• Home
  • About Us
  • ಕರ್ನಾಟಕ
Sunday, December 14, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ

ಶ್ರಮಿಕರ ಹೋರಾಟಗಳೂ ರಾಜಕೀಯ ವೇದಿಕೆಯೂ..ಶ್ರಮಿಕರಿಗೆ ರಾಜಕೀಯ ಧ್ವನಿ ನೀಡುವ ಒಂದು ವಿಶಾಲ ರಾಜಕೀಯ ವೇದಿಕೆ ಬೇಕಿದೆ

ನಾ ದಿವಾಕರ by ನಾ ದಿವಾಕರ
May 1, 2023
in ಅಂಕಣ
0
ಶ್ರಮಿಕರ ಹೋರಾಟಗಳೂ ರಾಜಕೀಯ ವೇದಿಕೆಯೂ..ಶ್ರಮಿಕರಿಗೆ ರಾಜಕೀಯ ಧ್ವನಿ ನೀಡುವ ಒಂದು ವಿಶಾಲ ರಾಜಕೀಯ ವೇದಿಕೆ ಬೇಕಿದೆ
Share on WhatsAppShare on FacebookShare on Telegram

ನಾ ದಿವಾಕರ

ADVERTISEMENT

ನಾಲ್ಕನೆಯ ಔದ್ಯೋಗಿಕ ಕ್ರಾಂತಿ ಅಥವಾ ಡಿಜಿಟಲ್‌ ಮಾರುಕಟ್ಟೆ ಯುಗದ ಉನ್ನತ ಹಂತದಲ್ಲಿರುವ ಭಾರತದ ಆರ್ಥಿಕತೆಯಲ್ಲಿ ಕರ್ನಾಟಕ ಒಂದು ಔದ್ಯಮಿಕ ಕೇಂದ್ರವಾಗಿ, ಡಿಜಿಟಲ್‌ ಹಾಗೂ ಸಾಫ್ಟ್‌ವೇರ್‌ ಔದ್ಯಮಿಕ ಲೋಕದ ಪ್ರಶಸ್ತ ತಾಣವಾಗಿ ತನ್ನದೇ ಆದ ಸ್ಥಾನ ಗಳಿಸಿದೆ. ಇತ್ತೀಚಿನ ಸಾಂಖ್ಯಿಕ ಹಾಗೂ ಯೋಜನಾ ಅನುಷ್ಠಾನದ ಸಚಿವಾಲಯದ ವರದಿಗಳ ಅನುಸಾರ ದೇಶದ ಜಿಡಿಪಿಯಲ್ಲಿ ಕರ್ನಾಟಕದ ಪಾಲು ಹೆಚ್ಚಾಗುತ್ತಲೇ ಇದ್ದು, ನಾಲ್ಕನೆಯ ಅತಿದೊಡ್ಡ ರಾಜ್ಯವಾಗಿ ಹೊರಹೊಮ್ಮಿದೆ. ರಾಜ್ಯ ಜಿಡಿಪಿಯಲ್ಲಿ ಮಹಾರಾಷ್ಟ್ರ, ಗುಜರಾತ್‌ ಮತ್ತು ತಮಿಳುನಾಡಿನ ನಂತರದ ಸ್ಥಾನವನ್ನು ಕರ್ನಾಟಕ ಪಡೆದಿದೆ. ತಲಾ ಆದಾಯ ಪ್ರಮಾಣದಲ್ಲಿ ಹಾಗೂ ತಲಾ ಆದಾಯದ ವಾರ್ಷಿಕ ಬೆಳವಣಿಗೆಯಲ್ಲೂ ರಾಜ್ಯದ ಸಾಧನೆ ರಾಷ್ಟ್ರೀಯ ಸರಾಸರಿಗಿಂತಲೂ ಹೆಚ್ಚಾಗಿದೆ. 2021-22ರಲ್ಲಿ ದೇಶದಲ್ಲಿ ನಿರುದ್ಯೋಗ ಪ್ರಮಾಣ ಶೇ 4.1ರಷ್ಟಿದ್ದರೆ ಕರ್ನಾಟಕದಲ್ಲಿ ಶೇ 3.2ರಷ್ಟಿದೆ. ಭಾರತದ ಒಟ್ಟು ರಫ್ತು ವಹಿವಾಟಿನಲ್ಲಿ ಕರ್ನಾಟಕದ ಪಾಲು  ನಾಲ್ಕನೆಯ ಸ್ಥಾನ ಪಡೆದಿದೆ. ಬಿಪಿಎಲ್‌ ಕುಟುಂಬಗಳ ಸಂಖ್ಯೆಯಲ್ಲೂ ಸಹ ರಾಷ್ಟ್ರೀಯ ಸರಾಸರಿಗಿಂತಲೂ ಕರ್ನಾಟಕ ಕಡಿಮೆ ಪ್ರಮಾಣ ದಾಖಲಿಸಿದೆ. ಕೇಂದ್ರಕ್ಕೆ ಸಲ್ಲಿಸುವ ವಾರ್ಷಿಕ ನೇರ ತೆರಿಗೆಯ ಪ್ರಮಾಣದಲ್ಲಿ ಕರ್ನಾಟಕ ಎರಡನೆ ಸ್ಥಾನದಲ್ಲಿದ್ದು ಮಹಾರಾಷ್ಟ್ರ ಮಾತ್ರ ಕರ್ನಾಟಕವನ್ನು ಮೀರಿಸಿದೆ.

