ಮೈಸೂರು : ಪಿರಿಯಾಪಟ್ಟಣ ಕ್ಷೇತ್ರ ಶಾಸಕ ಹಾಗೂ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವ ಕೂಡ ಆಗಿರುವ ಕೆ. ವೆಂಕಟೇಶ್ ಪುತ್ರನ ಕಾರುಬಾರು ಕ್ಷೇತ್ರದಲ್ಲಿ ಜೋರಾಗಿದೆ ಎಂಬ ಆರೋಪ ಕೇಳಿ ಬರ್ತಿದೆ. ಕೆಪಿಸಿಸಿ ಸದಸ್ಯ ಕೂಡ ಆಗಿರುವ ನಿತಿನ್ ತಂದೆಯ ಹೆಸರಿನಲ್ಲಿ ಕ್ಷೇತ್ರದಲ್ಲಿ ದರ್ಬಾರ್ ಮಾಡ್ತಿದ್ದಾರೆ ಎನ್ನಲಾಗಿದೆ.
ಜೂನ್ 11ರಂದು ಮಹಿಳೆಯರಿಗೆ ಉಚಿತ ಪ್ರಯಾಣ ಒದಗಿಸುವ ಶಕ್ತಿ ಯೋಜನೆಗೆ ಪಿರಿಯಾಪಟ್ಟಣ ಶಾಸಕ ಹಾಗೂ ಸಚಿವ ಕೆ. ವೆಂಕಟೇಶ್ ಬದಲು ಪುತ್ರ ನಿತಿನ್ ಚಾಲನೆ ನೀಡಿದ್ದಾರೆ. ಸರ್ಕಾರಿ ಕಾರ್ಯಕ್ರಮಗಳಲ್ಲಿ ತಂದೆಯ ಬದಲು ಪುತ್ರ ಕಾಣಿಸಿಕೊಳ್ತಿರೋದು ಪಕ್ಷದ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ.
ಶಾಸಕರ ಬದಲು ಪುತ್ರನ ಕೈಯಲ್ಲಿ ಶಕ್ತಿ ಯೋಜನೆಗೆ ಚಾಲನೆ ನೀಡಲು ಅನುವು ಮಾಡಿಕೊಡುವುದರ ಮೂಲಕ ಶಿಷ್ಟಾಚಾರ ಉಲ್ಲಂಘನೆ ಮಾಡಿದ ತಾಲೂಕಿನ ಹಿರಿಯ ಅಧಿಕಾರಿಗಳ ನಡೆ ಬಗ್ಗೆಯೂ ಸಾರ್ವಜನಿಕರು ಬೇಸರ ಹೊರ ಹಾಕಿದ್ದಾರೆ.