ಕಾಂಗ್ರೆಸ್(Congress) ನಾಯಕ ರಾಹುಲ್(Rahul Gandhi) ಗಾಂಧಿ ಮತ್ತೊಂದು ಭಾರತ್ ಜೋಡೋ(Bharath Jodo) ಯಾತ್ರೆಯನ್ನು ಕೈಗೊಂಡಿದ್ದಾರೆ. ಜನವರಿ 14 ರಂದು ಮಣಿಪುರದಿಂದ ಆರಂಭವಾದ 6713 ಕಿಲೋಮೀಟರ್ ವ್ಯಾಪ್ತಿಯ 67 ದಿನಗಳ ಈ ನ್ಯಾಯ ಯಾತ್ರೆ ಮಾರ್ಚ್ 20ರಂದು ಮುಂಬಯಿಯಲ್ಲಿ ಪರಿಸಮಾಪ್ತಿಯಾಗಲಿದೆ. ಈ ಯಾತ್ರೆಯು ರಾಜಕೀಯ ಉದ್ದೇಶಗಳನ್ನೂ ಮೀರಿದ ಒಂದು ಸತ್ಯಾನ್ವೇಷಣೆಯ ಪ್ರಯತ್ನ ಎನ್ನಲಾಗಿದೆ. 15 ರಾಜ್ಯಗಳ ಮೂಲಕ ಹಾದು ಹೋಗಲಿದೆ , ತನ್ಮೂಲಕ ಕಳೆದ ಒಂದು ದಶಕದಲ್ಲಿ ಕೇಂದ್ರ ಸರ್ಕಾರದ ಅನುಸರಿಸಿರುವ ಆಡಳಿತ ನೀತಿಗಳಿಂದ ಜನಸಾಮಾನ್ಯರ ಬದುಕಿನಲ್ಲಿ ಉಂಟಾಗಿರುವ ದುರವಸ್ಥೆ-ವ್ಯತ್ಯಯಗಳನ್ನು, ತಳಮಟ್ಟದ ಜನತೆಗೆ ಮನದಟ್ಟು ಮಾಡಲಿದೆ ಎಂದು ಕಾಂಗ್ರೆಸ್ ತನ್ನ ಅಧಿಕೃತ ವೆಬ್ತಾಣದಲ್ಲಿ ಹೇಳುತ್ತದೆ. ಭಾರತದ ತಳಸಮಾಜವನ್ನು ಕಾಡುತ್ತಿರುವ ನಿರುದ್ಯೋಗ, ಬೆಲೆ ಏರಿಕೆ, ಹಣದುಬ್ಬರ, ಕೋಮುವಾದ, ಮತಾಂಧತೆ ಮತ್ತು ಸಾಂಸ್ಥಿಕ ತಾರತಮ್ಯಗಳ ವಿರುದ್ಧ ಜನಧ್ವನಿಗೆ ದನಿಗೂಡಿಸುವ ನಿಟ್ಟಿನಲ್ಲಿ ರಾಹುಲ್ ಈ ಯಾತ್ರೆಯನ್ನು ಕೈಗೊಂಡಿರುವುದಾಗಿ ಕಾಂಗ್ರೆಸ್ ಪಕ್ಷ ಹೇಳುತ್ತಿದೆ.
ಕಾಕತಾಳೀಯವಾಗಿ ಭಾರತ್ ಜೋಡೋ ನ್ಯಾಯ ಯಾತ್ರೆ ಮಣಿಪುರದಿಂದ ಆರಂಭವಾಗಿದೆ. ಭಾರತ ಕಳೆದುಕೊಳ್ಳುತ್ತಿರುವ ಸಾಂವಿಧಾನಿಕ ನೈತಿಕತೆ, ಆಳ್ವಿಕೆಯ ಅಸೂಕ್ಷ್ಮತೆ ಹಾಗೂ ಆಡಳಿತ ವ್ಯವಸ್ಥೆಯ ತಣ್ಣನೆಯ ಕ್ರೌರ್ಯಕ್ಕೆ/ದಿವ್ಯ ಮೌನಕ್ಕೆ ಸಾಕ್ಷಿಯಾಗಿರುವ ಮಣಿಪುರ ಕಳೆದ ಎಂಟು ತಿಂಗಳ ಅವಧಿಯಲ್ಲಿ ನೂರಾರು ಸಾವುಗಳಿಗೆ ಸಾಕ್ಷಿಯಾಗಿದೆ. ಇಡೀ ದೇಶದ ಸೂಕ್ಷ್ಮಪ್ರಜ್ಞೆಯನ್ನೇ ಕದಡುವಂತಹ ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ, ಬೆತ್ತಲೆ ಮೆರವಣಿಗೆಗಳಿಗೆ ಸಾಕ್ಷಿಯಾಗಿದೆ. ಮಣಿಪುರದ ಕುಕಿ-ಮೈತಿ ಸಮುದಾಯಗಳ ನಡುವಿನ ಸಂಘರ್ಷ ವಾಸ್ತವವಾಗಿ ಬದುಕಿನ ಪ್ರಶ್ನೆಯಾಗಿದ್ದು, ಜನಸಮುದಾಯಗಳ ಬದುಕಿನ ಹಕ್ಕನ್ನು ಕೇವಲ ಸಾಂಸ್ಕೃತಿಕ ಅಸ್ಮಿತೆಯ ಚೌಕಟ್ಟಿನಲ್ಲಿಟ್ಟು ನೋಡುವ ಆಡಳಿತ ನೀತಿಯ ದುಷ್ಪರಿಣಾಮಗಳನ್ನು ಬಿಂಬಿಸುತ್ತದೆ. ಮಣಿಪುರದ ಇತ್ತೀಚಿನ ಬೆಳವಣಿಗೆಗಳಿಗೆ ಆಡಳಿತಾರೂಢ ಪಕ್ಷವನ್ನೇ ದೂಷಿಸಬಹುದಾದರೂ, ಹಿಂತಿರುಗಿ ನೋಡಿದಾಗ ಈಶಾನ್ಯ ರಾಜ್ಯಗಳ ಜಟಿಲ ಸಮಸ್ಯೆಗಳಿಗೆ ಕಾಂಗ್ರೆಸ್ ಪಕ್ಷವೂ ಹೊಣೆ ಹೊರಬೇಕಿದೆ.

ಈ ಆತ್ಮಾವಲೋಕನದೊಂದಿಗೆ ರಾಹುಲ್ ತಮ್ಮ ನ್ಯಾಯ ಯಾತ್ರೆಯನ್ನು ಆರಂಭಿಸಿದ್ದಾರೆಯೇ ? ಇದು ಅನುಮಾನಾಸ್ಪದವಾದರೂ ಅತ್ಯವಶ್ಯ. ದೇಶದ ಕೇವಲ 5 ಪ್ರತಿಶತ ಜನರ ಬಳಿ 60 ಪ್ರತಿಶತ ಸಂಪತ್ತು ಶೇಖರಣೆಯಾಗಿದೆ, ತಳಮಟ್ಟದ 50 ಪ್ರತಿಶತ ಜನತೆ ಕೇವಲ 3 ಪ್ರತಿಶತ ಸಂಪತ್ತಿನೊಡನೆ ಬದುಕು ಸವೆಸುತ್ತಿದ್ದಾರೆ ಎಂಬ ಕಟು ವಾಸ್ತವವನ್ನು ಈ ಯಾತ್ರೆಯ ಸಂದರ್ಭದಲ್ಲಿ ಉಲ್ಲೇಖಿಲಾಗಿದೆ. ಹಸಿವು, ಬಡತನ, ದಾರಿದ್ರ್ಯ, ನಿರ್ವಸತಿಕತೆ ಮತ್ತು ನಿರುದ್ಯೋಗದಿಂದ ಬಳಲುತ್ತಿರುವ ತಳಸಮಾಜದ ಕೋಟ್ಯಂತರ ಜನತೆಗೆ ಪ್ರಥಮ ಶತ್ರುವಾಗಿ ಕಾಣುವುದು ನವ ಉದಾರವಾದ, ಕಾರ್ಪೋರೇಟ್ ಮಾರುಕಟ್ಟೆಯನ್ನು ಪೋಷಿಸುವ ಆರ್ಥಿಕ ನೀತಿಗಳು ಮತ್ತು ದೇಶದ ಆರ್ಥಿಕತೆಯನ್ನು ನಿರ್ದೇಶಿಸುತ್ತಿರುವ ಆಪ್ತ ಬಂಡವಾಳಶಾಹಿ. ಈ ಆಡಳಿತ ವ್ಯವಸ್ಥೆಯ ತಳಪಾಯದಲ್ಲಿ ರಾಹುಲ್ ಪ್ರತಿನಿಧಿಸುವ ಕಾಂಗ್ರೆಸ್ ಪಕ್ಷವೇ ಪೇರಿಸಿದ ಇಟ್ಟಿಗೆಗಳೂ ಇವೆ ಎನ್ನುವ ಅರಿವು ಜೋಡೋ ಯಾತ್ರೆಯ ಹರಿಕಾರರಿಗೆ ಇರಬೇಕು.
ಯಾವುದನ್ನು ಯಾವುದರೊಡನೆ ?
