ಸಮಾಜ ಕಲ್ಯಾಣ ಖಾತೆ ಸಚಿವ ಬಿ.ಶ್ರೀರಾಮುಲು ಅವರ ಪಿಎ ರಾಜಣ್ಣ ಅವರನ್ನ ಪೊಲೀಸರು ನೆನ್ನೆ ಬಂಧಿಸಿದ್ದರು. ಇಲಾಖೆಯಲ್ಲಿ ಕೆಲಸ ಕೊಡಿಸುತ್ತೇನೆ ಎಂಬುದು ಸೇರಿದಂತೆ ವಿವಿಧ ಕಾರಣಗಳಿಂದಾಗಿ ಅನೇಕರ ಬಳಿ ಕೋಟಿ ಕೋಟಿ ಹಣವನ್ನು ತೆಗೆದುಕೊಂಡು ಮೋಸ ಮಾಡಿದ ಆರೋಪ ಮೇಲೆ ರಾಮುಲು ಪಿಎ ಎನ್ನಲಾಗಿದ ರಾಜಣ್ಣನನ್ನು ಸಿಸಿಬಿ ಪೊಲೀಸರು ನಿನ್ನೆ ಬಂಧಿಸಿದ್ದರು.
ಅಲ್ಲದೇ ಹತ್ತಾರು ಮಂದಿಯಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿರುವ ಆರೋಪ ಸಂಬಂಧ ಎಫ್ಐಆರ್ ಕೂಡ ದಾಖಲಾಗಿತ್ತು. ಇದೀಗ ಪೊಲೀಸರು ಅವರನ್ನ ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ ನಂತರ ಇವತ್ತು ಅವರನ್ನು ಬಿಡುಗಡೆ ಮಾಡಿದ್ದಾರೆ.
ಏನಿದು ಶ್ರೀರಾಮುಲು ಪಿಎ ಅವಾಂತರ?
ಕೆಲಸ ಕೊಡಿಸುತ್ತೇನೆ, ಟ್ರಾನ್ಸ್ಫರ್ ಮಾಡಿಸಿಕೊಡುತ್ತೇನೆ ಎಂದು ವಂಚಿಸಿದ್ದಾರೆ ಅನ್ನೋ ಆರೋಪದ ಮೇಲೆ ಸಚಿವ ಶ್ರೀರಾಮುಲು ಅವರ ಪಿಎ ರಾಜಣ್ಣನನ್ನು ನೆನ್ನೆ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಸಿಸಿಬಿ ವಿಚಾರಣೆ ವೇಳೆ ರಾಜಣ್ಣನ ಪೋನ್ ಅನ್ನು ವಶಪಡಿಸಿಕೊಂಡಿದ್ದು ಅದರಲ್ಲಿ ಮೂರು ಮುಖ್ಯವಾದ ಆಡಿಯೋ ಸಿಕ್ಕಿದೆ ಎನ್ನಲಾಗಿದೆ. ಈಗ ಈ ಆಡಿಯೋ ಗಳು ಎಲ್ಲೆಡೆ ಹರಿದಾಡುತ್ತಿದೆ.
ರಾಜಣ್ಣ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರ ಹೆಸರಲ್ಲಿಯೂ ಕೂಡ ವಂಚನೆ ಮಾಡಿದ್ದಾರೆ ಅನ್ನೋ ಆರೋಪ ಕೇಳಿಬಂದಿದ್ದು ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಈ ಪ್ರಕರಣದಲ್ಲಿ ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ ಹೆಸರು ಕೇಳಿ ಬಂದ ತಕ್ಷಣ ರಾಜಣ್ಣನ ವಿರುದ್ಧ ದೂರ ಸಲ್ಲಿಸಿ ತಮ್ಮ ಟ್ವೀಟರ್ ಖಾತೆಯಲ್ಲಿ ಈ ಪ್ರಕರಣದ ಕುರಿತು ವಿಜಯೇಂದ್ರ ಟ್ವೀಟ್ ಕೂಡ ಮಾಡಿದ್ದಾರೆ.
ವಿಜಯೇಂದ್ರ ಟ್ವೀಟ್ ಸಾರಾಂಶ: ಸಾರ್ವಜನಿಕ ಕ್ಷೇತ್ರದಲ್ಲಿರುವಾಗ ನೆರವು ಕೇಳುವವರನ್ನು ಅನುಮಾನಿಸಿ ನೋಡಲಾಗದು. ಹಾಗೆಂದು ಎಚ್ಚರ ತಪ್ಪಲಾಗದು. ಹೆಸರು ದುರುಪಯೋಗಪಡಿಸಿಕೊಂಡು ಕಳಂಕ ಹಚ್ಚುವ ವಂಚಕರಿಂದ ತೊಂದರೆ ತುಸು ಹೆಚ್ಚಾಗಿಯೇ ಬಾಧಿಸುತ್ತಿದೆ. ಇದು ವಿರೋಧಿಗಳಿಗೆ ಅಪಪ್ರಚಾರದ ಸರಕಾಗಿಯೂ ಬಳಕೆಯಾಗುತ್ತಿದೆ.