ಮೇ 10ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗಳಿಗೂ ಈ ಮಾರುಕಟ್ಟೆ ಆರ್ಥಿಕ ಅಂಕಿಅಂಶಗಳಿಗೂ ಇರುವ ನೇರ ಸಂಬಂಧವನ್ನು ನಾವು ಸೂಕ್ಷ್ಮವಾಗಿ ಗಮನಿಸಬೇಕಿದೆ. ರಾಜಕೀಯ ಅಧಿಕಾರ ಮತ್ತು ಅಧಿಕಾರ ರಾಜಕಾರಣದ ಸಾಂಸ್ಥಿಕ ನೆಲೆಗಳು ಸಂಪೂರ್ಣ ಔದ್ಯಮೀಕರಣಗೊಂಡಿರುವ ಸಂದರ್ಭದಲ್ಲಿ ಆಪ್ತ ಬಂಡವಾಳಶಾಹಿಯು ಕಾರ್ಪೋರೇಟ್‌ ಮಾರುಕಟ್ಟೆ ಶಕ್ತಿಗಳ ಮೂಲಕ ಹೇಗೆ ದೇಶದ ಅರ್ಥವ್ಯವಸ್ಥೆಯ ಮೇಲೆ ತನ್ನ ಹಿಡಿತ ಸಾಧಿಸಿದೆ ಎಂಬುದನ್ನು ನೋಡಿದ್ದೇವೆ. ಪ್ರಜಾಪ್ರಭುತ್ವದ ಸಂಸದೀಯ ಮಾರ್ಗದಲ್ಲೇ ಚುನಾಯಿತವಾಗುವ ಸರ್ಕಾರಗಳು ಬಂಡವಾಳ ಮಾರುಕಟ್ಟೆಯನ್ನು ಪೋಷಿಸಲು ಅಗತ್ಯವಾದ ಕಾನೂನುಗಳನ್ನು ಜಾರಿಗೊಳಿಸುತ್ತಲೇ ಕಾರ್ಪೋರೇಟ್‌ ಜಗತ್ತಿಗೆ ಸ್ಪಂದಿಸುತ್ತವೆ. ಚುನಾವಣಾ ಕಣದಲ್ಲಿ ಹರಿಯುವ ಹಣದ ಪ್ರಮಾಣದಲ್ಲಿ ಕಾಣುವ ಹೆಚ್ಚಳಕ್ಕೂ ಕಾರ್ಪೋರೇಟ್‌ ಮಾರುಕಟ್ಟೆಯ ಬೆಳವಣಿಗೆಗೆಯ ಪ್ರಮಾಣಕ್ಕೂ ಅಂತರ್‌ ಸಂಬಂಧ ಇರುವುದನ್ನು ಗಮನಿಸಿದರೆ, ಮುಖ್ಯವಾಹಿನಿಯ ರಾಜಕೀಯ ಪಕ್ಷಗಳು ಅಧಿಕಾರ ಗ್ರಹಣಕ್ಕಾಗಿ ನಡೆಸುವ ಕಸರತ್ತುಗಳನ್ನೂ ಅರ್ಥಮಾಡಿಕೊಳ್ಳಲು ಸಾಧ್ಯ.

ಔದ್ಯಮಿಕ ಕರ್ನಾಟಕದ ವ್ಯತ್ಯಯಗಳು

ಕರ್ನಾಟಕದಲ್ಲಿ ಔದ್ಯಮಿಕ ಬಂಡವಾಳದ ಮೂಲ ಇರುವುದು ಜಾತಿ ಕೇಂದ್ರಿತ ಮಠಮಾನ್ಯಗಳ ಶೈಕ್ಷಣಿಕ ಸಂಸ್ಥೆಗಳಲ್ಲಿ, ಆರೋಗ್ಯ ವಲಯದಲ್ಲಿ ಹಾಗೂ ಮೂಲ ಸೌಕರ್ಯಗಳು-ರಿಯಲ್‌ ಎಸ್ಟೇಟ್‌ ಉದ್ಯಮಗಳಲ್ಲಿ. ದೇಶದಲ್ಲೇ ಅತಿ ಹೆಚ್ಚಿನ ಸಂಖ್ಯೆಯ ವೈದ್ಯಕೀಯ, ಇಂಜಿನಿಯರಿಂಗ್‌, ನರ್ಸಿಂಗ್‌ ಹಾಗೂ ತಾಂತ್ರಿಕ ಕಾಲೇಜುಗಳನ್ನು ಹೊಂದಿರುವ ಕರ್ನಾಟಕದಲ್ಲಿ ಇವೆಲ್ಲವೂ ಬಹುಪಾಲು ಖಾಸಗಿ ಒಡೆತನದಲ್ಲಿರುವುದೂ, ಈ ಖಾಸಗಿ ಬಂಡವಾಳಿಗರು ಜಾತಿ ಕೇಂದ್ರಿತ ಮಠಗಳೊಡನೆಯೇ ಗುರುತಿಸಿಕೊಂಡಿರುವುದೂ ವಾಸ್ತವ. ಈ ಎಲ್ಲ ಔದ್ಯಮಿಕ ಕ್ಷೇತ್ರಗಳಲ್ಲೂ ರಾಜ್ಯ ರಾಜಕೀಯ ನಾಯಕರೂ ಸಹ ತಮ್ಮದೇ ಹಿತಾಸಕ್ತಿಗಳನ್ನು ಹೊಂದಿರುವುದು ಬಹಿರಂಗ ಸತ್ಯ. ಹಾಗಾಗಿಯೇ ಕರ್ನಾಟಕದ ಜಾತಿ ರಾಜಕಾರಣದ ಸಂಕಥನದಲ್ಲಿ ಔದ್ಯಮಿಕ ಲೋಕದಿಂದ ಹೊರಗುಳಿದಿರುವ ತಳಸಮುದಾಯಗಳು ಕೇವಲ ಬಳಕೆಯ ದಾಳಗಳಾಗಿ ಮಾತ್ರ ಕಂಡುಬರುತ್ತವೆ. ಕೃಷಿ ಮತ್ತು ಕೃಷಿಯೇತರ ಭೂ ಒಡೆತನ, ಕೈಗಾರಿಕಾ ಉತ್ಪಾದನೆಯ ಮೂಲಗಳು, ಸೇವಾ ವಲಯ ಮತ್ತು ಮೂಲ ಸೌಕರ್ಯಗಳು, ರಿಯಲ್‌ ಎಸ್ಟೇಟ್‌ ಮತ್ತು ಸಹಕಾರಿ ಕ್ಷೇತ್ರ ಈ ಎಲ್ಲ ವಲಯಗಳಲ್ಲೂ ರಾಜಕಾರಣದ ಹಸ್ತಕ್ಷೇಪ ಮತ್ತು ಹಿತಾಸಕ್ತಿಯನ್ನು ಸ್ಪಷ್ಟವಾಗಿ ಗುರುತಿಸಬಹುದು. ಹಾಗಾಗಿಯೇ ಮುಂಬರುವ ಚುನಾವಣೆಗಳ ಫಲಿತಾಂಶ ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳನ್ನು ಪ್ರತಿನಿಧಿಸುವ ಔದ್ಯಮಿಕ ವಲಯದ ಕಾರ್ಪೋರೇಟ್‌ ಮಾರುಕಟ್ಟೆ ಶಕ್ತಿಗಳ ಪಾಲಿಗೆ ಮುಖ್ಯವಾಗುತ್ತದೆ. ಉತ್ತರ ಕರ್ನಾಟಕದ ಲಿಂಗಾಯತ ಮತಬ್ಯಾಂಕ್‌ ಮತ್ತು ದಕ್ಷಿಣ ಭಾಗದ ಒಕ್ಕಲಿಗ ಮತಬ್ಯಾಂಕುಗಳ ಹಿಂದೆ ಈ ಔದ್ಯಮಿಕ ಹಿತಾಸಕ್ತಿಗಳಿರುವುದನ್ನು ಗಮನಿಸಬೇಕಿದೆ.

