ರಾಜ್ಯಾದ್ಯಂತ ಇಂದಿನಿಂದ SSLC ಪರೀಕ್ಷೆ ಆರಂಭವಾಗಿದ್ದು ಏಪ್ರಿಲ್ 11ರವರೆಗೂ ನಡೆಯಲಿದೆ. ವಿದ್ಯಾರ್ಥಿಗಳು ಕೂಡ ಉತ್ಸಾಹ ಹಾಗು ಆತಂಕದಿಂದಲೇ ಪರೀಕ್ಷೆಗಳನ್ನು ಎದುರಿಸಿದ್ದಾರೆ. ಪರೀಕ್ಷೆಯ ಮೊದಲನೇ ದಿನ ಆಗಿದ್ದರಿಂದ ಒಂದೆಡೆ ಧೈರ್ಯ ತುಂಬಲು ಶಿಕ್ಷಣ ಸಚಿವರೇ ಖುದ್ದು ಶಾಲೆಗೆ ಭೇಟಿ ನೀಡಿದ್ದರೆ, ಮತ್ತೊಂದೆಡೆ ಹಿಜಾಬ್‌ಗಿಂತ ಶಿಕ್ಷಣ ಮುಖ್ಯ ಅಂತ ಮುಸ್ಲಿಂ ಸಮುದಾಯದ ತಾಯಿಯೊಬ್ರು ಕಿವಿಮಾತು ಹೇಳಿದ್ದಾರೆ.
ಶಾಲೆಗೆ ಭೇಟಿ ನೀಡಿದ ಶಿಕ್ಷಣ ಸಚಿವ ಬಿ ಸಿ ನಾಗೇಶ್.!
ಕೋವಿಡ್ ನಂತರ ಇದೇ ಪ್ರಪ್ರಥಮ ಬಾರಿಗೆ ಸಾಧಾರಣ ರೀತಿಯಲ್ಲೇ SSLC ಪರೀಕ್ಷೆ ನಡೆಸಲಾಗಿದೆ. 8ನೇ ಹಾಗು 9ನೇ ತರಗತಿಗಳನ್ನು ಆನ್‌ಲೈನ್‌ನಲ್ಲೇ ಅಟೆಂಡ್ ಆಗಿ ಪಾಸ್ ಆಗಿದ್ದ ಲಕ್ಷಾಂತರ ವಿದ್ಯಾರ್ಥಿಗಳು ದೈಹಿಕವಾಗಿ SSLC ಪರೀಕ್ಷೆ ಬರೆದಿದ್ದಾರೆ. ಮೊದಲೇ ತಡವಾಗಿ ಆರಂಭವಾಗಿದ್ದ ಶೈಕ್ಷಣಿಕ ವರ್ಷ ಒಂದೆಡೆಯಾದ್ರೆ, ಮತ್ತೊಂದೆಡೆ ಸಿಲೆಬಸ್ ಬೇಗ ಓದಬೇಕು ಎಂಬ ಒತ್ತಡ ವಿದ್ಯಾರ್ಥಿಗಳ ಮೇಲಿತ್ತು. ಪಠ್ಯದಲ್ಲಿನ ಶೇ.20ರಷ್ಟು ಭಾಗವನ್ನು ಕಡಿತಗೊಳಿಸಲಾಗಿದ್ರೂ ಪರೀಕ್ಷೆ ಹೇಗಿರುತ್ತೆ ಎಂಬ ಗೊಂದಲ ವಿದ್ಯಾರ್ಥಿಗಳಿಗಿತ್ತು. ಅವರೆಲ್ಲರಿಗೂ ಧೈರ್ಯ ತುಂಬಲು ಖುದ್ದು ಶಿಕ್ಷಣ ಸಚಿವ ಬಿಸಿ ನಾಗೇಶ್ ಇಂದು ಶಾಲೆಗೆ ಭೇಟಿ ನೀಡಿದ್ದರು. ಅಗ್ರಹಾರ ದಾಸರಹಳ್ಳಿ ಬಳಿಯಿರೋ ಸರ್ಕಾರಿ ಪ್ರೌಢ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಹೂ ನೀಡಿ ಶುಭ ಕೋರಿದರು.
