ಇತ್ತೀಚೆಗೆ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಯಾರಿಗೆ ಸಚಿವ ಸ್ಥಾನ ಸಿಗಲಿದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಜೋರಾಗಿಯೇ ನಡೆಯುತ್ತಿದೆ. ಹೇಗಾದರೂ ಮಂತ್ರಿ ಸ್ಥಾನ ಪಡೆಯಲೇಬೇಕು ಎಂದು ಸಾಕಷ್ಟು ಬಿಜೆಪಿ ನಾಯಕರು ಹೈಕಮಾಂಡ್ ಬಳಿ ಲಾಬಿಗೆ ಮುಂದಾಗಿದ್ದಾರೆ. ಹೀಗಿರುವಾಗಲೇ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಸಚಿವ ಸಂಪುಟದಲ್ಲಿದ್ದ ಹಿರಿಯ ಬಿಜೆಪಿ ನಾಯಕರಿಗೆ ಕೋಕ್ ನೀಡಲಾಗುವುದು ಬಹುತೇಕ ಫಿಕ್ಸ್ ಆಗಿದೆ.
ಬಿ.ಎಸ್ ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಜೆ.ಸಿ ಮಾಧುಸ್ವಾಮಿ, ಕೆ.ಎಸ್ ಈಶ್ವರಪ್ಪ, ಸುರೇಶ್ ಕುಮಾರ್ ಸೇರಿದಂತೆ ವಿ. ಸೋಮಣ್ಣಗೂ ಹೈಕಮಾಂಡ್ ಕೋಕ್ ನೀಡಲಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ನಾನು ರಾಜ್ಯದ ಹಿರಿಯ ಬಿಜೆಪಿ ನಾಯಕ, ನಮ್ಮ ಸಮುದಾಯದ ಕೋಟಾದಡಿ ನನಗೆ ಸಚಿವ ಸ್ಥಾನ ನೀಡಲಿ ಎಂದು ವಿ. ಸೋಮಣ್ಣ ಲಾಬಿಗೆ ನಡೆಸುತ್ತಿದ್ದಾರೆ. ಇದಕ್ಕಾಗಿ ಬಿ.ಎಸ್ ಯಡಿಯೂರಪ್ಪ ಮೂಲಕ ಹೈಕಮಾಂಡ್ ಮೇಲೆ ಒತ್ತಡ ಹಾಕಲಾಗುತ್ತಿದೆ. ಮಂತ್ರಿ ಸ್ಥಾನ ನೀಡದೆ ಹೋದಲ್ಲಿ ಬಿಜೆಪಿ ಪಕ್ಷದಿಂದ ದೂರ ಉಳಿಯುವುದಾಗಿ ಹೇಳಿದ್ದಾರಂತೆ ವಿ. ಸೋಮಣ್ಣ.
ಹಿರಿಯ ನಾಯಕರನ್ನು ಪಕ್ಷ ಸಂಘಟನೆಗೆ ಬಳಸಿಕೊಳ್ಳಬೇಕು. ಪಕ್ಷದ ಬಲವರ್ಧನೆಗಾಗಿ ಹೊಸ ಮುಖಗಳಿಗೆ ಸಚಿವ ಸ್ಥಾನ ನೀಡಬೇಕು ಎಂಬುದು ಹೈಕಮಾಂಡ್ ಪ್ಲಾನ್. ಆದರೆ, ಹಿರಿಯರನ್ನು ಸಂಪುಟದಿಂದ ಬಿಡೋದು ಅಷ್ಟು ಸುಲಭವಲ್ಲ. ಒಂದು ವೇಳೆ ಹೀಗೆ ಮಾಡಿದರೆ ಬಿಜೆಪಿಯಲ್ಲಿ ಬಂಡಾಯ ಸಾಧ್ಯತೆ ಇದೆ. ಹಾಗಾಗಿ ಕೆಲವರನ್ನು ಬಿಟ್ಟು ಒಂದಿಷ್ಟು ಹೊಸ ಮುಖಗಳನ್ನು ಮಣೆ ಹಾಕುವಂತೆ ಬಿ.ಎಸ್ ಯಡಿಯೂರಪ್ಪ ಹೈಕಮಾಂಡ್ಗೆ ಸಲಹೆ ನೀಡಿದ್ದಾರಂತೆ.