ರಾಜ್ಯದ ಆರ್ಥಿಕ ಬೆಳವಣಿಗೆಯ ಸೂಚ್ಯಂಕಗಳು ಆಶಾದಾಯಕವಾಗಿ ಕಾಣುವುದಾದರೂ, ತಳಮಟ್ಟದ ಕಾರ್ಮಿಕರ ಜೀವನ ಮತ್ತು ಜೀವನೋಪಾಯದ ಮಾರ್ಗಗಳನ್ನು ಗಮನಿಸಿದಾಗ, ಶ್ರಮಿಕರ ಸ್ಥಿತಿಗತಿಗಳು ಅಷ್ಟೇನೂ ಉಜ್ವಲವಾಗಿ ಕಾಣುವುದಿಲ್ಲ. ಇದು ಬಂಡವಾಳಶಾಹಿ ಅಭಿವೃದ್ಧಿ ಮಾದರಿಯ ಒಂದು ಮೂಲ ಲಕ್ಷಣ. ಶ್ರಮಿಕ ವರ್ಗಗಳ ಬೆವರಿನ ದುಡಿಮೆಯಿಂದಲೇ ಉನ್ನತಿ ಸಾಧಿಸುವ ಮಾರುಕಟ್ಟೆ ಮತ್ತು ಉದ್ಯಮಗಳ ಅಂತಿಮ ಫಲಾನುಭವಿಗಳು ಶ್ರಮರಹಿತ ಬದುಕು ಸವಿಯುವ  ಬಂಡವಾಳಿಗರೇ ಆಗಿರುತ್ತಾರೆಯೇ ಹೊರತು ಬೆವರು ಸುರಿಸುವ ಶ್ರಮಿಕರು ಆಗಿರುವುದಿಲ್ಲ. ಅಥವಾ ಈ ಬಂಡವಾಳಿಗರ ಆಪ್ತ ವಲಯದಲ್ಲಿ ಗುರುತಿಸಿಕೊಳ್ಳುವ ಅಧಿಕಾರಶಾಹಿ, ಮಾಧ್ಯಮ ವರ್ಗಗಳು ಹಾಗೂ ಮೇಲ್ವರ್ಗಗಳೇ ಆಗಿರುತ್ತವೆ. ಮಾರುಕಟ್ಟೆಯ ಅಭಿವೃದ್ಧಿ ಮತ್ತು ಆರ್ಥಿಕ ಸುಸ್ಥಿತಿಗೆ ಕಾರಣಕರ್ತರಾಗುವ ಶ್ರಮಿಕ ವರ್ಗಗಳು ಭೌತಿಕವಾಗಿ, ಬೌದ್ಧಿಕವಾಗಿ ಹಾಗೂ ಆರ್ಥಿಕವಾಗಿ ಅವಕಾಶವಂಚಿತರಾಗಿಯೇ ಉಳಿಯುತ್ತಾರೆ.  ರಾಜ್ಯಾದ್ಯಂತ ಕಳೆದ ಎರಡು ವರ್ಷಗಳಿಂದ ನಡೆಯುತ್ತಿರುವ ಕಾರ್ಮಿಕರ ಮುಷ್ಕರಗಳತ್ತ ಒಮ್ಮೆ ಗಮನಹರಿಸಿದರೂ ಈ ವ್ಯತ್ಯಯವನ್ನು ಸ್ಪಷ್ಟವಾಗಿ ಗುರುತಿಸಬಹುದು.