ಹಿಜಾಬ್‌ಗಿಂತಲೂ ಪರೀಕ್ಷೆ ಹಾಗು ಶಿಕ್ಷಣವೇ ಮುಖ್ಯ.!
ಮತ್ತೊಂದೆಡೆ ಕೆಲ ತಿಂಗಳ ಹಿಂದಷ್ಟೇ ರಾಜ್ಯಾದ್ಯಂತ ಹಿಜಾಬ್ ವಿಚಾರವಾಗಿ ಗೊಂದಲಮಯ ವಾತಾವರಣ ಸೃಷ್ಟಿಯಾಗಿತ್ತು. ಹೈಕೋರ್ಟ್ ಮೆಟ್ಟಿಲೇರಿದ್ದ ಈ ಪ್ರಕರಣದಲ್ಲಿ, ತರಗತಿಯಲ್ಲಿ ಹಿಜಾಬ್ ಧಾರಣೆ ಅತ್ಯವಶ್ಯವಲ್ಲ ಎಂಬ ತೀರ್ಪನ್ನು ಹೈಕೋರ್ಟ್ ಎತ್ತಿಹಿಡಿದಿತ್ತು. ಶಿಕ್ಷಣ ಇಲಾಖೆಯೂ ಕೂಡ ಪರೀಕ್ಷಾ ಸಂದರ್ಭದಲ್ಲಿ ಈ ಆದೇಶವನ್ನು ಪಾಲಿಸಬೇಕು ಅಂತ ಸುತ್ತೋಲೆ ಹೊರಡಿಸಿತ್ತು. ಶಾಲೆಯ ಆವರಣದ ಒಳಗೆ ಹಿಜಾಬ್ ಧರಿಸಿ ಬಂದಿದ್ದ ವಿದ್ಯಾರ್ಥಿನಿಯರು ವಿಶೇಷ ಕೊಠಡಿಯಲ್ಲಿ ಹಿಜಾಬ್ ತೆಗೆದು ಪರೀಕ್ಷೆಗಳಿಗೆ ತೆರಳಿದರು. ಇದೇ ಸಂದರ್ಭದಲ್ಲಿ ಧರ್ಮ ಪಾಲನೆ ಎಷ್ಟು ಮುಖ್ಯವೋ ಅದಕ್ಕಿಂತ ಶಿಕ್ಷಣ ಹೆಚ್ಚು ಮುಖ್ಯ ಎಂದಿದ್ರು ಮುಸ್ಲಿಂ ಸಮುದಾಯಕ್ಕೆ ಸೇರಿದ ತಾಯಿಯೊಬ್ಬರು.

ಹಿಜಾಬ್ ತೆಗೆಯಲು ಒಪ್ಪದ ಮೇಲ್ವಿಚಾರಕಿ ಅಮಾನತು.!
ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರ ಪೋಷಕರು ಹೈಕೋರ್ಟ್ ಆದೇಶಕ್ಕೆ ತಲೆಬಾಗಿದ್ರು. ಅದರಂತೆ ಮುಸ್ಲಿಂ ಹೆಣ್ಣು ಮಕ್ಕಳು ಕೂಡ ಹಿಜಾಬ್ ತೆಗೆದೇ ಪರೀಕ್ಷೆಯನ್ನು ಎದುರಿಸಿದರು. ನಗರದ ಯಾವ ಕೇಂದ್ರದಲ್ಲಿಯೂ ಹಿಜಾಬ್ ವಿಚಾರಕ್ಕೆ ಗೊಂದಲ ಆಗ್ತಿಲ್ಲ ಎಂದುಕೊಳ್ಳುವಷ್ಟರಲ್ಲೇ ಹಿಜಾಬ್ ಸದ್ದು ಮಾಡಿತ್ತು. ನಗರದ ಮಂಜುನಾಥನಗರ ಶಿವನಗರದಲ್ಲಿರೋ ಸಿದ್ದಗಂಗಾ ಶಾಲೆಯಲ್ಲಿ ಪರೀಕ್ಷಾ ಕೊಠಡಿಯ ಮೇಲ್ವಿಚಾರಕಿಯಿಂದಲೇ ಹಿಜಾಬ್ ಗೊಂದಲ ಶುರುವಾಗಿತ್ತು. ಪರೀಕ್ಷೆ ಆರಂಭ ಆಗೋದು 10.30ಕ್ಕೆ ಅಲ್ಲಿಯವರೆಗೂ ನಾನು ಹಿಜಾಬ್ ತೆಗೆಯೋದಿಲ್ಲ ಅಂತ ಮೇಲ್ವಿಚಾರಕಿ ನೂರ್ ಫಾತಿಮಾ ಹಿರಿಯ ಅಧಿಕಾರಿಗಳ ಜೊತೆ ವಾದ ಮಾಡಿದ್ದಾರೆ.