ಇನ್ನು, ಕೆಲವು ಹಿರಿಯರಿಗೆ ಸಂಪುಟದಲ್ಲಿ ಅವಕಾಶ ಮಾಡಿಕೊಡುವ ಸಾಲಿನಲ್ಲಿ ವಿ. ಸೋಮಣ್ಣ ಹೆಸರು ಕೇಳಿ ಬಂದಿದೆ. ಆದರೆ, ವಿ. ಸೋಮಣ್ಣಗೆ ಸಚಿವ ಸ್ಥಾನ ನೀಡುವುದಕ್ಕೆ ಡಿಸಿಎಂ ಆರ್. ಅಶೋಕ್ ಆಕ್ಷೇಪವಿದೆಯಂತೆ. ಇತ್ತೀಚೆಗೆ ದೆಹಲಿಗೆ ಹೋಗಿದ್ದ ಅಶೋಕ್, ಸಂಪುಟಕ್ಕೆ ವಿ. ಸೋಮಣ್ಣ ಅವರನ್ನು ಸೇರಿಸಿಕೊಳ್ಳದಂತೆ ವರಿಷ್ಠರಿಗೆ ದೂರು ನೀಡಿದ್ದಾರಂತೆ. ಹೀಗಾಗಿ ಖುದ್ದು ಅಶೋಕ್ಗೆ ಕರೆ ಮಾಡಿದ ವಿ. ಸೋಮಣ್ಣ, ಸೇಡಿನ ರಾಜಕೀಯ ಮಾಡುತ್ತೀಯಾ ಎಂದು ಪ್ರಶ್ನಿಸಿದ್ದಾರಂತೆ.
ಸೋಮಣ್ಣ ಮತ್ತು ಆರ್. ಅಶೋಕ್ ಪರಸ್ಪರ ಏಕವಚನದಲ್ಲಿ ಕಿತ್ತಾಡಿಕೊಂಡ ವಿಚಾರವೀಗ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಮೊಬೈಲ್ನಲ್ಲೇ ಪರಸ್ಪರ ಏಕವಚನ ಮತ್ತು ಕೆಟ್ಟ ಪದಗಳನ್ನು ಬಳಸಿ ಜಗಳವಾಡಿಕೊಂಡಿದ್ದಾರಂತೆ. ಇವರ ಆಡಿಯೋ ತುಣುಕು ಬಿಜೆಪಿಯಲ್ಲಿ ಕೆಲವರಿಗೆ ಲಭ್ಯವಾಗಿದ್ದು, ಹೈಕಮಾಂಡ್ಗೆ ದೂರು ಹೋಗಿದೆಯಂತೆ.