ಶ್ರಮಿಕ ವರ್ಗದ ಸವಾಲುಗಳು

ಕೋವಿದ್‌ ಸಾಂಕ್ರಾಮಿಕವು ಕರ್ನಾಟಕದ ಶ್ರಮಿಕ ವರ್ಗ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳು, ಜಟಿಲ ಸಿಕ್ಕುಗಳು ಮತ್ತು ತಾರತಮ್ಯಗಳ ಒಂದು ಸ್ಪಷ್ಟ ಚಿತ್ರಣವನ್ನು ತೆರೆದಿಡಲು ಸಹಾಯ ಮಾಡಿದೆ. ಕಳೆದ ಮೂರು ವರ್ಷಗಳಲ್ಲಿ ರಾಜ್ಯಾದ್ಯಂತ ನಡೆದಿರುವ ಹಾಗೂ ಇಂದಿಗೂ ನಡೆಯುತ್ತಿರುವ ಶ್ರಮಿಕ ವರ್ಗದ ಮುಷ್ಕರಗಳತ್ತ ಒಮ್ಮೆ ಕಣ್ಣುಹಾಯಿಸಿದರೂ, ದುಡಿಯುವ ಜೀವಿಗಳ ಬದುಕು ಎಷ್ಟು ಅಸಹನೀಯವಾಗುತ್ತಿದೆ ಎನ್ನುವುದು ಅರ್ಥವಾಗುತ್ತದೆ. ಕರ್ನಾಟಕದಲ್ಲಿ ಒಟ್ಟು 64 ಸಾವಿರಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತೆಯರು ದುಡಿಯುತ್ತಿದ್ದು, ಇತ್ತೀಚಿನ ಸುದೀರ್ಘ ಮುಷ್ಕರದ ನಂತರ ಸರ್ಕಾರವು ಸೇವಾ ಖಾಯಮಾತಿ, ವೇತನ ಹೆಚ್ಚಳ ಇತರ ಬೇಡಿಗೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದೆ. ಕೇಂದ್ರ ಸರ್ಕಾರದ ರಾಷ್ಟ್ರೀಯ ಆರೋಗ್ಯ ಮಿಷನ್‌ನಲ್ಲಿ 42,524  ಆಶಾ ಕಾರ್ಯಕರ್ತೆಯರು ಅತ್ಯಲ್ಪ ವೇತನ ಪಡೆದು ಹಗಲಿರುಳೂ ದುಡಿಯುತ್ತಿದ್ದಾರೆ. ಕೇಂದ್ರ ಸರ್ಕಾರದಿಂದ 4000, ರಾಜ್ಯ ಸರ್ಕಾರದಿಂದ 2000 ಮಾಸಿಕ ವೇತನ ಪಡೆಯುವ ಈ ಕಾರ್ಯಕರ್ತೆಯರು ಗ್ರಾಮೀಣ ಕರ್ನಾಟಕದಲ್ಲಿ ಆರೋಗ್ಯ, ಶುಚಿತ್ವ ಮತ್ತು ಪೌಷ್ಟಿಕತೆಯ ಸಮೀಕ್ಷೆ ನಡೆಸುವುದೇ ಅಲ್ಲದೆ ಹಳ್ಳಿಯಿಂದ ಹಳ್ಳಿಗೆ ಸಾರಿಗೆ ವ್ಯವಸ್ಥೆಯೂ ಇಲ್ಲದೆ ನಡೆದುಕೊಂಡೇ ಹೋಗುತ್ತಾರೆ. ಸಮಾನ ಕೆಲಸಕ್ಕೆ  ಸಮಾನ ವೇತನ ನೀತಿಯಡ ಈ ಕಾರ್ಯಕತೆಯರಿಗೆ ವೇತನ ಹೆಚ್ಚಳ ಮಾಡುವಂತೆ ನಿರಂತರವಾಗಿ ಮುಷ್ಕರ ನಡೆಯುತ್ತಲೇ ಇದೆ.

ಸ್ವಚ್ಚ ಭಾರತದ ಶಾಶ್ವತ ರಾಯಭಾರಿಗಳಾಗಿ ರಾಜ್ಯಾದ್ಯಂತ ಸ್ವಚ್ಚತಾ ಕಾರ್ಯದಲ್ಲಿ 54 ಸಾವಿರ ಪೌರ ಕಾರ್ಮಿಕರು ದುಡಿಯುತ್ತಿದ್ದಾರೆ. ಇವರ ಪೈಕಿ ಕಳೆದ ವರ್ಷ ಸರ್ಕಾರ 13 ಸಾವಿರ ಕಾರ್ಮಿಕರನ್ನು ಖಾಯಮಾತಿಗೊಳಿಸಿದೆ ಉಳಿದ ಕಾರ್ಮಿಕರ ಖಾಯಮಾತಿ ಮತ್ತು‌ ವೇತನ ಹಾಗೂ ಸೇವಾ ಸೌಕರ್ಯಗಳ ಹೆಚ್ಚಳಕ್ಕಾಗಿ ಮುಷ್ಕರ ನಡೆಯುತ್ತಲೇ ಇದೆ. ಶಿಕ್ಷಣ ವಲಯದಲ್ಲಿ ಸರ್ಕಾರಿ ಶಾಲೆಗಳ ಸಂಖ್ಯೆ 2,08,168 ರಿಂದ 1,99,057ಕ್ಕೆ ಕುಸಿದಿರುವುದು ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯಲ್ಲಿ ಉಂಟಾಗಬಹುದಾದ ವ್ಯತ್ಯಯಗಳ ಸೂಚನೆಯಾಗಿದೆ. ಇದೇ ವೇಳೆ ಶಿಕ್ಷಕರ ಶಾಶ್ವತ ಹುದ್ದೆಗಳನ್ನು ಸೃಷ್ಟಿಸುವುದನ್ನು ಕೈಬಿಟ್ಟಿರುವ ಸರ್ಕಾರ ರಾಜ್ಯಾದ್ಯಂತ ಸರ್ಕಾರಿ ಶಾಲೆಗಳಲ್ಲಿ  32 ಸಾವಿರ ಅತಿಥಿ ಶಿಕ್ಷಕರನ್ನು ನೇಮಿಸಿದ್ದು ಇವರ ಮೂಲ ವೇತನ ಮಾಸಿಕ 8000/- ರೂಗಳಷ್ಟಿದೆ. ರಾಜ್ಯದ 48 ಸಾವಿರ ಸರ್ಕಾರಿ ಶಾಲೆಗಳಲ್ಲಿ 40 ಸಾವಿರ ಬೋಧಕ ಹುದ್ದೆಗಳು ಖಾಲಿ ಉಳಿದಿದ್ದು, ಅತಿಥಿ ಶಿಕ್ಷಕರ ಮೂಲಕವೇ ಖಾರ್ಯನಿರ್ವಹಿಸಲಾಗುತ್ತಿದೆ. ರಾಜ್ಯದ ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳಲ್ಲಿ ಶೇ 70ರಷ್ಟು ಬೋಧಕ ಹುದ್ದೆಯನ್ನು ಅತಿಥಿ ಉಪನ್ಯಾಶಕರ ಮೂಲಕವೇ ಭರ್ತಿ ಮಾಡಲಾಗುತ್ತಿದ್ದು 14 ಸಾವಿರ ಅತಿಥಿ ಉಪನ್ಯಾಸಕರು ತಮ್ಮ ವೇತನ ಹೆಚ್ಚಳಕ್ಕಾಗಿ ನಿರಂತರ ಹೋರಾಟ ನಡೆಸುತ್ತಿದ್ದಾರೆ. ಈ ಅತಿಥಿ ಉಪನ್ಯಾಸಕರು ಮಾಸಿಕ 15 ಸಾವಿರದಿಂದ 32 ಸಾವಿರ ರೂ ವೇತನಕ್ಕಾಗಿ ದುಡಿಯುತ್ತಿದ್ದಾರೆ.