ಭಾರತ್ ಜೋಡೋ ನ್ಯಾಯ ಯಾತ್ರೆ ಜೋಡಿಸಲು ಬಯಸುವುದೇನನ್ನು? ಜಾತಿ, ಮತ, ಧರ್ಮ ಇತ್ಯಾದಿ ಅಸ್ಮಿತೆಗಳ ದಾಳಿಯಿಂದ ವಿಘಟಿತವಾಗಿರುವ ತಳಸಮುದಾಯಗಳನ್ನೋ ? ನವ ಉದಾರವಾದದ ದಾಳಿಗೆ ಸಿಲುಕಿ ಛಿದ್ರವಾಗಿರುವ ತಳಸಮಾಜದ ನಿರ್ಗತಿಕರನ್ನೋ ? ಮತಾಂಧತೆ, ಮತೀಯವಾದ ಮತ್ತು ಮತದ್ವೇಷದ ರಾಜಕಾರಣದಿಂದ ಭಗ್ನವಾಗಿರುವ ಮನುಜ ಸೂಕ್ಷ್ಮತೆ ಮತ್ತು ಸಂವೇದನೆಗಳನ್ನೋ ? ಅಸ್ಮಿತೆಯ ರಾಜಕಾರಣದಲ್ಲಿ ʼಅನ್ಯʼರನ್ನು ಸೃಷ್ಟಿಸುತ್ತಲೇ ವಿಭಜನೆಗೊಳಗಾಗುತ್ತಿರುವ ದೇಶದ ಯುವ ಸಮೂಹವನ್ನೋ ? ಅಧಿಕಾರ ರಾಜಕಾರಣದ ಸೈದ್ಧಾಂತಿಕ ನೆಲೆಗಳ ಮೂಲಕ ನಿರ್ಮಾಣವಾಗುತ್ತಿರುವ ಪ್ರಬಲರ ʼಭದ್ರಲೋಕʼ ಮತ್ತು ದುರ್ಬಲರ ʼಛಿದ್ರಲೋಕʼ ಗಳನ್ನೋ? ನಿರಂತರ ದೌರ್ಜನ್ಯ, ಅತ್ಯಾಚಾರ, ತಾರತಮ್ಯಕ್ಕೊಳಗಾಗುತ್ತಿರುವ ದೇಶದ ಮಹಿಳಾ ಸಂಕುಲದ ನೋವಿಗೆ ಕುರುಡಾಗಿರುವ ಮೇಲ್ಪದರದ ಸಾಮಾಜಿಕ ಪ್ರಜ್ಞೆಯನ್ನೋ ? ಅಸ್ಪೃಶ್ಯತೆ-ಸಾಮಾಜಿಕ ಬಹಿಷ್ಕಾರದಂತಹ ಹೀನಾಚರಣೆಗೆ ತುತ್ತಾಗುತ್ತಿರುವ ತಳಸಮಾಜವನ್ನೋ ?
ಯಾವುದನ್ನು ಜೋಡಿಸಬೇಕು ಎಂದು ಯೋಚಿಸುವ ಮುನ್ನ ಏನೇನು ಛಿದ್ರವಾಗಿದೆ ಎಂಬ ರಾಜಕೀಯ ಪ್ರಜ್ಞೆಯೂ ಇರಬೇಕಾಗುತ್ತದೆ. ನ್ಯಾಯಕ್ಕಾಗಿ ಹೋರಾಡುವ ಧ್ವನಿಗಳು ದೇಶದ ಪ್ರತಿಯೊಂದು ಮೂಲೆಯಲ್ಲೂ ಕೇಳಿಬರುತ್ತಿವೆ. ಆದರೆ ಯಾರಿಂದ ನ್ಯಾಯ ಕೇಳುವುದು ?
