18-44ರ ವಯೋಮಾನದ ಗುಂಪಿನವರಿಗೆ ಮೊದಲಿಗೆ ಉಚಿತ ಎಂದು ಘೋಷಿಸಿ ನಂತರ ಶುಲ್ಕ ಪಾವತಿಸಬೇಕು ಎಂದು ಹೇಳಿರುವುದು ಮೇಲ್ನೋಟಕ್ಕೆ ನಿರಂಕುಶ ಹಾಗೂ ಅತಾರ್ಕಿಕವಾಗಿದೆ ಎಂದು ಅಭಿಪ್ರಾಯಪಟ್ಟ ನ್ಯಾ. ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠವು ಲಸಿಕೆ ನೀತಿಯ ಹಿಂದಿರುವ ತನ್ನ ಚಿಂತನೆಯ ಬಗ್ಗೆ ಕೇಂದ್ರ ಸರ್ಕಾರದಿಂದ ಜೂನ್ 2 ರಂದು ವಿವರಣೆ ಕೇಳಿತ್ತು. ಇದಾದ ಬೆನ್ನಲ್ಲೇ ಮಾನ್ಯ ನರೇಂದ್ರ ಮೋದಿ ಅವರು ಇವತ್ತು ದೇಶವನ್ನು ಉದ್ದೇಶಿಸಿ ಮಾತಾಡಿ ದೇಶದ ಎಲ್ಲರಿಗೂ ಉಚಿತ ಲಸಿಕೆ ನೀಡುವುದಾಗಿ ಘೋಷಣೆ ಮಾಡಿದೆ.
ಏನಿದು ಸುಪ್ರೀಂ ಕೋರ್ಟ್ ಕೇಸ್?
ಮೇ 31ರಂದು ದಾಖಲಿಸಿಕೊಳ್ಳಲಾಗಿದ್ದ ಸ್ವಯಂಪ್ರೇರಿತ ದೂರಿನ ಕುರಿತು ಜೂ. 2 ರಂದು ನ್ಯಾ. ಡಿ.ವೈ. ಚಂದ್ರಚೂಡ್ ನೇತೃತ್ವದಲ್ಲಿ ನ್ಯಾ. ಎಲ್. ನಾಗೇಶ್ವರ ರಾವ್ ಹಾಗೂ ನ್ಯಾ. ಎಸ್. ರವೀಂದ್ರ ಭಟ್ ಒಳಗೊಂಡಿದ್ದ ಪೀಠವು, ಭಾರತ ಸರ್ಕಾರವು ಲಸಿಕೆ ನೀತಿಯನ್ನು ಬಿಂಬಿಸುವ ಅದರ ಚಿಂತನೆ ಹಾಗೂ ಲಸಿಕೆ ನೀತಿ ಸಮಾಪ್ತಿಯಾಗುವ ಕುರಿತ ಎಲ್ಲ ಪ್ರಸ್ತುತ ದಾಖಲೆಗಳ ಪ್ರತಿಗಳನ್ನು ನ್ಯಾಯಾಲಯಕ್ಕೆ ಎರಡು ವಾರಗಳಲ್ಲಿ ಒದಗಿಸುವುದನ್ನು ಖಾತ್ರಿಗೊಳಿಸಬೇಕು ಎಂದು ಸೂಚಿಸಿತ್ತು.