ಈ ಎಲ್ಲ ಶ್ರಮಿಕ ವರ್ಗಗಳು ಅಭದ್ರ ನೌಕರಿ ಮತ್ತು ಅನಿಶ್ಚಿತ ಬದುಕು ಎದುರಿಸುತ್ತಲೇ ಕರ್ನಾಟಕದ ಅಭಿವೃದ್ಧಿಗೆ ತಮ್ಮ ಕೊಡುಗೆಯನ್ನು ನೀಡುತ್ತಿದ್ದಾರೆ. ರಾಜ್ಯದ ಪ್ರಗತಿಯ ಸೂಚ್ಯಂಕಗಳನ್ನು ಗಮನದಲ್ಲಿಟ್ಟು ನೋಡಿದಾಗ ಈ ಪ್ರಗತಿಯ ಕಾಲಾಳುಗಳಾದ ಕೈಗಾರಿಕಾ ವಲಯದ ಕಾರ್ಮಿಕರು ಮತ್ತು ಮೇಲೆ ಉಲ್ಲೇಖಿಸಲಾದ ಬೌದ್ಧಿಕ, ಶೈಕ್ಷಣಿಕ, ಆರೋಗ್ಯ ಮತ್ತು ಸಾರ್ವಜನಿಕ ವಲಯದ ಕಾರ್ಮಿಕರು ಇನ್ನೂ ಉತ್ತಮವಾದ ಜೀವನಮಟ್ಟವನ್ನು ಹೊಂದಿರಬೇಕಿತ್ತು. ಆದರೆ ಈ ಶ್ರಮಿಕರು ಇನ್ನೂ ಸಹ ತಮ್ಮ ಸೇವಾ ಖಾಯಮಾತಿಗಾಗಿ, ಭವಿಷ್ಯನಿಧಿ ಮತ್ತಿತರ ಸಾಂವಿಧಾನಿಕ ಸೌಲಭ್ಯಗಳಿಗಾಗಿ, ವಸತಿ ಸೌಕರ್ಯಕ್ಕಾಗಿ ಹಾಗೂ ಉತ್ತಮ ಆರೋಗ್ಯ ಸವಲತ್ತುಗಳಿಗಾಗಿ ಹೋರಾಡುತ್ತಲೇ ಇದ್ದಾರೆ. ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ಅಂತಾರಾಷ್ಟ್ರೀಯ ನೀತಿ ಸಂಹಿತೆಯಾಗಲೀ, ಭಾರತದ ಕಾನೂನುಗಳ ಅಡಿಯಲ್ಲೇ ನಿಗದಿಪಡಿಸಲಾದ ಕನಿಷ್ಠ ವೇತನದ ನಿಯಮಗಳನ್ನಾಗಲೀ ಸರ್ಕಾರದ ಯೋಜನೆಗಳಲ್ಲೂ ಅನುಸರಿಸದಿರುವುದು ಗಮನಿಸಬೇಕಾದ ಅಂಶ. ಸಾರಿಗೆ ನೌಕರರನ್ನೂ ಒಳಗೊಂಡಂತೆ ಈ ಶ್ರಮಿಕರ ಹಕ್ಕೊತ್ತಾಯಗಳಿಗೆ ಒತ್ತಾಸೆಯಾಗಿ ನಿಲ್ಲುವ ಎಡಪಂಥೀಯ ಕಾರ್ಮಿಕ ಸಂಘಟನೆಗಳು ತಮ್ಮ ನಿಸ್ವಾರ್ಥ ಹೋರಾಟದ ಮೂಲಕ ಹಲವಾರು ಕಾರ್ಮಿಕ ಹಕ್ಕುಗಳನ್ನು ಸಂಪಾದಿಸಿದ್ದು, ನೌಕರರ ಜೀವನ ಮಟ್ಟ ಸುಧಾರಣೆಗೆ ಕಾರಣವಾಗಿವೆ. ಆದರೆ ಅಭಿವೃದ್ಧಿಯ ಅಂತಿಮ ಫಲಿತಾಂಶದಲ್ಲಿ ಈ ಶ್ರಮಿಕ ವರ್ಗದ ಪಾಲು ಸದಾ ನಗಣ್ಯವಾಗಿಯೇ ಉಳಿಯುತ್ತದೆ. ಈ ವೈರುಧ್ಯವೇ ಬಂಡವಾಳಶಾಹಿ ಆರ್ಥಿಕತೆಯಲ್ಲಿ ಅಸಮಾನತೆಗಳನ್ನು ಹೆಚ್ಚಿಸುವ ಪ್ರಧಾನ ಅಂಶವಾಗಿ ಕಂಡುಬರುತ್ತದೆ. ಈ ನಡುವೆಯೇ ರಾಜ್ಯ ಸರ್ಕಾರ ನೂತನ ಕಾರ್ಮಿಕ ಸಂಹಿತೆಯನ್ನು ಜಾರಿಗೊಳಿಸಿದ್ದು ದುಡಿಮೆಯ ಅವಧಿಯನ್ನು ದಿನಕ್ಕೆ 8 ಗಂಟೆಯಿಂದ 12 ಗಂಟೆಗೆ ಹೆಚ್ಚಿಸಿದೆ.

