ಇತ್ತೀಚೆಗೆ ಎರಡು ದಿನಗಳ ಹಿಂದೆ ಆಗಸ್ಟ್ 10ನೇ ತಾರೀಕಿನಂದು ಸುಪ್ರಿಂಕೋರ್ಟ್ ಮಹತ್ವದ ಬೆಳವಣಿಗೆ ಒಂದರಲ್ಲಿ ದೇಶದ ಪ್ರಮುಖ ಎಂಟು ರಾಜಕೀಯ ಪಕ್ಷಗಳಿಗೆ ಚಾಟಿ ಬೀಸಿ ಭಾರೀ ಮೊತ್ತದ ದಂಡ ವಿಧಿಸಿದೆ. 2020ರಲ್ಲಿ ನಡೆದ ಬಿಹಾರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ನ್ಯಾಯಾಂಗ ನಿಂದನೆ ಮಾಡಿರುವ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ದಂಡವನ್ನ ವಿಧಿಸಿ ಆದೇಶಿಸಿದೆ.
ಕೇಂದ್ರ ಆಡಳಿತರೂಢ ಪಕ್ಷ ಬಿಜೆಪಿ, ಸೋನಿಯಾ ಗಾಂಧಿ ನೇತೃತ್ವದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಕಮ್ಯೂನಿಷ್ಟ್ ಪಕ್ಷಗಳಾದ ಸಿಪಿಐ(ಎಂ), ಎನ್ಸಿಪಿಗೆ ಬರೋಬ್ಬರಿ 5 ಲಕ್ಷ ರೂಪಾಯಿ ದಂಡ ವಿಧಿಸಿ ಸುಪ್ರೀಂಕೋರ್ಟ್ ಆದೇಶಿಸಿದೆ. ಹಾಗೆಯೇ ಜನತಾ ದಳ, ಆರ್ಜೆಡಿ, ಸಿಪಿಐ, ಎಲ್ಜೆಪಿ ಪಕ್ಷಗಳಿಗೆ ತಲಾ ಒಂದು ಲಕ್ಷ ರೂಪಾಯಿ ದಂಡವನ್ನ ವಿಧಿಸಿದೆ.
ಬಿಹಾರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಎಲ್ಲಾ ಪಕ್ಷಗಳು ತಮ್ಮ ಅಭ್ಯರ್ಥಿಗಳ ಅಪರಾಧಗಳ ಬಗ್ಗೆ ಚುನಾವಣೆ ಆಯೋಗಕ್ಕೆ ಮಾಹಿತಿ ನೀಡಿಲ್ಲ. ನಿಮ್ಮ ಅಭ್ಯರ್ಥಿಗಳ ಅಪರಾಧಗಳ ಹಿನ್ನೆಲೆಯನ್ನು ಬಹಿರಂಗಪಡಿಸುವಲ್ಲಿ ವಿಫಲವಾಗಿದ್ದೀರಿ ಎಂದು ಚಾಟಿ ಬೀಸಿದ ಸುಪ್ರೀಂಕೋರ್ಟ್ ಈ ಪ್ರಮಾಣದ ದಂಡ ವಿಧಿಸಿದೆ. 8 ಪಕ್ಷಗಳಿಗೆ ದಂಡ ವಿಧಿಸಿರುವ ಸುಪ್ರೀಂ ಕೋರ್ಟ್, ತಮ್ಮ ಅಭ್ಯರ್ಥಿಗಳನ್ನ ಆಯ್ಕೆ ಮಾಡಿದ 48 ಗಂಟೆಗಳಲ್ಲಿ ಯಾಕೇ ಅಧಿಕೃತವಾಗಿ ಅವರ ಅಪರಾಧಗಳ ಬಗ್ಗೆ ಪ್ರಕಟಿಸಿಲ್ಲ ಎಂದು ಪ್ರಶ್ನಿಸಿದೆ.