ಮಣಿಪುರದಲ್ಲಿ ಬೆತ್ತಲೆಯಾದ ಅಮಾಯಕ ಮಹಿಳೆಯರು, ಜನಪ್ರತಿನಿಧಿಯೊಬ್ಬನಿಂದ ದೌರ್ಜನ್ಯಕ್ಕೊಳಗಾದ ಕುಸ್ತಿಪಟುಗಳು, ಆಧ್ಯಾತ್ಮ-ಧರ್ಮದ ಪ್ರತಿನಿಧಿಗಳಿಂದ ಅತ್ಯಾಚಾರಕ್ಕೊಳಗಾದ ಅಪ್ರಾಪ್ತ ಬಾಲೆಯರು, ಪ್ರತಿ 15 ನಿಮಿಷಕ್ಕೊಂದು ಅತ್ಯಾಚಾರಕ್ಕೆ ಬಲಿಯಾಗುತ್ತಿರುವ ಅಸಹಾಯಕ ಮಹಿಳೆಯರು, ತಮ್ಮ ಸಂವಿಧಾನದತ್ತ ಧಾರ್ಮಿಕ ಹಕ್ಕುಗಳನ್ನು ಕಾಯ್ದುಕೊಳ್ಳಲು ಹೆಣಗಾಡುತ್ತಿರುವ ಅಲ್ಪಸಂಖ್ಯಾತರು, ಶತಮಾನಗಳಿಂದ ತಮ್ಮ ಬದುಕಿಗೆ ಆಸರೆಯಾದ ಅರಣ್ಯ ಭೂಮಿಯನ್ನು ಕಳೆದುಕೊಳ್ಳುತ್ತಿರುವ ಬುಡಕಟ್ಟು ಸಮುದಾಯಗಳು, ಸಾಂವಿಧಾನಿಕ ಮೀಸಲಾತಿ ಇತ್ಯಾದಿ ಸವಲತ್ತುಗಳು ಇದ್ದರೂ ಬದುಕು ಕಟ್ಟಿಕೊಳ್ಳುವ ಉದ್ಯೋಗ, ಶಿಕ್ಷಣದಿಂದ ವಂಚಿತರಾಗುತ್ತಿರುವ ಕೋಟ್ಯಂತರ ದಲಿತರು, ಶಿಕ್ಷಣ ಪಡೆದರೂ ಉದ್ಯೋಗದ ಭರವಸೆ ಇಲ್ಲದ ಯುವ ಕೋಟಿ, ಜೀವನೋಪಾಯಕ್ಕಾಗಿ ಅಲೆಮಾರಿಗಳಾಗುತ್ತಿರುವ ಕೋಟ್ಯಂತರ ವಲಸೆ ಕಾರ್ಮಿಕರು- ಇವರೆಲ್ಲರೂ ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ.
ಯಾರಿಂದ ನ್ಯಾಯ ಕೇಳಬೇಕು ಎಂಬ ಜಟಿಲ ಪ್ರಶ್ನೆಗೆ ಜನತೆಯೇ ಉತ್ತರ ಹುಡುಕಬೇಕಿದೆ. ಈ ಜನಕೋಟಿ ಎದುರಿಸುತ್ತಿರುವ ಸಮಸ್ಯೆಗಳಿಗೆ ಕಾರಣಕರ್ತರಾದವರೇ ಆಡಳಿತ ವ್ಯವಸ್ಥೆಯನ್ನೂ ನಿರ್ವಹಿಸುತ್ತಿದ್ದಾರೆ. ಈಗ ವಿರೋಧ ಪಕ್ಷದ ಸ್ಥಾನದಲ್ಲಿ ನಿಂತಿರುವ ಪಕ್ಷಗಳೂ ಸಹ ಒಂದಲ್ಲ ಒಂದು ರೀತಿಯಲ್ಲಿ ಈ ದುರವಸ್ಥೆಗೆ ಕಾರಣರಾಗಿದ್ದಾರೆ/ಕಾರಣವಾಗುತ್ತಿದ್ದಾರೆ ಎನ್ನುವುದು ವಾಸ್ತವ. ಕಳೆದ ಮೂರು ದಶಕಗಳ ಆರ್ಥಿಕತೆ ಮತ್ತು ಈ ಮಾರುಕಟ್ಟೆ ಕಾರ್ಪೋರೇಟ್ ಸಾಮ್ರಾಜ್ಯವನ್ನು ಸಲಹುತ್ತಿರುವ ಸಾಂಸ್ಕೃತಿಕ ರಾಜಕಾರಣದ ತಳಪಾಯದಲ್ಲಿ ಎಲ್ಲ ಬಂಡವಾಳಿಗ ರಾಜಕೀಯ ಪಕ್ಷಗಳು ತಮ್ಮದೇ ಆದ ಇಟ್ಟಿಗೆಗಳನ್ನು ಇರಿಸಿವೆ. ಅಯೋಧ್ಯೆಯ ರಾಮಮಂದಿರದ ಶ್ರೇಯಕ್ಕಾಗಿ ಪರಸ್ಪರ ಪೈಪೋಟಿ ನಡೆಸಿದ ರಾಜಕೀಯ ಪಕ್ಷಗಳು ನವ ಉದಾರವಾದದ ಶೋಷಕ ಸಾಮ್ರಾಜ್ಯ ವಿಸ್ತರಣೆ ಮತ್ತು ದುರಾಕ್ರಮಣದ ಶ್ರೇಯವನ್ನೂ ತಮ್ಮದಾಗಿಸಿಕೊಳ್ಳಬೇಕಿದೆ. ಸೆಕ್ಯುಲರಿಸಂ ಅಥವಾ ಜಾತ್ಯತೀತತೆಯನ್ನು ನಗೆಪಾಟಲಿಗೀಡು ಮಾಡುವಷ್ಟು ಮಟ್ಟಿಗೆ ಬಳಸಿಕೊಂಡಿರುವ ಅಧಿಕಾರ ರಾಜಕಾರಣವು, ತಳಸಮಾಜದ ಜನತೆಯನ್ನು ಚದುರಂಗದ ಆಟಕಾಯಿಗಳಂತೆ ಪರಿಗಣಿಸುತ್ತಿರುವುದು ಕಟು ವಾಸ್ತವ. ಈ ಅಧಿಕಾರ ರಾಜಕಾರಣದ ಚೌಕಟ್ಟಿನಲ್ಲೇ ಭಾರತವನ್ನು ಜೋಡಿಸಲು ಹೊರಟಿರುವ ನ್ಯಾಯ ಯಾತ್ರೆ ಏನನ್ನು ಜೋಡಿಸಲು ಮುಂದಾಗಿದೆ ?