ಎಡಪಕ್ಷಗಳ ನೈತಿಕ ಜವಾಬ್ದಾರಿ

ಈ ಸಮಸ್ತ ಕಾರ್ಮಿಕರ ಹಿತಾಸಕ್ತಿಗಳನ್ನು ಕಾಪಾಡಲು ಮತ್ತು ಜೀವನ ಮಟ್ಟದ ಸುಧಾರಣೆಗಾಗಿ ನಿರಂತರವಾದ ಹೋರಾಟಗಳನ್ನು ನಡೆಸುವ ಎಡಪಕ್ಷಗಳು ಮತ್ತು ಕಾರ್ಮಿಕ ಸಂಘಟನೆಗಳು ರಾಜ್ಯದ ಆರ್ಥಿಕ ಬೆಳವಣಿಗೆಯ ಹಿನ್ನೆಲೆಯಲ್ಲಿ ಕೆಲವು ಸೂಕ್ಷ್ಮ ವಿದ್ಯಮಾನಗಳನ್ನು ಗಮನಿಸಬೇಕಿದೆ. ಯಾವುದೇ ರಾಜ್ಯದಲ್ಲಿ ಜಿಡಿಪಿ ಬೆಳವಣಿಗೆ ಏರುಗತಿಯಲ್ಲಿದ್ದರೆ, ಹಣದುಬ್ಬರ ನಿಯಂತ್ರಣದಲ್ಲಿದ್ದು ನಿರುದ್ಯೋಗ ಪ್ರಮಾಣ ಕಡಿಮೆ ಇದ್ದರೆ, ಅಂತಹ ಸಮಾಜಗಳಲ್ಲಿ ಅಪರಾಧಗಳ ಪ್ರಮಾಣವೂ ಕಡಿಮೆ ಇರಬೇಕಾಗುತ್ತದೆ. ಸಮಾಜದ ಅಪರಾಧೀಕರಣ ಅಥವಾ ಪಾತಕೀಕರಣಕ್ಕೂ ಸಾಮಾಜಿಕ-ಆರ್ಥಿಕ ಸ್ಥಿತ್ಯಂತರಗಳಿಗೂ ನೇರವಾದ ಸಂಬಂಧ ಇರುತ್ತದೆ. ಆದರೆ ಕರ್ನಾಟಕದಲ್ಲಿ ಆರ್ಥಿಕ ಬೆಳವಣಿಗೆ ಉತ್ತಮ ಗತಿಯಲ್ಲಿ ಸಾಗುತ್ತಿದ್ದರೂ ಸಮಾನಾಂತರವಾಗಿ ಪಾತಕೀಕರಣವೂ ವೇಗವಾಗಿ ಬೆಳೆಯುತ್ತಿದೆ. ಅಧಿಕೃತವಾಗಿ ವರದಿಯಾದ ಅಪರಾಧ ಪ್ರಕರಣಗಳೇ 2020ರಲ್ಲಿ 1,06,350 ಇದ್ದುದು 2021ರಲ್ಲಿ 1,15,728ರಷ್ಟಾಗಿದೆ. ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯ ಮತ್ತು ಅಪರಾಧಗಳೂ ಹೆಚ್ಚಾಗುತ್ತಿದ್ದು, ರಾಜಕೀಯ ದ್ವೇಷ, ಕೋಮು-ಜಾತಿ-ಮತ ದ್ವೇಷ ಹಾಗೂ ಇತರ ಕಾರಣಗಳಿಂದ ಹತ್ಯೆಯಾದವರ ಸಂಖ್ಯೆಯೂ ಸಹ ಹೆಚ್ಚಾಗಿದೆ.

ಮಾರುಕಟ್ಟೆ ಆರ್ಥಿಕ ಸೂಚ್ಯಂಕಗಳಲ್ಲಿ ಸುಸ್ಥಿರತೆ ಮತ್ತು ಪ್ರಗತಿಯನ್ನು ತೋರುತ್ತಿರುವ ರಾಜ್ಯದಲ್ಲಿ ಪಾತಕೀಕರಣದ ಪ್ರಮಾಣ ಏಕೆ ಹೆಚ್ಚಾಗುತ್ತಿದೆ ಎಂದು ಶೋಧಿಸಬೇಕಿದೆ. ಇದು ಬಂಡವಾಳಶಾಹಿ ಆರ್ಥಿಕತೆ ಸೃಷ್ಟಿಸುತ್ತಿರುವ ಆರ್ಥಿಕ ಅಸಮತೋಲನ ಮತ್ತು ಅಸಮಾನತೆಗಳನ್ನು ಬಿಂಬಿಸುತ್ತದೆ. ಉದ್ಯೋಗ, ನೌಕರಿ, ಭತ್ಯೆ, ವೇತನ ಮತ್ತು ಸೇವಾ ಸೌಲಭ್ಯಗಳಿಗಾಗಿ ಶ್ರಮಿಕ ವರ್ಗದ ಪರ ಹೋರಾಡುವ ಎಡಪಂಥೀಯ ಮತ್ತಿತರ ಸಂಘಟನೆಗಲು ಈ ಅಸಮಾನತೆಯ ನೆಲೆಗಳನ್ನು ಮತ್ತು ಅವುಗಳ ಆಳ ಅಗಲವನ್ನು ಗಂಭೀರ ಅಧ್ಯಯನ ಮಾಡಬೇಕಿದೆ. ನಿರುದ್ಯೋಗ ಪ್ರಮಾಣ ತಗ್ಗುತ್ತಿದ್ದರೂ, ಯುವ ಸಮೂಹಕ್ಕೆ ದೊರೆಯುತ್ತಿರುವ ಉದ್ಯೋಗಗಳು ಜೀವನ ನಿರ್ವಹಣೆಗೆ ಸಮರ್ಪಕವಾಗಿಲ್ಲ ಎನ್ನುವ ಸೂಕ್ಷ್ಮವನ್ನು ಎಡಪಕ್ಷಗಳು ಗಮನಿಸಬೇಕಿದೆ. ಈ ಅಸಮಾನತೆ ಹಾಗೂ ಅವಕಾಶಗಳ ಕೊರತೆಯೇ ಹೆಚ್ಚು ಯುವಕರನ್ನು ಕೋಮುವಾದದೆಡೆಗೆ, ಮತಾಂಧತೆಯೆಡೆಗೆ ಹಾಗೂ ರಾಜಕೀಯ ಲುಂಪನೀಕರಣದೆಡೆಗೆ (Lumpenisation) ದೂಡುತ್ತಿರುವುದನ್ನು ಗಂಭೀರವಾಗಿ ಪರಿಶೀಲಿಸಬೇಕಿದೆ. ಜಾತಿ-ಮತಗಳ ಕ್ರೋಢೀಕರಣದೊಂದಿಗೇ ಇದೇ ಜಾತೀಯ ಅಥವಾ ಮತಧಾರ್ಮಿಕ ನೆಲೆಗಳನ್ನು ಕಾಪಾಡಿಕೊಳ್ಳಲು ಸಂಘಟನೆಗಳು ಸೃಷ್ಟಿಸುವ ಕಾಲಾಳುಪಡೆಗಳಿಗೆ ಉದ್ಯೋಗವಂಚಿತ ಯುವಕರಷ್ಟೇ ಅಲ್ಲದೆ, ಸಮರ್ಪಕ ಆದಾಯ ಇಲ್ಲದ ಯುವಕರೂ ಬಲಿಯಾಗುವುದನ್ನು ಗಮನಿಸಬೇಕಿದೆ.