ನಾನು ರಾಜಕೀಯಕ್ಕೆ ಬಂದಾಗ ನೀನು ಮಂತ್ರಿಯೂ ಆಗಿರಲಿಲ್ಲ. ಕೆಲವು ವಿಚಾರಗಳನ್ನು ನಿನಗೆ ನೇರವಾಗಿ ಹೇಳಬೇಕು. ನಾನು ರಾಜಕಾರಣ ಶುರು ಮಾಡಿ ಐವತ್ತು ವರ್ಷ ಆಯ್ತು. ನನಗೆ ಮಂತ್ರಿ ಸ್ಥಾನ ಬೇಕು. ಪಕ್ಷ ಜವಾಬ್ದಾರಿ ಕೊಟ್ರೆ ನಿಭಾಯಿಸುತ್ತೇನೆ, ಅಧಿಕಾರ ಕೊಡೋದು ಸಿಎಂ ಮತ್ತು ಹೈಕಮಾಂಡ್. ನನ್ನ ಬಗ್ಗೆ ನೀನು ದೂರು ನೀಡಿದ್ಯಾಕೇ ಎಂದು ಆರ್. ಅಶೋಕ್ಗೆ ವಿ. ಸೋಮಣ್ಣ ಕ್ಲಾಸ್ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿರುವ ವಿ. ಸೋಮಣ್ಣ, ಬಿಜೆಪಿಗೆ ಬಂದು 12 ವರ್ಷ ಆಗಿದೆ. ನಾನು ದೆಹಲಿಗೆ ಹೋಗಲ್ಲ, ಅದರ ಅಗತ್ಯವೂ ಇಲ್ಲ. ಮಂತ್ರಿಯಾದ ಮೇಲೆ ಒಂದೇ ಸಲ ದೆಹಲಿಗೆ ಹೋಗಿದ್ದೇನೆ. ಅಶೋಕ್ ಜತೆ ಇದ್ದ ವೈಮನಸ್ಸು ತಿಳಿಯಾಗಿದೆ. ನಾಲ್ಕು ಗೋಡೆ ಮಧ್ಯೆ ಮಾತಾಡಿ ಬಗೆಹರಿಸಿಕೊಂಡಿದ್ದೇನೆ ಎಂದಿದ್ದಾರೆ.
ಮೊದಲಿನಿಂದಲೂ ಬೆಂಗಳೂರು ಬಿಜೆಪಿ ಹಿಡಿತಕ್ಕಾಗಿ ಆರ್. ಅಶೋಕ್ ಮತ್ತು ವಿ. ಸೋಮಣ್ಣ ನಡುವೆ ಜಗಳ ನಡೆಯುತ್ತಲೇ ಇದೆ. ಎಷ್ಟೋ ಬಾರಿ ಬಿ.ಎಸ್ ಯಡಿಯೂರಪ್ಪ ಮತ್ತು ಪಕ್ಷದ ವರಿಷ್ಠರ ಸುಮ್ಮುಖದಲ್ಲೇ ಇಬ್ಬರು ಕೈ ಕೈ ಮಿಲಾಯಿಸೋ ಹಂತಕ್ಕೆ ಹೋಗಿದ್ದರು ಎನ್ನಲಾಗಿದೆ. ಹೀಗಾಗಿ ವಿ. ಸೋಮಣ್ಣಗೆ ಸಚಿವ ಸ್ಥಾನ ತಪ್ಪಿಸಿ ಬೆಂಗಳೂರಿನಲ್ಲಿ ಆರ್. ಅಶೋಕ್ ಅಧಿಪತ್ಯ ಸಾಧಿಸೋ ಯೋಚನೆ.
ನಿಮ್ಮಿಬ್ಬರ ನಡುವೆ ಯಾವುದೇ ಮನಸ್ತಾಪ ಇಲ್ಲ.
ಯಾವುದೋ ಕಾಲದಲ್ಲಿ ನಡೆದ ಚರ್ಚೆಯನ್ನೆ ಇದೀಗ ಸಂಪುಟ ವಿಚಾರಕ್ಕೆ ತಳುಕು ಹಾಕಲಾಗುತ್ತಿದೆ ಎಂದು ಮಾಧ್ಯಮಕ್ಕೆ ಸ್ಪಷ್ಟನೆ ನೀಡುವಂತೆ ಹೈಕಮಾಂಡ್ ಇಬ್ಬರು ನಾಯಕರಿಗೂ ಸೂಚನೆ ನೀಡಿದೆ ಎನ್ನಲಾಗಿದೆ. ಆದ್ದರಿಂದ ವಿ. ಸೋಮಣ್ಣ ಈಗ ಅಶೋಕ್ ಜತೆ ವೈಮನಸ್ಯ ಇಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.






