ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿವಾಹದ ವಿಚಾರ ಮತ್ತೆ ಪ್ರಸ್ತಾಪವಾಗಿದೆ. ಹರಿಯಾಣದ ರೈತ ಮಹಿಳೆಯರು ಇತ್ತೀಚೆಗೆ ದೆಹಲಿಯ ಮಾಜಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ದೆಹಲಿಯ ನಿವಾಸಕ್ಕೆ ಭೇಟಿ ನೀಡಿದಾಗ ಈ ಘಟನೆ ನಡೆದಿದೆ ಎಂದು ಶನಿವಾರ (ಜು.29) ವರದಿಯಾಗಿದೆ.
ಸೋನಿಯಾ ನಿವಾಸಕ್ಕೆ ಆಗಮಿಸಿದ ಹರಿಯಾಣದ ರೈತ ಮಹಿಳೆಯರಲ್ಲಿ ಒಬ್ಬರು ರಾಹುಲ್ ಅವರಿಗೆ ಮದುವೆ ಮಾಡಿ ಎಂದು ಕೇಳಿದ್ದಾರೆ. ಅದಕ್ಕೆ ಸೋನಿಯಾ ಅವರು “ನೀವೇ ನನ್ನ ಮಗನಿಗೆ ಸೂಕ್ತ ಹುಡುಗಿ ಹುಡುಕಿಕೊಡಿ” ಎಂದು ನಗು ಬೀರಿದ್ದಾರೆ.
ಸೋನಿಪತ್ ಜಿಲ್ಲೆಯ ಕೆಲವು ರೈತ ಮಹಿಳೆಯರಿಗೆ ಸೋನಿಯಾ ಗಾಂಧಿ ಅವರ ನಿವಾಸ ಜನಪಥ್ನಲ್ಲಿ ಉಪಾಹಾರ ಕೂಟ ಆಯೋಜಿಸಲಾಗಿತ್ತು. ಮಹಿಳೆಯರು ಸೋನಿಯಾ ಕುಟುಂಬದ ಜತೆ ಕೆಲಕಾಲ ಹರಟಿದ್ದಾರೆ.
ಜುಲೈ 8 ರಂದು ಸೋನಿಪತ್ನ ಮದೀನಾ ಗ್ರಾಮಕ್ಕೆ ರಾಹುಲ್ ಗಾಂಧಿ ಭೇಟಿ ನೀಡಿದ್ದರು. ಕೃಷಿ ಭೂಮಿಯಲ್ಲಿ ಕೆಲಸ ಮಾಡುತ್ತಿದ್ದ ರೈತರೊಂದಿಗೆ ಸಂವಾದ ನಡೆಸಿ, ಭತ್ತ ನಾಟಿ ಮಾಡಿ, ಟ್ರ್ಯಾಕ್ಟರ್ ಓಡಿಸಿ, ಹೊಲಗಳಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಮಹಿಳೆಯರು ತಂದ ಆಹಾರವನ್ನು ಸೇವಿಸಿದ್ದರು. ಈ ವೇಳೆ, ದೆಹಲಿ ದರ್ಶನಕ್ಕಾಗಿ ರೈತ ಮಹಿಳೆಯರನ್ನು ದೆಹಲಿಗೆ ಆಹ್ವಾನಿಸುವುದಾಗಿ ರಾಹುಲ್ ಮಹಿಳೆಯರಿಗೆ ಭರವಸೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಸೋನಿಪತ್ ಜಿಲ್ಲೆಯ ಕೆಲವು ಮಹಿಳಾ ರೈತರನ್ನು ಸೋನಿಯಾ ಗಾಂಧಿ ಅವರ ನಿವಾಸಕ್ಕೆ ಆಹ್ವಾನಿಸಿ, ಉಪಾಹಾರ ಕೂಟವನ್ನು ಆಯೋಜಿಸಲಾಗಿತ್ತು. ಈ ವೇಳೆ ಗಾಂಧಿ ಕುಟುಂಬದವರು ಮಹಿಳೆಯರೊಂದಿಗೆ ಮಾತುಕತೆ ನಡೆಸಿ, ಅವರೊಂದಿಗೆ ಆಹಾರ ಸೇವಿಸಿದ್ದಾರೆ.
ರೈತ ಮಹಿಳೆಯರೊಂದಿಗೆ ಮಾತುಕತೆ ನಡೆಸುತ್ತಿದ್ದ ವೇಳೆ, ಮಹಿಳೆಯೊಬ್ಬರು ರಾಹುಲ್ ಗಾಂಧಿ ಅವರಿಗೆ ಮದುವೆ ಮಾಡಿ ಎಂದು ಹೇಳಿದ ಮಾತಿಗೆ, “ನೀವೆ ನನ್ನ ಮಗನಿಗೆ ಸೂಕ್ತ ಹುಡುಗಿ ಹುಡುಕಿಕೊಡಿ” ಎಂದು ಸೋನಿಯಾ ಗಾಂಧಿ ಪ್ರತಿಕ್ರಿಯಿಸಿದ್ದಾರೆ.
ರೈತ ಮಹಿಳೆಯೊಂದಿಗಿನ ಮಾತುಕತೆ ಬಗ್ಗೆ ರಾಹುಲ್ ಅವರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿದ್ದಾರೆ.
“ಸೋನಿಪತ್ನ ರೈತ ಸಹೋದರಿಯರೊಂದಿಗಿನ ದೆಹಲಿ ದರ್ಶನ, ಮನೆಯಲ್ಲಿ ಅವರೊಂದಿಗಿನ ಮಧ್ಯಾಹ್ನದ ಊಟ, ಮಾತುಕತೆ ಮತ್ತು ಅವರ ಪ್ರೀತಿಯು ಬೆಲೆಕಟ್ಟಲಾಗದ ಉಡುಗೊರೆಗಳಾಗಿವೆ. ಇದು ನನಗೆ, ಪ್ರಿಯಾಂಕಾ ಮತ್ತು ಅಮ್ಮನಿಗೆ (ಸೋನಿಯಾ ಗಾಂಧಿ) ಕೆಲವು ವಿಶೇಷ ಅತಿಥಿಗಳೊಂದಿಗೆ ನೆನಪಿಡುವ ದಿನವಾಗಿದೆ” ಎಂದು ರಾಹುಲ್ ಗಾಂಧಿ ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕೇಂದ್ರದ ವಿರುದ್ಧ ಇಂಡಿಯಾ ಅವಿಶ್ವಾಸ ನಿರ್ಣಯ | ಇನ್ನು ಮೂರು ದಿನಗಳಲ್ಲಿ ಚರ್ಚೆಗೆ ಅವಕಾಶ
ಸೋನಿಪತ್ ರೈತ ಸಹೋದರಿಯರನ್ನು ದೆಹಲಿಗೆ ಕರೆದೊಯ್ಯುವುದಾಗಿ ರಾಹುಲ್ ಅವರು ಭರವಸೆ ನೀಡಿದ್ದರು. ಆ ಭರವಸೆಯನ್ನು ಈಡೇರಿಸಿದ್ದಾರೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ರಾಹುಲ್ ಗಾಂಧಿ ಅವರು ಹಂಚಿಕೊಂಡಿರುವ ವಿಡಿಯೊ ಒಂದು ತಾಸಿನಲ್ಲಿ 5 ಲಕ್ಷ ವೀಕ್ಷಣೆ ಪಡೆದಿದೆ. ಅನೇಕ ಟ್ವಿಟ್ಟಿಗರು ವಿಡಿಯೊಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.