ಜೋಡಿಸುವ ಹಾದಿಯ ಕವಲುಗಳು
ಪ್ರಾಮಾಣಿಕವಾದ ಪ್ರಯತ್ನಗಳೊಂದಿಗೆ ಛಿದ್ರವಾಗಿರುವುದೆಲ್ಲವನ್ನೂ ಜೋಡಿಸಲು ಸಾಧ್ಯವಿದೆ. 75 ವರ್ಷಗಳ ಸ್ವತಂತ್ರ ಆಳ್ವಿಕೆಯ ನಂತರವೂ ದೇಶದ ಕಟ್ಟಕಡೆಯ ಬಡ ವ್ಯಕ್ತಿಗೂ ಹಿಮಾಲಯ ತುದಿಯಲ್ಲಿರುವ ಸಿರಿವಂತನಿಗೂ ನಡುವೆ ಇರುವ ಕಂದರವನ್ನು ಜೋಡಿಸಲೂ ಸಾಧ್ಯವಿದೆ. ಹಿಂದೂ, ಮುಸ್ಲಿಂ, ಕ್ರೈಸ್ತರಾದಿಯಾಗಿ ಮತಶ್ರದ್ಧೆಯ ಆಧಾರದಲ್ಲಿ ಪ್ರತ್ಯೇಕಿತರಾಗಿ ತಮ್ಮ ನಡುವಿನ ಶತಮಾನಗಳ ಸಾಮರಸ್ಯ-ಸಹಬಾಳ್ವೆಯ ಭಾವನೆಯನ್ನೇ ಕಳೆದುಕೊಂಡಿರುವ ಜನಸಮೂಹಗಳನ್ನು ಜೋಡಿಸಲು ಸಾಧ್ಯವಿದೆ. ಅತ್ಯಾಧುನಿಕ ತಂತ್ರಜ್ಞಾನ ಯುಗದಲ್ಲೂ ಸ್ಪೃಶ್ಯಾಸ್ಪೃಶ್ಯತೆಯ ಪ್ರಾಚೀನ ಮನಸ್ಥಿತಿಯನ್ನು ಹೊತ್ತು ಮೇಲು ಕೀಳುಗಳ ಭಾವನೆಯೊಂದಿಗೆ ಕೆಳಸ್ತರದ ಶೋಷಿತ ಸಮುದಾಯಗಳನ್ನು Ghetto ಗಳಲ್ಲಿ ಬಂಧಿಸುತ್ತಿರುವರನ್ನು ಬಹಿಷ್ಕೃತರೊಡನೆ ಜೋಡಿಸಲು ಸಾಧ್ಯವಿದೆ. ವಯೋಮಿತಿಯ ಅಡ್ಡಿಯಿಲ್ಲದೆ ತಮ್ಮ ನಿಕಟವರ್ತಿಗಳಿಂದಲೇ, ನೆರೆಯವರಿಂದಲೇ, ಬಲ್ಲವರಿಂದಲೇ ನಿತ್ಯ ಅತ್ಯಾಚಾರಕ್ಕೊಳಗಾಗುತ್ತಿರುವ ಲಕ್ಷಾಂತರ ಹೆಣ್ಣುಮಕ್ಕಳನ್ನು ಸೂಕ್ಷ್ಮ ಸಂವೇದನೆಯುಳ್ಳ ಪುರುಷ ಸಮಾಜದೊಡನೆ ಜೋಡಿಸಲು ಸಾಧ್ಯವಿದೆ.
