ಸಿಬಿಐ ಅಧಿಕಾರಿಗಳು ಮಾರಾಟವಾಗಿದ್ದಾರೆಂದು ಅರಿತು ಕೇಂದ್ರ ಸರ್ಕಾರ ಬಂಗಾಳದಲ್ಲಿ ಭ್ರಷ್ಟಾಚಾರದ ಬಗ್ಗೆ ಕ್ರಮ ಮತ್ತು ತನಿಖೆ ಮಾಡುವಂತೆ ಜಾರಿ ನಿರ್ದೇಶನಾಲಯಕ್ಕೆ ಸೂಚಿಸಲಾಗಿದೆ ಎಂದು ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ದಿಲೀಪ್ ಘೋಷ್ ಹೇಳಿರುವುದು ಈಗ ವ್ಯಾಪಕ ಚರ್ಚೆಯಾಗುತ್ತಿದೆ.
ಸಿಬಿಐ ಅಧಿಕಾರಿಗಳ ಒಂದು ವಿಭಾಗವು ಲಕ್ಷ / ಕೋಟಿಗಳಿಗೆ ಮಾರಾಟವಾಗಿದೆ. ಇದನ್ನು ತಿಳಿದ ಕೇಂದ್ರ ಸರ್ಕಾರವು ಬಂಗಾಳ ರಾಜ್ಯದಲ್ಲಿನ ವಿವಿಧ ಭ್ರಷ್ಟಾಚಾರದ ಪ್ರಕರಣಗಳ ಬಗ್ಗೆ ತನಿಖೆ ನಡೆಸುವಂತೆ ಇಡಿಯನ್ನು ಕೇಳಿದೆ. ಆಡಳಿತಾರೂಢ ಟಿಎಂಸಿಯು ಸಿಬಿಐನೊಂದಿಗೆ ಒಪ್ಪಂದ ಮಾಡಿಕೊಂಡಂತೆ ಇಡಿ ಜೊತೆ ಮಾಡಿಕೊಳ್ಳಲು ಸಾಧ್ಯವಾಗದ ಕಾರಣ ಹೆದರುತ್ತಿದೆ ಎಂದು ಸಂಸ್ಕೃತಿ ಸಚಿವಾಲಯ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಘೋಷ್ ಹೇಳಿದ್ದಾರೆ.
ಟಿಎಂಸಿ ಮೇಲೆ ಸಿಬಿಐ ಮತ್ತು ಇಡಿ ನಡೆಸುತ್ತಿರುವ ತನಿಖೆಯು ನ್ಯಾಯಾಂಗದ ಅಡಿಯಲ್ಲಿನ ವಿಷಯ ಎಂದು ಬಿಜೆಪಿ ಹೇಳುತ್ತಿದ್ದರೆ ಇತ್ತ ಘೋಷ್ ಈ ರೀತಿಯ ಹೇಳಿಕೆ ನೀಡಿದ್ದು ಬಂಗಾಳದಲ್ಲಿನ ಆಡಳಿತರೂಢ ಪಕ್ಷಕ್ಕೆ ಹೊಸ ಅಸ್ತ್ರಕೊಟ್ಟಂತೆ ಆಗಿದೆ.

ಕೇಂದ್ರೀಯ ಸಂಸ್ಥೆಗಳು ಕೇಂದ್ರ ಸರ್ಕಾರದ ಆದೇಶದಂತೆ ಕಾರ್ಯನಿರ್ವಹಿಸುತ್ತವೆ ಎಂದು ಟಿಎಂಸಿ ಸೇರಿದಂತೆ ವಿರೋಧ ಪಕ್ಷಗಳು ಟೀಕಿಸುತ್ತಾ ಬಂದಿದ್ದು ಈ ರೀತಿಯ ಹೇಳಿಕೆಯನ್ನು ಟಿಎಂಸಿ ಉಲ್ಲೇಖಿಸಿ ನಮ್ಮ ವಿರುದ್ಧ ಕಿಡಿಕಾರಲಿದ್ದಾರೆ. ಅಲ್ಲದೆ ವಿರೋಧ ಪಕ್ಷಗಳ ಆರೋಪವನ್ನು ಬಲಪಡಿಸುತ್ತದೆ ಎಂದು ಬಿಜೆಪಿ ನಾಯಕರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.