ಎಲ್ಲಾ ಲಸಿಕೆಗಳ ಕುರಿತು ನಿರ್ದಿಷ್ಟ ದಿನಾಂಕಗಳನ್ನು ಒದಗಿಸಬೇಕು. ಬೇಡಿಕೆಯಿಟ್ಟ, ಖರೀದಿಸಿದ, ಸರಬರಾಜು ಮಾಡಿದ ಎಲ್ಲಾ ಲಸಿಕೆಗಳ ದತ್ತಾಂಶಗಳು ಇರಬೇಕು ಎಂದು ಹೇಳಿದೆ. ಇನ್ನುಳಿದ ಜನತೆಗೆ ಯಾವಾಗ ಕೇಂದ್ರ ಲಸಿಕೆ ನೀಡುತ್ತದೆ ಎಂಬ ಕುರಿತು ಒಂದು ಸ್ಥೂಲ ಮಾಹಿತಿ ನೀಡಬೇಕು ಎಂದು ಆದೇಶಿಸಿತ್ತು. ಇದುವರೆಗೂ ಲಸಿಕೆ ನೀಡಿದ ಜನಸಂಖ್ಯೆಯ ವಿವರ, ಒಂದು ಡೋಸ್, ಎರಡು ಡೋಸ್ ಲಸಿಕೆ ಪಡೆದವರ ವಿವರ, ಗ್ರಾಮೀಣ ಪ್ರದೇಶದಲ್ಲಿ ಲಸಿಕೆ ನೀಡಿದ ಪ್ರಮಾಣ ಎಲ್ಲವನ್ನೂ ನಮೂದಿಸಬೇಕೆಂದು ತಿಳಿಸಿತ್ತು.
ಇದರ ಜೊತೆ ಪ್ರಮುಖ ಪ್ರಶ್ನೆಗಳು ಎತ್ತಿರುವ ಸುಪ್ರೀಂ; ಕೇಂದ್ರಕ್ಕೆ ಕೋರ್ಟ್ ಕೇಳಿದ 5 ಪ್ರಮುಖ ಪ್ರಶ್ನೆಗಳು:
- ಕಾರ್ಯಾಂಗದ ವಿಷಯದಲ್ಲಿ ಕೋರ್ಟ್ ಮಧ್ಯ ಪ್ರವೇಶಿಸಬಾರದು ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಆದರೆ, ಜನರ ಹಕ್ಕು ಉಲ್ಲಂಘನೆ ಆದರೆ ಕೋರ್ಟ್ ಮೌನವಾಗಿರಲು ಸಾಧ್ಯವಿಲ್ಲ.
2. ಲಸಿಕೆ ಖರೀದಿಗೆ ಕೇಂದ್ರ ಬಜೆಟ್‌ನಲ್ಲಿ 35 ಸಾವಿರ ಕೋಟಿ ರು.ಗಳನ್ನು ಮೀಸಲಿಡಲಾಗಿದೆ. ಇದರಲ್ಲಿ ಎಷ್ಟುಬಳಸಿದ್ದೀರಿ? ಈ ಹಣವನ್ನು 18-44 ವರ್ಷದೊಳಗಿನವರಿಗೆ ಲಸಿಕೆ ಖರೀದಿಗಾಗಿ ಏಕೆ ಬಳಕೆ ಆಗುತ್ತಿಲ್ಲ?
3. ಇದುವರೆಗೆ ಖರೀದಿಸಲಾದ ಕೋವ್ಯಾಕ್ಸಿನ್, ಕೋವಿಶೀಲ್ಡ್ ಮತ್ತು ಸ್ಪುಟ್ನಿಕ್-5 ಲಸಿಕೆಯ ಬಗ್ಗೆ ಸಮಗ್ರ ಮಾಹಿತಿ ಸಲ್ಲಿಸಿ
4. ಭಾರತದಲ್ಲಿ ಲಭ್ಯವಿರುವ ಲಸಿಕೆಯ ದರ ಹಾಗೂ ಅವುಗಳ ಅಂತಾರಾಷ್ಟ್ರೀಯ ದರದ ಹೋಲಿಕೆಯನ್ನು ನೀಡಿ
5. 2021ರ ಡಿಸೆಂಬರ್‌ವರೆಗೆ ದೇಶದಲ್ಲಿ ಎಷ್ಟುಪ್ರಮಾಣ ಲಸಿಕೆ ಲಭ್ಯವಾಗಲಿದೆ ಎಂಬ ಕುರಿತು ಅಂದಾಜು ವರದಿ ಸಲ್ಲಿಸಿ
