದರೊಟ್ಟಿಗೆ ಮಾನನಷ್ಟಕ್ಕೂ ಕಾರಣವಾಗಿವೆ ಎಂದು ವಿ.ವಿ.ಯ ಕುಲಸಚಿವ ಪಿಯೂಷ್ ಪಟೇಲ್ ದೂರು ನೀಡಿದ್ದರು.