ಕೋವಿಡ್ 19 ನಂತರದ ಆರೋಗ್ಯ ಸಮಸ್ಯೆಗಳ ಕಾರಣದಿಂದ ದಿಲ್ಲಿಯ ಗಂಗಾ ರಾಮ್ ಆಸ್ಪತ್ರೆಗೆ ದಾಖಲಾಗಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಲ್ಲಿ ಉಸಿರಾಟ ಸಂಬಂಧಿ ಶಿಲೀಂಧ್ರ ಸೋಂಕು ಕೂಡ ಉಂಟಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕಾಂಗ್ರೆಸ್ ಶುಕ್ರವಾರ ತಿಳಿಸಿದೆ.
ಈ ಕರಿತು ಹೇಳಿಕೆ ಬಿಡುಗಡೆ ಮಾಡಿರುವ ಕಾಂಗ್ರೆಸ್ ಪಕ್ಷ, ಸೋನಿಯಾ ಗಾಂಧಿ ತೀವ್ರ ನಿಗಾದಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ” ಎಂದಿದೆ.
“ಇತ್ತೀಚಿನ ಕೋವಿಡ್ ಸೋಂಕಿನ ಬಳಿಕ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಮೂಗಿನಲ್ಲಿ ವಿಪರೀತ ರಕ್ತಸ್ರಾವ ಉಂಟಾದ ಕಾರಣ ಜೂನ್ 12ರಂದು ಹೊಸದಿಲ್ಲಿಯ ಶ್ರೀ ಗಂಗಾ ರಾಮ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರನ್ನು ಕೂಡಲೇ ಚಿಕಿತ್ಸೆಗೆ ಒಳಪಡಿಸಲಾಗಿತ್ತು. ಗುರುವಾರ ಬೆಳಿಗ್ಗೆ ಫಾಲೋ ಅಪ್ ಪ್ರಕ್ರಿಯೆಗೆ ಕೂಡ ಒಳಗಾಗಿದ್ದರು” ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
“ದಾಖಲಾತಿ ಸಂದರ್ಭದಲ್ಲಿ ಅವರಲ್ಲಿ ಲೋವರ್ ರೆಸ್ಪಿರೇಟರಿ ಟ್ರ್ಯಾಕ್ಟ್‌ನಲ್ಲಿ ಶಿಲೀಂದ್ರ ಸೋಂಕು ಕೂಡ ಪತ್ತೆಯಾಗಿದೆ. ಅವರಿಗೆ ಪ್ರಸ್ತುತ ಇತರೆ ಕೋವಿಡ್ ನಂತರದ ಲಕ್ಷಣಗಳ ಜತೆಗೆ ಈ ಸಮಸ್ಯೆಗೂ ಕೂಡ ಚಿಕಿತ್ಸೆ ನೀಡಲಾಗುತ್ತಿದೆ. ಅವರು ತೀವ್ರ ನಿಗಾದಲ್ಲಿದ್ದು, ಚಿಕಿತ್ಸೆ ಮುಂದುವರಿದಿದೆ” ಎಂದು ಪಕ್ಷದ ಹೇಳಿಕೆ ತಿಳಿಸಿದೆ.