ನವದೆಹಲಿ : ಅಯೋಧ್ಯೆಯಲ್ಲಿ ರಾಮಮಂದಿರದ (Ramamandira) ಕರ್ತೃ ಮತ್ತು ನಿರ್ಮಾತೃ ನಾನೇ ಎಂದು ಪ್ರಧಾನಿ ಹೇಳಿಕೊಳ್ಳುತ್ತಿದ್ದಾರೆ. ಆದರೆ ಇದರಲ್ಲಿ ಅವರ ಕೊಡುಗೆ ಶೂನ್ಯ ಎಂದು ಬಿಜೆಪಿ (BJP) ನಾಯಕ ಸುಬ್ರಮಣಿಯನ್ ಸ್ವಾಮಿ, ಮತ್ತೊಮ್ಮೆ ಬಹಿರಂಗವಾಗಿಯೇ ಆಕ್ರೋಶ ಹೊರಹಾಕಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಅಯೋಧ್ಯೆಯಲ್ಲಿ ರಾಮಮಂದಿರದ ಮೂರ್ತಿ ಪ್ರತಿಷ್ಠಾಪನೆಗೆ ದಿನಗಣನೆ ಆರಂಭವಾಗಿರುವಂತೆಯೇ ಪ್ರಧಾನಿ ನರೇಂದ್ರ ಮೋದಿ (Narendra modi) ಅವರಿಂದ ರಾಮಮಂದಿರ ಉದ್ಘಾಟನೆಯನ್ನು ಬಹಿರಂಗವಾಗಿ ಪ್ರಶ್ನಿಸಿದ್ದಾರೆ.
ನರೇಂದ್ರ ಮೋದಿಯವರು ರಾಮಮಂದಿರದ ವಿಚಾರದ ಬದಲಿಗೆ ತಮ್ಮ ಕ್ಷೇತ್ರವಾಗಿರುವ ವಾರಣಾಸಿಯಲ್ಲಿರುವ ಜ್ಞಾನವಾಪಿ ಜ್ಯೋತಿರ್ಲಿಂಗ ಕಾಶಿ ದೇವಸ್ಥಾನವನ್ನು ಪುನರ್ನಿರ್ಮಾಣ ಮಾಡಲಿ. ಆ ವಿಷಯದ ಮೇಲೆ ಮೋದಿಯವರು ತಮ್ಮ ಗಮನವನ್ನು ಕೇಂದ್ರೀಕರಿಸಬೇಕು ಎಂದು ಸಲಹೆ ನೀಡಿದ್ದಾರೆ.
ಸೀತೆಯನ್ನು ರಕ್ಷಿಸಲು ಯುದ್ಧ ಮಾಡಿ, ಕಷ್ಟಗಳನ್ನು ಎದುರಿಸಿದ ರಾಮನ ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣವಾಗುತ್ತಿದೆ. ಆದರೆ, ಪತ್ನಿಯನ್ನೇ ತೊರೆದ ಪ್ರಧಾನಿ ನರೇಂದ್ರ ಮೋದಿ ಅವರು ಇದರ ಉದ್ಘಾಟನಾ ಪೂಜೆ ಹೇಗೆ ನೆರವೇರಿಸುತ್ತಾರೆ ಎಂದು ಪ್ರಶ್ನಿಸಿದ್ದರು.ರಾಮ ಸುಮಾರು ಒಂದೂವರೆ ದಶಕದಷ್ಟು ಕಾಲ ವನವಾಸವನ್ನು ಅನುಭವಿಸಿದ. ಅಪಹರಣಗೊಂಡ ಸೀತೆಯನ್ನು ರಕ್ಷಿಸಲು ಯುದ್ಧ ಮಾಡಿದ. ಆದರೆ, ಮೋದಿ ಅವರು ತಮ್ಮ ಪತ್ನಿಯನ್ನು ತ್ಯಜಿಸಿದವರು ಎಂಬುದು ಎಲ್ಲರಿಗೂ ತಿಳಿದ ವಿಷಯ. ಹಾಗಿದ್ದರೆ ಅವರು ಹೇಗೆ ಈ ಪೂಜೆ ನೆರವೇರಿಸುತ್ತಾರೆ? ಶ್ರೀರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನಾ ಕಾರ್ಯವನ್ನು ಮೋದಿ ಅವರು ನೆರವೇರಿಸಲು ರಾಮನ ಭಕ್ತರು ಹೇಗೆ ಅವಕಾಶ ನೀಡುತ್ತಾರೆ ಎಂದೂ ಸುಬ್ರಮಣಿಯನ್ ಸ್ವಾಮಿ ಕೇಳಿದ್ದಾರೆ.