ಪೇಗಾಸಸ್ ಲೀಕ್ಸ್ ಹಗರಣ ಜಾಗತಿಕ ಮಟ್ಟದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ಪಾಕಿಸ್ತಾನ ಸೇರಿದಂತೆ ಜಗತ್ತಿನ ಹತ್ತು ದೇಶಗಳ ಪ್ರಧಾನಮಂತ್ರಿಗಳು, ಫ್ರಾನ್ಸ್ ಸೇರಿದಂತೆ ಮೂರು ದೇಶಗಳ ಅಧ್ಯಕ್ಷರು ಮತ್ತು ಮೊರಕ್ಕೋ ರಾಜ, ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್ ಒ)ಯ ಮುಖ್ಯಸ್ಥರು ಸೇರಿದಂತೆ ಜಗತ್ತಿನ ಪ್ರಭಾವಿ ನಾಯಕರು, ಸಾವಿರಾರು ಪತ್ರಕರ್ತರು, ಸಾಮಾಜಿಕ ಹೋರಾಟಗಾರರ ವಿರುದ್ದ ದೇಶಗಳ ಸಾರ್ವಭೌಮತೆ ಮತ್ತು ವ್ಯಕ್ತಿಗತ ಹಕ್ಕುಗಳನ್ನು ಗಾಳಿಗೆ ತೂರಿ ನಡೆದ ಬೇಹುಗಾರಿಕೆಯ ಕುರಿತು ಜಗತ್ತಿನ ಹಲವು ದೇಶಗಳಲ್ಲಿ ತನಿಖೆ ಆರಂಭವಾಗಿದೆ.
ಸ್ವತಃ ಪೇಗಾಸಸ್ ಸ್ಪೈವೇರ್ ಸಂಸ್ಥೆ ಎನ್ ಎಸ್ ಒ ವಿರುದ್ದ ಅದರ ಮೂಲ ದೇಶ ಇಸ್ರೇಲಿನಲ್ಲಿಯೇ ಅಲ್ಲಿನ ಸರ್ಕಾರದ ವತಿಯಿಂದ ತನಿಖೆ ಆರಂಭವಾಗಿದೆ. ಪತ್ರಕರ್ತರು, ಜನಪರ ಹೋರಾಟಗಾರರು ಮತ್ತು ಪ್ರತಿಪಕ್ಷ ನಾಯಕರನ್ನು ಗುರಿಯಾಗಿಸಿಕೊಂಡು ಅವರುಗಳನ್ನು ಹಣಿಯಲು ಪೇಗಾಸಸ್ ಅಸ್ತ್ರವನ್ನು ಪ್ರಯೋಗಿಸಲಾಗಿದೆ ಎಂಬ ವ್ಯಾಪಕ ದೂರುಗಳು ಭಾರತವೂ ಸೇರಿದಂತೆ ಜಗತ್ತಿನ ಉದ್ದಗಲಕ್ಕೆಕೇಳಿಬಂದಿರುವ ಹಿನ್ನೆಲೆಯಲ್ಲಿ ಅಂತಹ ದುರುಪಯೋಗದ ಬಗ್ಗೆ ತನಿಖೆ ನಡೆಸಲು ಅಂತರ್ ಸಚಿವಾಲಯದ ಮಟ್ಟದ ತನಿಖಾ ತಂಡವನ್ನು ಇಸ್ರೇಲ್ ಈಗಾಗಲೇ ರಚಿಸಿ ಆದೇಶ ಹೊರಡಿಸಿದೆ.