ಈ ಎಲ್ಲಾ ಪ್ರಶ್ನೆಗಳಿಗೆ ಮತ್ತು ಸುಪ್ರೀಂ ಕೋರ್ಟ್ ಕೇಳಿರುವ ದಾಖಲೆಗಳನ್ನು ಒದಗಿಸಲು ಹೆಚ್ಚು ಸಮಯವು ಇಲ್ಲ. ಸುಪ್ರೀಂಕೋರ್ಟ್ ಕೇಂದ್ರಕ್ಕೆ ದಾಖಲೆ ಕೇಳಿ ಇವತ್ತಿಗೆ ಎರಡನೇ ವಾರಕ್ಕೆ ಕಾಲಿಟ್ಟಿದೆ. ಹಾಗಾಗಿಯೇ ಪ್ರಧಾನಿ ಇವತ್ತು ಅಂದರೆ ಸೋಮವಾರ ದೇಶವನ್ನು ಉದ್ದೇಶಿ ಮಾತಾಡಿ, ರಾಜ್ಯದ ಲಸಿಕೆ ಜವಾಬ್ದಾರಿಯಲ್ಲಿ ಕೇಂದ್ರವೇ ವಹಿಸಿಕೊಂಡು, ಎಲ್ಲರಿಗೂ ಉಚಿತ ಲಸಿಕೆ ಕೊಡುವುದಾಗಿ ಘೋಷಣೆ ಮಾಡಿದ್ದಾರೆ. ಮುಂದಿನ 2 ವಾರಗಳ ಬಳಿಕ ಕೇಂದ್ರವೇ ಲಸಿಕೆ ನೀಡಲಿದೆ ಎಂದು ಹೇಳಿದ್ದಾರೆ. ಶೇಕಡಾ 25 ರಷ್ಟು ಲಸಿಕೆಯನ್ನು ಖಾಸಗಿ ಆಸ್ಪತ್ರೆಗಳು ಖರೀದಿ ಮಾಡಬಹುದು. ಇನ್ನು ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯಲು ಇಚ್ಚಿಸುವವರು, ಕೇವಲ ಸರ್ವೀಸ್ ಚಾರ್ಜ್ 150 ರೂಪಾಯಿ ನೀಡಿ ಲಸಿಕೆ ಪಡೆಯಬಹುದು ಎಂದು ತಿಳಿಸಿದ್ದಾರೆ. ಇನ್ನೂ ಕೇಂದ್ರಕ್ಕೆ ಕೋರ್ಟ್ ದಾಖಲೆಗಳನ್ನು ಕೇಳಿದ್ದು ಶೀಘ್ರದಲ್ಲೇ ಅದರ ತೀರ್ಪು ಹೊರಬೀಳಲಿದೆ.
ಈ ಕುರಿತು ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಅವರ ಕಛೇರಿ ಟ್ವೀಟ್ ಮಾಡಿದ್ದು, ಪ್ರತಿಪಕ್ಷ ಮತ್ತು ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆಯ ನಂತರ ಪಿಎಂ ನರೇಂದ್ರ ಮೋದಿ ಅವರು ವ್ಯಾಕ್ಸಿನೇಷನ್ ಖರೀದಿ ನೀತಿಯನ್ನು ಬದಲಾಯಿಸುವಂತೆ ಒತ್ತಾಯಿಸಲಾಗಿದೆ. ಯೋಜಿಸಿದಂತೆ ಜುಲೈ ವೇಳೆಗೆ ಹೆಚ್ಚು ದುರ್ಬಲ ಜನರಿಗೆ ಲಸಿಕೆ ಹಾಕಲು ಸರ್ಕಾರಕ್ಕೆ ಸಾಕಷ್ಟು ಪ್ರಮಾಣವಿದೆಯೇ ಎಂಬ ಪ್ರಶ್ನೆ ಇನ್ನೂ ಉಳಿದಿದೆ. ಅದಕ್ಕೆ ನೀಲನಕ್ಷೆ ಎಲ್ಲಿದೆ? ಎಂಬ ಗಂಭೀರ ಪ್ರಶ್ನೆಯನ್ನು ಮೋದಿಯವರಿಗೆ ಕೇಳಿದ್ದಾರೆ.