ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಕೇದರ್ ಜಾಧವ್ ನೇತೃತ್ವದ ಸದರ್ನ್ ಸೂಪರ್ ಸ್ಟಾರ್ಸ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದೆ. ಅಂತಿಮ ಹಣಾಹಣಿಯಲ್ಲಿ ಇರ್ಫಾನ್ ಪಠಾಣ್ ಮುಂದಾಳತ್ವದ ಕೊನಾರ್ಕ್ ಸೂರ್ಯ ಒಡಿಶಾ ತಂಡವನ್ನು ಸೂಪರ್ ಓವರ್ನಲ್ಲಿ ಮಣಿಸಿ ಕಿರೀಟ ಮುಡಿಗೇರಿಸಿಕೊಂಡಿದೆ.
ಲೆಜೆಂಡ್ಸ್ ಲೀಗ್ ಕ್ರಿಕೆಟ್ನ ಫೈನಲ್ ಪಂದ್ಯದಲ್ಲಿ ಸದರ್ನ್ ಸೂಪರ್ ಸ್ಟಾರ್ಸ್ ತಂಡವು ರೋಚಕ ಜಯ ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಶ್ರೀನಗರದ ಭಕ್ಷಿ ಸ್ಟೇಡಿಯಂನಲ್ಲಿ ನಡೆದ ಅಂತಿಮ ಹಣಾಹಣಿಯಲ್ಲಿ ಸದರ್ನ್ ಸೂಪರ್ ಸ್ಟಾರ್ಸ್ ಮತ್ತು ಕೊನಾರ್ಕ್ ಸೂರ್ಯ ಒಡಿಶಾ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಕೊನಾರ್ಕ್ ಸೂರ್ಯ ಒಡಿಶಾ ತಂಡದ ನಾಯಕ ಇರ್ಫಾನ್ ಪಠಾಣ್ ಬೌಲಿಂಗ್ ಆಯ್ದುಕೊಂಡಿದ್ದರು.
ಅದರಂತೆ ಇನಿಂಗ್ಸ್ ಆರಂಭಿಸಿದ ಸದರ್ನ್ ಸೂಪರ್ ಸ್ಟಾರ್ಸ್ ಪರ ಆರಂಭಿಕ ಆಟಗಾರ ಮಾರ್ಟಿನ್ ಗಪ್ಟಿಲ್ 27 ರನ್ ಬಾರಿಸಿದರೆ, ಪವನ್ ನೇಗಿ 33 ರನ್ ಸಿಡಿಸಿದರು. ಇನ್ನು ಹ್ಯಾಮಿಲ್ಟನ್ ಮಸಕಡ್ಝ 58 ಎಸೆತಗಳಲ್ಲಿ 5 ಸಿಕ್ಸ್ ಹಾಗೂ 8 ಫೋರ್ಗಳೊಂದಿಗೆ 83 ರನ್ ಚಚ್ಚಿದರು. ಈ ಅರ್ಧಶತಕದ ನೆರವಿನಿಂದ ಸದರ್ನ್ ಸೂಪರ್ ಸ್ಟಾರ್ಸ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 164 ರನ್ ಕಲೆಹಾಕಿತು.
165 ರನ್ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಕೊನಾರ್ಕ್ ಸೂರ್ಯ ಒಡಿಶಾ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಕೇವಲ 37 ರನ್ಗಳಿಸುವಷ್ಟರಲ್ಲಿ ಪ್ರಮುಖ ಮೂರು ಬ್ಯಾಟರ್ಗಳು ಔಟಾಗಿದ್ದರು. ಈ ಹಂತದಲ್ಲಿ ಕಣಕ್ಕಿಳಿದ ಯೂಸುಫ್ ಪಠಾಣ್ ಇಡೀ ಪಂದ್ಯದ ಚಿತ್ರಣ ಬದಲಿಸಿಬಿಟ್ಟರು.
ಕ್ರೀಸ್ಗೆ ಆಗಮಿಸುತ್ತಿದ್ದಂತೆ ಸಿಡಿಲಬ್ಬರ ಶುರು ಮಾಡಿದ ಪಠಾಣ್ ಮೈದಾನದ ಮೂಲೆ ಮೂಲೆಗೂ ಸಿಕ್ಸ್-ಫೋರ್ಗಳ ಸುರಿಮಳೆಗೈದರು. ಅಲ್ಲದೆ ಕೇವಲ 38 ಎಸೆತಗಳಲ್ಲಿ 8 ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ 85 ರನ್ ಚಚ್ಚಿದರು. ಇದಾಗ್ಯೂ ಕೊನೆಯ ಓವರ್ನಲ್ಲಿ 7 ರನ್ಗಳ ಅವಶ್ಯಕತೆಯಿತ್ತು.
ಚುತುರಂಗ ಡಿಸಿಲ್ವಾ ಎಸೆದ ಅಂತಿಮ ಓವರ್ನಲ್ಲಿ 6 ರನ್ ಕಲೆಹಾಕುವ ಮೂಲಕ ಯೂಸುಫ್ ಪಠಾಣ್ ಪಂದ್ಯವನ್ನು ಟೈನಲ್ಲಿ ಅಂತ್ಯಗೊಳಿಸುವಲ್ಲಿ ಯಶಸ್ವಿಯಾದರು. ಉಭಯ ತಂಡಗಳು 164 ರನ್ಗಳಿಸಿದ್ದರಿಂದ ಪಂದ್ಯದ ಫಲಿತಾಂಶಕ್ಕಾಗಿ ಸೂಪರ್ ಓವರ್ನ ಮೊರೆ ಹೋಗಲಾಯಿತು.
ಸೂಪರ್ ಓವರ್ನಲ್ಲಿ ಮೊದಲು ಬ್ಯಾಟ್ ಮಾಡಿದ ಕೊನಾರ್ಕ್ ಸೂರ್ಯ ಒಡಿಶಾ ತಂಡವು 13 ರನ್ ಕಲೆಹಾಕಿತು. ಅದರಂತೆ 6 ಎಸೆತಗಳಲ್ಲಿ 14 ರನ್ಗಳ ಗುರಿ ಪಡೆದ ಸದರ್ನ್ ಸೂಪರ್ ಸ್ಟಾರ್ಸ್ ಪರ ಕಣಕ್ಕಿಳಿದ ಮಾರ್ಟಿನ್ ಗಪ್ಟಿಲ್ ಬ್ಯಾಕ್ ಟು ಬ್ಯಾಕ್ 2 ಸಿಕ್ಸ್ ಸಿಡಿಸಿದರು. ಅಲ್ಲದೆ 5 ಎಸೆತಗಳಲ್ಲಿ 14 ರನ್ ಬಾರಿಸುವ ಮೂಲಕ ಸದರ್ನ್ ಸೂಪರ್ ಸ್ಟಾರ್ಸ್ ತಂಡವು ರೋಚಕ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಕೇದರ್ ಜಾಧವ್ ನೇತೃತ್ವದ ಸದರ್ನ್ ಸೂಪರ್ ಸ್ಟಾರ್ಸ್ ತಂಡವು ಲೆಜೆಂಡ್ಸ್ ಲೀಗ್ ಕ್ರಿಕೆಟ್ನ ಹೊಸ ಚಾಂಪಿಯನ್ ಆಗಿ ಹೊರಹೊಮ್ಮಿದೆ.