ಲಿಂಗಾಯತ ಸಮುದಾಯದ ಪ್ರಬಲ ನಾಯಕ ವಿ ಸೋಮಣ್ಣ ಭಾರತೀಯ ಜನತಾ ಪಾರ್ಟಿಯನ್ನು ಬಿಟ್ಟು ಹೊರಡುವ ಸಮಯ ಬಂದಿದೆಯಾ..? ಅನ್ನೋ ಅನುಮಾನ ಕಾಡುತ್ತಿದೆ. ಬಿಜೆಪಿ ಹೈಕಮಾಂಡ್ ನಾಯಕರು ಸೂಚನೆ ಕೊಟ್ಟರು ಅನ್ನೋ ಕಾರಣಕ್ಕೆ ವರುಣಾ ಹಾಗು ಚಾಮರಾಜನಗರದಲ್ಲಿ ಸ್ಪರ್ಧೆ ಮಾಡಿದ್ದರು. ಗೋವಿಂದರಾಜನಗರ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರೆ, ಸರಳವಾಗಿ ಗೆಲುವು ಕಾಣ್ತಿದ್ದ ವಿ ಸೋಮಣ್ಣ, ಹೈಕಮಾಂಡ್ ಮಾತು ಕೇಳಿ ಸೋಲುಂಡು ಮನೆಯಲ್ಲಿದ್ದಾರೆ. ವಿಧಾನಸಭೆ ಚುನಾವಣೆಯ ಸೋಲಿನ ಹತಾಶೆ ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಕೈತಪ್ಪಿದ್ದಕ್ಕೆ ಅಸಮಾಧಾನಗೊಂಡಿದ್ದು ಕೆರಳಿ ಕೆಂಡವಾಗಿದ್ದಾರೆ..
ಶ್ರೀಗಳ ಎದುರು ಸೋಲಿನ ಬೇಸರ ಬಿಚ್ಚಿಟ್ಟ ಸೋಮಣ್ಣ..!
ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಪುತ್ರ ಬಿ.ವೈ ವಿಜಯೇಂದ್ರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ಮಾಡಿದ್ದಾರೆ. ಬಿಜೆಪಿ ಬಿಟ್ಟು ಹೊರ ಹೋಗುವ ಬಗ್ಗೆ ವಿ. ಸೋಮಣ್ಣ ಸುಳಿವು ಕೊಟ್ಟಿದ್ದಾರೆ. ಡಿಸೆಂಬರ್ 6ರ ಬಳಿಕ ಕಾದು ನೋಡಿ ಅನ್ನೋ ಮೂಲಕ ಸಸ್ಪೆನ್ಸ್ ಇಟ್ಟಿದ್ದಾರೆ. ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದ ವಿ ಸೋಮಣ್ಣ, ಶಿವಕುಮಾರ ಶ್ರೀಗಳ ಗದ್ದುಗೆಗೆ ಪತ್ನಿ ಜೊತೆ ವಿಶೇಷ ಪೂಜೆ ಸಲ್ಲಿಸಿದ್ರು. ಆ ಬಳಿಕ ಶ್ರೀಗಳ ಎದುರು ಬಿಜೆಪಿಯಲ್ಲಿ ನಡೆದ ಇತ್ತೀಚಿನ ವಿದ್ಯಮಾನಗಳನ್ನು ಹೇಳಿಕೊಳ್ಳುತ್ತಾ ಭಾವುಕರಾದ್ರು. ಶ್ರೀಗಳ ಮುಂದೆ ಸೋಮಣ್ಣ ಚುನಾವಣಾ ಸೋಲಿನ ನೋವನ್ನು ತೋಡಿಕೊಂಡ್ರು. ಸ್ಥಳೀಯ ಮುಖಂಡರೊಬ್ಬರು ಕ್ಷೇತ್ರ ಬಿಟ್ಟು ಹೋಗಬಾರದಿತ್ತು ಎಂದಾಗ, ಹೌದು ನಾನು ಮಾಡಿದ ಮಹಾ ಅಪರಾಧ ಎನ್ನುವ ಮೂಲಕ ಮನಸ್ಸಲ್ಲಿದ್ದ ಸಿಟ್ಟು ಹತಾಶೆ, ಬೇಸರ ಹೊರಹಾಕಿದ್ರು.