ಈ ಜೋಡಣೆಗಾಗಿ ಶೋಧಿಸಬೇಕಿರುವುದು ನವ ಭಾರತದಲ್ಲಿ ಇಂದಿಗೂ ಜೀವಂತಿಕೆಯಿಂದಿರುವ ಸಂವೇದನಾಶೀಲ ಸಮಾಜವನ್ನು. ಈ ಸಮಾಜ ನಾಗರಿಕರ ನಡುವೆ ಸಕ್ರಿಯವಾಗಿದೆ. ವಿಭಿನ್ನ ರೂಪಗಳಲ್ಲಿವೆ. ಪ್ರಜಾಪ್ರಭುತ್ವ, ಸಂವಿಧಾನ ಹಾಗೂ ಮಾನವೀಯ ಮೌಲ್ಯಗಳನ್ನು ಉಳಿಸಿಕೊಳ್ಳುವುದಕ್ಕಾಗಿ ನಿತ್ಯ ಹೋರಾಡುತ್ತಿರುವ ಅಸಂಖ್ಯಾತ ʼಆಂದೋಲನ ಜೀವಿಗಳು ʼ ಈ ಒಂದು ಸಮಾಜದ ಸದಸ್ಯರಾಗಿರುತ್ತಾರೆ. ಸಾಕ್ಷಿ ಮಲ್ಲಿಕ್ ಎಂಬ ನೊಂದ ಹೆಣ್ಣಿನ ಕಣ್ಣಿರಿಗೆ ಮಿಡಿದ ಲಕ್ಷಾಂತರ ʼಬುದ್ಧಿಜೀವಿಗಳುʼ ಇಲ್ಲಿದ್ದಾರೆ. ವಿಭಿನ್ನ ತತ್ವ ಸಿದ್ಧಾಂತಗಳನ್ನು ಆಶ್ರಯಿಸಿ ಒಂದೇ ಗುರಿಯತ್ತ ಸಾಗುತ್ತಿರುವ ನಾಗರಿಕ ಸಮಾಜದ ನೂರಾರು ಗುಂಪುಗಳು ಈ ಜೋಡಣೆಗೆ ಪೂರಕವಾದ ಗಾರೆ ಕಾಮಗಾರಿ ಕೆಲಸ ಮಾಡಲು ಸಿದ್ಧವಾಗಿವೆ. ಆದರೆ ಈ ಮನುಜಪರ ಜೀವಿಗಳ ಪ್ರಜಾಸತ್ತಾತ್ಮಕ ಧ್ವನಿಗೆ ಕಿವಿಯಾಗುವ ಒಂದು ರಾಜಕೀಯ ವ್ಯವಸ್ಥೆ ಬೇಕಿದೆ. ಹಾಗೆಯೇ ಈ ಒಕ್ಕೊರಲ ಧ್ವನಿಗಳಿಗೆ ದನಿಯಾಗದಿದ್ದರೂ, ಅಡಗಿಸದೆ ಮುಕ್ತವಾಗಿರಿಸುವ ಒಂದು ಅಧಿಕಾರ ರಾಜಕಾರಣದ ಭೂಮಿಕೆ ನಮಗೆ ಬೇಕಿದೆ. ಈ ʼಬೇಕುʼಗಳಿಗೆ ಸ್ಪಂದಿಸುವ ಹೃದಯಶೀಲ ಆಡಳಿತ ವ್ಯವಸ್ಥೆ ವರ್ತಮಾನದ ತುರ್ತು. ಭಾರತ್ ಜೋಡೋ ನ್ಯಾಯ ಯಾತ್ರೆ ಇದನ್ನು ಜೋಡಿಸಬೇಕಿದೆ.

