ಪ್ರಧಾನ ಮಂತ್ರಿಯವರ ವಿರುದ್ಧ ಮುಖ್ಯ ಚುನಾವಣಾ ಆಯುಕ್ತರು ಕ್ರಮ ಕೈಗೊಳ್ಳದಿದ್ದರೆ ವ್ಯವಸ್ಥೆಯ ಸಂಪೂರ್ಣ ಕುಸಿತವಾಗುವುದಿಲ್ಲವೇ ಎಂದು ಪ್ರಶ್ನಿಸುವ ಮೂಲಕ ಸುಪ್ರೀಂ ಕೋರ್ಟ್, ಮುಖ್ಯ ಚುನಾವಣಾ ಆಯುಕ್ತರ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದೆ.
ಪ್ರಸ್ತುತ ಚುನಾವಣಾ ಆಯುಕ್ತರು ಮತ್ತು ಮುಖ್ಯ ಚುನಾವಣಾ ಆಯುಕ್ತರ ನೇಮಕ ವಿಚಾರವಾಗಿ ಕೇಂದ್ರ ಸರ್ಕಾರ ನೀಡಿರುವ ಹೇಳಿಕೆಗೆ ನಿನ್ನೆ ಸುಪ್ರೀಂ ಕೋರ್ಟ್ ಖಡಕ್ ಪ್ರತಿಕ್ರಿಯೆ ನೀಡಿದೆ.
ಚುನಾವಣಾ ಆಯುಕ್ತರಾದ ಅರುಣ್ ಗೋಯೆಲ್ ಅವರ ನೇಮಕಾತಿಯನ್ನು ಪರಿಶೀಲನೆಗೆ ಸುಪ್ರೀಂ ಒಳಪಡಿಸಿತು, ಅವರ ನೇಮಕಾತಿಗೆ ಸಂಬಂಧಿಸಿದ ಮೂಲ ದಾಖಲೆಗಳನ್ನು ಪರಿಶೀಲನೆಗಾಗಿ ಕೇಂದ್ರದಿಂದ ಕೇಳಿದ್ದು, ನೇಮಕಾತಿಯಲ್ಲಿ ಏನಾದರೂ ಅಕ್ರಮ ನಡೆದಿದೆಯೇ ಎಂದು ಕೂಡ ಸುಪ್ರೀಂ ಕೋರ್ಟ್ ಸಂದೇಹ ವ್ಯಕ್ತಪಡಿಸಿದೆ.

ಜಸ್ಟೀಸ್ ಕೆ ಎಂ ಜೋಸೆಫ್ ನೇತೃತ್ವದ ಐವರು ನ್ಯಾಯಾಧೀಶರನ್ನೊಳಗೊಂಡ ಪೀಠ ಅಟೊರ್ನಿ ಜನರಲ್ ಆರ್ ವೆಂಕಟರಾಮಣಿಯವರಿಗೆ, ಚುನಾವಣಾ ಆಯುಕ್ತರಿಗೆ ಪ್ರಧಾನ ಮಂತ್ರಿಯವರ ವಿರುದ್ಧ ಕ್ರಮ ಕೈಗೊಳ್ಳಿ ಎಂದರೆ ಅವರು ಇಲ್ಲ ಎಂದು ಹೇಳಲು ಸಾಧ್ಯವೇ? ಪ್ರಧಾನ ಮಂತ್ರಿಯವರ ವಿರುದ್ಧ ಏನೋ ಒಂದು ಆರೋಪ ಬಂತು ಎಂದಿಟ್ಟುಕೊಳ್ಳಿ.ಮುಖ್ಯ ಚುನಾವಣಾ ಆಯುಕ್ತರು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು, ಆದರೆ ಅವರು ಪ್ರಧಾನಿ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ ಎಂದರೆ, ಆಗ ವ್ಯವಸ್ಥೆಯ ಸಂಪೂರ್ಣ ಕುಸಿತವಾಗುವುದಿಲ್ಲವೇ? ಎಂದು ಉದಾಹರಣೆ ನೀಡುವ ಮೂಲಕ ಖಡಕ್ ಪ್ರಶ್ನೆ ಹಾಕಿದೆ.
ಚುನಾವಣೆಗೆ ಸ್ವತಂತ್ರ ಪ್ರಭಾವರಹಿತ ಸಂಸ್ಥೆ ಬೇಕೆ ಹೊರತು ಅದು ಕೇಂದ್ರ ಸಚಿವರುಗಳು, ಪ್ರಧಾನಿಯವರಿಂದ ಪ್ರಭಾವಕ್ಕೆ ಒಳಗಾಗಿರಬಾರದು ಎಂದು ನ್ಯಾಯಪೀಠ ಹೇಳಿದೆ.