ನಾ ದಿವಾಕರ
ಯಾವುದೇ ಅಪರಾಧ ಸಂಭವಿಸಿದಾಗ ಹೂಡಲಾಗುವ ಆರೋಪಗಳು ಸಾಬೀತಾಗುವವರೆಗೂ ಸಂಬಂಧಪಟ್ಟ ವ್ಯಕ್ತಿ ನಿರಪರಾಧಿಯಾಗಿರುವುದು ಸಾರ್ವತ್ರಿಕವಾಗಿ ಒಪ್ಪಿತವಾದ ಒಂದು ವಿದ್ಯಮಾನ. ಹಾಗಾಗಿ ಆರೋಪಿಯನ್ನು ಸಮರ್ಥಿಸುವುದು ಅಥವಾ ರಕ್ಷಿಸುವುದೂ ಒಂದು ಸ್ವಾಭಾವಿಕ ಪ್ರಕ್ರಿಯೆಯಾಗಿ ಸಮಾಜದಲ್ಲಿ ನಡೆದುಬಂದಿದೆ. ನ್ಯಾಯಸಂಹಿತೆಗಳೂ ಸಹ ಇದನ್ನು ತಾತ್ವಿಕವಾಗಿ ಸಮ್ಮತಿಸುತ್ತವೆ. ಆರೋಪಿಯನ್ನು ಅಪರಾಧಿ ಎಂದು ಭಾವಿಸಿ ಮಾತುಗಳಲ್ಲೇ ಗಲ್ಲಿಗೇರಿಸುವ ಆಧುನಿಕ ದೃಶ್ಯ ಮಾಧ್ಯಮಗಳ ಹಿತಾಸಕ್ತಿ ಪ್ರೇರಿತ ಪ್ರಯತ್ನಗಳ ನಡುವೆಯೂ ಈ ಸಾಮಾಜಿಕ ವಿದ್ಯಮಾನವನ್ನು ಸ್ವೀಕರಿಸಲೇಬೇಕಿದೆ. ಮತ್ತೊಂದೆಡೆ ಅಪರಾಧಿಗಳನ್ನು ಸಮರ್ಥಿಸುವ ಅಥವಾ ರಕ್ಷಿಸುವ ವಿಡಂಬನೆಗಳಿಗೂ ನಮ್ಮ ಸಮಾಜ ಸದಾ ತೆರೆದುಕೊಂಡಿರುತ್ತದೆ. ಮಾಧ್ಯಮ ಹಿತಾಸಕ್ತಿಗಳನ್ನೂ ಸೇರಿದಂತೆ ಮತ, ಧರ್ಮ, ಜಾತಿ, ಅಧ್ಯಾತ್ಮ ಅಥವಾ ಸಾಮುದಾಯಿಕ ಅಸ್ಮಿತೆಗಳ ಚೌಕಟ್ಟಿನಲ್ಲಿ ನಿರೂಪಿತ ಅಪರಾಧಿಗಳನ್ನೂ ಸನ್ಮಾನಿಸುವ ಒಂದು ವಿಕೃತ ಪ್ರವೃತ್ತಿಗೂ ನವ ಭಾರತ ಸಾಕ್ಷಿಯಾಗಿದೆ.
ಈ ಅಪರಾಧ ಸಂಹಿತೆಯ ಚರ್ಚೆಗಳ ನಡುವೆಯೇ ಸ್ವತಂತ್ರ ಭಾರತದ ಇತಿಹಾಸದಲ್ಲಿ ಬಿಲ್ಕಿಸ್ ಬಾನೋ ಪ್ರಕರಣ ತನ್ನದೇ ಆದ ಶಾಶ್ವತ ಸ್ಥಾನವನ್ನು ಪಡೆದುಕೊಂಡಿದೆ. ಏಕೆಂದರೆ ಈ ಪ್ರಕರಣದಲ್ಲಿ ಅಪರಾಧ ಸಾಬೀತಾಗಿ ಜೀವಾವಧಿ ಶಿಕ್ಷೆಗೊಳಗಾದ 11 ಕೈದಿಗಳನ್ನು ಗುಜರಾತ್ ಸರ್ಕಾರ ʼಸನ್ನಡತೆʼಯ ಆಧಾರದ ಮೇಲೆ ಕ್ಷಮಿಸಿ ಬಿಡುಗಡೆ ಮಾಡಿತ್ತು. ಸಾಮೂಹಿಕ ಅತ್ಯಾಚಾರ, ಎಳೆ ಹಸುಳೆಯ ಕಗ್ಗೊಲೆಯಂತಹ ಹೀನ ಕೃತ್ಯಗಳನ್ನೆಸಗಿದ ವ್ಯಕ್ತಿಗಳಲ್ಲಿ ʼಸನ್ನಡತೆ ಮತ್ತು ಸಂಸ್ಕಾರ ʼವನ್ನು ಗುರುತಿಸುವ ಮಟ್ಟಿಗೆ ಆಧುನಿಕ ಸಮಾಜ ಅಸೂಕ್ಷ್ಮವಾಗಿರುವುದನ್ನು ಈ ಪ್ರಕರಣದಲ್ಲಿ ಕಾಣಬಹುದು. ಗುಜರಾತ್ ಸರ್ಕಾರದ ಕ್ರಮಕ್ಕಿಂತಲೂ ಗಮನ ಸೆಳೆದಿದ್ದು ಈ 11 ಅಪರಾಧಿಗಳಿಗೆ ಸಾರ್ವಜನಿಕ ವಲಯದಲ್ಲಿ ದೊರೆತ ಸಮ್ಮಾನ-ಸನ್ಮಾನ ಮತ್ತು ಗೌರವ. ಈ ಗುಂಪಿನಿಂದ ಅತ್ಯಾಚಾರಕ್ಕೊಳಗಾದ ಮಹಿಳೆಯ ಕಣ್ಣೆದುರಿನಲ್ಲೇ ಒಂದು ಸಮಾಜ ಅತ್ಯಾಚಾರಿಗಳಿಗೆ ಸನ್ಮಾನ ಮಾಡಿದಾಗ, ಆ ಮಹಿಳೆಯ ಘನತೆ ಮತ್ತು ಸ್ವಾಭಿಮಾನಕ್ಕೆ ಎಷ್ಟು ಪೆಟ್ಟು ಬಿದ್ದಿರಬೇಡ !!