ಪರೀಕ್ಷೆ ಅಂದುಕೊಂಡಷ್ಟು ಕಷ್ಟವಿರಲಿಲ್ಲ, ಆದರೆ ಮತ್ತಷ್ಟು ಸಮಯ ಬೇಕಿತ್ತು.!
ಪರೀಕ್ಷಾ ಕೇಂದ್ರಕ್ಕೆ ಭಯದಿಂದಲೇ ಹೋಗಿದ್ದ ವಿದ್ಯಾರ್ಥಿಗಳೇ ಪರೀಕ್ಷೆಯ ನಂತರ ನಗುಮೊಗದಿಂದ ಹೊರಬಂದಿದ್ದರು. ಅಂದುಕೊಂಡಷ್ಟರ ಮಟ್ಟಿಗೆ ಪರೀಕ್ಷೆ ಕಷ್ಟಕರವಾಗಿರಲಿಲ್ಲ. ಕಡಿತಗೊಂಡ ಸಿಲಬಸ್‌ನಿಂದ ಒಂದೂ ಪ್ರಶ್ನೆಯೂ ಬಂದಿಲ್ಲ. ಆದ್ರೆ, ಇನ್ನೊಂದು 15 ನಿಮಿಷ ಹೆಚ್ಚಿನ ಸಮಯ ಬೇಕಿತ್ತು. ಜೊತೆಗೆ ಇಷ್ಟು ಈಸಿ ಇದ್ದ ಪೇಪರ್ ಯಾರು ಬೇಕಾದ್ರೂ ಪಾಸ್ ಆಗಬಹುದು ಎಂದರು.
ಮೊದಲ ದಿನದ ಪರೀಕ್ಷೆಗೇ 20 ಸಾವಿರಕ್ಕೂ ಅಧಿಕ ಮಂದಿ ಗೈರು.!
ಇನ್ನು, ಈ ಸಾಲಿನ ಪರೀಕ್ಷೆಗೆ ರಾಜ್ಯಾದ್ಯಂತ ಒಟ್ಟೂ 8,73,846 ವಿದ್ಯಾರ್ಥಿಗಳು SSLC ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಅವರ ಪೈಕಿ 4,52,732 ಬಾಲಕರು, 4,21,110 ಬಾಲಕಿಯರು ಹಾಗು 4 ತೃತೀಯ ಲಿಂಗಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಮೊದಲನೇ ದಿನವಾದ ಇಂದು ಪ್ರಥಮ ಭಾಷೆಯ ಪರೀಕ್ಷೆಯನ್ನು ನಡೆಸಲಾಯಿತು. ಆದರೆ, ಮೊದಲನೇ ದಿನವೇ ಕಾರಣಾಂತರಗಳಿಂದ ಸುಮಾರು 20994 ವಿದ್ಯಾರ್ಥಿಗಳು ಗೈರಾಗಿದ್ರು ಎಂಬ ಮಾಹಿತಿ ಲಭಿಸಿದೆ. ಒಟ್ನಲ್ಲಿ, ಸರಾಗವಾಗಿ ನಡೆಯುತ್ತಿರೋ ಪರೀಕ್ಷೆಯ ಮೇಲೆ ಯಾರ ಕೆಂಗಣ್ಣೂ ಬೀಳದಿರಲಿ ಅನ್ನೋದು ಪೋಷಕರ ಅಭಿಪ್ರಾಯವಾಗಿದೆ.