ಹಾದಿಯಲ್ಲಿನ ಜಟಿಲ ಪ್ರಶ್ನೆಗಳು
ಇದು ಸಾಧ್ಯವಾಗಬೇಕಾದರೆ ತಳಸಮಾಜದಿಂದ ಪ್ರತ್ಯೇಕವಾಗಿಯೇ ದೂರವಾಗಿರುವ ಮೇಲ್ಪದರದ ಅಧಿಕಾರ ರಾಜಕಾರಣ, ಚುನಾಯಿತ ಪ್ರತಿನಿಧಿಗಳ ಆಳ್ವಿಕೆಯ ಅಂಗಳ, ಪ್ರಜಾಪ್ರಭುತ್ವವನ್ನು ನಿರ್ವಹಿಸುವ ಶಾಸಕಾಂಗ-ಕಾರ್ಯಾಂಗ-ನ್ಯಾಯಾಂಗಗಳ ಆವರಣ ಇವೆಲ್ಲವನ್ನೂ ಸಂವೇದನಾಶೀಲವಾಗಿಸುವುದು ಜೋಡಣಾ ಅಭಿಯಾನದ ಪ್ರಥಮ ಆದ್ಯತೆಯಾಗಬೇಕಿದೆ. ನ್ಯಾಯಾಂಗವೊಂದೇ ಕೊಂಚ ಮಟ್ಟಿಗೆ ಜನರಲ್ಲಿ ಆಶಾಭಾವನೆಯನ್ನು ಜೀವಂತವಾಗಿರಿಸಿದೆ. ಉಳಿದೆರಡು ಅಂಗಗಳು ತಳಸಮಾಜದಿಂದ ಬಹುದೂರದಲ್ಲಿ ಕುಳಿತಿವೆ. ಕಾರ್ಪೋರೇಟ್ ಮಾರುಕಟ್ಟೆ ಶಕ್ತಿಗಳ ಅಭಿವೃದ್ಧಿಯಲ್ಲೇ ಇಡೀ ಜನಕೋಟಿಯ ಪ್ರಗತಿಯನ್ನು ಕಾಣುವ ಸರ್ಕಾರಗಳಿಗೆ ಪ್ರಜಾಪ್ರಭುತ್ವದ ನಾಲ್ಕನೆಯ ಸ್ತಂಭವಾದ ಮಾಧ್ಯಮ ವಲಯವೂ ಒತ್ತಾಸೆಯಾಗಿ ನಿಂತಿದೆ. ತಾವು ನಿಂತ ನೆಲವನ್ನೇ ಗುರುತಿಸಲಾಗದಷ್ಟು ಎತ್ತರದಲ್ಲಿ ಕುಳಿತಿರುವ ದೃಶ್ಯ-ಮುದ್ರಣ-ವಿದ್ಯುನ್ಮಾನ ಮಾಧ್ಯಮದ ಭದ್ರಕೋಟೆಗಳು ತಳಸಮಾಜದ ಜನತೆಯ ಪಾಲಿಗೆ ಅದೃಶ್ಯವಾಗಿವೆ. ಹೀಗೆ ಅದೃಶ್ಯವಾಗಿರುವುದನ್ನು, ದೂರೀಕರಿಸಲ್ಪಟ್ಟ ವ್ಯವಸ್ಥೆಯ ಅಂಗಗಳನ್ನು ಜೋಡಿಸಲು ಭಾರತ್ ಜೋಡೋ ನ್ಯಾಯ ಯಾತ್ರೆಗೆ ಸಾಧ್ಯವೇ ?
ಕಳೆದ ಹತ್ತು ವರ್ಷಗಳಲ್ಲಿ ಭಾರತದ ಪ್ರಜಾಪ್ರಭುತ್ವ ಮತ್ತು ಸಂಸದೀಯ ವ್ಯವಸ್ಥೆ ಕಳೆದುಕೊಂಡಿರುವುದೇ ಹೆಚ್ಚು ಎಂಬ ಅರಿವಿನೊಂದಿಗೇ ಭಾರತವನ್ನು ಜೋಡಿಸುವ ಕಲ್ಪನೆಯೂ ಸಾಕಾರಗೊಳ್ಳಬೇಕಿದೆ. ಸಂಸತ್ ಅಧಿವೇಶನಗಳು ʼಆರೋಗ್ಯಕರ ಚರ್ಚೆʼ ಎಂಬ ಪಾರಂಪರಿಕ ನಡಾವಳಿಯನ್ನೇ ಕಳೆದುಕೊಂಡಿದೆ. ವಿರೋಧ ಪಕ್ಷಗಳಿಗೆ ಅನೂಚಾನವಾಗಿ ಒದಗಿಬಂದಿದ್ದ ಗೌರವಯುತ ಸ್ಥಾನಮಾನಗಳು ಇಂದು ಕಳೆದುಹೋಗಿವೆ. ವಿರೋಧ ಪಕ್ಷಗಳನ್ನು ಅಮಾನತಿನಲ್ಲಿಟ್ಟು ಮಸೂದೆಗಳನ್ನು ಅಂಗೀಕರಿಸುವ ಹೊಸ ಪರ್ವದಲ್ಲಿ, ಜಾರಿಯಾಗುವ ಕಾಯ್ದೆ ಕಾನೂನುಗಳು ತಮ್ಮ ಸಂಸದೀಯ ಹಿರಿಮೆಯನ್ನು ಕಳೆದುಕೊಂಡಿವೆ. ಅಪರಾಧಗಳ ಮೂಟೆ ಹೊತ್ತು ಜನಪ್ರಾತಿನಿಧ್ಯವನ್ನು ನಿರ್ವಹಿಸುವ ಚುನಾಯಿತ ಜನಪ್ರತಿನಿಧಿಗಳ ನಡುವೆ ಪ್ರಾಮಾಣಿಕತೆ, ಪಾರದರ್ಶಕತೆ, ಜನನಿಷ್ಠೆ ಮೊದಲಾದ ಸಾಂವಿಧಾನಿಕ ಮೌಲ್ಯಗಳು ಕಳೆದುಹೋಗಿವೆ. ಇವೆಲ್ಲದರ ನಡುವೆ ಡಾ. ಬಿ. ಆರ್. ಅಂಬೇಡ್ಕರ್ ಬಲವಾಗಿ ಪ್ರತಿಪಾದಿಸಿದ, ಅಪೇಕ್ಷಿಸಿದ ಹಾಗೂ ಅನುಕರಣೀಯ ಎಂದು ಭಾವಿಸಿದ ಸಾಂವಿಧಾನಿಕ ನೈತಿಕತೆ ನಿಶ್ಶೇಷವಾಗಿದೆ.
