ಶ್ರೀಲಂಕಾದಲ್ಲಿ ಉಂಟಾಗಿರುವ ಆರ್ಥಿಕ ಸಮಸ್ಯೆ ನಿವಾರಣೆಗೆ, ಅಧ್ಯಕ್ಷ ಗೋತಬಯ ರಾಜಪಕ್ಸೆ ನೀಡಿರುವ ಸಲಹೆಯನ್ನು ವಿಪಕ್ಷಗಳು ತಿರಸ್ಕರಿಸಿವೆ. ಗೋತಬಯ ಅವರು, ದೇಶದಲ್ಲಿ ‘ಸಂಯುಕ್ತ ಸರ್ಕಾರ’ ರಚಿಸಲು ವಿಪಕ್ಷಗಳಿಗೆ ಆಹ್ವಾನ ನೀಡಿದ್ದರು. ಆದರೆ, ಇದನ್ನು ತಿರಸ್ಕರಿಸಿರುವ ವಿಪಕ್ಷ ನಾಯಕರು ಆಡಳಿತರೂಢ ಸರ್ಕಾರವು ನೆಪ ಮಾತ್ರಕ್ಕೆ ಸಂಯುಕ್ತ ಸರ್ಕಾರ ರಚಿಸುವ ನಾಟಕವಾಡುತ್ತಿದೆ ಎಂದು ಹೇಳಿದ್ದಾರೆ.
ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿಕೆಯಾದ ಬಳಿಕ ಮೊತ್ತಮೊದಲ ಪಾರ್ಲಿಮೆಂಟ್ ಅಧಿವೇಶನ ಮಂಗಳವಾರದಿಂದ ಆರಂಭವಾಗಲಿದೆ. ಶ್ರೀಲಂಕಾದೆಲ್ಲೆಡೆ ಪ್ರತಿಭಟನೆಗಳು ತೀವ್ರಗೊಳ್ಳುತ್ತಿದ್ದು, ವಿಪಕ್ಷಗಳು ಕೂಡಾ ಗೋತಬಯ ನೇತೇತ್ವದ ಸರ್ಕಾರದ ರಾಜಿನಾಮೆಗೆ ಆಗ್ರಹಿಸಿವೆ.
ಭಾನುವಾರ ರಾತ್ರಿ ಗೋತಬಯ ರಾಜಪಕ್ಸೆ ಅವರ ಅಣ್ಣ ಮಹಿಂದಾ ರಾಜಪಕ್ಸೆ ಹೊರತಾಗಿ ಎಲ್ಲಾ 26 ಕ್ಯಾಬಿನೆಟ್ ಸಚಿವರು ತಮ್ಮ ಸ್ಥಾನಗಳಿಗೆ ರಾಜಿನಾಮೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸದ್ಯದ ಪರಿಸ್ಥಿತಿಯನ್ನು ನಿಭಾಯಿಸುವ ಸಲುವಾಗಿ ಅಧ್ಯಕ್ಷ ರಾಜಪಕ್ಸೆ ಕೇವಲ ನಾಲ್ಕು ಜನ ಸಚಿವರನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ. ಸಂಪೂರ್ಣ ಕ್ಯಾಬಿನೆಟ್ ನಿರ್ಮಾಣಗೊಳ್ಳುವವರೆಗೂ ಈ ನಾಲ್ವರು ಮಾತ್ರ ಸರ್ಕಾರವನ್ನು ಮುನ್ನಡೆಸುವಲ್ಲಿ ರಾಜಪಕ್ಸೆಗೆ ನೆರವಾಗಲಿದ್ದಾರೆ.
ಆಹಾರ, ಇಂಧನ, ಹಾಗೂ ವಿತ್ತೀಯ ಕೊರತೆಯ ಬಳಿಕ ಈಗ ದೇಶದಲ್ಲಿ ಔಷಧಿಗಳ ಕೊರತೆಯೂ ಉಂಟಾಗಿದೆ. ಈ ಕಾರಣಕ್ಕಾಗಿ, ದೇಶದೆಲ್ಲೆಡೆ ‘ಆರೋಗ್ಯ ತುರ್ತುಪರಿಸ್ಥಿತಿ’ಯನ್ನೂ ಘೋಷಿಸಿ ಆದೇಶ ಹೊರಡಿಸಲಾಗಿದೆ.