Also read: ಪೆಗಾಸಸ್ ಲೀಕ್ಸ್ ಹಗರಣ: ತನಿಖೆಗೆ ಶಶಿ ತರೂರ್ ನೇತೃತ್ವದ ಸಂಸದೀಯ ಸಮಿತಿ
ಅದೇ ಹೊತ್ತಿಗೆ, ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುವಲ್ ಮ್ಯಾಕ್ರಾನ್ ಮತ್ತು ಅವರ ಸರ್ಕಾರದ 15 ಮಂದಿ ಉನ್ನತ ವ್ಯಕ್ತಿಗಳ ವಿರುದ್ಧವೂ ಪೇಗಾಸಸ್ ಗೂಢಚಾರಿಕೆ ನಡೆದಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಮತ್ತು ಸ್ವತಃ ಅವರ ಖಾಸಗೀ ಮೊಬೈಲ್ ಸಂಖ್ಯೆ ಕೂಡ ಪೇಗಾಸಸ್ ಗೂಢಚಾರಿಕೆ ಪಟ್ಟಿಯಲ್ಲಿ ಕಾಣಿಸಿಕೊಂಡಿರುವುದರಿಂದ, ಆ ಕುರಿತು ತನಿಖೆ ನಡೆಸುವಂತೆ ಫ್ರಾನ್ಸ್ ಸರ್ಕಾರ ಕೂಡ ಆದೇಶಿಸಿದೆ. ಪೇಗಾಸಸ್ ಹಗರಣದ ಕುರಿತಂತೆ ಸರಣಿ ತನಿಖೆ ನಡೆಸುವಂತೆ ಅಧ್ಯಕ್ಷರು ಆದೇಶಿಸಿದ್ದಾರೆ ಎಂದು ಮಾಧ್ಯಮ ವರದಿಗಳು ಹೇಳಿವೆ. ಈ ನಡುವೆ, ಪೇಗಾಸಸ್ ಪಟ್ಟಿಯಲ್ಲಿ ಮೊಬೈಲ್ ಸಂಖ್ಯೆ ಕಾಣಿಸಿಕೊಂಡಿರುವ ಹಲವು ಫ್ರೆಂಚ್ ಪತ್ರಕರ್ತರು, ರಾಜಕಾರಣಿಗಳು ಮತ್ತು ಹೋರಾಟಗಾರರು ಹಾಗೂ ಉದ್ಯಮಿಗಳು ಕೂಡ ಪ್ರತ್ಯೇಕವಾಗಿ ದೂರು ಸಲ್ಲಿಸಿದ್ದು, ಆ ಎಲ್ಲಾ ದೂರುಗಳನ್ನು ಪರಿಗಣಿಸಿ ವಿವಿಧ ಆಯಾಮದಲ್ಲಿ ತನಿಖೆ ನಡೆಸುವಂತೆ ಅಲ್ಲಿನ ಸರ್ಕಾರ ಆದೇಶಿಸಿದೆ.
ಹೀಗೆ ಜಗತ್ತಿನ ಹಲವು ದೇಶಗಳಲ್ಲಿ ಮತ್ತು ಸ್ವತಃ ಎನ್ ಎಸ್ ಒ ಮೂಲವಾದ ಇಸ್ರೇಲಿನಲ್ಲಿ ಕೂಡ ಪೇಗಾಸಸ್ ಸ್ಪೈವೇರ್ ಗೂಢಚಾರಿಕೆಯ ವಿರುದ್ಧ ಬೇಹುಗಾರಿಕೆಗೆ ಒಳಗಾದವರು ಮತ್ತು ಸಾರ್ವಜನಿಕರ ಆಗ್ರಹದ ಮೇಲೆ ವಿವಿಧ ಹಂತದ ತನಿಖೆಗಳು ಆರಂಭವಾಗಿವೆ. ಆದರೆ, 40 ಮಂದಿ ಪತ್ರಕರ್ತರು, ಪ್ರತಿ ಪಕ್ಷ ನಾಯಕರು, ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು, ನಾಗರಿಕ ಹೋರಾಟಗಾರರು, ವಕೀಲರು ಸೇರಿದಂತೆ ಬರೋಬ್ಬರಿ 300 