ಇವೆಲ್ಲವನ್ನೂ ಜೋಡಿಸಲು ಭಾರತ್ ಜೋಡೋ ನ್ಯಾಯ ಯಾತ್ರೆ ಯತ್ನಿಸುವುದೇ ? ಈ ಪ್ರಶ್ನೆಗೆ ಉತ್ತರ ʼಇಲ್ಲʼ ಎಂದಾದರೆ, ರಾಹುಲ್ ಗಾಂಧಿಯಾಗಲೀ ಇತರ ಯಾವುದೇ ರಾಜಕೀಯ ನಾಯಕರಾಗಲೀ ತಮ್ಮ ಸಾಂವಿಧಾನಿಕ ಆದ್ಯತೆ ಮತ್ತು ಕರ್ತವ್ಯಗಳನ್ನು ಪುನರ್ ವಿಮರ್ಶೆಗೆ ಒಳಪಡಿಸುವುದು ಅತ್ಯವಶ್ಯ. ʼಹೌದುʼ ಎಂದಾದರೆ ಕಾರ್ಯತಃ ಸಾಧಿಸುವ ಛಲ-ಕಾರ್ಯಸೂಚಿ-ವಿಧಾನಗಳನ್ನು ರೂಢಿಸಿಕೊಳ್ಳಬೇಕಿದೆ. ಭಾರತದಲ್ಲಿ ತಳಸಮಾಜದ ಸಾಮಾನ್ಯ ದುಡಿಯುವ ಜನತೆ ಭ್ರಮಾಧೀನರಾಗಿದ್ದಾರೆ. ಮಾರುಕಟ್ಟೆ, ಅಯೋಧ್ಯೆ, ಶಿಕ್ಷಣ-ಉದ್ಯೋಗ ಮೀಸಲಾತಿ, ಜಿಡಿಪಿ ಆರ್ಥಿಕತೆ, ಧಾರ್ಮಿಕ ಶ್ರದ್ಧಾನಂಬಿಕೆಗಳು, ಜಾತಿ ಶ್ರೇಷ್ಠತೆ-ಪಾರಮ್ಯ ಇವೆಲ್ಲವೂ ಸೃಷ್ಟಿಸುವ ಭ್ರಮೆಯೊಂದಿಗೆ, ಎಲ್ಲವನ್ನೂ ಮೀರಿದ ಮತೀಯ ಅಸ್ಮಿತೆಗಳ ಭಾವೋನ್ಮಾದದ ಭ್ರಮೆ ಇಡೀ ನಾಗರಿಕ ಜಗತ್ತನ್ನು ವಾಸ್ತವಗಳಿಂದ ದೂರ ಮಾಡುತ್ತಿದೆ. ಇಲ್ಲಿ ಛಿದ್ರವಾಗುತ್ತಿರುವ ಬೌದ್ಧಿಕ ನೆಲೆಗಳನ್ನು ಜೋಡಿಸುವ ಮೂಲಕ ಸ್ವತಂತ್ರ ಭಾರತದ ಪೂರ್ವಸೂರಿಗಳು ಕಂಡ ಸಾಮರಸ್ಯ, ಸಮನ್ವಯ, ಸೌಹಾರ್ದತೆ, ಭ್ರಾತೃತ್ವದ ಭಾರತವನ್ನು ಸಾಕಾರಗೊಳಿಸಬೇಕಿದೆ. ರಾಹುಲ್ ಕೈಗೊಂಡಿರುವ ಭಾರತ್ ಜೋಡೋ ನ್ಯಾಯ ಯಾತ್ರೆಯ ಸಾಫಲ್ಯ ಮತ್ತು ಸಾರ್ಥಕತೆ ಇಲ್ಲಿ ಅಡಗಿದೆ.
#RahulGandhi #BharathJodo #NayaYathre #Congress #AICC