ಚಾರಿತ್ರಿಕ ತೀರ್ಪಿನ ಮಹತ್ವ: ಈ ಹೆಣ್ತನದ ಘನತೆಯನ್ನು ಮತ್ತೊಮ್ಮೆ ಎತ್ತಿಹಿಡಿಯಲೂ ಸಾಧ್ಯವಿದೆ ಎನ್ನುವುದನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರನ್ನೊಳಗೊಂಡ ನ್ಯಾಯಪೀಠ ನಿರೂಪಿಸಿದೆ. ಮೂರು ದಶಕಗಳಿಗೂ ಮುನ್ನ ಇದೇ ರೀತಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ನ್ಯಾಯವಂಚಿತಳಾಗಿರುವ ಭವಾರಿ ದೇವಿ ನಮ್ಮ ನಡುವೆ ಇರುವಾಗಲೇ ಬಿಲ್ಕಿಸ್ ಬಾನೋ ಒಂದು ಹಂತದ ನ್ಯಾಯ ಪಡೆದಿರುವುದು ಕಾರ್ಗತ್ತಲಿನ ಬೆಳಕಿಂಡಿಯಾಗಿ ಕಾಣುತ್ತದೆ. ಗುಜರಾತ್ ಸರ್ಕಾರದಿಂದ ಕ್ಷಮಾದಾನ ಪಡೆದಿದ್ದ 11 ಆರೋಪಿಗಳನ್ನು ಎರಡು ವಾರಗಳೊಳಗಾಗಿ ಮರಳಿ ಸೆರೆಮನೆಗೆ ಕಳಿಸುವಂತೆ ಸುಪ್ರೀಂಕೋರ್ಟ್ ಅದೇಶಿಸಿರುವುದು ನ್ಯಾಯಾಂಗದ ಮೇಲಿನ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿರುವುದು ಸ್ಪಷ್ಟ. ಆದರೆ ನ್ಯಾಯಶಾಸ್ತ್ರದ ನಿಯಮಾನುಸಾರವಾಗಿಯೇ ಈ ಪ್ರಕರಣದಲ್ಲೂ ಶಿಕ್ಷಿತರಿಗೆ ಅಥವಾ ಅಪರಾಧಿ ಸ್ಥಾನದಲ್ಲಿರುವ ಗುಜರಾತ್ ಸರ್ಕಾರಕ್ಕೆ ಮೇಲ್ಮನವಿ ಸಲ್ಲಿಸುವ ಅವಕಾಶ ಇರುವುದರಿಂದ, ಪ್ರಕರಣವನ್ನು ಮಹಾರಾಷ್ಟ್ರ ಸರ್ಕಾರಕ್ಕೆ ಮತ್ತೊಮ್ಮೆ ರವಾನಿಸುವ ಸಾಧ್ಯತೆಗಳೂ ಇರುವುದರಿಂದ, ಬಿಲ್ಕಿಸ್ ಬಾನೋ ಅಂತಿಮ ನ್ಯಾಯಕ್ಕಾಗಿ ಇನ್ನೂ ಕಾಯಬೇಕಿದೆ.
