ಬೆಳಗಾವಿ: ಕೃಷಿ ಸಚಿವನಾಗಿ ಅಧಿಕಾರ ವಹಿಸಿಕೊಂಡ ನಂತರ ನಿರಂತರವಾಗಿ ಅಧಿಕಾರಿಗಳ ಸಭೆ ಮಾಡುವುದರೊಂದಿಗೆ ರೈತರೊಂದಿಗೆ ಹಾಗೂ ಜನಪ್ರತಿನಿಧಿಗಳೊಂದಿಗೆ ವಿಮೆ ಪರಿಹಾರ ಸುಧಾರಣೆ ತರಲು ಚರ್ಚಿಸಿ ಆಯಾ ಹಂಗಾಮಿನ ವಿಮೆ ಪರಿಹಾರವನ್ನು ಅದೇ ವಾರ್ಷಿಕ ವರ್ಷದ ಅವಧಿಯಲ್ಲಿ ಒದಗಿಸುವಂತೆ ಕ್ರಮ ಜರುಗಿಸಲಾಗಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ(N. Chaluvaraya Swamy) ವಿಧಾನಸಭಾ ಅಧಿವೇಶನದಲ್ಲಿ(Session )ಉತ್ತರ ನೀಡಿದರು.

ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಕೃಷಿ ಸಚಿವರು,
ಕಳೆದ ಮೂರು ವರ್ಷಗಳಲ್ಲಿ ಬಿತ್ತನೆ ಮಾಡಿದ ಕೆಲವೇ ದಿನಗಳಲ್ಲಿ ಅಧಿಕ ಮಳೆಯಿಂದ ಶೇ 5೦ ಕ್ಕೂ ಹೆಚ್ಚು ಬೆಳೆ ಹಾನಿ ಆದ ಸಂದರ್ಭದಲ್ಲಿ ತಕ್ಷಣವೇ ರೈತರಿಗೆ ಮಿಡ್ ಸೀಸನ್ ಅಡ್ವೈಸರಿ ನಿಯಾಮಾವಳಿ ಪ್ರಕಾರ ವಿಮೆ ಪರಿಹಾರವನ್ನು ನೀಡಿ ರೈತರ ನೇರವಿಗೆ ನಮ್ಮ ಸರ್ಕಾರ ಧಾವಿಸಿದೆ ಎಂದರು.

ವಿಶೇಷವಾಗಿ ಕಪ್ & ಕ್ಯಾಪ್ ಮಾದರಿಯಲ್ಲಿ ವಿಮೆ ಪರಿಹಾರವನ್ನು ನಿರ್ಧರಿಸಲು ಕ್ತಮ ಕೈಕೊಂಡಿರುವುದರಿಂದ ವಿಮೆ ಪರಿಹಾರ ವಿತರಣೆಯಲ್ಲಿ ಸುಧಾರಣೆಯನ್ನು ತರಲಾಗಿದೆ. ಈ ಕುರಿತು ವಿಮಾ ಕಂಪನಿ ಅಧಿಕಾರಿಗಳೊಂದಿಗೆ ಹಲವು ಬಾರಿ ಸಭೆ ನಡೆಸಿರುವುದಲ್ಲದೇ, ಕ್ರಾಪ್ ಕಟಿಂಗ್ ಎಕ್ಸಪರಿಮೇಟ್ ಸರಿಯಾಗಿ ಹಾಗೂ ವೈಜ್ಞಾನಿಕವಾಗಿ ನಡೆಸಬೇಕೆಂದು ಸೂಚನೆ ನೀಡಲಾಗಿದ್ದರ ಪರಿಣಾಮ ರಾಜ್ಯದಲ್ಲಿ ಬೆಳೆ ವಿಮೆ ಯೋಜನೆಯನ್ನು ಅತ್ಯಂತ ಯಶ್ವಸಿಯಾಗಿ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.

ಈ ಮೂರು ವರ್ಷಗಳಲ್ಲಿ ಎಲ್ಲಾ ಹಂಗಾಮುಗಳಲ್ಲಿ ರಾಜ್ಯದಲ್ಲಿ ಒಟ್ಟು 73 ಲಕ್ಷ ರೈತರು ವಿಮೆ ಹಣ ಪಾವತಿಸಿ ನೊಂದಾಯಿಸಿಕೊಂಡವರ ಪೈಕಿ ಶೇ ಅಂದಾಜು 60% ರಷ್ಟು ರೈತರು, 43 ಲಕ್ಷ ನೊಂದಾಯಿಸಿಕೊಂಡ ರೈತರಿಗೆ ಒಟ್ಟು 5534 ಕೋಟಿ ರೂಪಾಯಿಗಳ ವಿಮೆ ಪರಹಾರವನ್ನು ನೀಡಿ ರೈತರ ಸಂಕಷ್ಟದ ಸಮಯದಲ್ಲಿ ನಮ್ಮ ಸರ್ಕಾರ ರೈತರಿಗೆ ವಿಮೆ ಪರಿಹಾರ ನೀಡುವಲ್ಲಿ ಇತಿಹಾಸ ನಿರ್ಮಿಸಿದೆ ಎಂದು ಚಲುವರಾಯಸ್ವಾಮಿಯವರು ಹೇಳಿದ್ದಾರೆ.

ಇನ್ನು ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ, ಕಲಬುರ್ಗಿ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 2022- 23 ನೇ ಸಾಲಿನಿಂದ 2025-26 ನೇ ಸಾಲಿನ ಮುಂಗಾರು ಹಂಗಾಮಿನವರೆಗೆ ಒಟ್ಟು 23782 ರೈತರು 31338.13 ಹೆಕ್ಟೇರ್ ವಿಸ್ತೀರ್ಣದಲ್ಲಿ ಬೆಳೆ ವಿಮೆಗೆ ನೊಂದಾಯಿಸಿಕೊಂಡಿದ್ದು, ಇಲ್ಲಿಯವರೆಗೆ 5 ಲಕ್ಷದ 5 ಸಾವಿರ ರೈತರಿಗೆ 990 ಕೋಟಿ ರೂಪಾಯಿ ಬೆಳೆ ವಿಮಾ ಪರಿಹಾರ ಹಣ ನೀಡಲಾಗಿದೆ ಎಂದು ಕೃಷಿ ಸಚಿವರು ತಿಳಿಸಿದರು.

ಸಚಿವರಿಗೆ ಪ್ರಶ್ನೆ ಕೇಳಿದ ಶಾಸಕ ಅಲ್ಲಮಪ್ರಭು ಪಾಟೀಲ್ ಸಹ, ಸಚಿವರ ಹಾಗೂ ಸರ್ಕಾರದ ಬೆಳೆ ವಿಮೆ ಪರಿಹಾರ ಸಾಧನೆಯ ಮಾಹಿತಿ ಪಡೆದು ಕೃಷಿ ಸಚಿವ ಚಲುವರಾಯಸ್ವಾಮಿಯವರಿಗೆ ಸದನದಲ್ಲಿ ಅಭಿನಂದನೆ ಸಲ್ಲಿಸಿದರು..