ಸಾರ್ವಜನಿಕರು ಮೋಸ ಹೋಗಬಾರದೆಂಬ ಹಿತದೃಷ್ಟಿಯಿಂದ ಹಾಗೂ ನನ್ನ ವ್ಯಕ್ತಿತ್ವ ರಕ್ಷಣೆಗಾಗಿ, ಅನಿವಾರ್ಯವಾಗಿ ನೀಡಿದ ದೂರಿನ ಮೇಲೆ ಪೋಲಿಸರು ಕ್ರಮ ತೆಗೆದುಕೊಂಡಿದ್ದಾರೆ. ನನ್ನನೂ ಸೇರಿದಂತೆ ಸಾರ್ವಜನಿಕ ಕ್ಷೇತ್ರದಲ್ಲಿರುವ ಮುಖಂಡರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವ, ವಂಚಿಸುವವರ ಬಗ್ಗೆ ಸಮಾಜ ಎಚ್ಚರದಿಂದರಬೇಕೆಂದು ವಿನಂತಿಸುವೆ.
ಸಾರ್ವಜನಿಕರು ಮೋಸ ಹೋಗಬಾರದೆಂಬ ಹಿತದೃಷ್ಟಿಯಿಂದ ಹಾಗೂ ನನ್ನ ವ್ಯಕ್ತಿತ್ವ ರಕ್ಷಣೆಗಾಗಿ, ಅನಿವಾರ್ಯವಾಗಿ ನೀಡಿದ ದೂರಿನ ಮೇಲೆ ಪೋಲಿಸರು ಕ್ರಮ ತೆಗೆದುಕೊಂಡಿದ್ದಾರೆ.
ನನ್ನನೂ ಸೇರಿದಂತೆ ಸಾರ್ವಜನಿಕ ಕ್ಷೇತ್ರದಲ್ಲಿರುವ ಮುಖಂಡರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವ, ವಂಚಿಸುವವರ ಬಗ್ಗೆ ಸಮಾಜ ಎಚ್ಚರದಿಂದರಬೇಕೆಂದು ವಿನಂತಿಸುವೆ.
ತನ್ನ ಪಿಎ ರಾಜಣ್ಣ ವಿರುದ್ಧ ದೂರು ನೀಡಿದ ವಿಜಯೇಂದ್ರ ವಿರುದ್ಧ ಶ್ರೀರಾಮುಲು ಅಸಮಾಧಾನ.
ನಿಮ್ಮ ಸರ್ಕಾರದಲ್ಲಿ ಸಮನ್ವಯ ಇಲ್ಲ, ರಾಮುಲು ಅಂತ ಹಿರಿಯ ನಾಯಕರಿಗೆ ಅವಮಾನ ಆಗ್ತಿದೆ ಅಂದರೆ ನಿಮಗೆ ಬೇಸರವಾಗುವುದಿಲ್ಲವೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸದ ಅವರು, ನೀವು ಹೇಳುತ್ತಿರುವ ಮಾತು ಸಮಂಜಸ ಇದೆ ನಾನು ಇಲ್ಲ ಅಂತ ಹೇಳಲ್ಲ, ಆದರೆ ಇದನ್ನು ನಾನು ಬಗೆಹರಿಸುತ್ತಿದ್ದೆ ಆದರೆ ದೂರಿ ನೀಡಿದ್ದಾರೆ ಕಾನೂನು ಪ್ರಕಾರ ನಡೆಯಲಿ ಇದು ಮಿಸ್ ಕಮ್ಯೂನಿಕೇಶನ್ ಆಗಿದೆ ಅನ್ನುವ ಮೂಲಕ ತಮ್ಮ ಬೇಸರನ್ನು ವ್ಯಕ್ತಪಡಿಸಿದ್ದಾರೆ
ಹೀಗೆ ಮಾತನ್ನು ಮುಂದುವರೆಸಿದ ಅವರು, ರಾಜಣ್ಣ ನನ್ನ ಪಿಎ ಅಲ್ಲ, ನನ್ನ ಹತ್ತಿರ ಕೆಲಸ ಮಾಡ್ತಿದ್ದ. ರಾಜಣ್ಣ ನನಗೆ ಗೊತ್ತಿರುವ ಹುಡುಗ ಅಷ್ಟೇ ಎಂದು ಹೇಳಿದ್ದಾರೆ. ಯಾರ ಹೆಸರನ್ನೂ ದುರ್ಬಳಕೆ ಮಾಡಿಕೊಳ್ಳಬಾರದು. ಈ ಸಂಬಂಧ ವಿಜಯೇಂದ್ರ ನನ್ನ ಗಮನಕ್ಕೆ ತಂದಿಲ್ಲ. ಹೀಗಾಗಿ ನಾನು ವಿಜಯೇಂದ್ರ ಜತೆ ಚರ್ಚಿಸುತ್ತೇನೆ. ಪ್ರಕರಣ ಸಂಬಂಧ ಎಲ್ಲೋ ಮಿಸ್ ಕಮ್ಯೂನಿಕೇಷನ್ ಆಗಿದೆ. ತನಿಖೆಯ ನಂತರ ಸತ್ಯಾಂಶ ಬಯಲಾಗುತ್ತದೆ. ಕಾನೂನು ರೀತಿಯಲ್ಲಿ ಕ್ರಮ ಆಗಲಿ ಎಂದು ವಿಧಾನಸೌಧದಲ್ಲಿ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.