ಮಂದಿಯ ವಿರುದ್ದ ಪೇಗಾಸಸ್ ಸ್ಪೈವೇರ್ ಬಳಸಿ ಬೇಹುಗಾರಿಕೆ ನಡೆಸಲಾಗಿದೆ. ಅದೂ ಕೂಡ ವ್ಯಕ್ತಿಗಳ ಖಾಸಗೀತನದ ಹಕ್ಕು ಸೇರಿದಂತೆ ದೇಶದ ಸಂವಿಧಾನ ಕೊಡಮಾಡಿರುವ ಮೂಲಭೂತ ಹಕ್ಕುಗಳನ್ನು ಗಾಳಿಗೆ ತೂರಿ ಈ ಬೇಹುಗಾರಿಕೆ ನಡೆಸಲಾಗಿದೆ. ದೇಶದ ಭದ್ರತೆಗಾಗಲೀ ಅಥವಾ ಸಾರ್ವಭೌಮತೆಗಾಗಲೀ ಯಾವುದೇ ರೀತಿಯಲ್ಲೂ ಸಂಬಂಧಪಡದ ವ್ಯಕ್ತಿಗಳನ್ನು ರಾಜಕೀಯ ಲಾಭದ ದೃಷ್ಟಿಯಿಂದ ಹೀಗೆ ಗುರಿಮಾಡಲಾಗಿದೆ ಎಂಬ ಗಂಭೀರ ಆರೋಪಗಳ ಹೊರತಾಗಿಯೂ ಭಾರತದಲ್ಲಿ ಆ ಬಗ್ಗೆ ಸರ್ಕಾರ ಈಗಲೂ ತನ್ನನ್ನು ಸಮರ್ಥಿಸಿಕೊಳ್ಳುವ ದಾಟಿಯಲ್ಲೇ ಮಾತನಾಡುತ್ತಿದೆ.
Also read: ಪೇಗಾಸಸ್ ಗೂಢಚಾರಿಕೆಯಿಂದ ಮಾಜಿ ಪ್ರಧಾನಿ ದೇವೇಗೌಡರೂ ಬಚಾವಾಗಿಲ್ಲ!
ಇಸ್ರೇಲಿ ಎನ್ ಎಸ್ ಒ ಸಂಸ್ಥೆಯಿಂದ ಪೇಗಾಸಸ್ ಸ್ಪ್ಐವೇರ್ ಖರೀದಿಸಿ ಬಳಸಿರುವುದನ್ನು ಕೇಂದ್ರ ಬಿಜೆಪಿ ಸರ್ಕಾರವಾಗಲೀ ಅಥವಾ ದೇಶದ ಯಾವುದೇ ತನಿಖಾ ಸಂಸ್ಥೆಗಳಾಗಲಿ ಈವರೆಗೆ ಒಪ್ಪಿಕೊಂಡಿಲ್ಲ. ಬದಲಾಗಿ ಗೃಹ ಸಚಿವ ಅಮಿತ್ ಶಾ ಅವರೇ, ಇದೊಂದು ದೇಶದ ವಿರುದ್ಧದ ಪಿತೂರಿಯ ಭಾಗವಾದ ಸುಳ್ಳು ಆರೋಪ. ದೇಶದ ಪ್ರಗತಿ ಸಹಿಸದೆ ಮಾಡಿರುವ ಷಢ್ಯಂತ್ರ ಎಂದು ತಳ್ಳಿಹಾಕಿದ್ದಾರೆ. ಆದರೆ ದೇಶದ ವಿರುದ್ಧದ ಪಿತೂರಿಯಾದರೆ, ಆ ಪಿತೂರಿಯ ಗುರಿಯಾಗಿ ಮುಖ್ಯವಾಗಿ ಆಡಳಿತ ಪಕ್ಷದವರೇ ಇರಬೇಕಾಗಿತ್ತು ಅಲ್ಲವೆ? ಫ್ರಾನ್ಸ್ ನಂತಹ ಕಡೆ ಆದಂತೆ ಅಧಿಕಾರದಲ್ಲಿರುವ ಮಂದಿಯ ವಿರುದ್ಧವೇ ಬೇಹುಗಾರಿಕೆ ನಡೆದಿರಬೇಕಾಗಿತ್ತು ಅಲ್ಲವೆ? ಆದರೆ, ದೇಶದಲ್ಲಿ ಪೇಗಾಸಸ್ ಬೇಹುಗಾರಿಕೆಯ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಹೆಸರುಗಳು ಪ್ರತಿಪಕ್ಷ ನಾಯಕರದ್ದು, ಜನಪರ ಪತ್ರಕರ್ತರದ್ದು ಮತ್ತು ಹೋರಾಟಗಾರರದ್ದು!
