ಬಿಗ್ ಬಾಸ್ (Bigg Boss) ಮನೆಯಲ್ಲಿ ಯಾರೂ ಮಿತ್ರರಲ್ಲ ಯಾರೂ ಶತ್ರುಗಳಲ್ಲ ಎಲ್ಲರ ಸ್ವಭಾವಗಳು ಸಮಯಕ್ಕೆ ತಕ್ಕಂತೆ ಬದಲಾಗುತ್ತದೆ ಎನ್ನುವುದಕ್ಕೆ ಇಂದಿನ ಸಂಚಿಕೆ ಸಾಕ್ಷಿಯಾಗಲಿದೆ. ವಿಲನ್ ಸಾಮ್ರಾಜ್ಯವಾಗಿದ್ದ ಈ ವಾರದ ಬಿಗ್ ಬಾಸ್ ಮನೆಯಲ್ಲಿ ಚಿತ್ರ ವಿಚಿತ್ರ ಟಾಸ್ಕ್‌ಗಳನ್ನು ಗೆದ್ದ ತಂಡದಿಂದ ಕೊನೆಯ ಟಾಸ್ಕ್ ಆಡಿ ರಾಶಿಕಾ(Rashika) ಈ ವಾರದ ಮನೆಯ ಕ್ಯಾಪ್ಟನ್ ಆಗಿದ್ದಾರೆ.

ಕ್ಯಾಪ್ಟನ್ಸಿ ಟಾಸ್ಕ್‌ಗೆ ಚೈತ್ರಾ ಕುಂದಾಪುರ ಉಸ್ತುವಾರಿ ಆಗಿದ್ದು, ಟಾಸ್ಕ್‌ಅನ್ನು ತಮಗೆ ಬಂದಂತೆ ನಡೆಸಿಕೊಂಡು ಬಂದರು. ಟಾಸ್ಕ್ ಆಡಿದ ಪ್ರತಿಯೊಬ್ಬರೂ ಕೂಡ ಶ್ರಮ ಹಾಕಿ ಆಡಿದ್ದರೆ, ಉಸ್ತುವಾರಿಯಿಂದ ಒಂದಿಷ್ಟು ಗೊಂದಲಗಳು ಹುಟ್ಟಿಕೊಂಡಿತು. ಇದರಿಂದ ಇತರ ಸ್ಪರ್ಧಿಗಳು ಅಸಮಾಧಾನ ಹೊರಹಾಕಿದ್ದು, ಸೂರಜ್ ಕೂಡ ಕ್ಯಾಪ್ಟನ್ಸಿ ಟಾಸ್ಕ್ ಸರಿಯಾಗಿಲ್ಲ ಎಂದು ವಾದ ಮಾಡಿದರು. ಇದರಿಂದ ಬೇಸರಗೊಂಡ ರಾಶಿಕಾ, ನಾನು ಕ್ಯಾಪ್ಟನ್ ಆದ ವಿಧಾನವೇ ತಪ್ಪು ಅಂದ ಮೇಲೆ ನಾನು ಗೆದ್ದಾಗ ಬಂದು ಯಾಕೆ ವಿಶ್ ಮಾಡಿದೆ ಎಂದು ಕೇಳಿದ್ದಾರೆ.

ಇದೇ ವಿಚಾರಕ್ಕೆ ಸೂರಜ್ ಹಾಗೂ ರಾಶಿಕಾ ನಡುವೆ ವಾಗ್ವಾದ ನಡೆದಿದ್ದು, ಇಬ್ಬರೂ ಕಿತ್ತಾಡಿಕೊಂಡಿದ್ದಾರೆ. ಆಪ್ತರರಾಗಿದ್ದ ಸೂರಜ್ ಹಾಗೂ ರಾಶಿಕಾ ಈ ವಿಚಾರಕ್ಕೆ ಜಗಳ ಮಾಡಿಕೊಂಡಿರುವಂತೆ ಪ್ರೋಮೋದಲ್ಲಿ ತೋರಿಸಲಾಗಿದೆ. ಮುಂದೆ ಏನಾಗಲಿದೆ ಎನ್ನುವುದನ್ನು ಇಂದಿನ ಸಂಚಿಕೆಯಲ್ಲಿ ಸಂಪೂರ್ಣವಾಗಿ ತಿಳಿಯಬೇಕಿದೆ.













