ನವದೆಹಲಿ: 21 ದಿನಗಳ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹದ ಬಳಿಕ ಪರಿಸರ ಹೋರಾಟಗಾರ ಹಾಗೂ ಸಂಶೋಧಕ ಸೋನಮ್ ವಾಂಗ್ಚುಕ್ ಅವರನ್ನು ದೆಹಲಿ ಪೊಲೀಸರು ಜಂತರ್ ಮಂತರ್ನಿಂದ ತೆರವುಗೊಳಿಸಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರ ಆರೋಗ್ಯ ಹದಗೆಟ್ಟಿರುವ ಹಿನ್ನೆಲೆಯಲ್ಲಿ ವೈದ್ಯರ ಸಲಹೆ ಮತ್ತು ದೆಹಲಿ ಹೈಕೋರ್ಟ್ ನಿರ್ದೇಶನದಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬೆಳವಣಿಗೆ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದ್ದು, ಪ್ರತಿಭಟನೆಯನ್ನು ಹತ್ತಿಕ್ಕುವ ಉದ್ದೇಶದಿಂದಲೇ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ. ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಜೆ. ಆಂಗ್ಮೋ ಕೂಡ, ಕುಟುಂಬದ ಹಾಗೂ ವೈದ್ಯರ ಒಪ್ಪಿಗೆಯಿಲ್ಲದೆ ಯಾವುದೇ ರೀತಿಯ ಬಲವಂತದ ಚಿಕಿತ್ಸೆ ನೀಡಬಾರದು ಎಂದು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಈ ಘಟನೆ ಮತ್ತೊಂದು ಪ್ರಮುಖ ಪ್ರಶ್ನೆಯನ್ನು ಹುಟ್ಟುಹಾಕಿದೆ—ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ವ್ಯಕ್ತಿಗೆ ಸರ್ಕಾರ ಬಲವಂತವಾಗಿ ಆಹಾರ ಅಥವಾ ಚಿಕಿತ್ಸೆ ನೀಡಬಹುದೇ?

ಭಾರತೀಯ ಕಾನೂನಿನಲ್ಲಿ ಇದಕ್ಕೆ ನೇರವಾದ ‘ಹೌದು’ ಅಥವಾ ‘ಇಲ್ಲ’ ಎಂಬ ಉತ್ತರ ಇಲ್ಲ. ಉಪವಾಸ ಸತ್ಯಾಗ್ರಹವು ಸಂವಿಧಾನ ನೀಡಿರುವ ಶಾಂತಿಯುತ ಪ್ರತಿಭಟನೆಯ ಹಕ್ಕಿನ ಭಾಗವಾಗಿದ್ದರೂ, ನಾಗರಿಕರ ಜೀವವನ್ನು ರಕ್ಷಿಸುವ ಜವಾಬ್ದಾರಿಯೂ ಸರ್ಕಾರದ ಮೇಲಿದೆ.
ದೆಹಲಿ ಹೈಕೋರ್ಟ್ ವಾಂಗ್ಚುಕ್ ಅವರಿಗೆ ಬಲವಂತವಾಗಿ ಆಹಾರ ನೀಡುವಂತೆ ಯಾವುದೇ ಆದೇಶ ನೀಡಿಲ್ಲ. ಬದಲಾಗಿ, ಪ್ರತಿದಿನ ಆರೋಗ್ಯ ತಪಾಸಣೆ ನಡೆಸಿ ಅಗತ್ಯ ವೈದ್ಯಕೀಯ ನೆರವು ಒದಗಿಸುವಂತೆ ಕೇಂದ್ರ ಮತ್ತು ದೆಹಲಿ ಸರ್ಕಾರಕ್ಕೆ ನಿರ್ದೇಶಿಸಿದೆ. “ಪ್ರತಿಯೊಬ್ಬ ನಾಗರಿಕನ ಜೀವ ಅಮೂಲ್ಯ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಸಂವಿಧಾನದ ವಿಧಿ 19 ಪ್ರತಿಭಟನೆಯ ಹಕ್ಕನ್ನು ಹಾಗೂ ವಿಧಿ 21 ಬದುಕುವ ಹಕ್ಕನ್ನು ರಕ್ಷಿಸುತ್ತದೆ. ಹೀಗಾಗಿ ಈ ಎರಡು ಹಕ್ಕುಗಳ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಸರ್ಕಾರ ಮತ್ತು ನ್ಯಾಯಾಲಯಗಳ ಪ್ರಮುಖ ಜವಾಬ್ದಾರಿಯಾಗಿದೆ.ಈ ಹಿಂದೆ ಅಣ್ಣಾ ಹಜಾರೆ, ಇರೋಮ್ ಶರ್ಮಿಳಾ ಹಾಗೂ ರೈತ ಮುಖಂಡರ ಉಪವಾಸ ಸತ್ಯಾಗ್ರಹಗಳ ಸಂದರ್ಭದಲ್ಲೂ ನ್ಯಾಯಾಲಯಗಳು ಮತ್ತು ಸರ್ಕಾರಗಳು ಪರಿಸ್ಥಿತಿಗೆ ಅನುಗುಣವಾಗಿ ವಿಭಿನ್ನ ಕ್ರಮಗಳನ್ನು ಅನುಸರಿಸಿದ್ದವು. ವಾಂಗ್ಚುಕ್ ಪ್ರಕರಣವೂ ಇದೇ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ.