ಸರ್ಕಾರ ಮತ್ತು ಅಧಿಕಾರದ ಚುಕ್ಕಾಣಿ ಹಿಡಿದವರು ಎಷ್ಟೇ ತಳ್ಳಿಹಾಕುವ, ತಿಪ್ಪೆಸಾರಿಸುವ ಯತ್ನ ಮಾಡಿದರೂ, ಜಾಗತಿಕ ಮಟ್ಟದಲ್ಲಿ ಪೇಗಾಸಸ್ ಹಗರಣದ ವಿರುದ್ಧ ದೊಡ್ಡಮಟ್ಟದ ತನಿಖೆಗಳು ಆರಂಭವಾಗಿರುವುದರಿಂದ ಭಾರತದ ಬಿಜೆಪಿ ಸರ್ಕಾರ ಕೂಡ ಒತ್ತಡಕ್ಕೆ ಸಿಲುಕಿದೆ. ಈಗಾಗಲೇ ಭಾರತೀಯ ಪತ್ರಕರ್ತರ ಸಂಘಟನೆಗಳಾದ ಪ್ರೆಸ್ ಗಿಲ್ಡ್ ಆಫ್ ಇಂಡಿಯಾ, ಪ್ರೆಸ್ ಕ್ಲಬ್ ಆಫ್ ಇಂಡಿಯಾ, ಮುಂಬೈ ಪ್ರೆಸ್ ಕ್ಲಬ್, ಇಂಡಿಯನ್ ವುಮೆನ್ ಪ್ರೆಸ್ ಕಾರ್ಪೊರೇಷನ್ ಮತ್ತಿತರ ಮಂಚೂಣಿ ಸಂಘಟನೆಗಳು ಈ ಕುರಿತು ಸುಪ್ರೀಂಕೋರ್ಟ್ ನೇತೃತ್ವದಲ್ಲಿಯೇ ತನಿಖೆಯಾಗಬೇಕು ಎಂದು ಆಗ್ರಹಿಸಿವೆ. ಪಶ್ಚಿಮಬಂಗಾಳದ ಸಿಎಂ ಮಮತಾ ಬ್ಯಾನರ್ಜಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ರಾಜಕೀಯ ಪಕ್ಷಗಳ ಮುಖಂಡರು ಕೂಡ ಸುಪ್ರೀಂಕೋರ್ಟ್ ನೇತೃತ್ವದ ತನಿಖೆಗೆ ಆಗ್ರಹಿಸಿದ್ದಾರೆ.
ಆ ಹಿನ್ನೆಲೆಯಲ್ಲಿ ಪ್ರಕರಣದ ಕುರಿತು ಸುಪ್ರೀಂಕೋರ್ಟ್ ಕೂಡ ಸ್ವಯಂಪ್ರೇರಿತ ತನಿಖೆ ಕೈಗೆತ್ತಿಕೊಳ್ಳಬೇಕು ಎಂಬ ಆಗ್ರಹ ದೇಶದ ಹಲವು ನಾಗರಿಕ ಸಂಘಟನೆಗಳೂ, ಸಾಮಾಜಿಕ ಸಂಘಟನೆಗಳ ಕಡೆಯಿಂದಲೂ ಕೇಳಿಬಂದಿದೆ. ಹಾಗಾಗಿ, ಇನ್ನು ಒಂದೆರಡು ದಿನಗಳಲ್ಲಿ ಭಾರತದಲ್ಲಿ ಕೂಡ ಪೇಗಾಸಸ್ ಲೀಕ್ಸ್ ಹಗರಣದ ಕುರಿತು ತನಿಖೆಯ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ಹೊರಬೀಳುವ ನಿರೀಕ್ಷೆ ಇದೆ.