ದೇಶದ ಕೇಂದ್ರೀಯ ಬ್ಯಾಂಕ್ ಗವರ್ನರ್ ಆಗಿರುವ ಅಜಿತ್ ಕಬ್ರಾಲ್ ಅವರು ಕೂಡಾ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ನೂತನ ಕ್ಯಾಬಿನೆಟ್ ರಚನೆ ವೇಳೆ ನೂತನ ಆಡಳಿತ ಮಂಡಳಿಯನ್ನೂ ರಚಿಸುವಂತೆ ಅವರು ಒತ್ತಾಯಿಸಿದ್ದಾರೆ.
ರಾಜಪಕ್ಸೆ ಕುಟುಂಬದ ಕಳಪೆ ಆಡಳಿತದ ವಿರುದ್ದ ಪ್ರತಿಭಟನೆಗಳು ತೀವ್ರಗೊಳ್ಳುತ್ತಿದ್ದಂತೆಯೇ ದೇಶದೆಲ್ಲೆಡೆ ಸಾಮಾಜಿಕ ಜಾಲತಾಣಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದರಿಂದಾಗಿ, ಫೇಸ್ಬುಕ್, ವಾಟ್ಸಾಪ್, ಟ್ವಿಟರ್, ಯೂಟ್ಯೂಬ್ ಸೇರಿದಂತೆ ಹಲವು ಪ್ರಮುಖ ಸಾಮಾಜಿಕ ಜಾಲತಾಣಗಳು ಬಂದ್ ಆಗಿದ್ದವು. ಆದರೆ, ಇದಕ್ಕೆ ತೀವ್ರ ಪ್ರತಿರೋಧ ಉಂಟಾಗುತ್ತಿದ್ದಂತೆಯೇ ಭಾನುವಾರ ಸಂಜೆಯ ವೇಳೆಗೆ ಸಾಮಾಜಿಕ ಜಾಲತಾಣಗಳ ಮೇಲಿನ ನಿರ್ಬಂಧವನ್ನು ವಾಪಸ್ ಪಡೆಯಲಾಗಿತ್ತು.
1948ರಲ್ಲಿ ಸ್ವಾತಂತ್ರ್ಯ ಪಡೆದ ಬಳಿಕ ಶ್ರೀಲಂಕಾವು ಎದುರಿಸುತ್ತಿರುವ ಅತ್ಯಮತ ಕಠಿಣ ಆರ್ಥಿಕ ತುರ್ತುಪರಿಸ್ಥಿತಿ ಇದಾಗಿದೆ. ಅತ್ಯಗತ್ಯ ವಸ್ತುಗಳಾದ ಆಹಾರ ಮತ್ತು ಇಂಧನದ ಬೆಲೆ ಗಗನಕ್ಕೇರಿದ್ದು ಬಡವರ ಪಾಡು ಹೇಳತೀರದಾಗಿದೆ. ಈಗಾಗಲೇ ಭಾರತವು 500 ಮಿಲಿಯನ್ ಡಾಲರ್’ನಷ್ಟು ತೈಲೋತ್ಪನ್ನಗಳನ್ನು ಸಾಲವಾಗಿ ನೀಡಿದ್ದು, ಇನ್ನೂ 1 ಬಿಲಿಯನ್ ಡಾಲರ್ ಸಹಾಯ ಮಾಡುವುದಾಗಿ ಘೋಷಿಸಿದೆ. ಇದರ ನಡುವೆ, ಐಎಂಎಫ್’ನಿಂದಲು ಹಣಕಾಸಿನ ನೆರವು ಪಡೆಯಲು ಶ್ರೀಲಂಕಾ ಸರ್ಕಾರ ಮಾತುಕತೆ ನಡೆಸುತ್ತಿದೆ.