ರಾಜ್ಯದಲ್ಲಿ ರಾಜಕೀಯವಾಗಿ ಪ್ರಬಲವಾಗಿರದಿದ್ದರೂ ಶ್ರಮಿಕರ ಹೋರಾಟಗಳಿಗೆ ನಿರಂತರವಾಗಿ ಒತ್ತಾಸೆಯಾಗಿ ನಿಂತಿರುವ ಎಡಪಕ್ಷಗಳು ಹಾಗೂ ಎಡಪಂಥೀಯ ಕಾರ್ಮಿಕ ಸಂಘಟನೆಗಳು ಈ ಅಪಾರ ಶ್ರಮಿಕ ವೃಂದದಲ್ಲಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವತ್ತ ಯೋಚಿಸಬೇಕಿದೆ. ಮುಂಬರುವ ಚುನಾವಣೆಗಳಲ್ಲಿ ರಾಜ್ಯದಲ್ಲಿ ಒಂದು ಎಡಪಕ್ಷಗಳ ಸಮಾನ ವೇದಿಕೆಯ ಕೊರತೆ ಢಾಳಾಗಿ ಕಾಣುತ್ತಿದ್ದು, ಎಡಪಕ್ಷಗಳು ತಮ್ಮ ಹೋರಾಟಗಳನ್ನು ಏಕೀಕರಿಸುವ ಹಾಗೂ ನಿರಂತರ ಹೋರಾಟದಲ್ಲಿ ತೊಡಗಿರುವ ಲಕ್ಷಾಂತರ ಕಾರ್ಮಿಕರನ್ನು ಧೃವೀಕರಿಸುವ ನಿಟ್ಟಿನಲ್ಲಿ ಯೋಚನೆ ಮಾಡಿದ್ದಲ್ಲಿ, ಬಹುಶಃ ಮೇ 10ರ ಚುನಾವಣೆಗಳಲ್ಲಿ ಬಿಜೆಪಿ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಒಂದು ಸ್ಪಷ್ಟ ರಾಜಕೀಯ ಸಂದೇಶವನ್ನು ರವಾನಿಸಲು ಸಾಧ್ಯವಾಗುತ್ತಿತ್ತು. ಪರ್ಯಾಯ ರಾಜಕೀಯ ವೇದಿಕೆಯೂ ಇಲ್ಲದಿರುವ ಸಂದರ್ಭದಲ್ಲಿ ಸಮಾನ ವೇದಿಕೆಯೊಂದರ ಮೂಲಕ ಆಡಳಿತಾರೂಢ ಕಾರ್ಮಿಕ ವಿರೋಧಿ ಬಿಜೆಪಿ ಸರ್ಕಾರವನ್ನು ಸೋಲಿಸಲು ಒಂದು ಪರ್ಯಾಯ ರಾಜಕಾರಣಕ್ಕೆ ಶ್ರಮಿಕ ಲೋಕ ನೆರವಾಗಬಹುದಿತ್ತು. ಎಡಪಕ್ಷಗಳು, ದಲಿತ ಸಂಘಟನೆಗಳು ಹಾಗೂ ರೈತ ಸಂಘಟನೆಗಳು ಈ ವೇದಿಕೆಯ ರೂವಾರಿಗಳಾಗಬಹುದಿತ್ತು.

ಇಂತಹ ನಿರ್ಣಾಯಕ ಘಟ್ಟದಲ್ಲೂ ಒಂದು ನಿರ್ದಿಷ್ಟ ಕಾರ್ಯಸೂಚಿಯನ್ನು , ನೀಲನಕ್ಷೆಯನ್ನು ರೂಪಿಸಲಾಗದೆ ವಿಘಟಿತವಾಗಿರುವ ಎಡಪಕ್ಷಗಳು ಎಡವಿರುವುದೆಲ್ಲಿ  ? ಎಡಪಕ್ಷಗಳ ಐಕ್ಯತೆಯೊಂದೇ ಉತ್ತರವೇ ? ಯೋಚಿಸಬೇಕಿದೆ .

(ಮುಂದುವರೆಯುವುದು )

Tags: BJPBJP GovernmentCongress PartyEmployeeEmployeesemployeesprotsetemployment lossJDS KarnatakaKarnataka Politicsಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿಜೆಪಿ
Previous Post

ಸಿದ್ದರಾಮಯ್ಯ ಸೋಲಿಸೋ ಶತಪ್ರಯತ್ನಕ್ಕೆ ಕೈ ಹಾಕಿದ ಕಮಲ ಪಾಳಯ..

Next Post

ಪ್ರಧಾನಿ ನರೇಂದ್ರ ಮೋದಿ ನಾಲಾಯಕ್‌: ಪ್ರಿಯಾಂಕ್‌ ಖರ್ಗೆ ಕಿಡಿ

Related Posts

Top Story

ನಾನು ಯಾವುದೇ ಬಲ ಪ್ರದರ್ಶನ ಮಾಡುತ್ತಿಲ್ಲ, ಅದರ ಅವಶ್ಯಕತೆಯೂ ನನಗಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
December 12, 2025
0

“ನಾನು ಯಾವುದೇ ಬಲ ಪ್ರದರ್ಶನ ಮಾಡುತ್ತಿಲ್ಲ, ಅದರ ಅವಶ್ಯಕತೆಯೂ ನನಗಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ. ಬೆಳಗಾವಿಯ ಸರ್ಕಿಟ್ ಹೌಸ್ ಹಾಗೂ ಸುವರ್ಣ ವಿಧಾನಸೌಧದಲ್ಲಿ ಮಾಧ್ಯಮಗಳ...

