ಬೆಂಗಳೂರಿನ ಐತಿಹಾಸಿಕ ಕಡಲೇಕಾಯಿ ಪರಿಷೆ ಪ್ರತಿ ಬಾರಿಯಂತೆ ಈ ಸಲವೂ ಕೂಡ ಸಾಕಷ್ಟು ವಿಶೇಷತೆಗಳಿಂದ ಕೂಡಿದೆ. ಪರಿಷ ಹಿನ್ನೆಲೆಯಲ್ಲಿ ಬಸವನಗುಡಿ ಸುತ್ತಮುತ್ತಲಿನ ಪ್ರದೇಶದಲ್ಲಿ ಹಬ್ಬದ ವಾತಾವರಣ ಕಳೆಗಟ್ಟಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಗ್ರಾಹಕರು ಪರಿಷೆ ಕಣ್ಮುಂಬಿಕೊಳ್ಳಲು ಆಗಮಿಸುತ್ತಿದ್ದಾರೆ. ಪತಿ ವರ್ಷ 3 ದಿನಗಳಿಗೆ ಸೀಮಿತವಾಗಿದ್ದ ಶೇಂಗಾ ಜಾತ್ರೆಯು ಈ ಸಲ 5 ದಿನಗಳ ಕಾಲ ನಡೆಯುತ್ತಿದೆ.

ರಸ್ತೆಯ ಎರಡೂ ಬದಿಯ ಜೊತೆಗೆ ಮಧ್ಯಭಾಗದಲ್ಲೂ ಕಡಲೆಕಾಯಿಯನ್ನು ರಾಶಿ ರಾಶಿ ಹಾಕಿಕೊಂಡು ಮಾರಾಟ ಮಾಡಲಾಗುತ್ತಿದೆ. ಹಸಿ, ಒಣ ಬೇಯಿಸಿದ, ಹುರಿದ ಕಡಲೆಕಾಯಿ, ಹತ್ತು ಹಲವು ಬಗೆಯ ಕಡಲೆಕಾಯಿಯ ಆಕರ್ಷಣೆಯ ಜತೆಗೆ ಬೇಲ್, ಬಜ್ಜಿ, ಮಸಾಲ ಹಪ್ಪಳ, ಅಲೂ ಟ್ವಿಸ್ಟರ್ ಸೇರಿದಂತೆ ವಿವಿಧ ಭಕ್ಷ್ಯಗಳು, ಆಟಿಕೆ ಆಕರ್ಷಿಸುತ್ತಿವೆ. ಜಗಮಗಿಸುವ ಬೆಳಕಿನಲ್ಲಿ ಆಟದ ಮೋಜು ಸಹ ಇದೆ.

ಪರಿಸರ ಸ್ನೇಹಿ ಪರಿಷೆ..
ಕಡಲೇಕಾಯಿ ಪರಿಷೆಗೆ ಬರುವ ಗ್ರಾಹಕರು ಕಡ್ಡಾಯವಾಗಿ ಬಟ್ಟೆಯ ಚೀಲವನ್ನು ತರಬೇಕೆಂದು ಸರ್ಕಾರ ಸಾರ್ವಜನಿಕರಿಗೆ ಸೂಚನೆ ನೀಡಿದೆ. ಈ ನಿಟ್ಟಿನಲ್ಲಿ ಪ್ಲಾಸ್ಟಿಕ್ ಮುಕ್ತ ಕಡಲೆಕಾಯಿ ಪರಿಷೆಯ ಗುರಿಯನ್ನು ಸರ್ಕಾರ ಇಟ್ಟುಕೊಂಡಿದ್ದು, ಜನರೂ ಸಹ ಕಡಲೇಕಾಯಿ ಖರೀದಿಸಲು ಬಟ್ಟೆಯ ಚೀಲಗಳನ್ನು ತರುತ್ತಿದ್ದಾರೆ. ಪ್ಲಾಸ್ಟಿಕ್ ರಹಿತವಾದ, ಪರಿಸರ ಸ್ನೇಹಿ ಪರಿಷೆಯ ವಾತಾವರಣ ಕಂಡು ಬರುತ್ತಿದೆ.

ಕಡಲೇಕಾಯಿ ಪರಿಷೆಯಲ್ಲಿ ಇದೇ ಮೊದಲನೇ ಬಾರಿಗೆ ವಿಶೇಷ ದೀಪಾಲಂಕಾರ ಮತ್ತು ದೇವಸ್ಥಾನ ಮತ್ತು ಆವರಣದಲ್ಲಿ ಹೂವಿನ ವಿಶೇಷ ಅಲಂಕಾರ ವ್ಯವಸ್ಥೆ ಮಾಡಲಾಗಿದೆ. ಬಸವನ ಗುಡಿ, ಗಾಂಧಿ ಬಜಾರ್. ಆರ್‌ವಿ ರಸ್ತೆ, ನೆಟ್ಟಲ್ಲಪ್ಪ ಸರ್ಕಲ್, ಎನ್.ಆರ್ ರಸ್ತೆಯಲ್ಲಿ ವಿಶೇಷ ದೀಪಾಲಂಕಾರ ಹಾಗೂ ದೇವಸ್ಥಾನದ ಮತ್ತು ಆವರಣದಲ್ಲಿ ವೈಶಿಷ್ಟ್ಯಪೂರ್ಣ ಹೂವಿನ ಅಲಂಕಾರ ಮಾಡಲಾಗಿದ್ದು, ಇವೆಲ್ಲ ಲಕ್ಷಾಂತರ ಭಕ್ತರ ಗಮನ ಸೆಳೆಯುತ್ತಿವೆ.

ಅಲ್ಲದೆ ಇಡೀ ಪರಿಷೆಯಲ್ಲಿ ಬೀದಿ ಬದಿಯ ಬೇಲ್ ವ್ಯಾಪಾರಿ ಸಾಕಷ್ಟು ಗಮನ ಸೆಳೆಯುತ್ತಿದ್ದಾರೆ. ಹಾಡು ಹೇಳುತ್ತಲೇ ಗ್ರಾಹಕರನ್ನು ಆಕರ್ಷಿಸುತ್ತಿರುವ ಯುವಕನ ವಿಡಿಯೋ ವೈರಲ್ ಆಗುತ್ತಿದ್ದು, ಹೂವಿನ ಬಾಣದಂತೆ ಹಾಡನ್ನು ಸ್ವಮೇಕ್ ರೀತಿಯಲ್ಲಿ ಬದಲಾಯಿಸುವ ಮೂಲಕ ಪವನ್ ಎನ್ನುವವರು ಎಲ್ಲರ ಮನಗೆಲ್ಲುತ್ತಿದ್ದಾರೆ.