ಇನ್ನು, ನೀವು ನಾಮಿನೇಷನ್ ಸಲ್ಲಿಸುವ ಎರಡು ವಾರಗಳ ಮೊದಲು ಈ ಬಗ್ಗೆ ಮಾಹಿತಿ ನೀಡಿದರೆ ಸಾಲದು. ಅದಕ್ಕೂ ಮುನ್ನವೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ ಕೂಡಲೇ ನಿಮ್ಮ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಬೇಕು ಎಂದು ತಪರಾಕಿ ನೀಡಿದ ಸುಪ್ರೀಂಕೋರ್ಟ್. ಅಲ್ಲದೇ ಇನ್ನು ಮುಂದೆ ಹೀಗೆ ಆಗದಂತೆ ಎಲ್ಲಾ ಪಕ್ಷಗಳು ಎಚ್ಚರಿಕೆ ವಹಿಸಬೇಕು ಎಂದು ಆದೇಶಿಸಿದೆ.
ರಾಜಕೀಯ ಪಕ್ಷಗಳ ನೇತಾರರು ಸಾರ್ವಜನಿಕ ಜೀವನದಲ್ಲಿ ಇರುತ್ತಾರೆ. ಇವರನ್ನು ನಂಬಿ ಜನ ಮತ ಹಾಕಬೇಕು. ಹೀಗಿರುವಾಗ ಅಭ್ಯರ್ಥಿಗಳ ಸರಿ ತಪ್ಪುಗಳ ಕುರಿತು ಜನರಿಗೆ ಒಂದು ಮಾಹಿತಿ ಬೇಕಾಗುತ್ತದೆ. ಹಾಗಾಗಿ ನೀವು ನಾಮಿನೇಷನ್ ವೇಳೆ ಅಲ್ಲದೇ ಮೊದಲಿಗೆ ಪ್ರಕಟಿಸಬೇಕು ಎಂದು ಚಾಟಿ ಬೀಸಿದೆ.
ಈ ಹಿಂದೆಯೂ ಸುಪ್ರೀಂಕೋರ್ಟ್ ಇಂಥದ್ದೇ ಒಂದು ಮಹತ್ವದ ಆದೇಶ ನೀಡಿತ್ತು. ಯಾವುದೇ ಶಾಸಕ ಅಥವಾ ಸಂಸದರ ಮೇಲಿರುವ ಕ್ರಿಮಿನಲ್ ಪ್ರಕರಣಗಳನ್ನ ಸರ್ಕಾರ ದಿಢೀರ್ ವಾಪಸ್ ಪಡೆಯಬಾರದು ಎಂದು ಹೇಳಿತ್ತು. ಆಯಾ ರಾಜ್ಯಗಳ ಆದೇಶವಿಲ್ಲದೇ ನಾಯಕರ ಮೇಲಿನ ಕ್ರಿಮಿನಲ್ ಪ್ರಕರಣಗಳನ್ನ ಸರ್ಕಾರ ವಾಪಸ್ ಪಡೆದುಕೊಳ್ಳಬಾರದು ಅಂತಾ ಆದೇಶ ನೀಡಿತ್ತು.
ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ನ್ಯಾಯಾಂಗ ನಿಂದನೆ ಮಾಡಿವೆ ಎಂದು ವಕೀಲೆ ಆಶ್ವಿನಿ ಕುಮಾರ್ ಉಪಾಧ್ಯ ಎಂಬುವರು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಇವರು ಕ್ರಿಮಿನಲ್ ಅಪರಾಧ ಹಿನ್ನೆಲೆ ಉಳ್ಳ ನಾಯಕರು ಜೀವನ ಪರ್ಯಂತ ಯಾವುದೇ ಚುನಾವಣೆಗೆ ಸ್ಪರ್ಧಿಸದಂತೆ ಆದೇಶ ನೀಡಬೇಕು ಎಂದು ಸಲ್ಲಿಸಿದ ಅರ್ಜಿಯಲ್ಲಿ ಕೋರಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಹೀಗೆ ಆದೇಶಿಸಿದೆ.