Read moreDetails

ಬಗರ್ ಹುಕುಂ ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳು-ಭೂ ಮಾಫಿಯಾ ವಿರುದ್ಧ ಕ್ರಿಮಿನಲ್ ಪ್ರಕರಣ: ಕೃಷ್ಣ ಬೈರೇಗೌಡ

December 12, 2025

ಅಧಿವೇಶನದ ಬಳಿಕ ಡಿಕೆಶಿ ಸಿಎಂ ಆಗೇ ಆಗ್ತಾರೆ…!! ‌ ಯತೀಂದ್ರಗೆ ಕೌಂಟರ್‌ ನೀಡಿದ ಇಕ್ಬಾಲ್‌ ಹುಸೇನ್.

December 12, 2025

ಹೆಲಿಕಾಪ್ಟರ್, ಸ್ಪೆಷಲ್ ಫ್ಲೈಟ್ ಖರೀದಿ ಮಾಡಲ್ಲ, ಬಾಡಿಗೆ ಪಡೆಯಲು ತೀರ್ಮಾನ: ಡಿಸಿಎಂ ಡಿ.ಕೆ. ಶಿವಕುಮಾರ್

December 9, 2025

ಗಣ್ಯ ವ್ಯಕ್ತಿಗಳ ಪ್ರಯಾಣಕ್ಕೆ ಚಾಪರ್, ವಿಮಾನ ಬಾಡಿಗೆ ಕುರಿತ ಸಭೆ ನಡೆಸಿದ ಡಿಸಿಎಂ ಡಿಕೆ ಶಿವಕುಮಾರ್‌..

December 9, 2025
Next Post
ಪ್ರಧಾನಿ ನರೇಂದ್ರ ಮೋದಿ ನಾಲಾಯಕ್‌: ಪ್ರಿಯಾಂಕ್‌ ಖರ್ಗೆ ಕಿಡಿ

ಪ್ರಧಾನಿ ನರೇಂದ್ರ ಮೋದಿ ನಾಲಾಯಕ್‌: ಪ್ರಿಯಾಂಕ್‌ ಖರ್ಗೆ ಕಿಡಿ

Please login to join discussion

Recent News

“ಯಾವ ಇಕ್ಬಾಲ್ ಹುಸೇನ್ ಮಾತನ್ನು ನಂಬಬೇಡಿ, ಆತ ಚಟಕ್ಕೆ ಮಾತನಾಡುತ್ತಾನೆ”
Top Story

“ಯಾವ ಇಕ್ಬಾಲ್ ಹುಸೇನ್ ಮಾತನ್ನು ನಂಬಬೇಡಿ, ಆತ ಚಟಕ್ಕೆ ಮಾತನಾಡುತ್ತಾನೆ”

by ಪ್ರತಿಧ್ವನಿ
December 13, 2025
ಸಂಗೀತಗಾರ ರಿಕಿ ಕೇಜ್ ಮನೆಯಲ್ಲಿ ಕಳ್ಳತನ: ತಕ್ಷಣವೇ ಪ್ರತಿಕ್ರಿಯಿಸಿದ Zomato
Top Story

ಸಂಗೀತಗಾರ ರಿಕಿ ಕೇಜ್ ಮನೆಯಲ್ಲಿ ಕಳ್ಳತನ: ತಕ್ಷಣವೇ ಪ್ರತಿಕ್ರಿಯಿಸಿದ Zomato

by ಪ್ರತಿಧ್ವನಿ
December 13, 2025
ಬೆಂಗಳೂರಿಗೆ 2ನೇ ಏರ್‌ಪೋರ್ಟ್‌ ಖಚಿತ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಕರೆದ ಸರ್ಕಾರ
Top Story

ಬೆಂಗಳೂರಿಗೆ 2ನೇ ಏರ್‌ಪೋರ್ಟ್‌ ಖಚಿತ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಕರೆದ ಸರ್ಕಾರ

by ಪ್ರತಿಧ್ವನಿ
December 13, 2025
ಯಾರ ಬೆದರಿಕೆಗೂ ಬಗ್ಗಲ್ಲ: ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ ಖಜಾಂಚಿಗೆ ಡಿಕೆಶಿ ಎಚ್ಚರಿಕೆ
Top Story

ಯಾರ ಬೆದರಿಕೆಗೂ ಬಗ್ಗಲ್ಲ: ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ ಖಜಾಂಚಿಗೆ ಡಿಕೆಶಿ ಎಚ್ಚರಿಕೆ

by ಪ್ರತಿಧ್ವನಿ
December 13, 2025
ಮೇಕೆದಾಟು ಯೋಜನೆ ತಡೆಯಿರಿ: ಕ್ಯಾತೆ ತೆಗೆದ ಎಐಎಡಿಎಂಕೆ ಪಳನಿಸ್ವಾಮಿ
Top Story

ಮೇಕೆದಾಟು ಯೋಜನೆ ತಡೆಯಿರಿ: ಕ್ಯಾತೆ ತೆಗೆದ ಎಐಎಡಿಎಂಕೆ ಪಳನಿಸ್ವಾಮಿ

by ಪ್ರತಿಧ್ವನಿ
December 13, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

“ಯಾವ ಇಕ್ಬಾಲ್ ಹುಸೇನ್ ಮಾತನ್ನು ನಂಬಬೇಡಿ, ಆತ ಚಟಕ್ಕೆ ಮಾತನಾಡುತ್ತಾನೆ”

“ಯಾವ ಇಕ್ಬಾಲ್ ಹುಸೇನ್ ಮಾತನ್ನು ನಂಬಬೇಡಿ, ಆತ ಚಟಕ್ಕೆ ಮಾತನಾಡುತ್ತಾನೆ”

December 13, 2025
ಬ್ರಾಹ್ಮಣರ ಅಭಿವೃದ್ಧಿಗೆ, ಸಮಸ್ಯೆಗೆ ಕಾಂಗ್ರೆಸ್ ಸರ್ಕಾರ ಸದಾ ಸ್ಪಂದಿಸುತ್ತಿದೆ: ಸಚಿವ ದಿನೇಶ್ ಗುಂಡೂರಾವ್

ಬ್ರಾಹ್ಮಣರ ಅಭಿವೃದ್ಧಿಗೆ, ಸಮಸ್ಯೆಗೆ ಕಾಂಗ್ರೆಸ್ ಸರ್ಕಾರ ಸದಾ ಸ್ಪಂದಿಸುತ್ತಿದೆ: ಸಚಿವ ದಿನೇಶ್ ಗುಂಡೂರಾವ್

December 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada