
ತಲಕಾವೇರಿ ಹಾಗೂ ಭಾಗಮಂಡಲ ಕ್ಷೇತ್ರದಲ್ಲಿ ತುಲ ಸಂಕ್ರಮಣ ಜಾತ್ರೆ ಸಂದರ್ಭ ಸಂಗ್ರಹವಾಗಿದ್ದ ದೇವರ ಬಂಡಾರವನ್ನು ಇಂದು ತಲಕಾವೇರಿ ಭಾಗಮಂಡಲ ವ್ಯವಸ್ಥಾಪನ ಸಮಿತಿಯ ಕಾರ್ಯನಿರ್ವಣಧಿಕಾರಿಯಾದ ಚಂದ್ರಶೇಖರ್ ರವರು, ಎರಡು ಕ್ಷೇತ್ರದ ತಕ್ಕ ಮುಖ್ಯಸ್ಥರ ಉಪಸ್ಥಿತಿಯಲ್ಲಿ ಬಂಡಾರ ಪೆಟ್ಟಿಗೆಯಲ್ಲಿದ್ದ ಹಣವನ್ನು ತೆಗೆದು ಲೆಕ್ಕ ಹಾಕುವ ಪ್ರಕ್ರಿಯೆಗೆ ಇಂದು ಬೆಳಿಗ್ಗೆ ಚಾಲನೆ ನೀಡಿದ್ದಾರೆ.
ಪ್ರತಿ ವರ್ಷ ತೀರ್ಥೋದ್ಭವ ಕಳೆದು ಎಂಟು ಹತ್ತು ದಿನಗಳ ನಂತರ ಬಂಡಾರ ಲೆಕ್ಕ ಹಾಕುವುದು ಸಂಪ್ರದಾಯ. ಆದರೆ ಮಂಗಳವಾರ ಶುಕ್ರವಾರ ಹೊರತುಪಡಿಸಿ ಇದುವರೆಗೆ ಈ ಪ್ರಕ್ರಿಯೆ ನಡೆಯುತ್ತಿತ್ತು. ಆದರೆ ಇಂದು ಮಂಗಳವಾರ ದಿನ ಭಂಡಾರವನ್ನು ತೆಗೆದಿರುವ ಬಗೆ ಹಲವು ಭಕ್ತಾದಿಗಳು ಆಕ್ಷೇಪ ವ್ಯಕ್ತಪಡಿಸಿ ದೂರವಾಣಿ ಮೂಲಕ ಚಾನೆಲ್ ಕೂರ್ಗ್ ಗೆ ಮಾಹಿತಿ ನೀಡಿದ್ದಾರೆ.
ಇದುವರೆಗೂ ಕೂಡ ಮಂಗಳವಾರ, ಶುಕ್ರವಾರ ಬಂಡಾರ ತೆಗೆಯುವುದು ರೂಢಿಯಲ್ಲಿ ಇರಲಿಲ್ಲ. ಕಠಿಣ ದಿನವಾದ ಮಂಗಳವಾರ ತೆಗೆದರೆ, ನಾಡಿಗೆ ಕಂಟಕವಾಗುತ್ತದೆ ಎಂಬ ಕಾರಣಕ್ಕಾಗಿ ಈ ಆಚರಣೆ ಇರಲಿಲ್ಲ.
ಈ ಬಗೆ ಹಲವರು ತಲಕಾವೇರಿ ತಕ್ಕರಾದ ಕೋಡಿ ಮೋಟಯ್ಯನವರನ್ನು ದೂರವಾಣಿ ಮೂಲಕ ಬೆಳಿಗ್ಗೆ ಸಂಪರ್ಕಿಸಿದಾಗ, ಮಂಗಳವಾರ ಬಂಡಾರ ತೆಗೆಯುವುದರಲ್ಲಿ ತಪ್ಪಿಲ್ಲ. ಹಿಂದೆಯು ಕೂಡ ನಾವು ತೆಗೆದಿದ್ದೇವೆ. ಚಿನ್ನಾಭರಣ ಮಾತ್ರ ಮಂಗಳವಾರ ತೆಗೆಯುವುದಿಲ್ಲ, ಇದರಿಂದ ಯಾವ ತೊಂದರೆಯೂ ಇಲ್ಲ ಎಂದು ಹೇಳಿದ್ದಾರೆ. ಭಂಡಾರದಲ್ಲಿದ್ದ ಹಣವು ನಿಧಿಯೇ, ಚಿನ್ನಾಭರಣವೂ ಕೂಡ ನಿಧಿಯೇ ಹಾಗಿದ್ದಾಗ ಬಂಡಾರ ತೆಗೆಯಲು ಮಂಗಳವಾರ ಸೂಕ್ತವಾಗುವುದು ಹೇಗೆ ಎಂಬುದು ಸಂಪ್ರದಾಯವನ್ನು ನಂಬಿರುವವರ ಪ್ರಶ್ನೆಯಾಗಿದೆ.