ಒಕ್ಕಲಿಗ ಸಮುದಾಯಕ್ಕೆ ಸೇರಿದ ಅಪ್ರಾಪ್ತ ಹುಡುಗಿ ಸೌಜನ್ಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ನ್ಯಾಯಾಲಯ ಆದೇಶವನ್ನು ಪ್ರಶ್ನಿಸಿ, ಸಿಬಿಐ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ.
ಸಿಬಿಐ ನ್ಯಾಯಾಲಯವು ಸಂತೋಷ್ ರಾವ್ ನಿರಪರಾಧಿ ಎಂದು ಘೋಷಿಸಿದ ದಿನದಿಂದ ನಿಜವಾದ ಆರೋಪಿಗಳು ಯಾರು ಎನ್ನುವ ಪ್ರಶ್ನೆಗಳು ಕೇಳಿ ಬಂದವು. ಈ ಪ್ರಕರಣದ ಮರು ತನಿಖೆ ನಡೆಯಬೇಕು ಎಂಬ ಹತ್ತು ಹಲವು ಪ್ರತಿಭಟನೆ ಆದವು. ನ್ಯಾಯಾಲಯ ಆದೇಶ ಬಂದು ನಾಲ್ಕು ತಿಂಗಳ ಬಳಿಕ ಸಿಬಿಐ ಹೈಕೋರ್ಟ್ ಮೆಟ್ಟಲೇರಿದ್ದು, ಕರ್ನಾಟಕ ಹೈಕೋರ್ಟಿನಲ್ಲಿ ತೀರ್ಪು ಮರುಪರಿಶೀಲನೆಗೆ ಮೇಲ್ಮನವಿ ಸಲ್ಲಿಸಲಾಗಿದೆ.
ಸದ್ಯ ಸಿಬಿಐ ಸಲ್ಲಿಸಿರುವ ಮೇಲ್ಮನವಿಯನ್ನು ಹೈಕೋರ್ಟ್ ಅಂಗೀಕರಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ ಎಂದು ತಜ್ಞರು ಹೇಳಿದ್ದಾರೆ.

ಉಜಿರೆ ಕಾಲೇಜಿನ ವಿದ್ಯಾರ್ಥಿನಿಯನ್ನು ಅಪಹರಿಸಿ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು. ಅಕ್ಟೋಬರ್ 10, 2012ರಂದು ಧರ್ಮಸ್ಥಳ ಬಳಿಯ ಪಾಂಗಳ ಬಳಿ ಸೌಜನ್ಯ ಮೃತದೇಹ ಪತ್ತೆಯಾಗಿತ್ತು. ಪ್ರಕರಣ ಸಂಬಂಧ ಆರೋಪಿ ಸಂತೋಷ್ ರಾವ್ ಎಂಬಾತನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದರು. ನಂತರ ಅದರ ವಿಚಾರಣೆ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ನಡೆದಿತ್ತು. ನ್ಯಾಯಾಲಯವು ಸಂತೋಷ್ ರಾವ್ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಲು ಸಿಬಿಐ ಅಧಿಕಾರಿಗಳು ವಿಫಲರಾಗಿದ್ದಾರೆ ಎಂಬ ತೀರ್ಮಾನಕ್ಕೆ ಬಂದು ಆತನನ್ನು ನಿರಪರಾಧಿ ಎಂದು ಬಿಡುಗಡೆ ಮಾಡಿತ್ತು. 2023ರ ಜುಲೈ 16ರಂದು ನೀಡಿದ ತೀರ್ಪಿನ ವಿರುದ್ಧ ಈಗ ಮೇಲ್ಮನವಿ ಸಲ್ಲಿಸಲಾಗಿದೆ.