ಆಡಳಿತ ಸರ್ಕಾರದ ಇಂತಹ ಬೆಳವಣಿನ್ನು ಕಂಡ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ;
ಲಂಚ ತೆಗೆದುಕೊಂಡು ಕೆಲಸ ಮಾಡುತ್ತಾರೆ ಅಂದರೆ ಹೇಗೆ? ಲಂಚ ಪಡೆದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ರಾಮುಲು ಪಿಎ ರಾಜಣ್ಣ3 ಕೋಟಿ ಹಣಕ್ಕೆ ಡೀಲ್ ಕುದುರಿಸಿದ್ದರು. ಈ ಬಗ್ಗೆ, 3 ಸ್ಫೋಟಕ ಆಡಿಯೋ ಆಧರಿಸಿ ಸಿಸಿಬಿಯಿಂದ ತನಿಖೆ ನಡೆಸಲಾಗುತ್ತಿದೆ. ಎಂದು ಶ್ರೀರಾಮುಲು ಪಿಎ ರಾಜಣ್ಣ ಮಾತನಾಡಿರುವ 3 ಆಡಿಯೋ ಬಿಡುಗಡೆಯಾಗಿರುವ ಬಗ್ಗೆ ಸಿದ್ದರಾಮಯ್ಯ ಟೀಕೆ ಮಾಡಿದ್ದಾರೆ.
ಜೊತೆಗೆ ಸಿದ್ದರಾಮಯ್ಯ ಅವರ ಟ್ವೀಟರ್ ಖಾತೆಯಲ್ಲಿ ಈ ಕುರಿತು ಬರೆದುಕೊಂಡಿದ್ದು, ಲಂಚ ಪಡೆದ ಸಿಬ್ಬಂದಿಯನ್ನು ಬಂಧಿಸಿದರಷ್ಟೇ ಸಾಲದು, ಆತ ಯಾರ ಪರವಾಗಿ ಲಂಚ ಪಡೆದಿದ್ದಾನೆ ಮತ್ತು ಪಡೆದಿರುವ ಲಂಚವನ್ನು ಯಾರಿಗೆ ಕೊಟ್ಟಿದ್ದಾನೆ ಎಂಬ ಬಗ್ಗೆಯೂ ತನಿಖೆಯಾಗಬೇಕು ಎಂದು ಒತ್ತಾಯಿದ್ದಾರೆ.
ಈ ಲಂಚ ಹಗರಣದಲ್ಲಿ ಸಚಿವ ಶ್ರೀರಾಮುಲು ಮತ್ತು ಮುಖ್ಯಮಂತ್ರಿಗಳ ಮಗ ವಿಜಯೇಂದ್ರ ಹೆಸರೂ ತಳುಕು ಹಾಕಿಕೊಂಡಿರುವುದರಿಂದ ಅವರಿಬ್ಬರ ಪಾತ್ರದ ಬಗ್ಗೆಯೂ ತನಿಖೆ ನಡೆದರೆ ಅಸಲಿ ಸತ್ಯ ಹೊರಬರಬಹುದು ಎಂದು ಟ್ವೀಟ್ ಮಾಡಿ ಒತ್ತಾಯಿದ್ದಾರೆ.
