ಬೆಂಗಳೂರಿನಲ್ಲಿ ಇಂದು ದಿಢೀರನೆ ಸಬ್ ರಿಜಿಸ್ಟ್ರಾರ್ (sub registrar) ಕಚೇರಿಗಳಲ್ಲಿ ಆಸ್ತಿ ನೋಂದಣಿಗೆ ಬ್ರೇಕ್ ಬಿದ್ದಿದ್ದರಿಂದ ಜನರು ಆಕ್ರೋಶಗೊಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕಂದಾಯ ಇಲಾಖೆ ವ್ಯಾಪ್ತಿಗೆ ಬೆಂಗಳೂರಿನ 43 ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಆಸ್ತಿ ನೋಂದಣಿ ಗುರುವಾರ ದಿಢೀರನೆ ನಿಲ್ಲಿಸಲಾಗಿತ್ತು. ಸ್ವತಃ ಅಧಿಕಾರಿಗಳಿಗೆ ಈ ಮಾಹಿತಿ ಇಲ್ಲದ ಕಾರಣ ಗೊಂದಲದ ವಾತಾವರಣ ಏರ್ಪಟ್ಟರೆ, ಸಾರ್ವಜನಿಕರು ಕಾರಣ ತಿಳಿಯದೇ ಆಕ್ರೋಶಗೊಂಡರು.
ಗುರುವಾರ ಬೆಳಿಗ್ಗೆನೇ ನಗರದ ಆಸ್ತಿ ನೋಂದಣಿ ಮಾಡಿಕೊಳ್ಳಲು ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೆ ಆಗಮಿಸಿದ್ದ ಸಾವಿರಾರು ನಾಗರಿಕರು ಬರಿಗೈಯಲ್ಲಿ ಮರಳಿದ್ದಾರೆ. ಸ್ಪಷ್ಟ ಮಾಹಿತಿ ಇಲ್ಲದ ಅಧಿಕಾರಿಗಳು ಜನರಿಗೆ ಉತ್ತರ ಹೇಳಲೂ ಆಗದೇ ಸಮರ್ಪಕ ಮಾಹಿತಿ ನೀಡಲು ಆಗದೇ ನಾಗರಿಕರಿಂದ ನಿಂದನೆಗೆ ಒಳಗಾಗಿದ್ದಾರೆ.
ಹೌದು, ಮುನ್ನೆಚ್ಚರಿಕೆ ಅಥವಾ ಪೂರ್ವ ಸಿದ್ದತೆ ಇಲ್ಲದೇ ಏಕಾಏಕಿ ಸರಕಾರ ಮಾಡುವ ಕೆಲಸಗಳು ಕೆಲವೊಮ್ಮೆ ಅಧಿಕಾರಿಗಳನ್ನು ಮುಜುಗರಕ್ಕೆ ಒಳಪಡಿಸಿದರೆ, ದೂರದಿಂದ ಬಂದ ನಾಗರಿಕರು ಕೆಲಸ ಆಗದೇ ಸೂಕ್ತ ಮಾಹಿತಿಯೂ ಇಲ್ಲದೇ ಅಸಮಾಧಾನಗೊಳ್ಳುವಂತಾಗಿದೆ. ಇದಕ್ಕೆ ಗುರುವಾರ ನಡೆದ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿನ ಗೊಂದಲವೇ ಕಾರಣ.
ಇಷ್ಟಕ್ಕೂ ಆಗಿದ್ದೇನು?