ಏನೇ ಆದರೂ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಮತ್ತು ಉಜ್ಜಲ್ ಭಯಾನ್ ಅವರ ಈ ತೀರ್ಪು ಭಾರತದ ನ್ಯಾಯಾಂಗದ ಇತಿಹಾಸದಲ್ಲಿ ಒಂದು ಮೈಲಿಗಲ್ಲಾಗಿ ನಿಲ್ಲುತ್ತದೆ. ಏಕೆಂದರೆ ಪ್ರಪ್ರಥಮ ಬಾರಿ ಸುಪ್ರೀಂಕೋರ್ಟ್ ಚುನಾಯಿತ ರಾಜ್ಯ ಸರ್ಕಾರವೊಂದನ್ನು ನ್ಯಾಯದ ಕಟಕಟೆಯಲ್ಲಿ, ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದೆ. “ಜೀವಾವಧಿ ಶಿಕ್ಷೆಗೊಳಗಾದ ಅಪರಾಧಿಗಳಿಗೆ ಕ್ಷಮಾದಾನ ನೀಡುವ ಪ್ರಕ್ರಿಯೆಯಲ್ಲಿ ಚುನಾಯಿತ ಗುಜರಾತ್ ಸರ್ಕಾರ ತನ್ನ ವ್ಯಾಪ್ತಿಯಲ್ಲಿಲ್ಲದ ಅಧಿಕಾರವನ್ನು ಹಾಗೂ ವಿವೇಚನಾಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದೆ, 2022ರ ಸುಪ್ರೀಂಕೋರ್ಟ್ ಆದೇಶದ ಸಂದರ್ಭದಲ್ಲಿ ಅಪರಾಧಿಯೊಡನೆ (ಪ್ರತಿವಾದಿ 3) ತಪ್ಪು ಕೆಲಸದಲ್ಲಿ ತಾನೂ ಭಾಗಿಯಾಗಿದ್ದು, ವಾಸ್ತವಾಂಶಗಳನ್ನು ಮರೆಮಾಚುವ ಮೂಲಕ ಸುಪ್ರೀಂಕೋರ್ಟ್ ನ್ಯಾಯಪೀಠದ ಹಾದಿ ತಪ್ಪಿಸಿದೆ ” ಎಂಬ ನ್ಯಾಯಮೂರ್ತಿಗಳ ನಿರ್ದಾಕ್ಷಿಣ್ಯ ಮಾತುಗಳು ಭಾರತದ ರಾಜಕಾರಣದಲ್ಲಿ ಆಳವಾಗುತ್ತಿರುವ ಅನೈತಿಕ ರಾಜಕೀಯಕ್ಕೆ ಕನ್ನಡಿ ಹಿಡಿದಂತಿದೆ. 2022ರಲ್ಲಿ ಆರೋಪಿ ರಾಧೆ ಶ್ಯಾಮ್ ಶಾ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ಪರಿಗಣಿಸುವಂತೆ ಸುಪ್ರೀಂಕೋರ್ಟ್ ನ್ಯಾಯಪೀಠ ಗುಜರಾತ್ ಸರ್ಕಾರಕ್ಕೆ ಆದೇಶಿಸಿತ್ತು. ಆದರೆ ಈ ಪ್ರಸಂಗದಲ್ಲಿ ರಾಧೇಶ್ಯಾಮ್ ವಾಸ್ತವಗಳನ್ನು ಮರೆಮಾಚಿ ಸುಪ್ರೀಂಕೋರ್ಟ್ಗೆ ವಂಚಿಸಿರುವುದನ್ನು ನ್ಯಾಯಮೂರ್ತಿ ನಾಗರತ್ನ ಒತ್ತಿ ಹೇಳಿದ್ದಾರೆ.
ಸುಪ್ರೀಂಕೋರ್ಟ್ನ ಈ ಐತಿಹಾಸಿಕ ಆದೇಶದಲ್ಲಿ ಗಮನಾರ್ಹವಾಗಿ ಕಾಣುವುದು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರ “ ಮಹಿಳೆಯರನ್ನು ಗುರಿಯಾಗಿಸಿ ಹೇಯ ಅಪರಾಧ ಎಸಗಿದವರು ಕ್ಷಮಾದಾನಕ್ಕೆ ಅರ್ಹರೇ ” ಎಂಬ ಮಾರ್ಮಿಕ ಪ್ರಶ್ನೆ ಹಾಗೂ “ಸಮಾಜವು ಮಹಿಳೆಯೊಬ್ಬಳನ್ನು ಎಷ್ಟೇ ಮೇಲ್ಮಟ್ಟದಲ್ಲಿ ಇರಿಸಲಿ ಅಥವಾ ಎಷ್ಟೇ ಕೆಳಮಟ್ಟದಲ್ಲಿ ಇರಿಸಲಿ, ಆಕೆ ಯಾವುದೇ ನಂಬಿಕೆಯನ್ನು ಹೊಂದಿರಲಿ, ಆಕೆ ಯಾವುದೇ ಮತಕ್ಕೆ ಸೇರಿದವಳಾಗಿರಲಿ, ಆಕೆ ಗೌರವಕ್ಕೆ ಅರ್ಹಳು ” ಎಂಬ ಉದಾತ್ತ ಮಾತುಗಳು ಭಾರತದಲ್ಲಿ ಹೆಣ್ತನದ ಗೌರವ-ಘನತೆಯ ಮೇಲೆ ಅವ್ಯಾಹತವಾಗಿ ನಡೆಯುತ್ತಿರುವ ದಾಳಿಗೆ ಸಾತ್ವಿಕ ಛಾಟಿ ಏಟಿನಂತೆ ಕಾಣುತ್ತದೆ. ಮಹಿಳಾ ಕುಸ್ತಿಪಟುಗಳ ಹೋರಾಟ, ಮಣಿಪುರ ಮತ್ತು ಬೆಳಗಾವಿಯ ಬೆತ್ತಲೆ ಪ್ರಕರಣಗಳು , ಮುರುಘಾ ಮಠದ ವಿವಾದ ಇನ್ನೂ ಹಲವಾರು ಸಂದರ್ಭಗಳಲ್ಲಿ ಹೆಣ್ತನದ ಗೌರವ-ಘನತೆ ವ್ಯವಸ್ಥಿತ ದಾಳಿಗೊಳಗಾಗಿರುವ ಹಿನ್ನೆಲೆಯಲ್ಲಿ ನೋಡಿದಾಗ, ನ್ಯಾಯಮೂರ್ತಿ ನಾಗರತ್ನ ಅವರ ಮಾತುಗಳು ನಮ್ಮ ಸಮಾಜದೊಳಗಿನ ಅಸೂಕ್ಷ್ಮತೆಯನ್ನು ಬಡಿದೆಬ್ಬಿಸುವಂತಿದೆ.
ಸಾಮಾಜಿಕ ಲಿಂಗ ಸೂಕ್ಷ್ಮತೆ: ಬಿಲ್ಕಿಸ್ ಬಾನೋ ಪ್ರಕರಣ ಇನ್ನು ಮುಂದೆ ಯಾವ ತಿರುವುಗಳನ್ನು ಪಡೆದುಕೊಳ್ಳುತ್ತದೆ ಕಾದು ನೋಡಬೇಕಿದೆ. ಆದರೆ ಈ ನಡುವೆ ಗಮನಿಸಬೇಕಿರುವುದು ನಮ್ಮ ವಿಶಾಲ ಸಮಾಜದ ಅಸೂಕ್ಷ್ಮತೆಯನ್ನು ಹಾಗೂ ರಾಜಕೀಯ ಪ್ರತಿಕ್ರಿಯೆಗಳನ್ನು. 2022ರಲ್ಲಿ ಅಪರಾಧಿಗಳ ಕ್ಷಮಾದಾನಕ್ಕೆ ಶಿಫಾರಸು ಮಾಡಿದ್ದ ಗೋದ್ರಾ ಕ್ಷೇತ್ರದ ಬಿಜೆಪಿ ಶಾಸಕ, ಜೈಲು ಸಲಹಾ ಸಮಿತಿಯ ಸದಸ್ಯ ಸಿ. ಕೆ. ರೌಲ್ಜಿ ಸಹಜವಾಗಿಯೇ “ ಇದು ನ್ಯಾಯಾಲಯದ ವಿಚಾರ, ತೀರ್ಪು ಓದಿದ ನಂತರ ಪ್ರತಿಕ್ರಯಿಸುತ್ತೇನೆ ” ಎಂದು ಹೇಳಿ ನುಣುಚಿಕೊಂಡಿದ್ದಾರೆ. ಆದರೆ ಇದೇ ಶಾಸಕರು ತಮ್ಮ ಅಂದಿನ ನಿರ್ಧಾರವನ್ನು ಸಮರ್ಥಿಸಿಕೊಳ್ಳುತ್ತಾ “ ಬಿಡುಗಡೆಯಾಗುತ್ತಿರುವ ಶಿಕ್ಷಿತ ಕೈದಿಗಳು ಉತ್ತಮ ಸಂಸ್ಕಾರ ಇರುವ ಬ್ರಾಹ್ಮಣರು ” ಎಂದು ಹೇಳಿದ್ದುದನ್ನು ಇಡೀ ದೇಶವೇ ಗಮನಿಸಿದೆ. (ಇಂಡಿಯನ್ ಎಕ್ಸ್ ಪ್ರೆಸ್ 8-1-2024) ವ್ಯಕ್ತಿಗತ ನೆಲೆಯ ಸನ್ನಡತೆ, ಸಂಸ್ಕಾರ ಹಾಗೂ ಸಂಸ್ಕೃತಿಯನ್ನು ಜಾತಿಯೊಡನೆ ಸಮೀಕರಿಸುವ ಈ ವಿಕೃತ ಸಾಂಸ್ಕೃತಿಕ ಚಿಂತನೆಗೆ ಸುಪ್ರೀಂಕೋರ್ಟ್ ತೀರ್ಪು ಮಾರಣಾಂತಿಕ ಪೆಟ್ಟು ನೀಡಿರುವುದು ಸ್ಪಷ್ಟ.
2022ರಲ್ಲಿ ಈ ಕೈದಿಗಳ ಬಿಡುಗಡೆಯಾದ ಸಂದರ್ಭದಲ್ಲಿ ಕೆಲವೇ ಬಿಜೆಪಿ ನಾಯಕರು ಗುಜರಾತ್ ಸರ್ಕಾರದ ಕ್ರಮವನ್ನು ಖಂಡಿಸಿದ್ದರು. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅಪರಾಧಿಗಳನ್ನು ಸನ್ಮಾನಿಸಿ ಸ್ವಾಗತಿಸುವುದು ಸಮರ್ಥನೀಯವಲ್ಲ ಎಂದು ವಿಧಾನಸಭೆಯಲ್ಲಿ ಹೇಳಿದ್ದರು. ಮತ್ತೋರ್ವ ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಈ ಕ್ರಮವನ್ನು ಮಾನವತೆಗೆ ಮಾಡಿದ ಅಪಮಾನ ಎಂದು ಬಣ್ಣಿಸಿದ್ದರು. ಆದರೆ ಉಳಿದಂತೆ ಬಿಜೆಪಿಯ ಮಹಿಳಾ ನೇತಾರರನ್ನೂ ಒಳಗೊಂಡಂತೆ, ಹಿರಿಯ ನಾಯಕರು “ ಅತ್ಯಾಚಾರ-ಕೊಲೆ ಆರೋಪ ಹೊತ್ತ ಶಿಕ್ಷಿತ ಅಪರಾಧಿಗಳನ್ನು ಸನ್ಮಾನಿಸಿದ ” ಪ್ರಸಂಗದ ಬಗ್ಗೆ ಮೌನ ವಹಿಸಿದ್ದೇ ಹೆಚ್ಚು. ಅಂದರೆ ಇಡೀ ಪ್ರಕರಣದಲ್ಲಿ ಈ ನಾಯಕರಿಗೆ ಕಂಡಿದ್ದು ರಾಜಕೀಯ ಛಾಯೆಯೇ ಹೊರತು, ಅತ್ಯಾಚಾರಕ್ಕೊಳಗಾದ ಮಹಿಳೆ ಮತ್ತು ಅಪಮಾನಕ್ಕೊಳಗಾದ ಮಹಿಳಾ ಸಂಕುಲ ಅನುಭವಿಸುವ ಮಾನಸಿಕ ಯಾತನೆ, ವೇದನೆ ಮತ್ತು ನೋವು ಇವರ ರಾಜಕೀಯ ಪ್ರಜ್ಞೆಯನ್ನು ಭಂಗಗೊಳಿಸಲೇ ಇಲ್ಲ.
ವರ್ತಮಾನ ಭಾರತವನ್ನು ಕಾಡಬೇಕಿರುವುದು ಈ ಸಾಮಾಜಿಕ ಅಸೂಕ್ಷ್ಮತೆ ಮತ್ತು ಅದರ ರಾಜಕೀಯ ರೂಪಾಂತರ. ಮಣಿಪುರದಲ್ಲಿ ನಡೆದಂತಹ ಅತ್ಯಂತ ಹೇಯ ಕೃತ್ಯದ ಬಗ್ಗೆ ತಣ್ಣನೆಯ ಮೌನ ವಹಿಸಿದ ಬಿಜೆಪಿ ನಾಯಕರು ಬೆಳಗಾವಿಯಲ್ಲಿ ನಡೆದ ಅಂತಹುದೇ ಪ್ರಕರಣಕ್ಕೆ ಸ್ಪಂದಿಸಿದ ರೀತಿಯನ್ನು ಗಮನಿಸಿದರೆ, ಮಹಿಳೆಯರ ಮೇಲೆ ನಡೆಯುತ್ತಲೇ ಇರುವ ಅತ್ಯಾಚಾರ, ದೌರ್ಜನ್ಯಗಳೂ ಹೇಗೆ ರಾಜಕೀಯ ಸಾಪೇಕ್ಷತೆಯನ್ನು ಪಡೆದುಕೊಂಡಿವೆ ಎಂದು ಸ್ಪಷ್ಟವಾಗುತ್ತದೆ. ರಾಜಕಾರಣದಿಂದಾಚೆ ನೋಡಿದಾಗಲೂ ವಿಶಾಲ ಸಮಾಜವೂ ಸಹ ಇದೇ ರೀತಿಯ ಸಾಪೇಕ್ಷತೆಯ ನೆಲೆಯಲ್ಲೇ ಮಹಿಳಾ ದೌರ್ಜನ್ಯಗಳತ್ತ ನೋಡುತ್ತಿದೆ. ಅತ್ಯಾಚಾರಗಳಿಗೆ ಸಾಕ್ಷಿ ಕೇಳುತ್ತಿರುವ ಸಾಮಾಜಿಕ ಸನ್ನಿವೇಶದಲ್ಲಿ ಮಹಿಳೆಯರು ತಮ್ಮ ಮೇಲೆ ನಡೆದ ಅಮಾನುಷ ದಾಳಿಗಳಿಗೆ ತಾವೇ ಸಾಕ್ಷಿ ಒದಗಿಸಬೇಕಾದ ಒತ್ತಡ ಎದುರಿಸುತ್ತಿದ್ದಾರೆ. ಮಹಿಳಾ ಕುಸ್ತಿಪಟುಗಳ ಹೋರಾಟದಲ್ಲಿ ಈ ಅಂಶವನ್ನು ಗುರುತಿಸಬಹುದು.
ನಾಗರಿಕತೆಯ ಪ್ರಜ್ಞಾವಂತಿಕೆ: ನಾಗರಿಕತೆಯನ್ನು ಪ್ರತಿನಿಧಿಸುವ ಆಧುನಿಕ ಸುಶಿಕ್ಷಿತ ಸಮಾಜವು ಇಂದಿಗೂ ಸಹ ಪಿತೃಪ್ರಧಾನತೆ ಹಾಗೂ ಪುರುಷಾಧಿಪತ್ಯದ ನೆಲೆಯಲ್ಲೇ ತನ್ನ ಆಲೋಚನೆಗಳನ್ನು ವಿಸ್ತರಿಸಿಕೊಳ್ಳುತ್ತಿದೆ ಎಂಬ ಸುಡು ವಾಸ್ತವವನ್ನು ಈ ಪ್ರಕರಣಗಳು ಮತ್ತೆ ಮತ್ತೆ ನಿರೂಪಿಸುತ್ತಿವೆ. ರಾಜಕೀಯ ಪಕ್ಷಗಳಿಗೆ-ನಾಯಕರಿಗೆ ಪ್ರತಿಯೊಂದು ಪ್ರಕರಣವೂ ಪ್ರಹಾರ-ಪ್ರತಿ ಪ್ರಹಾರದ ಅಸ್ತ್ರಗಳಾಗಿ ಕಂಡುಬಂದರೆ, ವಿಶಾಲ ಸಮಾಜದ ಸದಸ್ಯರಿಗೆ ಮಹಿಳಾ ದೌರ್ಜನ್ಯದ ಹೇಯ ಅಪರಾಧಗಳೂ ಸಹ ಜಾತಿ, ಮತ, ಧರ್ಮ ಹಾಗೂ ಸಾಮುದಾಯಿಕ ಅಸ್ಮಿತೆಗಳ ನೆಲೆಯಲ್ಲಿ ಕಾಣುತ್ತಿವೆ. ಲೈಂಗಿಕ ದಾಳಿಗೊಳಗಾಗುವ ಹೆಣ್ಣು ಮಕ್ಕಳನ್ನು ರಾಜಕೀಯವಾಗಿ ನಿರ್ವಚಿಸಲ್ಪಡುವ ಅಸ್ಮಿತೆಗಳ ಚೌಕಟ್ಟಿನೊಳಗಿಟ್ಟು ನೋಡುತ್ತಲೇ ಪರ-ವಿರೋಧ-ತಟಸ್ಥ ನಿಲುವುಗಳನ್ನು ತಳೆಯುವ ಒಂದು ಅತಿ-ವಿಕೃತ ಮನೋಭಾವವನ್ನು ಸಾರ್ವಜನಿಕ ವಲಯದಲ್ಲಿ, ಸುಶಿಕ್ಷಿತರ ನಡುವೆಯೇ, ಧಾರಾಳವಾಗಿ ಗುರುತಿಸಬಹುದು. ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ನಡುರಾತ್ರಿಯಲ್ಲಿ ದಹಿಸಿಹೋದ ಹಾಥ್ರಸ್ ಪ್ರಕರಣದ ಅಮಾಯಕ ಹೆಣ್ಣುಮಕ್ಗಳ ಬಗ್ಗೆ ನಮ್ಮ ಸಮಾಜ ಪ್ರತಿಕ್ರಯಿಸಿದ ರೀತಿ ಇದನ್ನೇ ಸೂಚಿಸುತ್ತದೆ. ಹಿಂದೆ ಇದರ ಪ್ರತಿರೂಪವನ್ನು ಖೈರ್ಲಾಂಜಿಯಲ್ಲೂ ಕಂಡಿದ್ದಾಗಿದೆ.
ಭಾವರಿ ದೇವಿಯಿಂದ ಬಿಲ್ಕಿಸ್ ಬಾನುವರೆಗೆ ವಿಸ್ತರಿಸುವ ಮಹಿಳಾ ದೌರ್ಜನ್ಯಗಳ ಹಾದಿಯಲ್ಲಿ ಗಮನಿಸಬೇಕಿರುವುದು ಭಾರತೀಯ ಸಮಾಜದ ಲಿಂಗಸೂಕ್ಷ್ಮತೆ ಮತ್ತು ಮಹಿಳಾ ಸಂವೇದನೆಯ ಕೊರತೆ. ಇತ್ತೀಚೆಗೆ ಒಲಂಪಿಕ್ ಕ್ರೀಡಾಪಟು ಸಾಕ್ಷಿ ಮಲ್ಲಿಕ್ ತನ್ನ ಕ್ರೀಡಾ ಬೂಟುಗಳನ್ನು ಕಳಚಿಟ್ಟು ಕುಸ್ತಿಗೆ ವಿದಾಯ ಹೇಳಿರುವುದು, ಮತ್ತೋರ್ವ ಮಹಿಳಾ ಒಲಂಪಿಕ್ ಪಟು ವಿನೇಶ್ ಪೋಗಟ್ ತನ್ನ ಪದಕಗಳನ್ನು, ಅದರ ಹಿಂದಿನ ಪಾವಿತ್ರ್ಯತೆ-ಶ್ರೇಷ್ಠತೆ-ಭಾವನಾತ್ಮಕ ಸಂಭಂಧವನ್ನು ಬದಿಗಿಟ್ಟು, ವರ್ಜಿಸಿರುವುದು ಈ ಸೂಕ್ಷ್ಮತೆಯನ್ನು ಬಡಿದೆಬ್ಬಿಸುವ ಘಟನೆಗಳಾಗಬೇಕಿತ್ತು ಏಕೆಂದರೆ ಈ ನೊಂದ ಹೆಣ್ಣು ಮಕ್ಕಳ ಅಂತರಂಗದ ವೇದನೆಗೆ ಕಾರಣವಾಗಿರುವುದು ಕೇವಲ ಪುರುಷಾಧಿಪತ್ಯವಷ್ಟೇ ಅಲ್ಲ, ಪಿತೃಪ್ರಧಾನತೆಯನ್ನು ಎತ್ತಿಹಿಡಿಯುವ ರಾಜಕೀಯ ವ್ಯವಸ್ಥೆಯೂ ಅಷ್ಟೇ ಕಾರಣ. ಸಾಕ್ಷಿ ಮಲ್ಲಿಕ್ ಮಿಡಿದ ಕಂಬನಿ ಆಕೆ ಮೇಜಿನ ಮೇಲಿಟ್ಟ ಬೂಟುಗಳನ್ನು ಸ್ಪರ್ಶಿಸಿದವೇ ಹೊರತು, ಆಳುವ ವರ್ಗಗಳ, ಅಧಿಕಾರಸ್ಥರ ಮತ್ತು ಮಹಿಳಾ ರಾಜಕಾರಣಿಗಳನ್ನೂ ಸೇರಿದಂತೆ, ರಾಜಕೀಯ ನಾಯಕರ ಹೃದಯವನ್ನು ತಟ್ಟಲೇ ಇಲ್ಲ.
ನ್ಯಾಯಾಂಗದ ಸಾಂತ್ವನ: ಈ ಸಂವೇದನೆಯ ಕೊರತೆ ಮತ್ತು ಲಿಂಗ ಸೂಕ್ಷ್ಮತೆಯ ಅಭಾವವನ್ನೇ ನೀಗಿಸುವ ರೀತಿಯಲ್ಲಿ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಹಾಗೂ ಉಜ್ಜಲ್ ಭುಯಾನ್ ಅವರ ಸುಪ್ರೀಂಕೋರ್ಟ್ ನ್ಯಾಯಪೀಠ ಬಿಲ್ಕಿಸ್ ಬಾನೋ ಪ್ರಕರಣದಲ್ಲಿ ನ್ಯಾಯವನ್ನು ಎತ್ತಿಹಿಡಿದಿದೆ. ಈ ಚಾರಿತ್ರಿಕ ತೀರ್ಪು ತನ್ನ ತಾರ್ಕಿಕ ಅಂತ್ಯ ಕಾಣುವಲ್ಲಿ ಇನ್ನೇನು ಅಡೆತಡೆಗಳನ್ನು ಎದುರಿಸುವುದೋ ಎಂಬ ಆತಂಕವೂ ಪ್ರಜ್ಞಾವಂತ ಮನಸುಗಳನ್ನು ಕಾಡುತ್ತಲೇ ಇರುತ್ತದೆ. ಕಳೆದ ಹತ್ತು ವರ್ಷಗಳಲ್ಲಿ ಅಧಿಕೃತವಾಗಿ ದಾಖಲಾಗಿರುವ ಮಹಿಳಾ ದೌರ್ಜನ್ಯಗಳನ್ನೇ ಗಮನಿಸಿದರೂ ಭಾರತೀಯ ಸಮಾಜ ಲಿಂಗ ಸೂಕ್ಷ್ಮತೆಯ ಅಭಾವ ಮತ್ತು ಮಹಿಳಾ ಸಂವೇದನೆಯ ಕೊರತೆಯಿಂದ ಕೂಡಿರುವುದು ಸ್ಪಷ್ಟವಾಗುತ್ತದೆ. ನ್ಯಾಯಾಂಗವು ಕಾಲಕಾಲಕ್ಕೆ ತನ್ನೊಳಗಿನ ನ್ಯಾಯಸೂಕ್ಷ್ಮತೆ ಮತ್ತು ಲಿಂಗ ಸೂಕ್ಷ್ಮತೆಯನ್ನು ಪ್ರಕಟಿಸುವ ಮೂಲಕ ಮಹಿಳಾ ಸಂಕುಲದ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಲೇ ಇದೆ. ಆದರೆ ಲಿಂಗ ಸಂವೇದನೆ-ಸೂಕ್ಷ್ಮತೆಯು ಮೂಲತಃ ಕಾಣಬೇಕಿರುವುದು ನಮ್ಮ ಸುತ್ತಲಿನ ಸಮಾಜದಲ್ಲಿ ಅಲ್ಲವೇ ? ನ್ಯಾಯಾಂಗವು ಸಂತ್ರಸ್ತ ಮಹಿಳೆಯರಿಗೆ ನ್ಯಾಯ ಒದಗಿಸುತ್ತದೆ, ಅಂದರೆ ಪಿತೃಪ್ರಧಾನ ಸಮಾಜದ ಅಮಾನುಷ ವರ್ತನೆಗಳನ್ನು ಶಿಕ್ಷೆಗೊಳಪಡಿಸುತ್ತದೆ.
ಆದರೆ ಈ ಶಿಕ್ಷೆಗಳು ಪಿತೃಪ್ರಧಾನ ಸಮಾಜದ ಲಿಂಗಸೂಕ್ಷ್ಮತೆಯನ್ನು ಮೊನಚಾಗಿಸಲು ಸಾಧ್ಯವೇ ? ದೌರ್ಜನ್ಯಗಳಿಂದ ಘಾಸಿಗೊಳಗಾದ ಹೆಣ್ತನದ ಘನತೆಗೆ ಸಾಂತ್ವನ ನೀಡುವ ಮಟ್ಟಿಗೆ ನ್ಯಾಯಾಂಗ-ಕಾನೂನು ವಿಧಿಸುವ ಶಿಕ್ಷೆಗಳು ಪರಿಣಾಮಕಾರಿಯಾಗಿರುತ್ತವೆ. ಆದರೆ ತನ್ನ ಘನತೆಯ ಮೇಲೆ ಅವ್ಯಾಹತವಾಗಿ ನಡೆಯುತ್ತಿರುವ ಅಮಾನುಷ-ಹೇಯ ದಾಳಿಗಳಿಂದ ಮಹಿಳೆ ಮುಕ್ತಳಾಗುವುದು ಯಾವಾಗ ? ಇದು ಕಾನೂನು-ನ್ಯಾಯಶಾಸ್ತ್ರದ ವ್ಯಾಪ್ತಿಗೆ ಒಳಪಡುವುದಿಲ್ಲ. ಇಲ್ಲಿ ಸಾಮಾಜಿಕ ಪ್ರಜ್ಞೆ-ಮಾನವೀಯತೆ-ಸಮಗೌರವ-ಸಂವೇದನೆ ಮತ್ತು ಲಿಂಗಸೂಕ್ಷ್ಮತೆಗಳು ಮುನ್ನೆಲೆಗೆ ಬರುತ್ತವೆ. ಅತ್ಯಾಚಾರ-ದೌರ್ಜನ್ಯ ಎಸಗುವ ವ್ಯಕ್ತಿಗಳಾಗಲೀ, ಅತ್ಯಾಚಾರಿಗಳನ್ನು ಸನ್ಮಾನಿಸುವ ವ್ಯಕ್ತಿ-ಸಂಘಟನೆಗಳಾಗಲೀ ನಿರ್ವಾತದಲ್ಲಿ ಹುಟ್ಟುವುದಿಲ್ಲ. ನಮ್ಮ ಸಾಮಾಜಿಕ-ರಾಜಕೀಯ ವಾತಾವರಣವೇ ಇಂಥವರನ್ನು ಸೃಷ್ಟಿಸುತ್ತದೆ. ಈ ಅಸೂಕ್ಷ್ಮತೆಯ ಜನಕರು ಸಮಾಜದ ಎಲ್ಲ ಸ್ತರಗಳಲ್ಲೂ ಕಾಣುತ್ತಾರೆ. ಈ ಸಮಾಜದಲ್ಲಿ ಲಿಂಗ ಸೂಕ್ಷ್ಮತೆ ಮತ್ತು ಮಹಿಳಾ ಸಂವೇದನೆಯನ್ನು ಬೆಳೆಸುವುದು ನಾಗರಿಕತೆಯ ನೈತಿಕ ಕರ್ತವ್ಯವಾಗಿರುತ್ತದೆ.
ಇಲ್ಲಿ ಭಾರತದ ಪಿತೃಪ್ರಧಾನ ಸಮಾಜ ಆತ್ಮಸಾಕ್ಷಿಯ ಕೊರತೆಯಿಂದ ಬಳಲುತ್ತಿರುವುದು ಸ್ಪಷ್ಟವಾಗುತ್ತದೆ. ಈ ಸಮಾಜದ ಆತ್ಮಸಾಕ್ಷಿ ಜೀವಂತಿಕೆಯಿಂದಿದ್ದರೆ ಬಿಲ್ಕಿಸ್ ಬಾನೋ ಅವರಂತಹ ಲಕ್ಷಾಂತರ ಹೆಣ್ಣುಮಕ್ಕಳು ತಮ್ಮ ಹೆಣ್ತನದ ಘನತೆ-ಗೌರವವನ್ನು ಸ್ವತಃ ಕಾಪಾಡಿಕೊಳ್ಳುವುದು ಸಾಧ್ಯ. ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರ ಮಾತುಗಳು ಇದನ್ನೇ ಧ್ವನಿಸುತ್ತವೆ. ಈ ತೀರ್ಪು ಚಾರಿತ್ರಿಕ ಮಹತ್ವ ಪಡೆಯಬೇಕಾದರೆ ಇದು ನಮ್ಮ ಸಮಾಜದ ಕಣ್ತೆರೆಸುವಂತಾಗಬೇಕು. ಮತ್ತೋರ್ವ ಸಾಕ್ಷಿ ಮಲ್ಲಿಕ್, ಬಿಲ್ಕಿಸ್ ಬಾನೋ ನಮ್ಮ ನಡುವೆ ಕಾಣಬಾರದು ಅಥವಾ ಅವರ ಕಂಬನಿ ಮಣ್ಣಾಗಬಾರದು. ಆತ್ಮಸಾಕ್ಷಿ ಇರುವ ಪ್ರತಿಯೊಬ್ಬರ ಆಶಯವೂ ಇದೇ ಆಗಿರಲು ಸಾಧ್ಯ.