ನೂತನ ಅಧ್ಯಕ್ಷರು, ಯಡಿಯೂರಪ್ಪ ವಿರುದ್ಧ ಗರಂ..!
ಅಮಿತ್ ಷಾ ಅವರು ಬಂದು ಎರಡ್ಮೂರು ಗಂಟೆ ಮನೆಯಲ್ಲಿ ಕುಳಿತುಬಿಟ್ರು. ಅವರೇ ಸ್ಪರ್ಧೆ ಮಾಡು ಅಂದ್ಮೇಲೆ ನಾನೇನು ಮಾಡಬೇಕು. ಏನ್ ಮಾಡಲಿ..? ಹೇಳಿ ಸ್ವಾಮೀಜಿ ಅಂತಾ ಸೋಮಣ್ಣ ತಮ್ಮ ಸೋಲಿನ ಬಗ್ಗೆ ಮನಬಿಚ್ಚಿ ಮಾತನಾಡಿದ್ರು. ಇನ್ನು ಬಿ.ಎಸ್ ಯಡಿಯೂರಪ್ಪ ಹಾಗೂ ಬಿ.ವೈ ವಿಜಯೇಂದ್ರ ವಿರುದ್ಧ ಸಿಡಿದೆದ್ದಿರುವ ವಿ. ಸೋಮಣ್ಣ ಡಿಸೆಂಬರ್ 7ರಂದು ದೆಹಲಿಗೆ ಹೋಗ್ತಿದ್ದಾರೆ. ಬಿಜೆಪಿ ಅಸಮಾಧಾನಿತರು ಸಹ ತೆರಳ್ತಿದ್ದು, ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಲಿಂಬಾವಳಿ, ಅರವಿಂದ್ ಬೆಲ್ಲದ್, ರಮೇಶ್ ಜಾರಕಿಹೊಳಿ ಜೊತೆ ಹೈಕಮಾಂಡ್ ಭೇಟಿ ಮಾಡಿ ಬಿ.ಎಸ್ ಯಡಿಯೂರಪ್ಪ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.
ಸೋಮಣ್ಣರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡ್ತೇವೆ..!
ಮಾಜಿ ಸಚಿವ ವಿ ಸೋಮಣ್ಣ ಕಣ್ಣೀರಿನ ವಿಚಾರಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಮಾತನಾಡಿದ್ದು, ಫೋನಲ್ಲಿ ಮಾತಾಡೋ ಪ್ರಯತ್ನ ಮಾಡಿದ್ದೇವೆ. ಅವರನ್ನ ಪಕ್ಷದಲ್ಲಿ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತೇವೆ. ಉಳಿಸಿಕೊಳ್ಳಲು ಆಗದಿದ್ದರೆ ಏನು ಮಾಡೋಕೆ ಆಗುತ್ತೆ ಎಂದಿದ್ದಾರೆ. ಇನ್ನು ಪಕ್ಷದಲ್ಲಿ ಅತೃಪ್ತಿ ಏನೇ ಇರಲಿ, ಬಹಿರಂಗ ಚರ್ಚೆ ಬೇಡ ಸೋಮಣ್ಣ ಹೈಕಮಾಂಡ್‌ಗೆ ದೂರು ನೀಡುತ್ತಿರುವ ಕುರಿತು ಮಾಹಿತಿ ಇಲ್ಲ. ನಿಮ್ಮ ಕುಂದು ಕೊರತೆಗಳು ಏನೇ ಇರಲಿ ಅದನ್ನು ರಾಷ್ಟ್ರೀಯ ಅಧ್ಯಕ್ಷರಿಗೆ ಗಮನಕ್ಕೆ ತರಲಿ. ಇತರ ರಾಷ್ಟ್ರೀಯ ನಾಯಕರಿಗೆ ಮಾಹಿತಿ ನೀಡಲಿ. ಮಾಧ್ಯಮದ ಮೂಲಕ ಇದನ್ನು ಚರ್ಚಿಸುವುದು ಒಳ್ಳೆಯದಲ್ಲ.. ವಿ ಸೋಮಣ್ಣ ನಮ್ಮ ಪಕ್ಷದ ಹಿರಿಯ ನಾಯಕರು, ಅವರನ್ನ ವಿಶ್ವಾಸದಿಂದ ಕೈ ಹಿಡಿದು ಕರೆದುಕೊಂಡು ಹೋಗುವ ಕೆಲಸ ಆಗುತ್ತೆ ಅಂತಾ ಮಾಜಿ ಸಚಿವ ಅಶ್ವತ್ಥ ನಾರಾಯಣ್ ಹೇಳಿದ್ದಾರೆ.
‘ತುಮಕೂರು ಟಿಕೆಟ್ ಸೋಮಣ್ಣಗೆ ಕೊಟ್ಟರೆ ಒಳ್ಳೇದು’
ವಿ ಸೋಮಣ್ಣ ನಮ್ಮ ಪಕ್ಷದ ಹಿರಿಯ ನಾಯಕರು. ನಮ್ಮ ಪಕ್ಷದಲ್ಲಿ ಅವರಿಗೆ ಸಂಪೂರ್ಣ ಗೌರವ ಇದೆ. ಅವರನ್ನು ವಿಶ್ವಾಸದಿಂದ ಕೈ ಹಿಡಿದುಕೊಂಡು ಕರೆದುಕೊಂಡು ಹೋಗುವ ಕೆಲಸ ಬಿಜೆಪಿಯಿಂದ ಆಗುತ್ತದೆ. ಚುನಾವಣೆ ಅಂದ ಮೇಲೆ ಸೋಲು ಗೆಲುವು ಸಹಜ.. ಸೋಮಣ್ಣ ಇಂದೂ, ಮುಂದು ಎಂದೆಂದೂ ನಮ್ಮ ಜೊತೆಯೇ ಇರುತ್ತಾರೆ.. ಅವರ ನೋವು, ಅವರ ಅಳಲು ದೂರ ಮಾಡುವ ಕೆಲಸ ಬಿಜೆಪಿ ನಾಯಕರು ಮಾಡುತ್ತಾರೆ ಎಂದು ಹಲವು ನಾಯಕರು ಹೇಳಿದ್ದಾರೆ. ಈ ಮಧ್ಯೆ ಸೋಮಣ್ಣ ಪರ ತುಮಕೂರು ಸಂಸದ ಜಿ.ಎಸ್ ಬಸವರಾಜ್ ಬ್ಯಾಟಿಂಗ್ ಮಾಡಿದ್ದಾರೆ.. ಸೋಮಣ್ಣರಿಗೆ ತುಮಕೂರಿನಿಂದ ಟಿಕೆಟ್ ನೀಡಿದ್ರೆ ನಾನು ಬೆಂಬಲಿಸ್ತೀನಿ ಎಂದಿದ್ದಾರೆ. ಜೊತೆಗೆ ನನ್ನನ್ನ ಕಾಂಗ್ರೆಸ್ ಪಕ್ಷದವರು ಕರೀತಿದ್ದಾರೆ ಅಂತಾನೂ ಹೇಳುವ ಮೂಲಕ ಹೊಸ ಟ್ವಿಸ್ಟ್ ಕೂಡ ಕೊಟ್ಟಿದ್ದಾರೆ.
ಕೃಷ್ಣಮಣಿ