ಈ ಪ್ರಕರಣದ ಕುರಿತು ಕೆಪಿಸಿಸಿ ಅಧ್ಯಕ್ಷ ಡಿಕೆ. ಶಿವಕುಮಾರ್ ಪ್ರತಿಕ್ರಿಯೆ:
ಆಪ್ತರ ವ್ಯವಹಾರಕ್ಕೆ ನಾನು ಮಧ್ಯಪ್ರವೇಶ ಮಾಡುವುದಿಲ್ಲ. ಇವರ ವಿಚಾರ ಮಾತಾಡೋದು ನನ್ನ ಲೆವೆಲ್ ಅಲ್ಲ ಎಂದು ಬೆಂಗಳೂರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ರಾಮುಲು, ವಿಜಯೇಂದ್ರ ಬಗ್ಗೆ ಹೇಳಿಕೆ ನನ್ನ ಲೆವೆಲ್ ಅಲ್ಲ. ಅದರ ಬಗ್ಗೆ ನಾನು ಕಮೆಂಟ್ ಕೂಡಾ ಮಾಡುವುದಿಲ್ಲ. ಇದರಿಂದ ಅವ್ರ ಸರ್ಕಾರ ಫೌಂಡೇಷನ್ ಏನೆಂದು ಗೊತ್ತಾಗುತ್ತಿದೆ ಎಂದು ಡಿ.ಕೆ. ಶಿವಕುಮಾರ್ ಕುಟುಕಿದ್ದಾರೆ.
ಮಂಗಳೂರು ಶಾಸಕ ಯುಟಿ ಖಾದರ್ ಕೂಡ ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು:
ಸರ್ಕಾರ ಹೇಗೆ ನಡೆಸುತ್ತಿದ್ದಾರೆ ಎಂಬುದಕ್ಕೆ ಇದು ದೊಡ್ಡ ಉದಾಹರಣೆ. ರಾಜ್ಯದ ಜನರು ಪ್ರತಿಯೊಂದು ವಿಚಾರವನ್ನೂ ಗಮನಿಸುತ್ತಿದ್ದಾರೆ. ಸರಿಯಾದ ಸಮಯದಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳುತ್ತಾರೆ ಎಂದು ಆಡಳಿತ ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದ್ದಾರೆ.
2008ರಲ್ಲಿ ಇವರ ಅಧಿಕಾರದ ವೇಳೆ ಇಂತಹದ್ದೇ ಸಮಸ್ಯೆ ಇತ್ತು. ಮತ್ತೆ ಸ್ಪಷ್ಟ ಬಹುಮತ ಇಲ್ಲದಿದ್ದರೂ ಅಧಿಕಾರಕ್ಕೆ ಬಂದಿದ್ದಾರೆ. ಅಧಿಕಾರಕ್ಕೆ ಬಂದು ಜನರನ್ನು ವಂಚಿಸುವ ಕೆಲಸ ಮಾಡುತ್ತಿದ್ದಾರೆ. ಸರ್ಕಾರದ ಬೆಂಬಲವಿಲ್ಲದೆ ಈ ರೀತಿ ಮಾಡಲು ಹೇಗೆ ಸಾಧ್ಯ? ಇದಕ್ಕೆಲ್ಲಾ ರಾಜ್ಯ ಸರ್ಕಾರದ ಬೆಂಬಲ ಬೇಕೇ ಬೇಕಲ್ವಾ? ಇಂತಹದೆಲ್ಲ ಮಾಡಲು ಹೇಗೆ ಧೈರ್ಯ ಬರುತ್ತದೆ? ಎಂದು ಪ್ರಶ್ನಿಸಿದ್ದಾರೆ.
ಇಷ್ಟೆಲ್ಲ ಬೆಳವಣಿಗೆ ನಂತದ ಈಗ ಶ್ರೀರಾಮುಲು ಪಿಎ ಎನ್ನಲಾದ ರಾಜಣ್ಣ ನನ್ನ ಸಿಸಿಬಿ ವಿಚಾರಣೆಯ ನಂತರ ಬಿಡುಗಡೆ ಗೊಳಿಸಿದ್ದು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ;
ಇಂದು ಸಿಸಿಬಿಯಿಂದ ಆಡುಗೋಡಿಯ ಟೆಕ್ನಿಕಲ್ ಸೆಲ್ ನಲ್ಲಿ ಪಿಎ ರಾಜಣ್ಣ ಅವರನ್ನು ವಿಚಾರಣೆಗೆ ಒಳಪಡಿಸಿದಂತ ಪೊಲೀಸರು, ಅವರ ಮೊಬೈಲ್ ಕೂಡ ಜಪ್ತಿ ಮಾಡಿದ್ದರು. ಅವರ ಮೊಬೈಲ್ ನಲ್ಲಿ ಮೂರು ಆಡಿಯೋ ಕೂಡ ಕೋಟಿ ಕೋಟಿ ವ್ಯವಹಾರ ನಡೆಸಿರುವಂತವು ಸಿಕ್ಕಿವೆ ಎನ್ನಲಾಗುತ್ತಿತ್ತು.
ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಸಚಿವ ರಾಮುಲು ಪಿಎ ರಾಜಣ್ಣ, ಹಣಕ್ಕೆ ಡೀಲ್ ಮಾಡಿರುವ ಆಡಿಯೋ ನನ್ನದಲ್ಲ ಎಂಬುದಾಗಿ ತಿಳಿಸಿದ್ದಾರೆ.