ಕಂದಾಯ ಇಲಾಖೆ ಕಾಲಕಾಲಕ್ಕೆ ಆಸ್ತಿ ನೋಂದಣಿ ವೆಬ್ ಸೈಟ್ ನ ಸಾಫ್ಟ್ ವೇರ್ ಅಪ್ ಡೇಟ್ ಮಾಡಲು ಮುಂದಾಗಿದೆ. ಸಾಫ್ಟ್ ವೇರ್ ಅಪ್ ಡೇಟ್ ಮಾಡುವಾಗ ಬಿಡಿಎ ಆಸ್ತಿ ನೋಂದಣಿ ವಿಭಾಗದ ರಿಜಿಸ್ಟ್ರೇಷನ್ ಕೆಟಗರಿ ವಿಭಾಗ ಕೈಕೊಟ್ಟಿದೆ. ಅಧಿಕಾರಿಗಳು ಎಷ್ಟೇ ಪ್ರಯತ್ನಿಸಿದರೂ ನೋಂದಣಿ ಮಾಡಿಕೊಳ್ಳಲು ಆಗಲಿಲ್ಲ.
ನಂತರ ಮೇಲಾಧಿಕಾರಿಗಳನ್ನು ಸಂಪರ್ಕಿಸಿದಾಗ ಸಾಫ್ಟ್ ವೇರ್ ಅಪ್ ಡೇಟ್ ನಡೆಯುತ್ತಿದೆ. ಹಾಗಾಗಿ ಇವತ್ತು ಆಸ್ತಿ ನೋಂದಣಿ ನಡೆಯುವುದಿಲ್ಲ. ನಾಳೆ ಸರಿಹೋಗಬಹುದು ಎಂಬ ಹಾರಿಕೆ ಉತ್ತರ ಬಂದಿದೆ. ನಾಗರಿಕರ ಅದೃಷ್ಟ ಚೆನ್ನಾಗಿದ್ದರೆ ನಾಳೆ ಸರಿಹೋಗುತ್ತದೆ. ಅದು ಎಷ್ಟು ಹೊತ್ತಿಗೆ ಎಂಬುದು ತಿಳಿದಿಲ್ಲ. ಇಲ್ಲದಿದ್ದರೆ ಶನಿವಾರ ಸರಿ ಹೋಗಬಹುದು ಎಂದು ಹೇಳಲಾಗುತ್ತಿದೆ. ಅಂದರೆ ಶನಿವಾರ ಭಾನುವಾರ ಬಿಟ್ಟರೆ ಸೋಮವಾರದವರೆಗೂ ಜನರು ಆಸ್ತಿ ನೋಂದಣಿಗೆ ಕಾಯಬೇಕಾಗುತ್ತದೆ.
ತಾಂತ್ರಿಕ ದೋಷದಿಂದ ಕೇವಲ ಬಿಡಿಎ ನಿವೇಶನ ಹಾಗೂ ಆಸ್ತಿ ನೋಂದಣಿ ಮಾತ್ರ ಈ ರೀತಿ ಆಗಿದ್ದು, ಬಿಬಿಎಂಪಿ ಆಸ್ತಿ ನೋಂದಣಿಗೆ ಯಾವುದೇ ಪ್ರಕ್ರಿಯೆಗೆ ಅಡ್ಡಿಯಾಗಿಲ್ಲ ಎಂದು ಅಧಿಕಾರಿಯೊಬ್ಬರು ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ 43 ಸಬ್ ರಿಜಿಸ್ಟ್ರಾರ್ ಕಚೇರಿಗಳಿದ್ದು, ಇಲ್ಲಿ ಪ್ರತಿನಿತ್ಯ 50ರಿಂದ 100 ಆಸ್ತಿ ನೋಂದಣಿಗಳು ನಡೆಯುತ್ತವೆ. ಅಂದರೆ ಪ್ರತಿದಿನ ಸುಮಾರು 50 ಕೋಟಿ ರೂ.ವಷ್ಟು ವಹಿವಾಟು ನಡೆಯುತ್ತದೆ. ಮಾಸಿಕ ೨೦೦೦ ಕೋಟಿ ವರೆಗೂ ದಾಟುತ್ತದೆ. ಕೋಟ್ಯಂತರ ರೂಪಾಯಿ ಆದಾಯ ತರುವ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲೇ ಈ ರೀತಿ ಪದೇಪದೆ ಆಸ್ತಿ ನೋಂದಣಿಗೆ ಸಮಸ್ಯೆ ಆದರೆ ಹೇಗೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ.