ಶಿವಮೊಗ್ಗ: ಶಿವಮೊಗ್ಗ ನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಆಯನೂರು ಮಂಜುನಾಥ್ ಸ್ಪರ್ಧಿಸಿದ್ದು, ಅವರು ಗೆಲ್ಲುವುದು ನಿಶ್ಚಿತ ಎಂದು ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಹೇಳಿದ್ದಾರೆ.ಜೆಡಿಎಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಯಾವುದೇ ಷರತ್ತು ಇಲ್ಲದೇ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಜೆಡಿಎಸ್ ಪಕ್ಷಕ್ಕೆ ಸೇರಿದ್ದೇನೆ. ನಗರದ ಹಿತಾಸಕ್ತಿ ಕಾಪಾಡುವುದು ನನ್ನ ಧರ್ಮವಾಗಿದೆ. ನನ್ನ ಎಲ್ಲಾ ಅಭಿಮಾನಿಗಳು ಕೂಡ ಶಾಂತಿ ಬಯಸುವವರು. ಯಾರೂ ಬೆಂಕಿ ಹಚ್ಚುವವರಲ್ಲ, ಎಲ್ಲರೊಂದಿಗೆ ಚರ್ಚೆ ಮಾಡಿಯೇ ಜೆಡಿಎಸ್ ಪಕ್ಷಕ್ಕೆ ಸೇರಿದ್ದೇನೆ. ಬಹಳ ಜನ ಕಾಂಗ್ರೆಸ್ ನಿಂದ ಜೆಡಿಎಸ್ ಗೆ ಬರಲಿದ್ದಾರೆ ಎಂದರು.

ಎಷ್ಟು ಮತದ ಅಂತರದಿಂದ ಗೆಲ್ಲಬಹುದು ಎಂಬ ಪ್ರಶ್ನೆಗೆ ಆಯನೂರು ಮಂಜುನಾಥ್ ಗೆಲ್ಲವುದು ನಿಶ್ಚಿತ. ಒಂದು ಮತವಾದರೂ ಗೆಲುವು ಗೆಲುವೇ. ಫಲಿತಾಂಶ ಬಂದ ಮೇಲೆ ಮತದ ಅಂತರ ಗೊತ್ತಾಗುತ್ತದೆ. ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ಮನಸ್ಥಿತಿಯನ್ನು ಮತದಾರ ಅರಿತಿದ್ದಾನೆ. ನಗರದ ಅಭಿವೃದ್ಧಿಗೆ ಶಾಂತಿ ಕಾಪಾಡುವುದು ಅತಿ ಮುಖ್ಯ. ರೈಲು, ವಿಮಾನ ನಿಲ್ದಾಣ ಸೇರಿದಂತೆ ಅನೇಕ ಅಭಿವೃದ್ಧಿ ಆದರೂ ಸಹ ಯಾವುದೇ ಕೈಗಾರಿಕೋದ್ಯಮಿ ಶಿವಮೊಗ್ಗ ಜಿಲ್ಲೆಗೆ ಬರುವುದಿಲ್ಲ ಏಕೆ ಎಂದು ಬಿಜೆಪಿಯವರೇ ಹೇಳಬೇಕು. ಶಿವಮೊಗ್ಗದ ಜನ ಶಾಂತಿಪ್ರಿಯರು. ಹಾಗಾಗಿ ಜೆಡಿಎಸ್ ಅಭ್ಯರ್ಥಿಗೆ ಈ ಬಾರಿ ಮತ ಹಾಕಲಿದ್ದಾರೆ ಎಂದರು.
ನನ್ನ ಸ್ನೇಹಿತರು ಹಾಗೂ ಅಭಿಮಾನಿಗಳ ಅಭಿಪ್ರಾಯ ಪಡೆದೇ ಜೆಡಿಎಸ್ ಸೇರಿದ್ದೇನೆ. ಕಾಂಗ್ರೆಸ್ ಟಿಕೆಟ್ ಘೋಷಣೆ ಸರಿಯಾಗಿಲ್ಲ. ಶಿವಮೊಗ್ಗ ನಗರದ ಶಾಂತಿ ಕದಡುವ ಬಿಜೆಪಿ ಅಭ್ಯರ್ಥಿ ಒಂದು ಕಡೆಯಾದರೆ. ಅಶಾಂತಿಗೆ ಸ್ವೀಟ್ ಹಂಚುವ ಅಭ್ಯರ್ಥಿ ಕಾಂಗ್ರೆಸ್ ನವರು. ಆಯನೂರು ಮಂಜುನಾಥ್ ಬೆಂಕಿ ಹಚ್ಚುವವರೂ ಅಲ್ಲ, ಸ್ವೀಟ್ ಹಂಚುವವರೂ ಅಲ್ಲ, ಆಯನೂರು ಮಂಜುನಾಥ್ ಶಾಂತಿ ಬಯಸುವವರು..! ಎಲ್ಲರ ಮನಸ್ಥಿತಿ ಅರಿತೇ ಜೆಡಿಎಸ್ ಗೆ ಬಂದಿದ್ದೇನೆ ಎಂದರು.